ಬಿಗ್‌ಬಾಸ್ ಮನೆಯಿಂದ ಹೊರಬಂದಿರುವ ಲಕ್ಷ್ಮೀ ಗೌಡ ತಮ್ಮ 15 ದಿನಗಳ ಜರ್ನಿಯ ಬಗ್ಗೆ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಫುಟೇಜ್‌ಗಾಗಿ ತಾವು ಎಂದಿಗೂ ನಕಲಿ ಜಗಳ ಮಾಡಿಲ್ಲ ಹಾಗೂ ತಾಂಡವ್ ಜೊತೆಗಿನ ತಮ್ಮ ಬಾಂಡಿಂಗ್ ಹೇಗಿತ್ತೆಂದು ಸ್ಪಷ್ಟಪಡಿಸಿದ್ದಾರೆ. ಮನರಂಜನೆಗೆ ಪ್ರಾಮುಖ್ಯತೆ ನೀಡಿದ್ದಾಗಿ ತಿಳಿಸಿದ್ದಾರೆ.

ಕನ್ನಡದ ಜನಪ್ರಿಯ ರಿಯಾಲಿಟಿ ಶೋ 'ಬಿಗ್‌ಬಾಸ್' (Bigg Boss Kannada) ಅಂದಕೂಡಲೇ ಹೆಚ್ಚಿನವರ ಮನಸ್ಸಿಗೆ ಬರುವುದು ಕಿರುಚಾಟ, ಬೈಗುಳ, ಗದ್ದಲ ಮತ್ತು ದಿನನಿತ್ಯದ ರಂಪಾಟಗಳು. ಆದರೆ, 'ಬಿಗ್‌ಬಾಸ್ ಅಂದರೆ ಬರೀ ಜಗಳ ಆಡೋದಷ್ಟೇ ಅಲ್ಲ, ನಗಿಸುವುದು ಮತ್ತು ಪ್ರೀತಿಯಿಂದ ಇರುವುದೂ ಆಟದ ಭಾಗವೇ ಆಗಿದೆ. ಅಲ್ಲಿ, ನನಗೂ ತಾಂಡವ್ ನಡುವೆ ತಳುಕು ಹಾಕಿ ಮಾತನಾಡುತ್ತಿದ್ದರು, ನಮ್ಮಿಬ್ಬರ ನಡುವೆ ಒಂದು ಬಾಂಡಿಂಗ್ ಬೆಳೆದಿತ್ತು' ಎಂದು ಬಿಗ್‌ಬಾಸ್ ಮನೆಯಿಂದ ಹೊರಬಂದಿರುವ ಸ್ಪರ್ಧಿ ಲಕ್ಷ್ಮೀ ಗೌಡ ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ.

ತಮ್ಮ 15 ದಿನಗಳ ಜರ್ನಿ ಹಾಗೂ ಮನೆಯೊಳಗಿನ ನೈಜ ವಾತಾವರಣದ ಬಗ್ಗೆ ಮಾತನಾಡಿರುವ ಅವರು, ಫುಟೇಜ್‌ಗಾಗಿ ತಾವು ಎಂದಿಗೂ ನಕಲಿ ನಾಟಕ ಮಾಡಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

'ಫುಟೇಜ್‌ಗಾಗಿ ಜಗಳ ಮಾಡುವ ಅವಶ್ಯಕತೆ ನನಗಿರಲಿಲ್ಲ:

ಏಷ್ಯಾನೆಟ್ ಸುವರ್ಣ ನ್ಯೂಸ್ ಡಿಜಿಟಲ್ ಸಂದರ್ಶನದಲ್ಲಿ ಮಾತನಾಡಿದ ಅವರು, ಕೆಲವು ಸ್ಪರ್ಧಿಗಳು ಕ್ಯಾಮೆರಾ ಮುಂದೆ ಕಾಣಿಸಿಕೊಳ್ಳಲು ಜಗಳ ಮಾಡುತ್ತಾರೆ. ಬಿಗ್‌ಬಾಸ್ ಮನೆ ಒಳಗಡೆ ಕಿರುಚಾಡಬೇಕು, ಬರೀ ಜಗಳ ಮಾಡಬೇಕು ಅಂತ ಎಲ್ಲೂ ನಿಯಮವಿಲ್ಲ. ಮುಖ್ಯ ಸಂಚಿಕೆಗಳಲ್ಲಿ (Episodes) ಎಷ್ಟು ತೋರಿಸಿದ್ದಾರೋ ಗೊತ್ತಿಲ್ಲ, ಆದರೆ 24/7 ಲೈವ್ ನೋಡಿದ ಪ್ರತಿಯೊಬ್ಬರಿಗೂ ಗೊತ್ತು ನಾನೆಷ್ಟು ಲೈವ್ಲಿಯಾಗಿ ಖುಷಿಯಾಗಿದ್ದೆ ಅಂತ. ಮನೆಯಲ್ಲಿ ಪುಟ್ಟ ಮಕ್ಕಳು ತರ್ಲೆ ಮಾಡಿಕೊಂಡು ಓಡಾಡಿದ ಹಾಗೆ ಇದ್ದೆ. ನನಗೆ ಅದೇ ಬೇಕಿತ್ತು. ಫುಟೇಜ್‌ಗೋಸ್ಕರ 'ನನ್ನ ಇಮೇಜ್ ಹಾಳಾಗುತ್ತೆ, ನನ್ನ ಫ್ಯಾಮಿಲಿ ನೋಡ್ತಾರೆ' ಅಂತ ಅನಗತ್ಯ ರಾದ್ಧಾಂತ ಮಾಡಿ ಅಗ್ರೆಸ್ಸಿವ್ ಆಗಿ ನಟಿಸುವುದು ನನಗಿಷ್ಟವಿರಲಿಲ್ಲ' ಎಂದಿದ್ದಾರೆ.

ತಾಂಡವ್-ಪ್ರಶಾಂತ್ ರೇಗಿಸಿದಾಗ ಸೀರಿಯಸ್ ಆಗಿ ತಗೋಲಿಲ್ಲ:

ಮನೆಯಲ್ಲಿ ಪ್ರಶಾಂತ್ ಅವರು ತಮ್ಮನ್ನು ತಾಂಡವ್ ಜೊತೆ ತಳುಕು ಹಾಕಿ ಕಾಲೆಳೆಯುತ್ತಿದ್ದ ಘಟನೆಯನ್ನು ನೆನಪಿಸಿಕೊಂಡ ಅವರು, 'ಪ್ರಶಾಂತ್ ಅವರು ನನ್ನನ್ನು ನೀನು ತಾಂಡವನ ಅಸಿಸ್ಟೆಂಟಾ? ಅವನಿಗೋಸ್ಕರ ಆಡೋಕೆ ಬಂದಿದ್ದೀಯಾ? ಅಂತ ರೇಗಿಸುತ್ತಿದ್ದರು. ಅದನ್ನು ಬೇಕಿದ್ದರೆ ನಾನು ದೊಡ್ಡ ಜಗಳದ ರೂಪಕ್ಕೆ ತಿರುಗಿಸಿ ಜನರಿಗೆ ಕಡಕ್ ಆಗಿ ಕಾಣಿಸಿಕೊಳ್ಳಬಹುದಿತ್ತು. ಆದರೆ ನನಗೆ ಚೆನ್ನಾಗಿ ಗೊತ್ತಿತ್ತು, ಪ್ರಶಾಂತ್ ಅವರು ಕಾಮಿಡಿ ಮಾಡುತ್ತಿದ್ದಾರೆ ಅಂತ. ಕಾಲೇಜಿನಲ್ಲಿ ಫ್ರೆಂಡ್ಸ್ ಒಬ್ಬರಿಗೊಬ್ಬರು ಕಾಲೆಳೆದುಕೊಳ್ಳುವ ವೈಬ್ ಅದು. ನನಗೂ ಯಾವುದೇ ಕೆಟ್ಟ ಇಂಟೆನ್ಷನ್ ಇರಲಿಲ್ಲ, ತಾಂಡವ್ ಅವರಿಗೂ ಇರಲಿಲ್ಲ. ನಮ್ಮ ನಡುವೆ ಒಂದು ಸುಂದರವಾದ ಸ್ನೇಹದ ಬಾಂಡಿಂಗ್ ಇತ್ತು. ಅದನ್ನೆಲ್ಲ ನಾವು ಪಾಸಿಟಿವ್ ಆಗಿಯೇ ತಗೊಂಡ್ವಿ' ಎಂದು ಸ್ಪಷ್ಟನೆ ನೀಡಿದ್ದಾರೆ.

ಅಗ್ನಿ ಪರೀಕ್ಷೆಯ ಸ್ಟ್ರೆಸ್ vs ಬಿಗ್‌ಬಾಸ್ ಫ್ರೀಡಂ:

ಅಗ್ನಿ ಪರೀಕ್ಷೆಯಲ್ಲಿದ್ದಾಗ ನಾನು ಕ್ಯಾಪ್ಟನ್ ಆಗಿದ್ದೆ. ಪ್ರತಿದಿನ ಯಾರನ್ನು ನಾಮಿನೇಟ್ ಮಾಡಬೇಕು, ಏನು ಕಾರಣ ಕೊಡಬೇಕು ಅನ್ನೋ ಒತ್ತಡದಲ್ಲೇ ಮುಖದಲ್ಲಿ ನಗುವೇ ಇರುತ್ತಿರಲಿಲ್ಲ. ಆದರೆ ಬಿಗ್‌ಬಾಸ್ ಮುಖ್ಯ ಮನೆಗೆ ಬಂದಮೇಲೆ ನನಗೆ ಸಂಪೂರ್ಣ ಫ್ರೀಡಂ ಸಿಕ್ಕಿತು. ವಾರಕ್ಕೊಮ್ಮೆ ಕಳಪೆ ಕೊಡುವಾಗ ಮಾತ್ರ ಜೆನ್ಯೂನ್ ಕಾರಣ ಕೊಟ್ಟು ಅಲ್ಲಿಗೇ ಮುಗಿಸುತ್ತಿದ್ದೆ. ಟಾಸ್ಕ್ ಬಂದಾಗ ನೂರಕ್ಕೆ ನೂರು ಸೀರಿಯಸ್ ಆಗಿ ಆಡಿ ಗೆದ್ದಿದ್ದೇನೆ. ಅಲ್ಲಿ ನಾನು ಉಡಾಫೆ ಮಾಡಿಲ್ಲ. ಆದರೆ ಮಿಕ್ಕ ಸಮಯದಲ್ಲಿ ಎಲ್ಲರ ಜೊತೆ ನಗುತ್ತಾ, ಕಾಲೆಳೆಯುತ್ತಾ ಖುಷಿಯಾಗಿದ್ದೆ ಎಂದು ಹೇಳಿದರು.

24/7 ಲೈವ್ ನೋಡಿದವರಿಗೆ ಗೊತ್ತು ನಾನೇನು ಅಂತ!

'ನಾನು ಮನೆಗೆ ಹೋಗುವ ಮುಂಚಿನ ಮೂರ್ನಾಲ್ಕು ವಾರ ಮನೆಯಲ್ಲಿ ಬರೀ ಜಗಳವೇ ಇತ್ತು ಅಂತ ಮನೆ ಮಂದಿಯೇ ಹೇಳುತ್ತಿದ್ದರು. ಆದರೆ ನಾನು ಹೋದಮೇಲೆ ಮನೆ ಫುಲ್ ಎಂಟರ್‌ಟೇನ್‌ಮೆಂಟ್ ಆಗಿತ್ತು. ಸೋನಿಕಾ, ಧನುಷ್, ಗಾನ್ವಿ, ಪ್ರಶಾಂತ್ ಎಲ್ಲರನ್ನೂ ಒಟ್ಟುಗೂಡಿಸಿ ರಾತ್ರಿ ಡಿಜೆ ನೈಟ್ ಮಾಡಿದ್ದು, ಹಾಡು ಹೇಳಿದ್ದು, ಶಾಸ್ತ್ರಿಗೆ ಕಣ್ಣು ಕಟ್ಟಿ ಮೇಕಪ್ ಮಾಡಿದ್ದು ಮತ್ತು ಡಮ್ ಶರಾಡ್ಸ್ ಆಡಿದ್ದು... ಇವೆಲ್ಲ 24/7 ಲೈವ್‌ನಲ್ಲಿ ನೋಡಿದ ಪ್ರೇಕ್ಷಕರಿಗೆ ಕಂಪ್ಲೀಟ್ ಮನರಂಜನೆ ನೀಡಿವೆ. ಒಬ್ಬ ವೀಕ್ಷಕಿಯಾಗಿ ನೋಡಿದಾಗ ಶೋನಲ್ಲಿ ಫನ್ ಮಿಸ್ ಆಗುತ್ತಿತ್ತು ಎನಿಸಿತ್ತು. ಅದನ್ನು ನನ್ನ ಕೈಲಾದಷ್ಟು ತುಂಬಿಕೊಟ್ಟ ತೃಪ್ತಿ ನನಗಿದೆ' ಎಂದು ನಗುನಗುತ್ತಲೇ ತಮ್ಮ ಜರ್ನಿಯನ್ನು ಲಕ್ಷ್ಮೀ ಗೌಡ ಸಮರ್ಥಿಸಿಕೊಂಡಿದ್ದಾರೆ.

ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ