'ಬಿಗ್ ಬಾಸ್ ಕನ್ನಡ' ಖ್ಯಾತಿಯ ಜಾನ್ವಿ ಜೆಡಿಎಸ್ ಸೇರಿದ ಬಳಿಕ ಸ್ವಗ್ರಾಮದಲ್ಲಿ ಕಣ್ಣು ಕಾಣದ ಮಾವ ಹಾಗೂ ಅತ್ತೆಗೆ ಸ್ಮಾರ್ಟ್ ಟಿವಿ ಉಡುಗೊರೆಯಾಗಿ ನೀಡಿ ಮಾನವೀಯತೆ ಮೆರೆದಿದ್ದಾರೆ. ಭಾವುಕ ವಿಡಿಯೋ ಜೊತೆಗೆ ಎರಡನೇ ಮದುವೆ ಬಗ್ಗೆ ಕೂಡ ಸ್ಪಷ್ಟನೆ ನೀಡಿದ್ದಾರೆ.
ಕಿರುತೆರೆ ನಿರೂಪಕಿ, ಸುದ್ದಿ ವಾಚಕಿ ಹಾಗೂ 'ಬಿಗ್ ಬಾಸ್ ಕನ್ನಡ ಸೀಸನ್ 12' ಮೂಲಕ ಮನೆಮಾತಾದ ಜಾನ್ವಿ ಇತ್ತೀಚೆಗೆ ರಾಜಕೀಯಕ್ಕೂ ಕಾಲಿಟ್ಟು ಜೆಡಿಎಸ್ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ. ರಾಜಕೀಯ ಬದುಕಿನ ಹೊಸ ಅಧ್ಯಾಯ ಆರಂಭಿಸಿರುವ ಬೆನ್ನಲ್ಲೇ, ತಮ್ಮ ಸರಳತೆ ಮತ್ತು ಮಾನವೀಯತೆಯ ಮೂಲಕ ಮತ್ತೊಮ್ಮೆ ಜನರ ಗಮನ ಸೆಳೆದಿದ್ದಾರೆ. ಇತ್ತೀಚೆಗೆ ತಮ್ಮ ಸ್ವಗ್ರಾಮಕ್ಕೆ ಭೇಟಿ ನೀಡಿದ ಜಾನ್ವಿ, ಆರ್ಥಿಕವಾಗಿ ಸಂಕಷ್ಟದಲ್ಲಿರುವ ತಮ್ಮ ಅತ್ತೆ ಮಾದೇವಿ ಹಾಗೂ ದೃಷ್ಟಿ ಕಳೆದುಕೊಂಡಿರುವ ಮಾವನ ಮನೆಗೆ ತೆರಳಿ, ಅವರಿಗೆ ದೊಡ್ಡ ಸ್ಮಾರ್ಟ್ ಟಿವಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.
ಈ ಭಾವುಕ ಕ್ಷಣಗಳ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು, ತಮ್ಮ ಬಾಲ್ಯ, ಹಳ್ಳಿಯ ಬದುಕು ಮತ್ತು ಕುಟುಂಬದ ಬಗ್ಗೆ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. "ಇವರೇ ನಮ್ಮ ಅತ್ತೆ ಮಾದೇವಿ. ತುಂಬಾ ಮುಗ್ಧೆ, ಚಿನ್ನದಂತಹ ಮನಸ್ಸಿನವರು. ನಾನು ಊರಿಗೆ ಹೋದರೆ ಅವರಿಗೆ ಅದೇ ದೊಡ್ಡ ಸಂತೋಷ. ಊರಿನ ಎಲ್ಲರಿಗೂ 'ನಮ್ಮ ಅಣ್ಣನ ಮಗಳು ಬಂದಿದ್ದಾಳೆ' ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ನಮ್ಮ ಮಾವನಿಗೆ ಕಣ್ಣು ಕಾಣುವುದಿಲ್ಲ. ನಡೆಯುವುದಕ್ಕೂ ಕಷ್ಟ. ಆದರೂ ಈ ಹಳ್ಳಿಯ ಜನರ ಪ್ರೀತಿ, ಸಹಾಯವೇ ಅವರಿಗೆ ದೊಡ್ಡ ಆಸರೆ," ಎಂದು ಜಾನ್ವಿ ಹೇಳಿದ್ದಾರೆ.
ಹಳ್ಳಿಯ ಜನರ ನಡುವಿನ ಆತ್ಮೀಯತೆ ಇಂದಿಗೂ ಜೀವಂತವಾಗಿದೆ ಎಂದು ಹೇಳಿದ ಅವರು, "ನಾನು ಪ್ರತಿ ಬಾರಿ ಊರಿಗೆ ಹೋದಾಗ, ಕಾರಿನಲ್ಲಿ ಜಾಗವೇ ಇಲ್ಲದಷ್ಟು ಅಕ್ಕಿ, ರಾಗಿ, ತೆಂಗಿನಕಾಯಿ, ಕಾಳು-ಕಡ್ಡಿ ತುಂಬಿಸಿ ಕಳುಹಿಸುವುದು ನಮ್ಮ ಅತ್ತೆಯ ಪ್ರೀತಿ. ಅವರ ಹೃದಯ ಎಷ್ಟು ದೊಡ್ಡದೋ, ಅವರ ಕೈ ಕೂಡ ಅಷ್ಟೇ ದೊಡ್ಡದು. ಅವರು ಕೊಡುವ ಪ್ರೀತಿಯ ಮುಂದೆ ನಾನು ಕೊಟ್ಟಿರುವ ಈ ಟಿವಿ ಬಹಳ ಚಿಕ್ಕ ಉಡುಗೊರೆ," ಎಂದು ಭಾವುಕರಾಗಿದ್ದಾರೆ.
ಜೀವನದ ಹೋರಾಟದ ಬಗ್ಗೆಯೂ ಮಾತನಾಡಿರುವ ಜಾನ್ವಿ, "ಹೊರ ಜಗತ್ತಿನಲ್ಲಿ ನಾನು ಕಲರ್‌ಫುಲ್ ಆಗಿ ಕಾಣಿಸಬಹುದು. ಆದರೆ ನನ್ನ ಬದುಕು ನಿಮ್ಮ ಬದುಕಿಗಿಂತ ಭಿನ್ನವಲ್ಲ. ನಾನು ಕೂಡ ಕಷ್ಟದಲ್ಲೇ ಬೆಳೆದವಳು. ಇಂದು ವೃತ್ತಿಯಲ್ಲಿ ಚೆನ್ನಾಗಿ ಕಾಣಿಸಿಕೊಳ್ಳುವುದು ಸ್ಪರ್ಧೆಯ ಭಾಗ. ಹಣ, ಪ್ರಭಾವ ಅಥವಾ ಗಾಡ್‌ಫಾದರ್ ಇದ್ದವರೇ ಮುಂದೆ ಬರಬೇಕು ಎನ್ನುವ ನಿಯಮವಿಲ್ಲ. ನಮ್ಮಂತ ಸಾಮಾನ್ಯ ಕುಟುಂಬದಿಂದ ಬಂದವರೂ ಸಾಧಿಸಬಹುದು ಎಂಬುದನ್ನು ನಾನು ನಂಬಿದ್ದೇನೆ," ಎಂದು ಹೇಳಿದ್ದಾರೆ.
ದೊಡ್ಡ ಮಟ್ಟದಲ್ಲಿ ಸುದ್ದಿ
ಇನ್ನು 'ಬಿಗ್ ಬಾಸ್ ಕನ್ನಡ' ಮನೆಯಲ್ಲಿದ್ದ ವೇಳೆ ಜಾನ್ವಿ ತಮ್ಮ ನೇರ ಮಾತು ಮತ್ತು ಜಗಳಗಳ ಮೂಲಕ ಸಾಕಷ್ಟು ಸುದ್ದಿಯಾಗಿದ್ದರು. ಅದೇ ಸಮಯದಲ್ಲಿ ಅವರ ವೈಯಕ್ತಿಕ ಜೀವನವೂ ಚರ್ಚೆಗೆ ಗ್ರಾಸವಾಗಿತ್ತು. ವಿಶೇಷವಾಗಿ ಮಾಜಿ ಪತಿ ನೀಡಿದ್ದ ಹೇಳಿಕೆಗಳಿಂದ ಅವರ ವಿಚ್ಛೇದನ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಆದರೆ ಇದೀಗ ಆ ಎಲ್ಲ ವಿವಾದಗಳಿಂದ ದೂರವಿರುವ ಜಾನ್ವಿ, ತಮ್ಮ ಬದುಕಿನ ಆದ್ಯತೆ ಮಗನೇ ಎಂದು ಸ್ಪಷ್ಟಪಡಿಸಿದ್ದಾರೆ. ಎರಡನೇ ಮದುವೆಯ ಬಗ್ಗೆ ಯಾವುದೇ ಯೋಚನೆ ಇಲ್ಲ ಎಂದು ಹೇಳಿರುವ ಅವರು, ಮಗನ ಭವಿಷ್ಯ ಹಾಗೂ ಸಮಾಜಸೇವೆಯತ್ತ ಹೆಚ್ಚಿನ ಗಮನ ಹರಿಸುವುದಾಗಿ ತಿಳಿಸಿದ್ದರು.


