ನಿಜಲಿಂಗಪ್ಪನವರ ಮನೆ ಖರೀದಿಗೆ ಸರ್ಕಾರದಿಂದ 4.18 ಕೋಟಿ ರೂ.
ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರ ಚಿತ್ರದುರ್ಗದ ಮನೆಯನ್ನು ಸರ್ಕಾರ 4.18 ಕೋಟಿ ರೂ.ಗೆ ಖರೀದಿಸಲಿದೆ. ಈ ಮನೆಯನ್ನು ಸಂರಕ್ಷಿಸಿ ಸ್ಮಾರಕವನ್ನಾಗಿ ಮಾಡುವ ಉದ್ದೇಶ ಸರ್ಕಾರದ್ದಾಗಿದೆ.
ಬೆಂಗಳೂರು (ನ.13): ರಾಜ್ಯದ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ನಿಜಲಿಂಗಪ್ಪ ಅವರ ಚಿತ್ರದುರ್ಗದ ವಾಸದ ಮನೆಯನ್ನು ಸರ್ಕಾರವು ರೂ.4,18,49,017 ಕೊಟ್ಟು ಖರೀದಿ ಮಾಡಲು ಮುಂದಾಗಿದೆ. ಈ ಮೂಲಕ ನಿಜಲಿಂಗಪ್ಪ ಅವರ ಮನೆಯನ್ನು ಸಂರಕ್ಷಿಸಲು ಜಿಲ್ಲಾಧಿಕಾರಿಗೆ ಅನುದಾನ ಮಂಜೂರು ಮಾಡಿದೆ.
ಈಗಾಗಲೇ 2020-21ನೇ ಸಾಲಿನ ಆಯವ್ಯಯ ಭಾಷಣದಲ್ಲಿ, ಕರ್ನಾಟಕ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ನಿಜಲಿಂಗಪ್ಪನವರು ಚಿತ್ರದುರ್ಗದಲ್ಲಿ ವಾಸವಿದ್ದ ಮನೆಯನ್ನು ಸರ್ಕಾರವು ಖರೀದಿಸಿ ಸಂರಕ್ಷಿಸಲು ಹಾಗೂ ಅಭಿವೃದ್ಧಿಗೊಳಿಸಲು ರೂ.5.00 ಕೋಟಿಗಳ ಅನುದಾನವನ್ನು ಒದಗಿಸಲಾಗುವುದು ಎಂದು ಘೋಷಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರದ ಆದೇಶವನ್ನೂ ಹೊರಡಿಸಲಾಗಿತ್ತು. ಇದೀಗ ದಿವಂಗತ ಎಸ್.ನಿಜಲಿಂಗಪ್ಪ ಅವರು ಚಿತ್ರದುರ್ಗದಲ್ಲಿ ವಾಸವಿದ್ದ ಮನೆಯನ್ನು ಸರ್ಕಾರವು ಖರೀದಿಸಿ ಸಂರಕ್ಷಿಸಲು ಹಾಗೂ ಅಭಿವೃದ್ಧಿಗೊಳಿಸಲು ರೂ.5.00 ಕೋಟಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿ, ರೂ.2.00 ಕೋಟಿಗಳ ಅನುದಾನವನ್ನು ಜಿಲ್ಲಾಧಿಕಾರಿ, ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ ಇವರಿಗೆ ಬಿಡುಗಡೆ ಮಾಡಲು ಸರ್ಕಾರದ ಮಂಜೂರಾತಿ ನೀಡಲಾಗಿರುತ್ತದೆ.
ಇದನ್ನೂ ಓದಿ: ಮುಡಾ ಸೈಟ್ ಹಂಚಿಕೆಯಲ್ಲಿ ಮತ್ತೊಂದು ಟ್ವಿಸ್ಟ್: ಸಿಎಂ ಖಾಸಗಿ ಪಿಎ ಕುಮಾರ್ ಹಾಗೂ ಸಂಸದ ಕುಮಾರ್ ನಾಯಕ್‌ಗೆ ಇಡಿ ವಿಚಾರಣೆ
ಇದಾದ ನಂತರ ಸರ್ಕಾರದಿಂದ ಬಾಕಿ ಉಳಿದ 3 ಕೋಟಿ ರೂ. ಜಹಣವನ್ನು ಜಿಲ್ಲಾಧಿಕಾರಿ, ಚಿತ್ರದುರ್ಗ ಇವರಿಗೆ ಬಿಡುಗಡೆ ಮಾಡಲು ಮಂಜೂರಾತಿ ನೀಡಲಾಗಿರುತ್ತದೆ. ಇದೀಗ ದಿವಂಗತ ಎಸ್.ನಿಜಲಿಂಗಪ್ಪನವರ ಮನೆಯನ್ನು ಸರ್ಕಾರವು ಖರೀದಿಸಿ ಸಂರಕ್ಷಿಸಲು ಹಾಗೂ ಅಭಿವೃದ್ಧಿಗೊಳಿಸುವ ಜವಾಬ್ದಾರಿಯನ್ನು ಚಿತ್ರದುರ್ಗ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರರ ಖಾತೆಗೆ ಹಣ ಅನುದಾನ ಬಿಡುಗಡೆ ಮಾಡಲಾಗಿದೆ. ಸರ್ಕಾರದ 5 ಕೋಟಿ ರೂ. ಅನುಮೋದಿತ ಅನುದಾನದಲ್ಲಿ ಅಂದಾಜುಪಟ್ಟಿ ಅನುಸಾರ ಸದರಿ ಮನೆಯನ್ನು ರೂ.4,18,49,017/-ಗಳ ಮೊತ್ತದಲ್ಲಿ ವಿನಯ್ ಇವರಿಂದ ಖರೀದಿಸುವ ಬಗ್ಗೆ ಸೂಕ್ತ ಕಾನೂನು ಅಭಿಪ್ರಾಯ ಹಾಗೂ ನಿರ್ದೇಶನವನ್ನು ಕೋರಲಾಗಿತ್ತು.
ಇನ್ನು ಎಸ್. ನಿಜಲಿಂಗಪ್ಪ ಅವರು ಆಗಸ್ಟ್ 2000ನೇ ಇಸವಿಯಲ್ಲಿ ನಿಧನರಾದ ನಂತರ ಅವರ ಮನೆಯು ಮಕ್ಕಳ ಹೆಸರಿನಿಂದ ವರ್ಗಾವಣೆ ಆಗುತ್ತಾ ಇದೀಗ ಸಂಪೂರ್ಣ ಹಕ್ಕನ್ನು ಅವರ ಮೊಮ್ಮಗ ಎಸ್.ಕೆ. ವಿನಯ್ ಹೊಂದಿರುತ್ತಾರೆ. ಎಲ್ಲ ದಾಖಲೆಗಳನ್ನು ಕೂಲಂಕುಷವಾಗಿ ಅವಲೋಕಿಸಿದಾಗ, ಖಾತಾದಲ್ಲಿ ನಮೂದಿಸಿರುವಂತೆ ಎಸ್.ಕೆ.ವಿನಯ್ ಅವರು ಹಾಲಿ ಎಸ್. ನಿಜಲಿಂಗಪಟ್ಟ ಅವರ ಮನೆಯ ಮಾಲೀಕರಾಗಿದ್ದಾರೆ. ಅವರು ಸರ್ಕಾರದ ಪರವಾಗಿ ಸೇಲ್ ಡೀಡ್ ಅನ್ನು ಕಾರ್ಯಗತಗೊಳಿಸಲು ಹಕ್ಕನ್ನು ಹೊಂದಿದ್ದಾರೆ. ಸಂಬಂಧಪಟ್ಟ ಇಲಾಖೆ/ಕರ್ನಾಟಕ ಸರ್ಕಾರವು ದಾಖಲೆಗಳಲ್ಲಿ ಲಭ್ಯವಿರುವ ದಾಖಲೆಗಳ ಪ್ರಕಾರ ಈ ಮನೆಯನ್ನು ಖರೀದಿಸಬಹುದು ಎಂಬುದು ಕಾನೂನು ಇಲಾಖೆಯ ಅಭಿಪ್ರಾಯವಾಗಿದೆ. ಈ ಹಿನ್ನೆಲೆಯಲ್ಲಿ ಇದೀಗ ರಾಜ್ಯ ಸರ್ಕಾರದಿಂದ 4.18 ಕೋಟಿ ರೂ. ಹಣವನ್ನು ವಿನಯ್ ಅವರಿಗೆ ಪಾವತಿಸಿ ಮನೆಯನ್ನು ಸುಪರ್ದಿಗೆ ಪಡೆದುಕೊಳ್ಳಲಿದೆ.
ಇದನ್ನೂ ಓದಿ: ಅಲ್ಲಾನೇ ಹರಾಮಿ ಆಸ್ತಿ ತಗೋಬಾರ್ದು ಅಂದಿದ್ದಾರೆ; ಆದ್ರೆ ಜಮೀರ್ ಇಸ್ಲಾಂ ಧರ್ಮ ಕೆಡಿಸ್ತಾನೆ; ಅಯೂಫ್!
ನಂತರ ಎಸ್. ನಿಜಲಿಂಗಪ್ಪ ಅವರ ಮನೆಯನ್ನು ಸಂರಕ್ಷಣೆ ಮಾಡುವ ಜವಾಬ್ದಾರಿ ಸರ್ಕಾರಕ್ಕೆ ಸೇರಲಿದೆ. ಇದಾದ ನಂತರ ಕಾಲ ಕಾಲಕ್ಕೆ ಮನೆಯನ್ನು ಸಂರಕ್ಷಣೆ ಮಾಡುವ ಜೊತೆಗೆ ಅಭಿವೃದ್ಧಿ ಮಾಡಿ ಸಾರ್ವಜನಿಕ ವೀಕ್ಷಣೆಗೆ ಮುಕ್ತಗೊಳಿಸುವ ಸಾಧ್ಯತೆಯಿದೆ. ಇವರ ನಿಜಲಿಂಗಪ್ಪ ಅವರ ಮನೆಯನ್ನು ಒಂದು ಸ್ಮಾರಕವಾಗಿ ಮಾಡಲು ಸರ್ಕಾರ ಬದ್ಧತೆಯನ್ನು ತೋರಿಸುತ್ತಿದೆ. ಈಗಾಗಲೇ ರಾಜ್ಯದಲ್ಲಿ ಹಲವು ಸಾಹಿತಿಗಳು, ಸ್ವಾಮೀಜಿಗಳು, ಸ್ವಾತಂತ್ರ್ಯ ಹೋರಾಟಗಾರರು ಸೇರಿದಂತೆ ಕೆಲವು ಗಣ್ಯ ನಾಯಕರ ಮನೆಗಳನ್ನು ಸರ್ಕಾರದಿಂದ ಹಾಗೂ ಟ್ರಸ್ಟ್ ಮತ್ತು ಖಾಸಗಿ ಸಂಸ್ಥೆಗಳಿಂದ ಸಂರಕ್ಷಣೆ ಮಾಡಲಾಗುತ್ತಿದೆ. ಈಗ ಎಸ್. ನಿಜಲಿಂಗಪ್ಪ ಅವರ ಮನೆಯೂ ಈ ಸ್ಮಾರಕಗಳ ಪಟ್ಟಿಗೆ ಸೇರ್ಪಡೆ ಆಗಲಿದೆ.