Bigg Boss Malayalam Season 8: ಬಿಗ್ ಬಾಸ್ ಮಲಯಾಳಂ ವೇದಿಕೆಯಲ್ಲಿ ಪ್ರೇಮ ಪ್ರಸಂಗವೊಂದು ಬಿರುಗಾಳಿ ಎಬ್ಬಿಸಿದೆ. ಅನ್ಯಧರ್ಮದ ಸ್ಪರ್ಧಿಯನ್ನು ಇಷ್ಟಪಟ್ಟಿದ್ದಕ್ಕೆ ಮುಸ್ಲಿಂ ಸ್ಪರ್ಧಿ ನೇಹಾ ಫಾತಿಮಾಗೆ ಪೋಷಕರಿಂದಲೇ ತೀವ್ರ ವಿರೋಧ ವ್ಯಕ್ತವಾಗಿದ್ದು, ಆಕೆಯನ್ನು ಶೋನಿಂದ ಹೊರತರಲು ಕುಟುಂಬಸ್ಥರು ಕಣ್ಣೀರಿಡುತ್ತಿರುವ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ.
ರಿಯಾಲಿಟಿ ಶೋ 'ಬಿಗ್ ಬಾಸ್ ಮಲಯಾಳಂ ಸೀಸನ್ 8' ಇದೀಗ ಭಾರೀ ವಿವಾದ ಮತ್ತು ಚರ್ಚೆಗೆ ಗ್ರಾಸವಾಗಿದೆ. ಶೋನಲ್ಲಿ ಸ್ಪರ್ಧಿಯಾಗಿರುವ ಮುಸ್ಲಿಂ ಸಮುದಾಯದ ಸಾಮಾಜಿಕ ಮಾಧ್ಯಮ ಪ್ರಭಾವಿ (ಇನ್ಫ್ಲುಯೆನ್ಸರ್) ನೇಹಾ ಫಾತಿಮಾ, ತನ್ನ ಸಹ-ಸ್ಪರ್ಧಿ ತಾಶಿ ರಾಜ್ (ಸಂತೋಷ್) ಅವರ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ ಬೆನ್ನಲ್ಲೇ, ಆಕೆಯ ಪೋಷಕರು ಶೋ ಅನ್ನು ಅರ್ಧದಲ್ಲೇ ಬಿಟ್ಟು ಬರುವಂತೆ ಭಾವನಾತ್ಮಕವಾಗಿ ಒತ್ತಡ ಹೇರಿರುವ ಘಟನೆ ಬೆಳಕಿಗೆ ಬಂದಿದೆ.
ಸ್ಪರ್ಧೆಯಿಂದ ಹೊರಬರುವಂತೆ ಕಣ್ಣೀರಿಟ್ಟ ಪೋಷಕರು
ಸಾಮಾನ್ಯವಾಗಿ ಬಿಗ್ ಬಾಸ್ನಲ್ಲಿ ನಡೆಯುವ 'ಫ್ಯಾಮಿಲಿ ವೀಕ್'ಗೂ ಮುನ್ನವೇ ನೇಹಾ ಅವರ ಪೋಷಕರು ವೇದಿಕೆಗೆ ಅನಿರೀಕ್ಷಿತವಾಗಿ ಆಗಮಿಸಿದ್ದರು. ನಿರೂಪಕ ಹಾಗೂ ನಟ ಮೋಹನ್ಲಾಲ್ ಅವರು ಪೋಷಕರ ಆಗಮನದ ಬಗ್ಗೆ ತಿಳಿಸಿದಾಗ ನೇಹಾ ಸಂತಸಗೊಂಡಿದ್ದರು. ಆದರೆ, ಆ ಸಂತೋಷ ಹೆಚ್ಚು ಹೊತ್ತು ಉಳಿಯಲಿಲ್ಲ. ವೇದಿಕೆಗೆ ಬಂದ ಪೋಷಕರು ಆಕೆಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಸ್ಪರ್ಧೆಯಿಂದ ಹೊರಬರುವಂತೆ ಕಣ್ಣೀರಿಡುತ್ತಾ ತಾಕೀತು ಮಾಡಿದ್ದಾರೆ.
ಸ್ವಾರ್ಥಕ್ಕಾಗಿ ಬಳಕೆ
ಬಿಡುಗಡೆಯಾದ ವೀಕೆಂಡ್ ಪ್ರೋಮೋದಲ್ಲಿ, ನೇಹಾ ಅವರ ತಂದೆ "ನೇಹಾ, ನಿನಗೆ ನಮ್ಮ ನೆನಪಿದೆಯೇ? ನಿನಗೆ ನಮ್ಮ ನೆನಪಿದೆ ಎಂದು ನಮಗೆ ಅನ್ನಿಸುತ್ತಿಲ್ಲ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ನೇಹಾ ಆಟದ ದಿಕ್ಕು ತಪ್ಪಿದ್ದು, ಮನೆಯಲ್ಲಿ ಭಾವನಾತ್ಮಕವಾಗಿ ದುರ್ಬಳಕೆಯಾಗುತ್ತಿದ್ದಾಳೆ ಎಂದು ಆಕೆಯ ತಾಯಿ ಆರೋಪಿಸಿದ್ದಾರೆ. "ಮನೆಯಲ್ಲಿ ಎಲ್ಲರೂ ತಮ್ಮ ಆಟವನ್ನು ಆಡುತ್ತಿದ್ದಾರೆ. ಆದರೆ ನೀನು ಕೇವಲ ಭಾವನೆಗಳಿಗೆ ಕಟ್ಟುಬಿದ್ದಿದ್ದೀಯ. ಇತರರು ತಮ್ಮ ಸ್ವಾರ್ಥಕ್ಕಾಗಿ ನಿನ್ನನ್ನು ಬಳಸಿಕೊಳ್ಳುತ್ತಿದ್ದಾರೆ. ನಾವು ನಿನಗೆ ಆಡಬೇಡ ಎಂದ ಆಟವನ್ನೇ ನೀನು ಆಡುತ್ತಿದ್ದೀಯ. ಇದರಿಂದ ನೂರಕ್ಕೆ ನೂರರಷ್ಟು ನಾವೇ ನೋವು ಅನುಭವಿಸುತ್ತಿದ್ದೇವೆ" ಎಂದು ಅಳುತ್ತಾ ದೂರಿದ್ದಾರೆ.
ಮತ್ತೊಬ್ಬ ಸ್ಪರ್ಧಿಯೊಂದಿಗೂ ತಾಶಿ ಸಲುಗೆ
ಹಿಂದೂ ಸಹ-ಸ್ಪರ್ಧಿ ತಾಶಿ ರಾಜ್ ಜೊತೆಗಿನ ನೇಹಾ ಅವರ ಪ್ರೇಮ ನಿವೇದನೆಯೇ ಪೋಷಕರ ಈ ಕಠಿಣ ನಿರ್ಧಾರಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಇತ್ತೀಚಿನ ಸಂಚಿಕೆಯೊಂದರಲ್ಲಿ ನೇಹಾ, ತನಗೆ ತಾಶಿ ಎಂದರೆ ಇಷ್ಟವೆಂದೂ, ಶೋ ಮುಗಿದ ನಂತರ ಪೋಷಕರ ಒಪ್ಪಿಗೆ ಪಡೆದು ಈ ಸಂಬಂಧವನ್ನು ಮುಂದುವರಿಸುವುದಾಗಿ ಹೇಳಿಕೊಂಡಿದ್ದರು. ಇದಕ್ಕೂ ಮುನ್ನ, ವೇದಾಂಕಿ ಎಂಬ ಮತ್ತೊಬ್ಬ ಸ್ಪರ್ಧಿಯೊಂದಿಗೆ ತಾಶಿ ಸಲುಗೆಯಿಂದ ಇದ್ದಾರೆಂಬ ವಿಚಾರವಾಗಿ ಇಬ್ಬರ ನಡುವೆ ಸಣ್ಣ ಬಿರುಕು ಮೂಡಿತ್ತು. ಆಗ ತಾಶಿ, ತನಗೆ ವೇದಾಂಕಿ ಮೇಲೆ ಯಾವುದೇ ಭಾವನೆಗಳಿಲ್ಲ ಎಂದು ಸ್ಪಷ್ಟಪಡಿಸಿ, ನೇಹಾ ಮೇಲಿನ ಪ್ರೀತಿಯನ್ನು ಖಚಿತಪಡಿಸಿದ್ದರು.
ಕೇರಳದಲ್ಲಿ ಜಾತ್ಯತೀತತೆಯ ಕುರಿತು ದೊಡ್ಡ ಮಟ್ಟದ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ, ಅನ್ಯಧರ್ಮದ ಯುವಕನ ಮೇಲಿನ ಪ್ರೀತಿಯ ಕಾರಣಕ್ಕಾಗಿ ಯುವತಿಯೊಬ್ಬಳಿಗೆ ಕುಟುಂಬದಿಂದಲೇ ಇಂತಹ ವಿರೋಧ ಹಾಗೂ ಭಾವನಾತ್ಮಕ ಒತ್ತಡ ವ್ಯಕ್ತವಾಗಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ರಿಯಾಲಿಟಿ ಶೋಗಳ ಟಿಆರ್ಪಿ (TRP) ತಂತ್ರ
ಇನ್ನೊಂದೆಡೆ, ರಿಯಾಲಿಟಿ ಶೋಗಳ ನೈತಿಕತೆಯ ಬಗ್ಗೆಯೂ ಗಂಭೀರ ಪ್ರಶ್ನೆಗಳು ಎದ್ದಿವೆ. ವಾಡಿಕೆಯಂತೆ ನಡೆಯುವ 'ಫ್ಯಾಮಿಲಿ ವೀಕ್'ಗೂ ಮುನ್ನವೇ ಪೋಷಕರನ್ನು ಕರೆಸಿ ಇಂತಹ ಹೈಡ್ರಾಮಾ ಸೃಷ್ಟಿಸಿರುವುದು ವಾಹಿನಿಯ 'ಟಿಆರ್ಪಿ' ಗಿಮಿಕ್ ಇರಬಹುದೇ ಎಂಬ ಸಂಶಯ ವ್ಯಕ್ತವಾಗಿದೆ. ಹೊರಜಗತ್ತಿನ ಸಂಪರ್ಕವಿಲ್ಲದೆ ನಾಲ್ಕು ಗೋಡೆಗಳ ಮಧ್ಯೆ ಇರುವ ಸ್ಪರ್ಧಿಯ ಮಾನಸಿಕ ಸ್ವಾಸ್ಥ್ಯವನ್ನು ಬಲಿಕೊಟ್ಟು, ಕೌಟುಂಬಿಕ ನೋವನ್ನು ವೀಕ್ಷಕರ ಸಂಖ್ಯೆ ಹೆಚ್ಚಿಸಿಕೊಳ್ಳಲು ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.
ಮುಂದಿನ ನಡೆ ಏನು?
ಸದ್ಯ ನೇಹಾ ಫಾತಿಮಾಗೆ ಕುಟುಂಬ ಮತ್ತು ವೃತ್ತಿಜೀವನದ ನಡುವೆ ಧರ್ಮಸಂಕಟ ಎದುರಾಗಿದೆ. ಬಿಗ್ ಬಾಸ್ ಒಪ್ಪಂದದ ನಿಯಮಗಳ ಪ್ರಕಾರ, ಯಾವುದೇ ಸ್ಪರ್ಧಿ ಸ್ವಯಂಪ್ರೇರಿತರಾಗಿ ಶೋ ಅರ್ಧದಲ್ಲೇ ಬಿಟ್ಟು ಹೊರಬಂದರೆ ವಾಹಿನಿಗೆ ಕೋಟ್ಯಂತರ ರೂಪಾಯಿ ದಂಡ ತೆರಬೇಕಾಗುತ್ತದೆ. ಹೀಗಾಗಿ, ನೇಹಾ ಪೋಷಕರ ಒತ್ತಡಕ್ಕೆ ಮಣಿದು ಶೋ ತೊರೆಯುತ್ತಾರೋ ಅಥವಾ ಆಟ ಮುಂದುವರಿಸುತ್ತಾರೋ ಎಂಬುದು ಮುಂದಿನ ಸಂಚಿಕೆಗಳಲ್ಲಿ ನಿರ್ಧಾರವಾಗಲಿದೆ.



