ಚೆನ್ನೈ ಏರ್ಪೋರ್ಟ್ನಲ್ಲಿ ಶೇ.95ರಷ್ಟು ತಮಿಳಿಗರಿದ್ದರೆ, 10 ಸಾವಿರ ಜನರ ಕೆಲಸ ಮಾಡುವ ಬೆಂಗಳೂರು ಏರ್ಪೋರ್ಟ್ನಲ್ಲಿ 1 ಸಾವಿರ ಕನ್ನಡಿಗರೂ ಇಲ್ಲ! ಈ ಕುರಿತು ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಹಂಚಿಕೊಂಡ ಶಾಕಿಂಗ್ ಮಾಹಿತಿ ಇಲ್ಲಿದೆ.
ಬೆಂಗಳೂರು (ಅ.28): ಕನ್ನಡ ಭಾಷೆ, ನೆಲ-ಜಲದ ವಿಚಾರ ಬಂದಾಗ ಸದಾ ಮುಂಚೂಣಿಯಲ್ಲಿ ಧ್ವನಿ ಎತ್ತುವ ಬಿಗ್ ಬಾಸ್ ಖ್ಯಾತಿಯ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ, ಇದೀಗ ತಮಿಳುನಾಡಿನ ಚೆನ್ನೈ ವಿಮಾನ ನಿಲ್ದಾಣ ಮತ್ತು ನಮ್ಮ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಡುವಿನ ಅಜಗಜಾಂತರ ವ್ಯತ್ಯಾಸವನ್ನು ಬಯಲಿಗಿಟ್ಟಿದ್ದಾರೆ. ಚೆನ್ನೈ ಏರ್ಪೋರ್ಟ್ನಿಂದಲೇ ವಿಡಿಯೋ ಮಾಡಿರುವ ಅವರು, ನಮ್ಮದೇ ನಾಡಿನಲ್ಲಿ ಕನ್ನಡಿಗರು ಎದುರಿಸುತ್ತಿರುವ ಕಡೆಗಣನೆಯನ್ನು ಅಂಕಿ-ಅಂಶಗಳ ಸಮೇತ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಚೆನ್ನೈ ಏರ್ಪೋರ್ಟ್ನಲ್ಲಿ ತಮಿಳಿನದ್ದೇ ದರ್ಬಾರ್!
ತಮಿಳುನಾಡಿನ ರಾಜಧಾನಿ ಚೆನ್ನೈ ವಿಮಾನ ನಿಲ್ದಾಣದಲ್ಲಿದ್ದ ರೂಪೇಶ್ ರಾಜಣ್ಣ, 'ಇಲ್ಲಿನ ವಾತಾವರಣ ನೋಡಿ ನನಗೆ ನಿಜಕ್ಕೂ ಆಶ್ಚರ್ಯವಾಯಿತು. ಇದು ಕನ್ನಡಿಗರ ದೌರ್ಬಲ್ಯವೋ ಅಥವಾ ನಮ್ಮ ದುರಾದೃಷ್ಟವೋ ತಿಳಿಯುತ್ತಿಲ್ಲ. ಇಲ್ಲಿನ ಏರ್ಪೋರ್ಟ್ನಲ್ಲಿ ಕೇವಲ ತಮಿಳು ಟಿವಿ ಚಾನೆಲ್ಗಳು ಮಾತ್ರ ಪ್ರಸಾರವಾಗುತ್ತಿವೆ. ಚೆನ್ನೈ ಏರ್ಪೋರ್ಟ್ನಲ್ಲಿ ಕೆಲಸ ಮಾಡುವ ಶೇಕಡಾ 95ರಷ್ಟು ಸಿಬ್ಬಂದಿ ತಮಿಳಿಗರೇ ಆಗಿದ್ದಾರೆ. ಕೇವಲ 5% ಮಾತ್ರ ಹೊರಗಿನವರಿದ್ದು, ಅವರೂ ಸಹ ತಮಿಳು ಕಲಿತು ಮಾತನಾಡುತ್ತಿದ್ದಾರೆ' ಎಂದು ವಿವರಿಸಿದ್ದಾರೆ.
ಅಷ್ಟೇ ಅಲ್ಲದೆ, 'ಇಲ್ಲಿ ಕೆಲಸ ಮಾಡುವವರಿಗೆ ಹಿಂದಿ ಅಂದರೆ ಏನೆಂದೇ ಗೊತ್ತಿಲ್ಲ! ಟಿಕೆಟ್ ಕೌಂಟರ್ನಿಂದ ಹಿಡಿದು ಅಂಗಡಿ ಮಳಿಗೆಗಳವರೆಗೂ ಎಲ್ಲರೂ ತಮಿಳಿನಲ್ಲೇ ಮಾತು ಆರಂಭಿಸುತ್ತಾರೆ. ಯಾರಾದರೂ ಇಂಗ್ಲಿಷ್ನಲ್ಲಿ ಕೇಳಿದರೂ ಸಹ, ಆದಷ್ಟು ತಮ್ಮ ಮಾತೃಭಾಷೆ ತಮಿಳಿನಲ್ಲೇ ಉತ್ತರಿಸಲು ಪ್ರಯತ್ನಿಸುತ್ತಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ಭಾಷಾವಾರು ಪ್ರಾಂತ್ಯ ರಚನೆಯಾದ ಉದ್ದೇಶವನ್ನು ತಮಿಳುನಾಡು ಯಶಸ್ವಿಯಾಗಿ ಕಾಪಾಡಿಕೊಂಡು ಬಂದಿದೆ' ಎಂದು ಶ್ಲಾಘಿಸಿದ್ದಾರೆ.
ಬೆಂಗಳೂರು ಏರ್ಪೋರ್ಟ್ನಲ್ಲಿ ಕನ್ನಡಿಗರಿಗೆ ಜಾಗವೇ ಇಲ್ಲವೇ?
ಇದೇ ವೇಳೆ ನಮ್ಮ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (KIA) ಪರಿಸ್ಥಿತಿಯನ್ನು ನೆನೆದು ರೂಪೇಶ್ ರಾಜಣ್ಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 'ಬೆಂಗಳೂರು ಏರ್ಪೋರ್ಟ್ನಲ್ಲಿ ಈಗ 2 ಟರ್ಮಿನಲ್ಗಳಿವೆ. ಅಂದಾಜು 10,000ಕ್ಕೂ ಹೆಚ್ಚು ಸಿಬ್ಬಂದಿ ಇಲ್ಲಿ ದುಡಿಯುತ್ತಿದ್ದಾರೆ. ಆದರೆ, ಶಾಕಿಂಗ್ ಸಂಗತಿ ಎಂದರೆ ಇವರಲ್ಲಿ ಕನಿಷ್ಠ 1 ಸಾವಿರ ಜನರೂ ಕನ್ನಡಿಗರು ಸಿಗುವುದಿಲ್ಲ! ಉಳಿದ 9 ಸಾವಿರ ಜನರು ಹೊರಗಿನಿಂದ ಬಂದು ನೆಲೆಯೂರಿದವರು. ನೀವು ಯಾವುದೇ ಅಂಗಡಿಗೆ ಹೋಗಿ ಅಥವಾ ಸಿಬ್ಬಂದಿಯನ್ನು ಮಾತನಾಡಿಸಿ, ಅಲ್ಲಿ ಮಾತು ಆರಂಭವಾಗುವುದೇ 'ಹಿಂದಿ' ಭಾಷೆಯಿಂದ. ಇಲ್ಲವೇ ಮಲಯಾಳಂ ಭಾಷಿಕರು ತಮ್ಮಲ್ಲೇ ಗುಂಪು ಕಟ್ಟಿಕೊಂಡು ಮಾತನಾಡುತ್ತಾರೆ' ಎಂದು ಆಕ್ರೋಶ ಹೊರಹಾಕಿದ್ದಾರೆ.
ರಾಜಣ್ಣ ಕೇಳಿದ ಪ್ರಮುಖ ಪ್ರಶ್ನೆಗಳು:
ಸ್ಥಳೀಯರಿಗೆ ಉದ್ಯೋಗ ಎಲ್ಲಿ?: ತಮಿಳುನಾಡಿನಲ್ಲಿ ಕನಿಷ್ಠ 3 ಸಾವಿರ ಸಿಬ್ಬಂದಿಯಲ್ಲಿ 2,750ಕ್ಕೂ ಹೆಚ್ಚು ಸ್ಥಳೀಯರಿಗೆ ಉದ್ಯೋಗ ನೀಡಿ ಬದುಕು ಕಟ್ಟಿಕೊಡಲಾಗಿದೆ. ನಮ್ಮ ಕರ್ನಾಟಕದಲ್ಲಿ ಆ ವ್ಯವಸ್ಥೆ ಏಕೆ ಜಾರಿಯಾಗುತ್ತಿಲ್ಲ?
ಮ್ಯಾನೇಜ್ಮೆಂಟ್ ಪಕ್ಷಪಾತ?: ಬೆಂಗಳೂರು ವಿಮಾನ ನಿಲ್ದಾಣದ ಮ್ಯಾನೇಜ್ಮೆಂಟ್ನಲ್ಲಿ ಹಿಂದಿ ಮತ್ತು ಮಲೆಯಾಳಿ ಭಾಷಿಕರೇ ಹೆಚ್ಚಾಗಿರುವುದರಿಂದ ಕನ್ನಡಿಗರಿಗೆ ಉದ್ದೇಶಪೂರ್ವಕವಾಗಿ ಅವಕಾಶ ವಂಚಿಸಲಾಗುತ್ತಿದೆಯೇ?
ಕನ್ನಡತನದ ಕೊರತೆ: ನಮ್ಮ ನೆಲದ ವಿಮಾನ ನಿಲ್ದಾಣದಲ್ಲಿ ಕನ್ನಡಕ್ಕಿಂತ ಹಿಂದಿ, ಇಂಗ್ಲಿಷ್ ಅಥವಾ ಮಲಯಾಳಂಗೆ ಹೆಚ್ಚು ಆದ್ಯತೆ ಸಿಗುತ್ತಿರುವುದು ಎಷ್ಟು ಸರಿ?
ಬದಲಾವಣೆ ಆಗಲೇಬೇಕಿದೆ:
'ತಮಿಳುನಾಡಿನಲ್ಲಿ ಅಲ್ಲಿನ ಸರ್ಕಾರಗಳು ಮತ್ತು ವ್ಯವಸ್ಥೆ ತಮ್ಮ ಜನರಿಗೆ, ತಮ್ಮ ಭಾಷೆಗೆ ಗೌರವ ತಂದುಕೊಡಲು ಸಾಧ್ಯವಿದೆ ಎಂದಾದರೆ, ಕರ್ನಾಟಕದಲ್ಲಿ ಏಕೆ ಸಾಧ್ಯವಿಲ್ಲ? ಇದು ಬದಲಾಗಲೇಬೇಕು. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಥಳೀಯ ಕನ್ನಡಿಗರಿಗೆ ಉದ್ಯೋಗದಲ್ಲಿ ಮೊದಲ ಆದ್ಯತೆ ನೀಡಬೇಕು ಮತ್ತು ಕನ್ನಡ ಭಾಷೆಗೆ ಅಗ್ರಸ್ಥಾನ ಸಿಗಲೇಬೇಕು' ಎಂದು ರೂಪೇಶ್ ರಾಜಣ್ಣ ರಾಜ್ಯ ಸರ್ಕಾರ ಮತ್ತು ವಿಮಾನ ನಿಲ್ದಾಣ ಪ್ರಾಧಿಕಾರವನ್ನು ಗಟ್ಟಿಯಾಗಿ ಆಗ್ರಹಿಸಿದ್ದಾರೆ.
ಸದ್ಯ ರೂಪೇಶ್ ರಾಜಣ್ಣ ಅವರ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಕನ್ನಡಿಗರಿಂದ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. 'ಕನ್ನಡಿಗರಿಗೆ ಉದ್ಯೋಗ ನೀಡಿ' ಎಂಬ ಕೂಗು ಮತ್ತೆ ಮುನ್ನೆಲೆಗೆ ಬಂದಿದೆ.






