ಡಾ ಬ್ರೋ ನಿಮ್ಮಜ್ಜಿಗೆ ಗೊತ್ತಾ ಅಂದವರಿಗೆ ಸ್ವಲ್ಪ ಲೇಟಾಗಿ ಸೀರಿಯಲ್ ನಟ ಚಂದನ್ ಟಾಂಗ್ ಕೊಟ್ಟದ್ದಾರೆ. ನಮ್ಮಜ್ಜೀ, ನಮ್ಮಮ್ಮಂಗೆ ನೀನು ಗೊತ್ತಿದೆ ಬ್ರೋ ಅನ್ನುತ್ತಾ ಗಗನ್ ಶ್ರೀನಿವಾಸ್‌ನ ಹಾಡಿ ಹೊಗಳಿದ್ದಾರೆ.
'ನಮಸ್ಕಾರ ದೇವ್ರೂ.. ಹೇಗಿದ್ದೀರ, ನಾನು ಚೆನ್ನಾಗಿದ್ದೀನಿ. ಉಗಾಂಡದಲ್ಲಿ ನಲವತ್ತು ವರ್ಷಕ್ಕೆ ನಲವತ್ತನಾಲ್ಕು ಮಕ್ಕಳನ್ನು ಹೆತ್ತಿರುವ ಮಹಾತಾಯಿ ಮೋಸ್ಟ್ ಲೀ ಪ್ರಪಂಚದಲ್ಲಿ ಇವ್ರೇ ಮೊದಲಿರಬೇಕು ಅಷ್ಟು ಮಕ್ಕಳನ್ನು ಹೆತ್ತಿರೋದು, ಈಗ ನಾವು ಅವರನ್ನು ನೋಡೋದಕ್ಕೆ ಹೋಗ್ತಾ ಇದ್ದೀವಿ..'
ಹೀಗಂತ ಸಾವಿರಾರು ಮೈಲಿ ದೂರದ ಉಗಾಂಡಾದ ಯಾವುದೋ ಹಳ್ಳಿಯಲ್ಲಿ ನಿಂತು ಮಾತಾಡ್ತಾರೆ ಡಾ ಬ್ರೋ. ಮೂರೇ ಮೂರು ದಿನದಲ್ಲಿ ಅವರ ಉಗಾಂಡ ವೀಡಿಯೋ ಮಿಲಿಯನ್‌ಗಟ್ಟಲೆ ವೀಕ್ಷಣೆ ದಾಖಲಿಸಿದೆ. ಇದಕ್ಕೂ ಮೊದಲು ಅವರು ಮನುಷ್ಯರನ್ನು ಕತ್ತರಿಸಿ ತಿನ್ನುತ್ತಿದ್ದ ವ್ಯಕ್ತಿಯೊಬ್ಬನ ಬಗ್ಗೆ ಎಪಿಸೋಡ್ ಮಾಡಿದ್ದರು. ಅದಂತೂ 19,000 ಜನರ ಮಾರಣ ಹೋಮವಾದ, ಲಾರಿಯಲ್ಲಿ ಜನರನ್ನು ತುಂಬಿ ಒಂದು ಜಾಗಕ್ಕೆ ತಂದುಬಿಟ್ಟು ಅವರನ್ನು ವಿಕೃತವಾಗಿ ಸಾಯಿಸುತ್ತಿದ್ದವರ ಬಗ್ಗೆ. ಜಗತ್ತಿನಾದ್ಯಂತ ಸುತ್ತಿ ಕನ್ನಡಿಗರು ಕಂಡು ಕೇಳದಂಥ ಸುದ್ದಿಗಳನ್ನು, ರೋಚಕ ಕಥೆಗಳನ್ನು 'ನಮಸ್ಕಾರ ದೇವ್ರೂ..' ಅಂತ ಹೇಳಿ ಕನ್ನಡಿಗರ ಮುಂದಿಡೋರು ಡಾ ಬ್ರೋ. ಇನ್ನೂ ಇಪ್ಪತ್ತೈದೂ ತಲುಪಿರದ ಈ ಹುಡುಗನ ಮಾತಿಗೆ ಮಾರುಹೋಗದ ಕನ್ನಡಿಗರಿಲ್ಲ ಅಂತಲೇ ಹೇಳಬಹುದು. ಇದೀಗ ಅವರಿಗೆ ಸಪೋರ್ಟಿವ್ ಆಗಿ ನಟ ಚಂದನ್ ಗೌಡ ಮಾತಾಡಿದ್ದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಗಗನ್ ಶ್ರೀನಿವಾಸ್ ಅನ್ನೋ ಹೆಸರಿನ ಈ ವ್ಲಾಗರ್ ಅತಿ ಹೆಚ್ಚಿನ ಯಶಸ್ಸು ಹಾಗೂ ಖ್ಯಾತಿಯನ್ನು ಗಳಿಸಿರುವಂತಹ ಪ್ರತಿಭೆ. ಡಾ ಬ್ರೋ ಎಂಬ ಹೆಸರಿನಲ್ಲಿ ಯುಟ್ಯೂಬ್ ಚಾನೆಲ್ ಶುರು ಮಾಡಿದ ಗಗನ್ ಬೈಕ್ , ಕಾರ್ ಬಳಸದೇ ಸಾರ್ವಜನಿಕ ವಾಹನಗಳನ್ನು ಬಳಸಿಕೊಂಡು ಹಲವಾರು ದೇಶಗಳನ್ನು ಸುತ್ತಿ, ಆ ದೇಶಗಳು ಹಾಗೂ ಅಲ್ಲಿನ ಜೀವನಶೈಲಿಯನ್ನು ಕನ್ನಡ ಜನರಿಗೆ ತೋರಿಸಿ ಇದೀಗ ಎಲ್ಲ ವಯೋಮಾನದವರ ಅಚ್ಚುಮೆಚ್ಚಾಗಿದ್ದಾರೆ. ತನ್ನ ಪಾಡಿಗೆ ತಾನು ಯಾವುದೋ ದೇಶದಲ್ಲಿ, ಯಾವುದೋ ಜನರ ಜೊತೆಗೆ ಮಾತಾಡಿಕೊಂಡು ಕಳೆದುಹೋಗುವ ಈ ಹುಡುಗ ಪ್ರಚಾರಪ್ರಿಯ ಅಲ್ಲ. ತನ್ನ ಪಾಡಿಗೆ ತಾನಾಯ್ತು, ತನ್ನ ವ್ಲಾಗ್ (Vlog) ಆಯ್ತು ಅಂತ ಸುತ್ತಿಕೊಂಡಿರುವ ವ್ಯಕ್ತಿ. ಆದರೆ ಜನ ತಮ್ಮ ಸಿನಿಮಾ ಪ್ರಚಾರಕ್ಕೆ ಇವರನ್ನು ಬಳಸಿಕೊಂಡಿದ್ದು ಇದೆ. ಅದಕ್ಕೆ ಕಾರಣ ಇವರಿಗಿರುವ ಅಪಾರ ಫ್ಯಾನ್ಸ್ ಬಳಗ.
ಈತನನ್ನು ಸ್ಟಾರ್ ಯುಟ್ಯೂಬರ್ (Youtuber) ಅಂತಲೇ ಹೇಳಬೇಕು. ಏಕೆಂದರೆ ಈತನಿಗೆ ಮಿಲಿಯನ್ ಗಟ್ಟಲೆ ಫಾಲೋವರ್ಸ್ ಇದ್ದಾರೆ. ಅನೇಕ ಸ್ಟಾರ್ ನಟರೂ ಈತನ ಯೂಟ್ಯೂಬ್ ಫಾಲೋ ಮಾಡ್ತಾರೆ. ಇತ್ತೀಚೆಗೆ ಡೇರ್ ಡೆವಿಲ್ ಮುಸ್ತಾಫಾ ಸಿನಿಮಾ ಟ್ರೇಲರ್‌ಗೆ ಇವರು ವಾಯ್ಸ್ ಓವರ್ (Voice Over) ಕೊಟ್ಟಿದ್ದು ಸಖತ್ ವೈರಲ್ ಆಗಿತ್ತು.
ತನಗಿಂತ ಎತ್ತರ ಬೆಳೆಯುವುದು ಹೇಗೆ?; ರೀಲ್ಸ್ ಮಾಡುವವರಿಗೆ ಟಿಪ್ಸ್ ಕೊಟ್ಟ ಶಿಲ್ಪಾ ಗೌಡ!
ಈಗ ವಿಷಯ ಏನಪ್ಪಾ ಅಂದರೆ, ಹಳೆಯ ಲಕ್ಷ್ಮೀ ಬಾರಮ್ಮ ಸೀರಿಯಲ್ ಮೂಲಕ ಸಖತ್ ಫೇಮಸ್ ಆದ ನಟ ಚಂದನ್ ಕುಮಾರ್ ಈತನನ್ನು ಹಾಡಿ ಹೊಗಳಿದ್ದಾರೆ. ಅದರ ಜೊತೆಗೆ ಈ ಹಿಂದೆ ಪ್ರಸಿದ್ಧ ಸಾಧಕರ ಸಂದರ್ಶನಕ್ಕೆ ಏನೋ ನೆವ ಕೊಟ್ಟು ತಿರಸ್ಕರಿಸಿದವರಿಗೂ ಚಂದನ್ ಟಾಂಗ್ ಕೊಟ್ಟಿದ್ದಾರೆ. ನೀನು ಅತ್ಯುತ್ತಮ. ನಿನ್ನ ಜರ್ನಿಗೆ ಆಲ್ ದ ಬೆಸ್ಟ್. ಯಾರು ಏನೇ ಹೇಳಲಿ.. ನೀನು ಸಾಧಕ. ನನ್ನ ಕಡೆಯಿಂದ ನಿನಗೆ ಬೆಸ್ಟ್ ವಿಶಸ್. ನಮ್ಮ ಅಮ್ಮ ಅಜ್ಜಿಗೆ ನೀನು ಯಾರು ಅಂತ ಗೊತ್ತಿದೆ. ನಮ್ಮಿಬ್ಬರಿಗೂ ಪರಿಚಯವಿಲ್ಲ ಆದರೆ ನಿನ್ನ ವಿಡಿಯೊ, ಪ್ರಾಮಾಣಿಕತೆ (Honesty), ನೈಜತೆ, ತರಲೆ ಹಾಗೂ ಕೊಂಕುನುಡಿಗಳು ನನಗೆ ಸಿಕ್ಕಾಪಟ್ಟೆ ಇಷ್ಟ' ಎಂದು ಬರೆದುಕೊಂಡಿದ್ದಾರೆ.
ಈ ಹಿಂದೆ ಫೇಮಸ್ ಕಾರ್ಯಕ್ರಮಕ್ಕೆ ಡಾ ಬ್ರೋ ಕರೆಸುತ್ತೀರ ಎಂಬ ಪ್ರಶ್ನೆ ಎದ್ದಾಗ ಕಾರ್ಯಕ್ರಮಕ್ಕೆ ಸಂಬಂಧಿಸಿದವರು ಡಾ ಬ್ರೋ ಯಾರು, ಆತ ನಿಮ್ಮ ಅಮ್ಮ ಹಾಗೂ ಅಜ್ಜಿಗೆ ಗೊತ್ತಾ ಎಂದು ಪ್ರಶ್ನೆ ಕೇಳಿದ್ದರು. ಈ ಮೂಲಕ ಡಾ ಬ್ರೋ ಹಿರಿಯರಿಗೆ ಗೊತ್ತಿರುವ ವ್ಯಕ್ತಿ ಅಲ್ಲ ಎಂಬ ರೀತಿ ಮಾತಾಡಿದ್ದರು. ಅವರ ಈ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಸದ್ಯ ಇದೇ ಹೇಳಿಕೆಯ ಸಾಲುಗಳನ್ನು ಬಳಸಿರುವ ಚಂದನ್ ಕುಮಾರ್ ನಮ್ಮ ಅಮ್ಮ ಅಜ್ಜಿಗೆ ನೀನು ಯಾರು ಅಂತ ಗೊತ್ತಿದೆ ಎಂದು ಬರೆದುಕೊಂಡು ಟಾಂಗ್ ಕೊಟ್ಟಿದ್ದಾರೆ. ಡಾ ಬ್ರೋ ಫ್ಯಾನ್ಸ್ ಚಂದನ್ ಕುಮಾರ್‌ಗೆ ಜೈ ಅಂದಿದ್ದಾರೆ. ಆದರೆ ಇದನ್ನು ಸ್ವಲ್ಪ ಮೊದಲೇ ಹೇಳ್ಬೇಕಿತ್ತಲ್ವಾ ಬ್ರೋ ಅಂತನೂ ಚಂದನ್‌ಗೆ ಟಾಂಗ್ ಕೊಟ್ಟಿದ್ದಾರೆ.
ಪದೇ ಪದೇ ಕಾಲ್ ಬಂದ್ರೆ ಪಿಕ್ ಮಾಡಿ; ಸ್ನೇಹಿತೆಯನ್ನು ಕಳೆದುಕೊಂಡು ಕಣ್ಣೀರಿಟ್ಟ ನಟಿ ಕಾವ್ಯಾ!
