ಸಂವಿಧಾನಕ್ಕಿಂತಲೂ ದೊಡ್ಡವರೇ ಬಿಗ್ ಬಾಸ್; ಚುನಾವಣಾ ರಾಯಭಾರಿ ಹನುಮಂತನ ಮತದಾನ ಹಕ್ಕು ಮೊಟಕು!
ಬಿಗ್ ಬಾಸ್ಗೆ ಹೋಗಿರುವ ಗಾಯಕ ಹನುಮಂತ ಚುನಾವಣೆಯಲ್ಲಿ ಮತ ಚಲಾಯಿಸಲು ಸಾಧ್ಯವಾಗದೆ ತಮ್ಮ ಹಕ್ಕನ್ನು ಕಳೆದುಕೊಂಡಿದ್ದಾರೆ. ಹಾವೇರಿ ಜಿಲ್ಲಾ ಚುನಾವಣಾ ರಾಯಭಾರಿಯಾಗಿದ್ದ ಹನುಮಂತನಿಗೆ ಮತದಾನದ ಅವಕಾಶ ನೀಡದ ಬಿಗ್ ಬಾಸ್ ತಂಡದ ಕ್ರಮಕ್ಕೆ ಜನರಿಂದ ಆಕ್ಷೇಪ ವ್ಯಕ್ತವಾಗಿದೆ.
ಬೆಂಗಳೂರು / ಹಾವೇರಿ (ನ.13): ಭಾರತದ ಎಲ್ಲ ಪ್ರಜೆಗಳಿಗೂ ಸಂವಿಧಾನ ಬದ್ಧವಾಗಿ ನೀಡಲಾಗಿರುವ ಮೂಲಭೂತ ಹಕ್ಕುಗಳಲ್ಲಿ ನಮ್ಮನ್ನಾಳುವ ಜನಪ್ರತಿನಿಧಿ ಆಯ್ಕೆ ಮಾಡುವ ಮತದಾನದ ಹಕ್ಕು ಕೂಡ ಒಂದಾಗಿದೆ. ಆದರೆ, ಬಿಗ್ ಬಾಸ್ ರಿಯಾಲಿಟಿ ಶೋ ಆಡಲು ಹೋಗಿರುವ ಗಾಯಕ ಹನುಮಂತನ ಸಂವಿಧಾನಬದ್ಧ ಹಕ್ಕನ್ನು ಬಿಗ್ ಬಾಸ್ ತಂಡವು ಕಿತ್ತುಕೊಂಡಿದೆ. ಈ ಹಿಂದೆ ಹಾವೇರಿ ಜಿಲ್ಲೆಗೆ ಚುನಾವಣಾ ರಾಯಭಾರಿ ಆಗಿದ್ದ ಗಾಯಕ ಹನುಮಂತನಿಗೆ ಮತದಾನ ಚಲಾಯಿಸಲು ಅವಕಾಶ ನೀಡಿದಿರುವುದಕ್ಕೆ ರಾಜ್ಯದ ಜನತೆಯಿಂದ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ.
ಬಿಗ್ ಬಾಸ್ ಕನ್ನಡ ಸೀಸನ್ 11 ರಿಯಾಲಿಟಿ ಶೋಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಹೋಗಿರುವ ಗಾಯಕ ಹನುಮಂತ ಅವರು, ಅದ್ಭುತವಾಗಿ ಆಟವಾಡುತ್ತಿದ್ದಾರೆ. ಆದರೆ, ಗಾಯಕ ಹನುಮಂತ ನೆಲೆಸಿರುವ ಚಿಲ್ಲೂರು ತಾಂಡ ಶಿಗ್ಗಾಂವಿ ವಿಧಾನಸಭಾ ವ್ಯಾಪ್ತಿಗೆ ಬರಲಿದ್ದು, ಭರ್ಜರಿಯಾಗಿ ಮತದಾನವೂ ನಡೆದಿದೆ. ಈ ಹಿಂದೆ ನಡೆದ ವಿಧಾನಸಭಾ ಚುನಾವಣೆಯ ವೇಳೆ ಹಾವೇರಿ ಜಿಲ್ಲೆಗ ಚುನಾವಣಾ ರಾಯಭಾರಿ ಆಗಿ ಕೆಲಸ ಮಾಡಿದ್ದ ಹನುಮಂತ ಇನ್ನುಮುಂದೆ ಎಂದಿಗೂ ಮತದಾನದ ಹಕ್ಕನ್ನು ಚಲಾಯಿಸದೇ ಬಿಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು. ಜೊತೆಗೆ, ಹಾವೇರಿ ಜಿಲ್ಲೆಯ ಜನತೆಗೆ ಸಂವಿಧಾನ ನೀಡಲಾಗಿರುವ ಮೂಲಭೂತ ಹಕ್ಕುಗಳಲ್ಲಿ ಒಂದಾಗಿರುವ ಮತದಾನದ ಹಕ್ಕನ್ನು ಚಲಾಯಿಸಬೇಕು ಎಂದು ಪ್ರತಿಜ್ಞೆ ಬೋಧಿಸಿದ್ದರು. ಆದರೆ, ಇದೀಗ ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯುತ್ತಿದ್ದು, ಇದೀಗ ಹನುಮಂತನೇ ಮತ ಚಲಾವಣೆಗೆ ಬಂದಿಲ್ಲ. ಇದಕ್ಕೆ ಕಾರಣ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಆಟವಾಡುತ್ತಿರುವುದು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ನಿಜಲಿಂಗಪ್ಪನವರ ಮನೆ ಖರೀದಿಗೆ ಸರ್ಕಾರದಿಂದ 4.18 ಕೋಟಿ ರೂ.
ಸಂವಿಧಾನದ ಹಕ್ಕಿಗಿಂತಲೂ ಬಿಗ್ ಬಾಸ್ ದೊಡ್ಡವರಾ?
ದೇಶದ 18 ವರ್ಷ ತುಂಬಿದ ಪ್ರತಿಯೊಬ್ಬ ಪ್ರಜೆಗೂ ಸಂವಿಧಾನ ಬದ್ಧವಾಗಿ ಮತ ಚಲಾಯಿಸುವ ಹಕ್ಕನ್ನು ನೀಡಲಾಗುತ್ತದೆ. ಆದರೆ, ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿ ಹನುಮಂತನಿಗೆ ಮತದಾನ ಮಾಡಲು ಒಂದು ದಿನ ಹೋಗಿ ಬರಲು ಅವಕಾಶವನ್ನೂ ನೀಡಿಲ್ಲ. ಇನ್ನು ಹೊರ ಜಗತ್ತಿನ ಸಂಪರ್ಕವೇ ಇಲ್ಲದಂತೆ ಬಿಗ್ ಬಾಸ್ ಮನೆಯೊಳಗಿರುವ ಹನುಮಂತನಿಗೆ ನಿಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯುತ್ತಿದೆ ಎಂಬ ಸುಳಿವನ್ನೂ ನೀಡಿದಂತಿಲ್ಲ. ಈ ಮೂಲಕ ಸಂವಿಧಾನ ಬದ್ಧವಾಗಿ ಒಬ್ಬ ಪ್ರಜೆಗೆ ನೀಡಲಾದ ಹಕ್ಕನ್ನು ಬಿಗ್ ಬಾಸ್ ಮನೆ ಕಿತ್ತುಕೊಂಡಿದೆಯೇ ಎಂಬ ಆಕ್ಷೇಪ ವೀಕ್ಷಕರ ವಲಯದಿಂದ ಕೇಳಿಬಂದಿದೆ.
ಹನುಮಂತ ನಿಷ್ಕಲ್ಮಶ ವ್ಯಕ್ತಿ: ಇನ್ನು ಬಿಗ್ ಬಾಸ್ ಮನೆಯಲ್ಲಿರುವ ಹನುಮಂತ ಮೋಸದ ಜಗತ್ತಿನಿಂದ ಹೊರಗಿರುವ ಒಬ್ಬ ನಿಷ್ಕಲ್ಮಶ ವ್ಯಕ್ತಿಯಾಗಿದ್ದಾರೆ. ಈ ಹಿಂದೆ ಹನುಮಂತ ಜೀ ಕನ್ನಡ ವಾಹಿನಿಯ ಸರಿಗಮಪ ಸ್ಪರ್ಧೆಯಲ್ಲಿ ಗೆದ್ದು ರಾಜ್ಯಾದ್ಯಂತ ಭಾರೀ ಪ್ರಸಿದ್ಧಿ ಆಗಿದ್ದರು. ಇದಾದ ನಂತರ ಹನುಮಂತನ ಜೀವನ ಮಟ್ಟ ಸ್ವಲ್ಪ ಬದಲಾವಣೆ ಆಯಿತು. ಆದರೆ, ಆತನ ಮುಗ್ಧತೆ ಮಾತ್ರ ಬದಲಾಗಲೇ ಇಲ್ಲ. ಗ್ರಾಮೀಣ ಜನರ ಗಾದೆ ಮಾತಿನಂತೆ 'ಡಿಲ್ಲಿಗೆ ಹೋದರೂ, ಡೊಳ್ಳಿಗೆ ಒಂದೇ ಹೊಡೆತ, ಒಂದೇ ನಾದ' ಎಂಬಂತೆ ತನ್ನ ಗ್ರಾಮೀಣ ಶೈಲಿಯ ಸೊಗಡು ಮತ್ತು ಅಭ್ಯಾಸವನ್ನು ಮಾತ್ರ ಹನುಮಂತ ಬದಲಿಸಿಕೊಂಡಿಲ್ಲ.
ಇದನ್ನೂ ಓದಿ: ಮುಡಾ ಸೈಟ್ ಹಂಚಿಕೆಯಲ್ಲಿ ಮತ್ತೊಂದು ಟ್ವಿಸ್ಟ್: ಸಿಎಂ ಖಾಸಗಿ ಪಿಎ ಕುಮಾರ್ ಹಾಗೂ ಸಂಸದ ಕುಮಾರ್ ನಾಯಕ್‌ಗೆ ಇಡಿ ವಿಚಾರಣೆ
ಬಿಗ್ ಬಾಸ್ ಮನೆಗೆ ಹೋದ ನನ್ನ ಮಗ ಹನುಮಂತನ ಫೋನ್ ಮನೆಗೆ ವಾಪಸ್ ಕೊಟ್ಟು ಕಳಿಸಿದ್ದಾರೆ. ನಮಗೆ ಬಿಗ್ ಬಾಸ್ ಮನೆಗೆ ಫೋನ್ ಮಾಡಿ, ಹನುಮಂತನನ್ನು ಓಟು ಹಾಕಲು ಕಳಿಸಿ ಎಂದು ಹೇಳುವುದಕ್ಕೆ ಗೊತ್ತಾಗುವುದಿಲ್ಲ. ಅವರೇ ಕಳಿಸಿದ್ದರೆ ಬಂದು ಓಟು ಹಾಕುತ್ತಿದ್ದ.
- ಮೇಘಪ್ಪ, ಗಾಯಕ ಹನುಮಂತನ ತಂದೆ