ಈಗಾಗಲೇ ʼಕನ್ನಡತಿʼ, ʼಕಾವೇರಿ ಕನ್ನಡ ಮೀಡಿಯಂʼ, ʼಶ್ರೀರಸ್ತು ಶುಭಮಸ್ತುʼ ಧಾರಾವಾಹಿಗಳಲ್ಲಿ ಕನ್ನಡ ಪ್ರೇಮದ ಜೊತೆಗೆ ಇಂಗ್ಲಿಷ್‌ ಭಾಷೆಯ ಅವಶ್ಯಕತೆಯನ್ನು ಹೇಳಲಾಗಿತ್ತು. ಈಗ ʼಬ್ರಹ್ಮಗಂಟುʼ ಧಾರಾವಾಹಿಯಲ್ಲಿಯೂ ಒಂದು ಸಂದೇಶ ನೀಡಲಾಗಿದೆ. 

ನಮ್ಮ ನಿತ್ಯ ಜೀವನದಲ್ಲಿ ನಡೆಯೋದನ್ನು ಧಾರಾವಾಹಿ, ಸಿನಿಮಾಗಳಲ್ಲಿ ತೋರಿಸೋದು. ಕೆಲವೊಮ್ಮೆ ದೃಶ್ಯರೂಪಕದಲ್ಲಿ ತೋರಿಸುವಾಗ ವಿಜೃಂಭಣೆ ಮಾಡೋದು, ಲಾಜಿಕ್‌ ಇಲ್ಲದಿರೋದು ಸಾಮಾನ್ಯ. ಈಗಾಗಲೇ ಕೆಲ ಧಾರಾವಾಹಿಗಳು ಕನ್ನಡ ಪ್ರೇಮದ ಬಗ್ಗೆ ಹೇಳಿವೆ. ಕನ್ನಡದ ಮಹತ್ವ ಹೇಳಿಕೊಂಡು ಇಂಗ್ಲಿಷ್‌ ಕಲಿಕೆ ಅಗತ್ಯವನ್ನೂ ಹೇಳಿರುವ ಧಾರಾವಾಹಿಗಳ ಸಾಲಿಗೆ ʼಬ್ರಹ್ಮಗಂಟುʼ ಕೂಡ ಸೇರಿದೆ ಎನ್ನಬಹುದು.

ಧಾರಾವಾಹಿಯಲ್ಲಿ ಭಾಷಾ ಪ್ರೇಮ
ʼಕನ್ನಡತಿʼ ಧಾರಾವಾಹಿಯಲ್ಲಿ ಕನ್ನಡದ ಮಹತ್ವ ಹೇಳುವ ಭುವಿ, ಇಂಗ್ಲಿಷ್‌ ಕೂಡ ಮಾತನಾಡಬಲ್ಲಳು. ಅಂದಹಾಗೆ ʼಶ್ರೀರಸ್ತು ಶುಭಮಸ್ತುʼ ಧಾರಾವಾಹಿಯಲ್ಲಿ ತುಳಸಿ ಕೂಡ ಪರಿಸ್ಥಿತಿಗೆ ತಕ್ಕಂತೆ ಇಂಗ್ಲಿಷ್‌ ಕಲಿತು ಮಾತನಾಡಿದಳು. ಇನ್ನು ʼಭಾಗ್ಯಲಕ್ಷ್ಮೀʼ ಧಾರಾವಾಹಿಯಲ್ಲಿ ಭಾಗ್ಯ ಕೂಡ ಮದುವೆಯಾಗಿ ಎರಡು ಮಕ್ಕಳಾದಮೇಲೆ ಹತ್ತನೇ ಕ್ಲಾಸ್‌ ಪರೀಕ್ಷೆ ಬರೆದಳು, ಇಂಗ್ಲಿಷ್‌ ಭಾಷೆ ಕಲಿತುಕೊಂಡಳು. ಈಗ ʼಬ್ರಹ್ಮಗಂಟುʼ ಧಾರಾವಾಹಿಯಲ್ಲಿ ಕೂಡ ದೀಪಾ ಕೂಡ ಆಂಗ್ಲ ಭಾಷೆ ಕಲಿಯುತ್ತಿದ್ದಾಳೆ. ಈ ಮೂಲಕ ಕನ್ನಡದ ಮೇಲೆ ಪ್ರೀತಿ ಇರಲಿ, ಬದುಕಲು ಇಂಗ್ಲಿಷ್‌ ಕಲಿಯಿರಿ ಎನ್ನುವ ಪಾಠ ಮಾಡಲಾಗ್ತಿದೆ. 

ʼಕನ್ನಡತಿʼ ಧಾರಾವಾಹಿಯಲ್ಲಿ ಭುವಿ ಅಚ್ಚ ಕನ್ನಡ ಮಾತನಾಡುತ್ತಾಳೆ. ʼಕಾವೇರಿ ಕನ್ನಡ ಮೀಡಿಯಂʼ ಧಾರಾವಾಹಿಯಲ್ಲಿ ಕಾವೇರಿ ಕನ್ನಡ ಶಾಲೆಯ ಶಿಕ್ಷಕಿ. ಇನ್ನು ʼಅಣ್ಣಯ್ಯʼ ಧಾರಾವಾಹಿಯಲ್ಲಿ ಗಂಡ ಸತ್ತ ಪತ್ನಿಗೆ ಬಳೆಶಾಸ್ತ್ರಕ್ಕೆ ಅವಕಾಶ ಕೊಡದಿರೋದನ್ನು ತಿರಸ್ಕರಿಸಲಾಗಿತ್ತು. ಇದನ್ನು ವಿರೋಧಿಸಿ ನಾಯಕಿ ಪಾರು ಮಾತನಾಡುತ್ತಾಳೆ. ಹೀಗೆ ಧಾರಾವಾಹಿಯನ್ನು ಕೆಲ ಕಾರಣಗಳಿಗೆ ದೂರುವ ಮುನ್ನ ಹೊಗಳುವ ಅಂಶಗಳು ಇಲ್ಲಿವೆ ಎಂದು ನೆನಪಿಡಬೇಕು. 

ಕನ್ನಡ ಕಡೆಗಾಣಿಸಬೇಡಿ! 
ʼಕನ್ನಡ ಎನೆ ಕುಣಿದಾಡುವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದುʼ ಎಂದು ಕುವೆಂಪು ಹೇಳಿದ್ದಾರೆ. ಇಂಗ್ಲಿಷ್‌ ಭಾಷೆ ಕಲಿಯಬೇಕು ಎಂದಮಾತ್ರಕ್ಕೆ ಕನ್ನಡವನ್ನು ತಿರಸ್ಕರಿಸಬಾರದು. ನಮ್ಮ ಜೀವನದಲ್ಲಿ ಇಂಗ್ಲಿಷ್ ಬಳಕೆಯು ಕನ್ನಡವನ್ನು ನುಂಗಿ ಹಾಕದಂತಿರಬೇಕು. ಕನ್ನಡ ನಾಡಿನಲ್ಲಿ ಹುಟ್ಟಿ, ಕನ್ನಡದ ಮೇಲೆ ಅಭಿಮಾನ ಇರಬೇಕು. ಆದರೆ ಅತಿಯಾದ ಇಂಗ್ಲಿಷ್‌ ವ್ಯಾಮೋಹ ಬೇಡ. ಎಲ್ಲಿ ಯಾವ ಭಾಷೆಯನ್ನು ಬಳಸಬೇಕೋ ಅದೇ ಭಾಷೆಯನ್ನು ಬಳಸಬೇಕಾಗುತ್ತದೆ. ಕನ್ನಡ ಮಾತನಾಡುವ ಜಾಗದಲ್ಲಿ ಕನ್ನಡ ಮಾತನಾಡಲೇಬೇಕು, ಕನ್ನಡಿಗರಿಗೆ ತಲುಪಬೇಕಾದ ವಿಷಯವನ್ನು ಇಂಗ್ಲಿಷ್‌ನಲ್ಲಿ ಹೇಳುವ ಅವಶ್ಯಕತೆ ಇಲ್ಲ. ಏನಂತೀರಾ? 

ಇಂಗ್ಲಿಷ್‌ ಭಾಷೆ ಯಾಕೆ ಕಲಿಯಬೇಕು?
ಇಂಗ್ಲಿಷ್‌ ಭಾಷೆ ವೃತ್ತಿ ಜೀವನದಲ್ಲಿ ಸಾಕಷ್ಟು ಅವಕಾಶ ಕಲ್ಪಿಸುವುದು. ಜಾಗತಿಕ ಮಟ್ಟದಲ್ಲಿ ಬೆಳೆಯಲು ಸಹಾಯ ಮಾಡುವುದು. ಜಾತಗಿಕ ಆರ್ಥಿಕತೆಯಲ್ಲಿ ಉದ್ಯಮ, ವಿಜ್ಞಾನ, ತಂತ್ರಜ್ಞಾನ, ಅಂತಾರಾಷ್ಟ್ರೀಯ ಸಂಬಂಧಗಳನ್ನು ಅರಿತುಕೊಳ್ಳಲು ಆಂಗ್ಲ ಭಾಷೆ ಒಂದು ಸಾಧನವಾಗಿದೆ. ಈ ಮೂಲಕ ಬೇರೆ ಬೇರೆ ದೇಶದ ವ್ಯಕ್ತಿಗಳ ಜೊತೆ ಸಮೂಹ ಸಂವಹನ ನಡೆಸಬಹುದು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲು, ಜ್ಞಾನ ಸಂಪಾದನೆಗೆ ಇಂಗ್ಲಿಷ್‌ ಒಂದು ಮಾಧ್ಯಮ ಆಗಲಿದೆ. 

ಇಂದು ಬೆಂಗಳೂರಿನಲ್ಲಿ ಸಣ್ಣ ಪುಟ್ಟ ಕೆಲಸ ಮಾಡುತ್ತಿರುವವರು ಶಾಲೆಗೆ ಹೋಗದೆ ಇದ್ರೂ ಇಂಗ್ಲಿಷ್‌ ಮಾತನಾಡುತ್ತಾರೆ. ಬೇರೆ ಬೇರೆ ಭಾಷೆಯ ವ್ಯಕ್ತಿಗಳ ಜೊತೆ ಮಾತನಾಡಲು ಇಂಗ್ಲಿಷ್‌ ಒಂದು ಪ್ರಬಲ ಸಾಧನವಾಗಿದೆ.‌ ಬೇರೆ ರಾಜ್ಯ, ಬೇರೆ ದೇಶಗಳಿಂದ ಬಂದ ಟೂರಿಸ್ಟ್‌ಗಳಿಗೆ ಗೈಡ್‌ ಇಂಗ್ಲಿಷ್‌ನಲ್ಲಿ ಮಾಹಿತಿ ನೀಡೋದುಂಟು. ಹೀಗೆ ಇಂಗ್ಲಿಷ್‌ ಭಾಷೆ ಕಲಿಯೋದು ಮುಖ್ಯ. ಆದರೆ ಕನ್ನಡವನ್ನು ಕಡೆಗಾಣಿಸಬಾರದು.