ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಕಿಚ್ಚ ಸುದೀಪ್ ಅವರ ನಿರೂಪಣೆ ಕೊನೆಯದ್ದಾಗಿರುವುದಕ್ಕೆ ಕಾರಣಗಳನ್ನು ನೀಡಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯೊಂದಿಗಿನ ಸಂಬಂಧವನ್ನು ಬಿಚ್ಚಿಟ್ಟಿದ್ದಾರೆ.

ಬೆಂಗಳೂರು (ಅ.15): ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11ರ ನಿರೂಪಣೆ ಮಾಡುತ್ತಿರುವ ನಟ ಕಿಚ್ಚ ಸುದೀಪ್ ಅವರು ಇದೇ ನನ್ನ ಕೊನೆ ನಿರೂಪಣೆಯ ಸೀಸನ್ ಎಂದು ಘೋಷಣೆ ಮಾಡಿದ್ದಾರೆ. ಇದರ ಬೆನ್ನಲ್ಲಿಯೇ ಅಭಿಮಾನಿಗಳು ಕಲರ್ಸ್ ಕನ್ನಡ ವಾಹಿನಿಯಿಂದ ಕಿಚ್ಚನಿಗೆ ಅಗೌರವ ತೋರಲಾಗಿದೆ ಎಂದು ಊಹಿಸಿ ಹೇಳಲಾಗುತ್ತಿದ್ದು, ಇದನ್ನು ನಾನು ಒಪ್ಪಿಕೊಳ್ಳುವುದಿಲ್ಲ. ನನ್ನ ನಿರ್ಧಾರ ನೇರ ಮತ್ತು ಪ್ರಾಮಾಣಿಕವಾಗಿದೆ ಎಂದು ಕಿಚ್ಚ ಸುದೀಪ್ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಮತ್ತೊಂದು ಪೋಸ್ಟ್ ಹಂಚಿಕೊಂಡಿರುವ ಬಿಗ್ ಬಾಸ್ ಕನ್ನಡದ ನಿರೂಪಕ ಕಿಚ್ಚ ಸುದೀಪ್ ಅವರು ನನ್ನ ಟ್ವೀಟ್ ಬಗ್ಗೆ ನನ್ನೊಂದಿಗೆ ಬರುವ ಎಲ್ಲಾ ಪ್ರೀತಿ ಮತ್ತು ಬೆಂಬಲವನ್ನು ನಾನು ಪ್ರಶಂಸಿಸುತ್ತೇನೆ. ಇದು ನಿಜವಾಗಿಯೂ ನನ್ನನ್ನು ನಿಮ್ಮ ಹೇಳಿಕೆಗಳನ್ನು ಪಾಲಿಸುವಂತೆ ಮಾಡುತ್ತದೆ. ಆದಾಗ್ಯೂ, ಚಾನಲ್ ಮತ್ತು ನನ್ನ ನಡುವಿನ ಯಾವುದೇ ಘರ್ಷಣೆಗಳ ಬಗ್ಗೆ ಊಹೆಗಳನ್ನು ಸೃಷ್ಟಿ ಕಾಮೆಂಟ್ ಮಾಡುವುದು ಹಾಗೂ ಟ್ರೋಲ್ ವಿಡಿಯೋಗಳನ್ನು ಮಾಡಬೇಡಿ ಎಂದು ನಾನು ಮನವಿ ಮಾಡಿಕೊಳ್ಳುತ್ತೇನೆ.

ಕಲರ್ಸ್ ಕನ್ನಡ ಮತ್ತು ನಾನು ಸುದೀರ್ಘ ಮತ್ತು ಸಕಾರಾತ್ಮಕ ಪ್ರಯಾಣವನ್ನು ಸವೆಸಿದ್ದೇವೆ. ಹೀಗಾಗಿ ನಮ್ಮ ನಡುವೆ 'ಅಗೌರವ' ಎಂಬ ಪದ ಬರುವುದಿಲ್ಲ. ಇನ್ನು ನನಗೆ ಕಲರ್ಸ್ ಕನ್ನಡ ವಾಹಿನಿಯಿಂದ ಅಗೌರವ ತೋರಿಸಲಾಗಿದೆ ಎಂಬ ಹೇಳುತ್ತಿರುವ ಊಹೆಗಳಿಗೆ ಯಾವುದೇ ಆಧಾರಗಳಿಲ್ಲ. ಜೊತೆಗೆ, ಇದನ್ನು ಸಮರ್ಥನೆ ಮಾಡಿಕೊಳ್ಳಲೂ ಆಗುವುದಿಲ್ಲ. ನನ್ನ ಟ್ವೀಟ್ ನೇರ ಮತ್ತು ಪ್ರಾಮಾಣಿಕವಾಗಿದೆ. ಕಲರ್ಸ್ ಕನ್ನಡದೊಂದಿಗೆ ನನ್ನ ಸಂಬಂಧ ಉತ್ತಮವಾಗಿದೆ. ಎಲ್ಲ ಸಂದರ್ಭದಲ್ಲಿಯೂ ಅವರು ನನ್ನನ್ನು ಗೌರವದಿಂದ ನಡೆಸಿಕೊಂಡಿದ್ದಾರೆ. ನಿರ್ದೇಶಕ ಪ್ರಕಾಶ್ ಪ್ರತಿಭಾವಂತ ಮತ್ತು ಶಕ್ತಿಯುತ ವ್ಯಕ್ತಿಯಾಗಿದ್ದಾರೆ. ಅವರೊಂದಿಗೆ ನಾನು ತುಂಬಾ ಗೌರವದಿಂದಿದ್ದೇನೆ. ನಾನು ಕೆಲಸ ಮಾಡುತ್ತಿರುವ ತಂಡವು (ಕಲರ್ಸ್ ಕನ್ನಡ ವಾಹಿನಿಯ ಬಿಗ್ ಬಾಸ್ ತಂಡ) ಅನಗತ್ಯ ಆರೋಪಗಳನ್ನು ಎದುರಿಸುತ್ತಿರುವಾಗ ಸುಮ್ಮನೆ ಕುಳಿತು ಆನಂದಿಸುವವನಲ್ಲ ಎಂದು ಟ್ವೀಟ್ ಮೂಲಕ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.

Scroll to load tweet…

ಈ ಘಟನೆಯ ಹಿನ್ನೆಲೆಯೇನು? 
ಬಿಗ್ ಬಾಸ್ ಕನ್ನಡ ಸೀಸನ್ 11ಕ್ಕೂ ಮುನ್ನವೇ ಕಿಚ್ಚ ಸುದೀಪ್ ಅವರು ನಿರೂಪಣೆಯಿಂದ ದೂರ ಉಳಿಯಲು ನಿರ್ಧರಿಸಿದ್ದರು. ಆದರೆ, ಕಲರ್ಸ್ ಕನ್ನಡ ವಾಹಿನಿಯ ಪ್ರಮುಖರು ಸುದೀಪ್ ಮನೆಗೆ ತೆರಳಿ ಅವರ ಮನವವೊಲಿಸಿ ನಿರೂಪಣೆಗೆ ಕರೆತಂದಿದ್ದರು. ಇದರ ಬೆನ್ನಲ್ಲಿಯೇ ಬಿಗ್ ಬಾಸ್ ಸೀಸನ್ 11ರಲ್ಲಿ ಕೇವಲ 2 ವಾರಗಳ ಪಂಚಾಯಿತಿ ನಡೆಸಿಕೊಟ್ಟ ಕಿಚ್ಚ ಸುದೀಪ್ ಅವರು ಇನ್ನೂ 12 ವಾರಗಳ ಪಂಚಾಯಿತಿ ನಡೆಸಿಕೊಡುವುದು ಬಾಕಿ ಇರುವ ಮುನ್ನವೇ ತಾವು ಸೀಸನ್ 11ರ ನಂತರ ಬಿಗ್ ಬಾಸ್ ನಿರೂಪಣೆಯಿಂದ ಹೊರಗುಳಿಯುವುದಾಗಿ ಘೋಷಣೆ ಮಾಡಿದ್ದರು.

ಇದನ್ನೂ ಓದಿ: ನೀವು ಹಾಕಿರುವ ಶ್ರಮಕ್ಕೆ ಬೇರೆ ಯಾರಿಂದಲೂ ಮ್ಯಾಚ್ ಮಾಡಲಾಗದು; ಬಿಗ್ ಬಾಸ್ ಬಿಟ್ಟಿದ್ದಕ್ಕೆ ಸುದೀಪ್ ಪುತ್ರಿ ಬೇಸರದ ಪೋಸ್ಟ್!

ಆದರೆ, ಇದರ ಬೆನ್ನಲ್ಲಿಯೇ ಸಾಮಾಜಿಕ ಜಾಲತಾಣದಲ್ಲಿ ಅವರ ಅಭಿಮಾನಿಗಳು ಕಲರ್ಸ್ ಕನ್ನಡ ವಾಹಿನಿ, ಬಿಗ್ ಬಾಸ್ ಆಯೋಜನೆ ಮಾಡುತ್ತಿರುವ ಸಂಸ್ಥೆ, ಬಿಗ್ ಬಾಸ್ ನಿರ್ದೇಶಕರ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದರು, ಕಲರ್ಸ್ ಕನ್ನಡ ವಾಹಿನಿಯಿಂದ ಬಿಗ್ ಬಾಸ್ ನಿರೂಪನೆ ಮಾಡಿಕೊಡುತ್ತಿರುವ ಕಿಚ್ಚ ಸುದೀಪ್‌ಗೆ ಗೌರವ ನೀಡಲಾಗುತ್ತಿಲ್ಲ. ಅವರು ಹೇಳಿದ ಯಾವುದೇ ಸಲಹೆಗಳನ್ನು ಸ್ವೀಕರಿಸುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿದ್ದವು. ಈ ಸಂಬಂಧಪಟ್ಟಂತೆ ಕಿಚ್ಚ ಸುದೀಪ್ ಅವರನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಅಭಿಯಾನವೇ ಆರಂಭವಾಗಿತ್ತು. ಇದರಿಂದ ಕಲರ್ಸ್ ಕನ್ನಡ ವಾಹಿನಿ ಹಾಗೂ ನಿರ್ದೇಶಕರ ವಿರುದ್ಧ ಆಕ್ರೋಶ ವ್ಯಕ್ತವಾದ ಬೆನ್ನಲ್ಲಿಯೇ ಈ ರೀತಿ ಸ್ಪಷ್ಟೀಕರಣ ನೀಡಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.