ಕಲರ್ಸ್ ಕನ್ನಡದಲ್ಲಿ ಹೊಸ ಧಾರಾವಾಹಿ 'ನಂದ ಗೋಕುಲ' ಪ್ರಾರಂಭವಾಗಲಿದೆ. ನಂದಕುಮಾರ್ ಎಂಬ ಅನಾಥನ ಕಥೆ ಹೇಳುವ ಈ ಧಾರಾವಾಹಿಯಲ್ಲಿ ಕುಟುಂಬದ ನಡುವಿನ ಜಗಳ, ಪ್ರೀತಿ, ಮತ್ತು ಸವಾಲುಗಳನ್ನು ಚಿತ್ರಿಸಲಾಗಿದೆ. ಜೂನ್ 4 ರಿಂದ ರಾತ್ರಿ 9ಕ್ಕೆ ಪ್ರಸಾರ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಇದೀಗ 'ನಂದಗೋಕುಲ' ಎಂಬ ಹೊಸ ಧಾರಾವಾಹಿ ಪ್ರಸಾರ ಆಗಲಿದೆ. 'ಮಕ್ಕಳನ್ನು ಹೀರೋ ಮಾಡೋಕೆ ಹೋರಾಡೋ ಪ್ರತಿಯೊಬ್ಬ ಅಪ್ಪನ ಕತೆಯನ್ನು ಹೇಳುವ, ಈ ಧಾರಾವಾಹಿ ಜೂನ್ 4 ಬುಧವಾರ ದಿಂದ ರಾತ್ರಿ 9ಕ್ಕೆ ಪ್ರಸಾರವಾಗಲಿದೆ.

ಈ ಧಾರಾವಾಹಿ ಕಥೆ ಏನು?

ನಂದಕುಮಾರ್ ಒಬ್ಬ ಅನಾಥ. ಕಟ್ಟುನಿಟ್ಟಾದ ನಡವಳಿಕೆಯ ಆತ್ಮವಿಶ್ವಾಸವೇ ತುಂಬಿದ ಛಲಗಾರ. 25 ವರ್ಷಗಳ ಹಿಂದೆ ಸೂರ್ಯಕಾಂತ್ - ಚಂದ್ರಕಾಂತ್ ಎಂಬ ಸಹೋದರರ ದಿನಸಿ ಅಂಗಡಿಯಲ್ಲಿ ಅವನು ಕೆಲಸ ಮಾಡುತ್ತಿರುತ್ತಾನೆ. ಇವರ ಏಕೈಕ ತಂಗಿ ಗಿರಿಜಾಳನ್ನು ಪ್ರೀತಿಸಿ ಕುಟುಂಬದವರ ಇಷ್ಟಕ್ಕೆ ವಿರುದ್ಧವಾಗಿ ಮದುವೆಯಾಗುತ್ತಾನೆ. ಸಹೋದರರಿಗೆ ನಂದಕುಮಾರ್ ತಮ್ಮ ಅಂತಸ್ತಿನವನಲ್ಲಾಂತ ಅನಿಸಿ ಮನೆಯಿಂದ ದೂರ ಇಡುತ್ತಾನೆ. ನಂದಕುಮಾರ್ ಮಾತ್ರ ಅವರ ಅಂತಸ್ತಿಗೆ ತಕ್ಕಂತೆ ಬೆಳೆಯುವ ಹಠದಿಂದ 'ಗಿರಿಜಾ ಸ್ಟೋರ್ಸ್' ಎಂಬ ದಿನಸಿ ಅಂಗಡಿಯನ್ನು ತೆರೆದು ಯಶಸ್ವಿಯಾಗುತ್ತಾನೆ. ಸಹೋದರರರಿಗೆ ಸವಾಲಾಗುವಂತೆ ಅವರ ಮನೆ ಎದುರೇ 'ನಂದ ಗೋಕುಲ' ಎಂಬ ಮನೆಯನ್ನು ಕಟ್ಟುತ್ತಾನೆ. ಈ ಸಹೋದರರ ಹಗೆಗೆ ಇದು ಇನ್ನಷ್ಟು ದ್ವೇಷ, ಅಸೂಯೆ, ಆಕ್ರೋಶ ಆಗಲು ಕಾರಣ ಆಗುವುದು.

ಎರಡೂ ಕುಟುಂಬಗಳ ನಡುವೆ ನಿರಂತರ ಜಗಳ ನಡೆಯುತ್ತಿರುತ್ತದೆ. ಗಿರಿಜಾಗೆ ಎದುರು ಮನೆಯಲ್ಲೇ ತವರು ಮನೆ ಇದ್ದರೂ ಕೂಡ, ನಿತ್ಯವೂ ಎದುರು ಬದುರಾದರೂ ಕೂಡ ಪ್ರೀತಿಯ ಮಾತುಗಳನ್ನು ಆಡುವ ಹಾಗಿಲ್ಲ. ಪ್ರತಿಕ್ಷಣವೂ ದುರುದುರು ನೋಟ, ದ್ವೇಷವನ್ನು ಎದುರಿಸಬೇಕಾದ ಪರಿಸ್ಥಿತಿ ಅವಳದು. ತನ್ನ ಮನೆಯಿಂದ ಒಂದು ಸಣ್ಣ ಗೆರೆ ದಾಟಿದರೆ ಗಂಡನ ಕಡೆಯಿಂದ, ಅಣ್ಣಂದಿರ ಕಡೆಯಿಂದ -ಒಟ್ಟಿನಲ್ಲಿ ಎರಡೂ ಕಡೆಯಿಂದ ಯುದ್ಧ, ದಾಳಿ!

ನಂದಕುಮಾರ್ ಮತ್ತು ಗಿರಿಜಾರ ಮಕ್ಕಳಾದ ಧನ್ಯಾ, ಮಾಧವ, ಕೇಶವ, ವಲ್ಲಭ ಮತ್ತು ರಕ್ಷಾ ತಂದೆಯ ಕಟ್ಟುನಿಟ್ಟಾದ ನಿರೀಕ್ಷೆಗಳ ನಡುವೆ ಬೆಳೆದವರು. ತಾನು ಪ್ರೀತಿಸಿ ಮದುವೆ ಆಗಿದ್ದರಿಂದ ತನಗೂ ತನ್ನ ಹೆಂಡತಿಗೂ ಕುಟುಂಬವೇ ಇಲ್ಲದಂತಾಯ್ತು. ತಮ್ಮಂತೆ ಮಕ್ಕಳಿಗೆ ಕಷ್ಟದ ಸ್ಥಿತಿ ಬರಕೂಡದು. ಅವರು ಕೂಡು ಕುಟುಂಬದಲ್ಲಿ ಸುಖವಾಗಿ ಇರಬೇಕು ಎಂಬ ಆಸೆಯಿಂದ 'ನೀವ್ಯಾರೂ ಪ್ರೀತಿಸಿ ಮದುವೆ ಆಗೊಲ್ಲ ಅಂತ ನನಗೆ ಮಾತು ಕೊಡಿ!' ಎಂದು ಮಕ್ಕಳಿಂದ ಭಾಷೆ ತೆಗೆದುಕೊಂಡಿರುತ್ತಾನೆ ನಂದಕುಮಾರ್.

ಈಗ ಇರುವ ಸವಾಲುಗಳು ಏನು?

ಅಪ್ಪನಿಗೆ ಕೊಟ್ಟ ಭಾಷೆಯಂತೆ ನಡೆದುಕೊಳ್ಳುವುದು ಅಷ್ಟು ಸುಲಭವೇ? ತನ್ನ ಕಟ್ಟುಪಾಡುಗಳಿಂದ ತನ್ನ ಮನೆಮಕ್ಕಳನ್ನು ಕಟ್ಟಿ ಹಾಕುತ್ತಿರುವ ತಂದೆಯ ಮಾತನ್ನು ಮುಂದಿನ ತಲೆಮಾರು ಹೇಗೆ ಸ್ವೀಕರಿಸುತ್ತದೆ? 'ನಂದ ಗೋಕುಲ'ದಂಥ ಕುಟುಂಬ ತಮ್ಮದಿರಬೇಕು, ಎಲ್ಲರೂ ಜೊತೆಯಾಗಿ ಸಂತೋಷದಿಂದ ಬಾಳಿ ಬದುಕಬೇಕು ಎಂಬ ಕನಸು ಕಾಣುತ್ತಿರುವ ನಂದಕುಮಾರ್

ಕೂಡು ಕುಟುಂಬದ ಮೇಲೆ ಯಾರ ದೃಷ್ಟಿ ತಾಗುತ್ತದೆ? ತಲೆಮಾರುಗಳ ನಡುವಿನ ತಲ್ಲಣಗಳನ್ನು ಹೇಳುವ ಕುಟುಂಬದ ಪ್ರತಿಯೊಬ್ಬರೂ ಮೆಚ್ಚುವ ಕತೆಯುಳ್ಳ 'ನಂದ ಗೋಕುಲ' ಧಾರಾವಾಹಿಯನ್ನು ನೋಡಿ ಕಲರ್ಸ್ ಕನ್ನಡದಲ್ಲಿ ನೋಡಬೇಕು.

ಈ ಧಾರಾವಾಹಿಯಲ್ಲಿ ಯಾರಿದ್ದಾರೆ?

'ಬಣ್ಣ ಟಾಕೀಸ್' ನಿರ್ಮಿಸುತ್ತಿರುವ 'ನಂದ ಗೋಕುಲ' ಧಾರಾವಾಹಿಯ ತಾರಾಗಣದಲ್ಲಿ ಅರವಿಂದ್ ರಾವ್, ಅಮೃತಾ ನಾಯ್ಡು, ರವಿ ಚೇತನ್, ರಘು ಮಂಡ್ಯ, ಅಭಿಷೇಕ್ ದಾಸ್, ಯಶವಂತ್, ವಿಜಯ್ ಚಂದ್ರ, ಊರ್ಜಿತ ವಲ್ತಾಜೆ, ಅರ್ಚನಾ ಗಾಯಕ್ವಾಡ್, ನವ್ಯಾ, ಮೇಘಾ, ಕೃಷ್ಣಪ್ರಿಯ, ಶೈಲಜಾ ಮುಂತಾದವರು ಇದ್ದಾರೆ. ಸಿನಿಮಾದಲ್ಲಿ ಮಿಂಚಿದ ಕೆಲವರು ಈಗ ಮೊದಲ ಬಾರಿಗೆ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಕೂಡ ವಿಶೇಷವಾಗಿದೆ. ಇನ್ನು ಕೆಲ ಹೊಸಬರು ಕೂಡ ಈ ಧಾರಾವಾಹಿಯ ಭಾಗವಾಗಿದ್ದಾರೆ.