ಬಿಗ್‌ಬಾಸ್ ಫಿನಾಲೆ ವೀಕ್ ಟಾಸ್ಕ್‌ನಲ್ಲಿ, ಸ್ಪರ್ಧಿ ಅಶ್ವಿನಿ ಗೌಡ ತಮಗಾಗಿ 'ಛಲಗಾರ್ತಿ' ಎಂಬ ಹ್ಯಾಶ್‌ಟ್ಯಾಗ್ ಬರೆಯಲು ಹೋಗಿ ತಪ್ಪು ಮಾಡಿದ್ದಾರೆ. ಕನ್ನಡ ಹೋರಾಟಗಾರ್ತಿ ಎಂದು ಹೇಳಿಕೊಳ್ಳುವ ಅಶ್ವಿನಿ, 'ಛಲಗಾರ್ತಿ' ಮತ್ತು 'ಹಠವಾದಿ' ಪದಗಳನ್ನು ತಪ್ಪಾಗಿ ಬರೆದಿದ್ದಕ್ಕೆ ಟ್ರೋಲ್‌ಗೆ ಒಳಗಾಗಿದ್ದಾರೆ.

ತಾನು ಹೋರಾಟಗಾರ್ತಿ, ಮಹಿಳಾ ಹಕ್ಕುಗಳ ರಕ್ಷಕಿ ಎಂದೆಲ್ಲಾ ಮಾತನಾಡುವ ಅಶ್ವಿನಿ ಗೌಡ ಅವರಿಗೆ ಕನ್ನಡವೇ ಸರಿಯಾಗಿ ಬರೆಯೋಕೆ ಬರೋದಿಲ್ಲ ಎನ್ನುವುದು ಜನರಿಗೆ ಗೊತ್ತಾಗಿದೆ. ಬಿಗ್‌ಬಾಸ್‌ ಸೋಮವಾರದ ಎಪಿಸೋಡ್‌ನಲ್ಲಿ ಫಿನಾಲೆ ವೀಕ್‌ಗೆ ಕಾಲಿಟ್ಟಿರುವ ಸ್ಪರ್ಧಿಗಳಿಗೆ ಒಂದು ಟಾಸ್ಕ್‌ ನೀಡಿದ್ದರು. ಅದರಂತೆ ಸ್ಪರ್ಧಿಗಳು ತಮ್ಮ ಆಟಕ್ಕೆ ಅನುಗುಣವಾಗಿ ಸೋಶಿಯಲ್‌ ಮೀಡಿಯಾದಲ್ಲಿ ಬಳಸಬಹುದಾದ ಹ್ಯಾಶ್‌ಟ್ಯಾಗ್‌ಗಳನ್ನು ಸ್ವತಃ ಅವರೇ ಬೋರ್ಡ್‌ ಮೇಲೆ ಬರೆಯಬೇಕಿತ್ತು. ಅದರಂತೆ ರಕ್ಷಿತಾ ತಮ್ಮ ಹೆಸರನ್ನು 'ಪಟಾಕಿ ರಕ್ಷಿತಾ' ಎನ್ನುವ ಹ್ಯಾಶ್‌ಟ್ಯಾಗ್‌ನಿಂದ ಗುರುತಿಸಿಕೊಳ್ಳಲು ಇಷ್ಟಪಡುವುದಾಗಿ ಹೇಳಿದ್ದರು.

ಬಳಿಕ ಅಶ್ವಿನಿ ಗೌಡ ಅವರು ಬೋರ್ಡ್‌ ಮೇಲೆ ತಮ್ಮನ್ನು ಯಾವ ಹೆಸರಿನಿಂದ ಗುರುತಿಸಬೇಕು ಎಂದು ಬರೆದರು. ಬಿಗ್‌ಬಾಸ್‌ನಲ್ಲಿನ ತಮ್ಮ ಗೇಮ್‌ನಿಂದ ಜನ 'ಚಲಗಾರ್ತಿ ಅಶ್ವಿನಿ' ಎಂದು ಕರೆಯಬೇಕು ಎಂದು ಬಯಸಿದ್ದರು. ಕರ್ನಾಟಕ ರಕ್ಷಣಾ ವೇದಿಕೆಯ ಮಹಿಳಾ ಘಟಕದ ಗೌರವಾಧ್ಯಕ್ಷೆಯಾಗಿರುವ ಅಶ್ವಿನಿ ಗೌಡ ಅವರಿಗೆ ಕನ್ನಡವೇ ಸರಿಯಾಗಿ ಬರೆಯೋಕೆ ಬರೋದಿಲ್ಲ ಅನ್ನೋದು ಇದರಲ್ಲಿ ಗೊತ್ತಾಗಿದೆ. ಇದನ್ನು ಅಶ್ವಿನಿ ಗೌಡ ಬರೆದರೋ ಅಥವಾ ಧ್ರುವಂತ್‌ ಅವರು ಬೋರ್ಡ್‌ ಮೇಲೆ ಬರೆದಿದ್ದೋ ಎನ್ನುವುದು ಗೊತ್ತಾಗಿಲ್ಲ. ಆದರೆ, ಕನ್ನಡದಲ್ಲಿ ಆಗಿರುವ ತಪ್ಪನ್ನು ಗುರುತಿಸಲು ಕೂಡ ಕರವೇ ನಾಯಕಿಗೆ ಗೊತ್ತಾಗಿಲ್ಲ ಅನ್ನೋದು ಅಚ್ಚರಿಯ ವಿಚಾರವಾಗಿದೆ.

ಛಲಗಾರ್ತಿ ಪದವನ್ನು ತಪ್ಪಾಗಿ ಬರೆದ ಅಶ್ವಿನಿ ಗೌಡ

ಮೊದಲಿಗೆ 'ಚಲಗಾರ್ಥಿ ಅಶ್ವಿನಿ' ಎಂದು ಬರೆಯಲಾಗಿತ್ತು. ಬಳಿಕ ಅದನ್ನು ಹೊಡೆದು, 'ಚಲಗಾರ್ತಿ ಅಶ್ವಿನಿ' ಎಂದು ಬರೆಯಲಾಗಿದೆ. ಆದರೆ, ಕನ್ನಡದಲ್ಲಿ 'ಛಲಗಾರ್ತಿ ಅಶ್ವಿನಿ' ಎಂದು ಬರೆದರೆ ಸರಿ. ಇನ್ನು ಅವರು ಬಳಸಿರುವ ಹ್ಯಾಶ್‌ಟ್ಯಾಗ್‌ನಲ್ಲೂ ಆಕೆ ತಪ್ಪು ಮಾಡಿದ್ದಾರೆ. 'ಹಠವಾದಿ ಅಶ್ವಿನಿ' ಎನ್ನುವ ಬದಲು, '#ಹಠವಾಧಿಅಶ್ವಿನಿ' ಎಂದು ಬರೆದಿದ್ದಾರೆ.

ಇದಕ್ಕೆ ಕಾಮೆಂಟ್‌ ಮಾಡಿರುವ ಹಲವರು ಅಶ್ವಿನಿ ಅವರನ್ನು ಟೀಕಿಸಿದ್ದಾರೆ. '"ಛಲಗಾರ್ತಿ" ಪದ ಬರೆಯೋಕೋ ಬಾರದೇ 'ಚಲರ್ಗಾಥಿ' ಬರೆದು ಮತ್ತೆ 'ಚಲಗಾರ್ತಿ' ಎಂದು ಬರೆದಿದ್ದಾರೆ. ಹಠ"ವಾಧಿ" ಅಂತೆ , ಗೌರವಾಧ್ಯಕ್ಷರು. ಉದಯವಾಯಿತು ಚೆಲುವ ಕನ್ನಡನಾಡು' ಎಂದು ಬರೆದಿದ್ದಾರೆ.

'ಕೆಲವರು ಶೋಕಿಗೆ ಕನ್ನಡ ಪರ ಹೋರಾಟಗಾರರಾಗಿ ಪರಿವರ್ತನೆಗೊಂಡಾಗ ಹೀಗಾಗುತ್ತದೆ ಕ್ಷಮಿಸಿ. ನಾವು ಕನ್ನಡಿಗರು ವಿಶಾಲ ಹೃದಯದವರು. ಪುಣ್ಯ ಹಠ ವ್ಯಾಧಿ ಅಂತ ಬರೆದಿಲ್ಲ ಅಲ್ವಾ.' ಎಂದು ಟ್ರೋಲ್‌ ಮಾಡಿ ಕಾಮೆಂಟ್‌ ಮಾಡಿದ್ದಾರೆ.

ಇವರು ಕನ್ನಡ ಹೋರಾಟಗಾರ್ತಿ ಅಲ್ಲ, ಕನ್ನಡದ ಕೊಲೆಗಾರ್ತಿ ಎಂದು ಮತ್ತೊಬ್ಬರು ಕಾಮೆಂಟ್‌ ಮಾಡಿದ್ದಾರೆ. 'ಈಕೆ ಅಮೆರಿಕದಲ್ಲಿರೋ ಕನ್ನಡ ಹೋರಾಟಗಾರ್ತಿ. ಯಾಕೆ ಅಂದ್ರೆ ಈಕೆ ಜಾಸ್ತಿ ಮಾತಾಡೋದೇ ಇಂಗ್ಲೀಷ್‌ನಲ್ಲಿ' ಎಂದು ಮಾಡಿರುವ ಕಾಮೆಂಟ್‌ಗೆ ಪ್ರತಿಕ್ರಿಯೆ ನೀಡಿರುವ ಯೂಸರ್‌ ಒಬ್ಬರು, 'ಬ್ರದರ್ ಅಮೇರಿಕಾದಲ್ಲಿ ಇರೋ ನಮ್ಮ ಕನ್ನಡಿಗರು ತುಂಬಾ ಚೆನ್ನಾಗಿ ಕನ್ನಡ ಮಾತನಾಡುತ್ತಾರೆ ಬರೆಯುತ್ತಾರೆ... ಆದ್ರೆ ಅಶ್ವಿನಿಗೆ ಏನು ಬರಲ್ಲ' ಎಂದು ಹೇಳಿದ್ದಾರೆ.

'ಸುಮ್ಮನೆ ಇಂಗ್ಲೀಷ್ ಅಲ್ಲಿ ಬರೆದಿದ್ದರು ಆಗ್ತಾ ಇತ್ತು ತಾನೇ. ಇವಳ ಮರ್ಯಾದಿ ಇವಳೇ ಕಳೆದುಕೊಂಡಳು ಅಷ್ಟೇ. ದುಡ್ಡು ಇದೆ. ಶೋಕಿ ಮಾಡೋಕೆ ಒಂದು ಸಂಘ ಬೇಕು ಅಷ್ಟೇ. ಯಾವ್ ಹೋರಾಟನೂ ಇಲ್ಲ ಬದನೆಕಾಯಿ ಕೂಡ ಇಲ್ಲ' ಎಂದು ಮತ್ತೊಬ್ಬರು ಬರೆದಿದ್ದಾರೆ.

ಅಶ್ವಿನಿ ಗೌಡ ಹೇಳಿದ್ದೇನು?

ನಾನು ಬಿಗ್‌ಬಾಸ್‌ ಮನೆಗೆ ಬಂದ ದಿನದಿಂದ ಇಲ್ಲಿಯವರೆಗೂ ನನ್ನ ಪ್ರಯಾಣ ಸುಲಭವಾಗಿರಲಿಲ್ಲ. ಅದಕ್ಕಾಗಿ ಈ ಎಲ್ಲಾ ಟ್ಯಾಗ್‌ಗಳನ್ನು ಕೊಟ್ಟುಕೊಳ್ಳಲು ಬಯಸುತ್ತೇನೆ. ಒಂದೊಂದು ವಾರ ಕೂಡ ಬೆಂಕಿಯ ಮೇಲೆ ನಡೆದ ಹಾಗೆ ಇತ್ತು. ಪ್ರತಿ ವಾರವೂ ಪರೀಕ್ಷೆ ಆಗಿತ್ತು. ಏನೇ ಸಾಧನೆ ಮಾಡಲು ನಮ್ಮಲ್ಲಿ ಒಂದು ಫೈರ್‌ ಇರಬೇಕು. ಅದಿಲ್ಲದೆ ಹೋದಲ್ಲಿ ಏನನ್ನ ಮಾಡೋಕೆ ಆಗೋದಿಲ್ಲ. ಹಾಗಾಗಿ ನನಗೆ ಇಷ್ಟು ಹೆಸರುಗಳನ್ನು ತೆಗೆದುಕೊಳ್ಳಲು ಇಷ್ಟಪಡುತ್ತೇನೆ ಎಂದು ಅಶ್ವಿನಿ ಗೌಡ ಹೇಳಿದ್ದಾರೆ.