ಗೌತಮಿ ಜಾಧವ್, ಉಗ್ರಂ ಮಂಜು ಜೊತೆಗಿನ ಸ್ನೇಹ 85% ಕಡಿದುಕೊಂಡಿದ್ದರೂ, ರಾತ್ರಿಯಿಡೀ ಜೈಲಿನ ಬಳಿ ಮಲಗಿದ್ದೇಕೆ?
ಬಿಗ್ ಬಾಸ್ ಸೀಸನ್ 11ರಲ್ಲಿ ಗೌತಮಿ ಜಾಧವ್ ಮತ್ತು ಉಗ್ರಂ ಮಂಜು ಅವರ ಸ್ನೇಹದ ಬಗ್ಗೆ ಚರ್ಚೆಗಳು ಮುಂದುವರೆದಿವೆ. ಮಂಜು ಜೈಲಿಗೆ ಹೋದಾಗ ಗೌತಮಿ ಅವರು ಜೈಲಿನ ಬಳಿ ರಾತ್ರಿ ಕಳೆದಿದ್ದು, ಇವರ ಸ್ನೇಹದ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಬೆಂಗಳೂರು (ಜ.12): ಬಿಗ್ ಬಾಸ್ ಕನ್ನಡ ಸೀಸನ್ 11ರ ಗ್ರ್ಯಾಂಡ್ ಫಿನಾಲೆಗೆ ಇನ್ನೆರಡು ವಾರಗಳು ಮಾತ್ರ ಬಾಕಿ ಉಳಿದಿವೆ. ಇದೀಗ ಬಿಗ್ ಬಾಸ್ ಮನೆಯಲ್ಲಿ 105 ದಿನ ಕಳೆದಿರುವ ಸ್ಪರ್ಧಿಗಳ ಪೈಕಿ ಗೌತಮಿ ಜಾಧವ್ ಹಾಗೂ ಉಗ್ರಂ ಮಂಜು ಅವರ ಸ್ನೇಹದ ಬಗ್ಗೆ ಹೊಸದಾಗಿ ಏನೂ ಹೇಳಬೇಕಿಲ್ಲ. ಈ ಬಗ್ಗೆ ಕಿಚ್ಚ ಸುದೀಪ್ ಅವರು ಎಚ್ಚರಿಕೆ ನೀಡುತ್ತಿದ್ದಂತೆ ಶೇ.85% ನಮ್ಮ ಸ್ನೇಹ ಕಡಿತಗೊಂಡಿದೆ ಎಂದು ಹೇಳಿದ್ದ ಗೌತಮಿ ಜಾಧವ್ ಅವರು ಉಗ್ರಂ ಮಂಜು ಕಳಪೆ ಪಟ್ಟ ತೆಗೆದುಕೊಂಡು ಜೈಲಿಗೆ ಹೋದಾಗ ಇಡೀ ರಾತ್ರಿ ಮೈ ಕೊರೆವ ಚಳಿಯಲ್ಲಿಯೇ ಜೈಲಿನ ಬಳಿ ಮಲಗಿದ್ದಾರೆ.
ಹೌದು, ಬಿಗ್ ಬಾಸ್ ಮನೆಯಲ್ಲಿ 100 ದಿನಗಳು ಕಳೆಯುವ ಸ್ಪರ್ಧಿಗಳ ಸ್ನೇಹ, ಪ್ರೀತಿ ಆಗುವುದು ಹೊಸತೇನಲ್ಲ. ಆದರೆ, ಈ ಬಾರಿಯ ಬಿಗ್ ಬಾಸ್ ಸೀಸನ್ 11ರಲ್ಲಿ ಯಾರೇ ಜೋಡಿಯಾಗಿ ಕಾಣಿಸಿಕೊಂಡರೂ ಅವರಿಗೆ ವಾರದ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ ಅವರು ಸೂಕ್ಷ್ಮವಾಗಿ ಎಚ್ಚರಿಕೆಯನ್ನು ನೀಡುತ್ತಾ ಬಂದಿದ್ದರು. ಆದರೂ, ಎಚ್ಚೆತ್ತುಕೊಳ್ಳದ ಅವರ ಜೋಡಿಗಳನ್ನು ನೇರವಾಗಿ ಮನೆಗೆ ಕಳುಹಿಸಲಾಗಿದೆ. ಅದರಲ್ಲಿ ಧರ್ಮ ಕೀರ್ತಿರಾಜ್-ಅನುಷಾ ರೈ ಹಾಗೂ ಶಿಶಿರ್ ಶಾಸ್ತ್ರಿ-ಐಶ್ವರ್ಯಾ ಸಿಂಧೋಗಿ ಕೂಡ ಜೋಡಿ ಆಗಿದ್ದರು ಎಂದು ಬೇರೆ ಹೇಳಬೇಕಿಲ್ಲ. ಇವರನ್ನು ನಾವು ಪ್ರೇಮಿಗಳೆಂದು ಹೇಳಲಾಗುವುದಿಲ್ಲ. ಆದರೆ, ಅವರ ನಡುವೆ ಸಾಮಾನ್ಯ ಸ್ನೇಹಕ್ಕಿಂತ ಮಿಗಿಲಾಗಿದ್ದ ಆತ್ಮೀಯತೆ ಇತ್ತು ಎಂಬುದನ್ನು ಅಲ್ಲಗಳೆಯುವಂತಿಲ್ಲ.
ಇದೀಗ ಎಲ್ಲರ ಕಣ್ಣಿಗೂ ಬಿದ್ದಿರುವ ಮತ್ತೊಂದು ಜೋಡಿ ಎಂದರೆ ಅದು ತ್ರಿವಿಕ್ರಮ್ - ಭವ್ಯಾ ಗೌಡ ಅವರ ಜೋಡಿ. ಇದರೊಂದಿಗೆ ಶ್ರೀಮತಿ ಗೌತಮಿ ಜಾಧವ್-ಉಗ್ರಂ ಮಂಜು ಅವರ ಸ್ನೇಹದ ಜೋಡಿಯೂ ಇತರರ ಕಣ್ಣಿಗೆ ಕುಕ್ಕುತ್ತಿದೆ. ಈ ಬಗ್ಗೆ ಕಳೆದ ಮೂರ್ನಾಲ್ಕು ವಾರದಿಂದ ಕಿಚ್ಚನ ಪಂಚಾಯಿತಿಯಲ್ಲಿ ಈ ಜೋಡಿಗಳಿಗೆ ಭಾರೀ ಬುದ್ಧಿಮಾತು ಹೇಳುತ್ತಲೇ ಬರಲಾಗುತ್ತಿದೆ. ಆದರೂ, ತಮ್ಮ ಉತ್ತಮ ಆಟದಿಂದಾಗಿ ಜೋಡಿಯಾಗಿರುವುದು ದೊಡ್ಡದೇನೂ ಅಲ್ಲವೆಂದು ಜನರೇ ಅವರಿಗೆ ಓಟು ಹಾಕಿ ಮನೆಯಲ್ಲಿ ಉಳಿಸುತ್ತಿದ್ದಾರೆ. ಹೀಗಾಗಿ, ಫಿನಾಲೆ ವಾರದವರೆಗೂ ಈ ಜೋಡಿಗಳು ಎಲಿಮಿನೇಟ್ ಆಗದೇ ಉಳಿದುಕೊಂಡಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಫೈನಲಿಸ್ಟ್ ಹನುಮಂತನ ಮಾತಿಗೆ ಸಹ-ಸ್ಪರ್ಧಿಗಳು ಮಾತ್ರವಲ್ಲ, ಕಿಚ್ಚ ಸುದೀಪನೇ ಬೆಚ್ಚಿಬಿದ್ರು!
ಬಿಗ್ ಬಾಸ್ ಮನೆಯ 14ನೇ ವಾರದಲ್ಲಿ ಎಲ್ಲ ಸ್ಪರ್ಧಿಗಳ ಕುಟುಂಬಸ್ಥರು ಬಿಗ್ ಬಾಸ್ ಮನೆಗೆ ಬಂದು ಒಂದೊಂದು ದಿನ ಉಳಿದಿಕೊಂಡು ಹೋಗಿದ್ದಾರೆ. ಇದಾದ ನಂತರ ನಡೆದ ಕಿಚ್ಚನ ಪಂಚಾಯಿತಿಯ ವೇಳೆ ಗೌತಮಿ ಜಾಧವ್ ಹಾಗೂ ಉಗ್ರಂ ಮಂಜು ಅವರು ತಮ್ಮ ಸ್ನೇಹವನ್ನು ಕಡಿದುಕೊಳ್ಳುವುದಾಗಿ ಇಬ್ಬರೂ ಹೇಳಿದ್ದರು. ಆದರೆ, 15ನೇ ವಾರದಲ್ಲಿ ನಡೆದ ಟಿಕೆಟ್ ಟು ಫಿನಾಲೆ ವಾರದಲ್ಲಿ ಹಲವು ಟಾಸ್ಕ್‌ಗಳನ್ನು ನೀಡಲಾಗಿತ್ತು. ಈ ಎಲ್ಲ ಬಹುತೇಕ ಟಾಸ್ಕ್‌ಗಳಲ್ಲಿ ಗೌತಮಿ ಹಾಗೂ ಮಂಜು ಅವರು ಜೋಡಿಯಾಗಿಯೇ ಆಟವಾಡಿದರು. ಅವರ ಜೊತೆಗಿದ್ದ ಎಲ್ಲರನ್ನೂ ಒಬ್ಬೊಬ್ಬರನ್ನಾಗಿ ಹೊರಗೆ ಹಾಕಿ, ಕೊನೆಗೆ ತಾವೂ ಟಾಸ್ಕ್‌ನಲ್ಲಿ ಸೋತರು. ಇದರಲ್ಲಿ ಗೌತಮಿ ಮತ್ತು ಮಂಜು ಅವರ ಕುತಂತ್ರ ಮತ್ತು ಸ್ವಾರ್ಥಕ್ಕೆ ಚೈತ್ರಾ ಕುಂದಾಪುರ ಮತ್ತು ಧನರಾಜ್ ಇಬ್ಬರೂ ಟಿಕೆಟ್ ಟು ಫಿನಾಲೆ ಓಟದಿಂದ ಅರ್ಧಕ್ಕೆ ಹೊರಬಿದ್ದರು. ಈ ವಾರದ ಟಾಸ್ಕ್‌ನಲ್ಲಿ ಹನುಮಂತು ಗೆದ್ದು ಮೊದಲ ಫೈನಲಿಸ್ಟ್ ಆಗಿ ಹೊರಹೊಮ್ಮುತ್ತಾರೆ.
ಇದಾದ ನಂತರ ವಾರದ ಕಳಪೆ ಯಾರಿಗೆ ಕೊಡಬೇಕು ಎಂದು ಚರ್ಚೆ ಮಾಡಿದಾಗ ಎಲ್ಲರೂ ಉಗ್ರಂ ಮಂಜು ಅವರಿಗೆ ಕಳಪೆ ಎಂದು ವಿವಿಧ ಕಾರಣಗಳನ್ನು ನೀಡುತ್ತಾರೆ. ಆಗ ಸ್ವತಃ ಗೌತಮಿ ಅವರೇ ಮಂಜು ಅವರಿಗೆ ಕಳಪೆ ಕೊಡುತ್ತಾರೆ. ಕಳಪೆಯಾಗಿ ಹೆಚ್ಚು ಮತ ಪಡೆದ ಉಗ್ರಂ ಮಂಜು ಜೈಲಿನಲ್ಲಿ ಕಾಲ ಕಳೆಯಬೇಕಾಗುತ್ತದೆ. ಆಗ ರಾತ್ರಿ ಗಂಜಿ ಸೇವಿಸಿ ಜೈಲಿನಲ್ಲಿ ರಾತ್ರಿ ಕಳೆಯುವಾಗ ಸ್ನೇಹ ಕಡಿದುಕೊಳ್ಳುವುದಾಗಿ ಹೇಳಿದ್ದ ಗೌತಮಿ ಜಾಧವ್ ಅವರು ಉಗ್ರಂ ಮಂಜು ಇದ್ದ ಜೈಲಿನ ಪಕ್ಕದಲ್ಲಿಯೇ ಮೈ ಕೊರೆಯುವ ಚಳಿಯಲ್ಲಿ ರಾತ್ರಿ ಕಳೆಯುತ್ತಾರೆ. ಇದೀಗ ಪುನಃ ಕಿಚ್ಚ ಸುದೀಪ್ ಅವರು ಮಂಜು ಮತ್ತು ಗೌತಮಿ ಅವರ ಹಳೆಯ ಹೇಳಿಕೆಗಳ ವಿಡಿಯೋ ತೋರಿಸಿ ಅವರ ಸ್ನೆಹವನ್ನು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಗೌತಮಿ ಅವರು ಶೇ.85% ಸ್ನೇಹ ಕಡಿದುಕೊಂಡಿದ್ದೇವೆ ಎಂದು ಉತ್ತರ ಕೊಟ್ಟಿದ್ದಾರೆ. ಸ್ವತಃ ಬಿಗ್ ಬಾಸ್ ವೀಕ್ಷಕರಿಗೆ ಇವರ ಸ್ನೇಹದ ಬಗ್ಗೆ ದೊಡ್ಡ ಗೊಂದಲ ಸೃಷ್ಟಿಯಾಗಿದೆ.
ಇದನ್ನೂ ಓದಿ: 12 ವರ್ಷಗಳಿಂದ ಕರ್ನಾಟಕದಲ್ಲಿ ಇದ್ಕೊಂಡು ಗೌತಮಿಗೆ ಕನ್ನಡ ಓದಲು ಬರೆಯಲು ಬರಲ್ಲ; ಯಮುನಾ ಶ್ರೀನಿಧಿ ಗರಂ