Bigg Boss Kannada Grand Finale: ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಫಿನಾಲೆ ಸ್ಪರ್ಧಿ ಗಿಲ್ಲಿ ನಟ ಅವರು ಗೆಲ್ಲುತ್ತಾರಾ? ಇಲ್ಲವಾ ಎಂಬ ಪ್ರಶ್ನೆ ಬಂದಿದೆ. ಈ ಮಧ್ಯೆ ಸಂಕಷ್ಟದ ದಿನಗಳ ಬಗ್ಗೆ ಗಿಲ್ಲಿ ನಟ ಮಾತನಾಡಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 12 ಗ್ರ್ಯಾಂಡ್ ಫಿನಾಲೆ ವಾರ ಶುರುವಾಗಿದೆ. ಭಾನುವಾರ ಸಂಜೆ 6 ಗಂಟೆಗೆ ಗ್ರ್ಯಾಂಡ್ ಫಿನಾಲೆ ಪ್ರಸಾರ ಆಗುವುದು. ಹೀಗಿರುವಾಗ ಸ್ಪರ್ಧಿಗಳು ತಮ್ಮ ಜೀವನದ ಖುಷಿ, ದುಃಖವನ್ನು ಹಂಚಿಕೊಂಡಿದ್ದಾರೆ. ಆಗ ಗಿಲ್ಲಿ ನಟ ಅವರು ಅನ್ನ ಕದ್ದು ತಿಂದ ಬಗ್ಗೆ ಮಾತನಾಡಿದ್ದಾರೆ.
ಬಾಡಿಗೆ ರೂಮ್‌ಗೆ ಹಣ ಇರಲಿಲ್ಲ
“17/9/ 2016 ಕ್ಕೆ ನಾನು ಊರಿಂದ ಬೆಂಗಳೂರಿಗೆ ಬರುತ್ತೇನೆ. ಹಳ್ಳಿಯಿಂದ ಬೆಂಗಳೂರಿಗೆ ಬಂದೋರಿಗೆ ಕಷ್ಟ ಏನು ಎಂದು ಗೊತ್ತಾಗುತ್ತದೆ. ಇಲ್ಲಿ ಇರೋಕೆ ಜಾಗ, ಊಟಕ್ಕೆ ಸಮಸ್ಯೆ ಆಗುತ್ತದೆ. ಫ್ರೆಂಡ್ ರೂಮ್‌ನಲ್ಲಿದ್ದೆ, ಅಲ್ಲಿ ಜಗಳ ಆಗಿ ಹೊರಗಡೆ ಬಂದೆ. ಅಲ್ಲಿ ನನ್ನದೇ ತಪ್ಪಿತ್ತು. ಆಮೇಲೆ ಹತ್ತು ದಿನ ಪಾರ್ಕ್‌ನಲ್ಲಿ ಇರುತ್ತಿದ್ದೆ, ನಮಗೆ ಪರಿಚಯ ಆಗಿರೋರು ಸಿಕ್ಕಿದರೆ ಅವರ ಮನೆಗೆ ಹೋಗಿ ಒಂದು ದಿನ ಇರುತ್ತಿದ್ದೆ. ಹೇಗೋ ಏನೋ ಮಾಡಿ, ರೂಮ್ ಮಾಡಿದ್ರೂ ಕೂಡ ಬಾಡಿಗೆ ಕಟ್ಟಲು ಹಣ ಇರಲಿಲ್ಲ” ಎಂದು ಗಿಲ್ಲಿ ನಟ ಹೇಳಿದ್ದಾರೆ.
ಅನ್ನ ಕದ್ದು ತಿಂದೆ
“ಶೂಟಿಂಗ್ ಕೆಲಸ ಮಾಡಬೇಕು, ಅಸಿಸ್ಟೆಂಟ್ ಡೈರೆಕ್ಟರ್ ಆಗಬೇಕು, ಡೈರೆಕ್ಟರ್ ಆಗಬೇಕು ಎಂದುಕೊಂಡೆ. ಆದರೆ ಇಲ್ಲಿ ಊಟ ಮಾಡೋಕೆ ಏನೂ ಇರಲಿಲ್ಲ. ನೀವು ದುಡ್ಡು, ಚಿನ್ನ ಕದ್ದು ತಿಂದಿರೋದು ನೋಡಿರುತ್ತೀರಾ. ಆದರೆ ಪಕ್ಕದ ರೂಮ್‌ನಲ್ಲಿ ಅನ್ನ ಕದ್ದು ತಿಂದಿದೀನಿ. ಜೀವನ ಹೀಗೆ ಇದೆಯಲ್ಲ ಎಂದು ಬೇಸರ ಆಗಿತ್ತು. ಕೊರೊನಾ ಟೈಮ್‌ನಲ್ಲಿ ನಾನು ಯುಟ್ಯೂಬ್ ಚಾನೆಲ್ ಒಪನ್ ಮಾಡ್ತೀನಿ. ಆಮೇಲೆ ಸುಮಾರು ರಿಯಾಲಿಟಿ ಶೋ ಮಾಡ್ತೀನಿ” ಎಂದು ಗಿಲ್ಲಿ ನಟ ಹೇಳಿದ್ದಾರೆ.
ಅವಾರ್ಡ್ ಸಿಕ್ಕಷ್ಟೇ ಖುಷಿ ಆಯ್ತು
“ಒಂದಿನ ಅವಾರ್ಡ್ ಶೋನಲ್ಲಿ ಶಿವರಾಜ್‌ಕುಮಾರ್ ಅವರು, “ನಾನು ಗಿಲ್ಲಿ ನಟನ ಫ್ಯಾನ್” ಎಂದು ಹೇಳಿ, ನನ್ನ ಡ್ಯಾನ್ಸ್ ಹುಕ್ ಸ್ಟೆಪ್ ಮಾಡ್ತಾರೆ. ನಾನು ಶಿವಣ್ಣ ಅವರ ಕಾಲು ಧೂಳಿಗೂ ಸಮ ಇಲ್ಲ. ಅವರು ಹೇಳಿದ ಮಾತು ನನಗೆ ದೊಡ್ಡ ಅವಾರ್ಡ್ ಸಿಕ್ಕಿದಷ್ಟೇ ಖುಷಿ ಆಯ್ತು. ಇದಕ್ಕಿಂತ ದೊಡ್ಡ ವಿಷಯ ಏನೂ ಇಲ್ಲ. ಶರಣ್ ಕೂಡ ನನಗೆ ಸೆಲ್ಫಿ ಬೇಕು ಎಂದರು” ಎಂದಿದ್ದಾರೆ.
ಶಿರಸಿಗೆ ಹೋದಾಗ ಒಬ್ಬರು ಗಿಲ್ಲಿ ಹುಕ್ ಸ್ಟೆಪ್ ಮಾಡಿ ಅಂದ್ರು. ಆಗ ನಾನು ಕೂಡ ಗಿಲ್ಲಿ ಫ್ಯಾನ್ ಎಂದೆ ಎಂದು ಶಿವರಾಜ್‌ಕುಮಾರ್ ಅವರು ರಿಯಾಲಿಟಿ ಶೋನಲ್ಲಿಯೇ ಹೇಳಿದ್ದಾರೆ.
ಟ್ಯಾಟೂ ಹಾಕಿಸಿಕೊಂಡ್ರು
“ಬಿಗ್ ಬಾಸ್ ಬಂದ್ಮೇಲೆ ನನ್ನ ಯಶಸ್ಸು ಹೆಚ್ಚಾಗಿದೆ. ಮೊನ್ನೆ ಒಬ್ಬರು, ಕೈಮೇಲೆ ನನ್ನ ಟ್ಯಾಟೂ ಹಾಕಿಸಿಕೊಂಡರು. ಅವರು ಯಾರು, ಹೆಸರೇನು? ಯಾವ ಊರು ಏನು ಗೊತ್ತಿಲ್ಲ. ಈಗ ಕನ್ನಡಿಯಲ್ಲಿ ಮುಖ ನೋಡಿದ್ರೆ, ನಗು ಬರುವುದು. ಬಿಗ್ ಬಾಸ್ ಮನೆಗೆ ಅಪ್ಪ-ಅಮ್ಮ ಬಂದಿರೋದು ಖುಷಿ ಕೊಟ್ಟಿತು. ಈಗ ಇದಕ್ಕಿಂತ ಖುಷಿ ಬೇಕಾ?” ಎಂದು ಗಿಲ್ಲಿ ನಟ ಹೇಳಿದ್ದಾರೆ.


