ಟಾಸ್ಕ್​ ಹೆಸರಿನಲ್ಲಿ ಬಿಗ್​ಬಾಸ್ ಸ್ಪರ್ಧಿಗಳಾದ ಸಂಗೀತಾ ಮತ್ತು ಡ್ರೋನ್​ ಪ್ರತಾಪ್​ ಅವರ ಕಣ್ಣಿಗೆ ಹಾನಿಯಾಗಿದ್ದು, ಈ ಕುರಿತು ಸಂಗೀತಾ ಸಹೋದರ ಸೋಷಿಯಲ್​ ಮೀಡಿಯಾದಲ್ಲಿ ಕಿಡಿ ಕಾರಿದ್ದಾರೆ. 

‘ಕಿಚ್ಚ ಸುದೀಪ್ ಸರ್​, ನೀವು ಹೇಳಿದ್ದೀರಿ, ಬಿಗ್​ಬಾಸ್ ಮನೆ ಸುರಕ್ಷಿತ, ಇದು ಸ್ವರ್ಗದಷ್ಟೆ ಸುರಕ್ಷಿತವಾದದ್ದು, ಯಾವ ಕಾರಣಕ್ಕೂ ಅಪಾಯಕ್ಕೆ ಆಸ್ಪದವೇ ಇಲ್ಲ ಎಂದು. ಆದರೆ ನೀವು ಕೊಟ್ಟ ಭರವಸೆಯನ್ನು ಈಗ ಬಿಗ್​ಬಾಸ್ ಮನೆಯೊಳಗೆ ನಡೆದಿರುವ ಘಟನೆಗಳ ನೋಡಿದರೆ ಹಾಗೆ ಕಾಣುತ್ತಿಲ್ಲ. ಭರವಸೆಗಳನ್ನೆಲ್ಲಾ ಮುರಿದು ಹಾಕಿವೆ. ಒಂದೊಮ್ಮೆ ಕೌಟುಂಬಿಕ ಕಾರ್ಯಕ್ರಮ ಆಗಿದ್ದ ಬಿಗ್​ಬಾಸ್ ಈಗ ಆಕ್ರಮಣಕಾರಿ ಮತ್ತು ತಡೆಯಿಲ್ಲದ ಹಿಂಸೆಗೆ ವೇದಿಕೆ ಆದಂತಾಗಿದೆ. ಕುಟುಂಬಗಳು ಆತಂಕದಲ್ಲಿವೆ. ಹೇಗೆತಾನೆ ನಾವು ಒಟ್ಟಿಗೆ ಕೂತು ಈ ಆಕ್ರಮಣಶೀಲತೆ, ಹಿಂಸೆಯನ್ನು ನೋಡಲು ಸಾಧ್ಯ? ಕಲರ್ಸ್ ಕನ್ನಡ ಚಾನೆಲ್​ ಅವರೇ, ಮನೆಯಲ್ಲಿ ಆಗಿರುವ ಸಮಸ್ಯೆಗಳನ್ನು ಪರಿಹರಿಸಲು, ಬುದ್ಧಿಹೇಳಲು ಸುದೀಪ್ ಅವರೇ ಬರಬೇಕು ಎಂದು ಕಾಯುವುದು ಏಕೆ? ಸ್ಪರ್ಧಿಗಳು ಮಾಡಿದ ತಪ್ಪನ್ನು ಸ್ಥಳದಲ್ಲಿಯೇ ಬಿಗ್​ಬಾಸ್ ಸರಿ ಮಾಡಬಹುದಲ್ಲವೇ? ಏಕೆ ಮಾಡುತ್ತಿಲ್ಲ...?

--- ಈ ರೀತಿ ಸುದೀಪ್​ ಮತ್ತು ಕಲರ್ಸ್​ ಕನ್ನಡ ಚಾನೆಲ್​ಗೆ ಪ್ರಶ್ನೆ ಮಾಡಿದ್ದು, ಬಿಗ್​ಬಾಸ್​ ಸ್ಪರ್ಧಿ ಸಂಗೀತಾ ಅವರ ಸಹೋದರ ಸಂತೋಷ್ ಕುಮಾರ್. ಸಂತೋಷ್​ ಕುಮಾರ್ ಅವರು ಬರೆದಿದ್ದಾರೆ ಎನ್ನಲಾದ ಪತ್ರವೀಗ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ವೈರಲ್​ ಆಗುತ್ತಿದೆ. ಬಿಗ್​ಬಾಸ್​ನಲ್ಲಿ ಎರಡು ಗುಂಪುಗಳ ಮಧ್ಯೆ ಭಾರಿ ಪೈಪೋಟಿ ಶುರುವಾಗಿದ್ದು, ಟಾಸ್ಕ್​ ಹೆಸರಿನಲ್ಲಿ ಕೆಲವು ಎಪಿಸೋಡ್​ಗಳಿಂದ ಹಿಂಸೆ, ಕ್ರೌರ್ಯವೇ ತುಂಬಿ ಹೋಗಿದೆ. ಈ ಬಗ್ಗೆ ಪ್ರೇಕ್ಷಕರು ಸೋಷಿಯಲ್​ ಮೀಡಿಯಾಗಳಲ್ಲಿ ಕಿಡಿ ಕಾರುತ್ತಲೇ ಇದ್ದಾರೆ. ಆದರೆ ಹೀಗೆ ಕಿಡಿ ಕಾರುತ್ತಲೇ ಬಿಟ್ಟೂ ಬಿಡದೇ ಷೋ ನೋಡುವ ಕಾರಣ, ಬಿಗ್​ಬಾಸ್ ಟಿಆರ್​ಪಿ ರೇಟೂ ದಿನೇ ದಿನೇ ಹೆಚ್ಚುತ್ತಿದೆ. 

ಆಸ್ಪತ್ರೆಯಿಂದ ವಾಪಸಾದ ಸಂಗೀತಾ, ಡ್ರೋನ್​ ಪ್ರತಾಪ್ ಕಣ್ಣಿಗೆ ಡ್ಯಾಮೇಜ್​? ಇತರ ಸ್ಪರ್ಧಿಗಳ ಕಣ್ಣೀರು

ಇದೀಗ ಅತಿರೇಕ ಎನ್ನುವಷ್ಟರ ಮಟ್ಟಿಗೆ ಹಿಂಸೆ ಮೊನ್ನೆ ನಡೆದಿದೆ. ಟಾಸ್ಕ್​ ಹೆಸರಿನಲ್ಲಿ, ಕುರ್ಚಿಯಲ್ಲಿ ಕೂತಿದ್ದ ಸಂಗೀತಾ ಹಾಗೂ ಡ್ರೋನ್ ಪ್ರತಾಪ್​ರನ್ನು ಎಬ್ಬಿಸಲು ಸೋಲು, ಡೆಟಾಲ್, ಖಾರದ ಪುಡಿ ಇನ್ನಿತರೆ ಬೆರೆಸಿದ ನೀರನ್ನು ಸತತವಾಗಿ ಮತ್ತು ಬಲವಾಗಿ ಎಸೆಯಲಾಗಿದೆ. ಈ ಸಂದರ್ಭದಲ್ಲಿ ಸಂಗೀತಾ ಮತ್ತು ಡ್ರೋನ್​ ಪ್ರತಾಪ್​ ಕಣ್ಣಿಗೆ ಹಾನಿಯಾಗಿದೆ ಎನ್ನಲಾಗುತ್ತಿದೆ. ಇಬ್ಬರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದೀಗ ಇಬ್ಬರೂ ವಾಪಸಾಗಿದ್ದಾರೆ. 

ಈಗ ಇಬ್ಬರೂ ವಾಪಸಾಗಿರುವ ಪ್ರೊಮೋ ರಿಲೀಸ್​ ಮಾಡಲಾಗಿದೆ. ಇದರಲ್ಲಿ ಇಬ್ಬರ ಕಣ್ಣಿಗೂ ಕಪ್ಪನೇ ದಪ್ಪ ಗ್ಲಾಸ್​ ಹಾಕಲಾಗಿದೆ. ಕಣ್ಣು ಸರಿಯಾಗಿ ಕಾಣಿಸುತ್ತಿಲ್ಲ ಎಂದು ಸಂಗೀತಾ ಹೇಳಿದ್ದಾರೆ. ಇವರ ಈ ಅವಸ್ಥೆ ಕಂಡು ಬಿಗ್​ಬಾಸ್​ನ ಇತರ ಸ್ಪರ್ಧಿಗಳು ಕಣ್ಣೀರು ಹಾಕುವುದನ್ನು ಪ್ರೊಮೋದಲ್ಲಿ ನೋಡಬಹುದು. ಇದರ ಬಗ್ಗೆ ಒಂದಷ್ಟು ಜನ ಸಿಕ್ಕಾಪಟ್ಟೆ ಕಿಡಿ ಕಾರುತ್ತಿದ್ದಾರೆ. ಈ ಪ್ರೊಮೋ ನೋಡಿದ ವೀಕ್ಷಕರು ಸಂಗೀತಾ ಮತ್ತು ಡ್ರೋನ್​ ಪ್ರತಾಪ್​ಗೆ ಅನುಕಂಪದ ಅಲೆ ಹರಿದುಬರುತ್ತಿದೆ. ನಿನ್ನ ಸಂಗೀತಾಗೆ ಪಾಪಿಗಳು ಹಿಂಸೆ ಕೊಡೋದನ್ನ ನೋಡಿ ನನ್ನ ತಾಯಿ ಟಿವಿ ನೋಡುತ್ತಾ ಕಣ್ಣೀರು ಹಾಕಿದಳು, ಹೆತ್ತ ತಾಯಿ ಇನ್ನೆಷ್ಟು ಕಣ್ಣೀರು ಹಾಕಿರಬೇಡಾ ಎಂದು ಕೆಲವು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ನಡುವೆಯೇ ಸಂಗೀತಾ ಅವರ ಸಹೋದರ ಸಂತೋಷ್​ ಕುಮಾರ್​ ಈ ಪ್ರಶ್ನೆಗಳನ್ನು ಬಿಗ್​ಬಾಸ್​ಗೆ ಮಾಡಿದ್ದಾರೆ ಎನ್ನಲಾಗುತ್ತಿದೆ.

ನನ್ನಮ್ಮ ಕಣ್ಣೀರು ಹಾಕಿದ್ಲು! ಕೀಳು ಮಟ್ಟದ ಪ್ರಚಾರ ಬೇಕಾ? ಪಾಪಿಗಳ ಸಂತೆಯಲ್ಲಿ ಪ್ರಾಣಕ್ಕೆ ಬೆಲೆಯೇ ಇಲ್ವಾ?