"ಪುಟ್ಟಕ್ಕನ ಮಕ್ಕಳು" ಧಾರಾವಾಹಿ 900 ಸಂಚಿಕೆಗಳನ್ನು ಪೂರೈಸಿದೆ. ಆದರೆ, ನಾಯಕಿ ಸ್ನೇಹಾ ಪಾತ್ರದ ಸಾವಿನ ನಂತರ ಕಥೆ ಹಳಿ ತಪ್ಪಿದೆ ಎಂದು ವೀಕ್ಷಕರು ಅಭಿಪ್ರಾಯ ಪಡುತ್ತಿದ್ದಾರೆ. ಕಥೆಯಲ್ಲಿ ತಿರುವು ತರಲು ನಿರ್ದೇಶಕರು ಪ್ರಯತ್ನಿಸುತ್ತಿದ್ದಾರೆ. ಸದ್ಯಕ್ಕೆ, ಪುಟ್ಟಕ್ಕ ಸ್ನೇಹಾಳ ಮೇಲಿನ ಕಳಂಕ ತೊಡೆದುಹಾಕಲು ಹೋರಾಡುತ್ತಿದ್ದಾಳೆ. ಬಿಸಿಲಿನಲ್ಲಿ ಕಲಾವಿದರು ಶೂಟಿಂಗ್‌ನಲ್ಲಿ ಕಷ್ಟಪಡುತ್ತಿದ್ದಾರೆ ಎಂದು ವರದಿಯಾಗಿದೆ. ಧಾರಾವಾಹಿ ತನ್ನ ಜನಪ್ರಿಯತೆಯನ್ನು ಮರಳಿ ಪಡೆಯುತ್ತದೆಯೇ ಎಂದು ಕಾದು ನೋಡಬೇಕಿದೆ.
ಈಚೆಗಷ್ಟೇ 900 ಸಂಚಿಕೆಗಳನ್ನು ಪೂರೈಸಿರುವ ಪುಟ್ಟಕ್ಕನ ಮಕ್ಕಳು ಸೀರಿಯಲ್ಗೆ ತಿರುವು ಕೊಟ್ಟು ಮತ್ತಷ್ಟು ಜೀವ ತುಂಬಲು ನಿರ್ದೇಶಕರು ಹರಸಾಹಸ ಪಡುತ್ತಿದ್ದಾರೆ. 12ನೇ ಡಿಸೆಂಬರ್ 2021ರಿಂದ ಶುರುವಾಗಿದ್ದ ಸೀರಿಯಲ್ ಮೂರು ವರ್ಷ ಎರಡು ತಿಂಗಳುಗಳನ್ನು ಪೂರೈಸಿದೆ. ಸದಾ ಟಿಆರ್ಪಿಯಲ್ಲಿ ನಂಬರ್ 1 ಸ್ಥಾನವನ್ನು ವರ್ಷಗಟ್ಟಲೆ ಕಾದುಕೊಂಡಿದ್ದ ಸೀರಿಯಲ್, ಬರಬರುತ್ತಾ ಉಳಿದ ಬಹುತೇಕ ಸೀರಿಯಲ್ಗಳಂತೆ ತನ್ನತನವನ್ನು ಕಳೆದುಕೊಂಡು ಸಾಗುತ್ತಿದೆ ಎನ್ನುವುದು ಇದರ ವೀಕ್ಷಕರ ಅಭಿಮತ. ಪುಟ್ಟಕ್ಕನ ಗಟ್ಟಿಗಿತ್ತಿತನ, ಸ್ನೇಹಾಳ ಸ್ವಾಭಿಮಾನವೇ ಇಲ್ಲಿ ಹೈಲೈಟ್ ಆಗಿತ್ತು. ಆದರೆ ಈಗ್ಯಾಕೋ ಬಹುತೇಕ ವೀಕ್ಷಕರನ್ನು ಈ ಸೀರಿಯಲ್ ಕಳೆದುಕೊಂಡು ಬಿಟ್ಟಿದೆ. ಉಮಾಶ್ರೀ ಅಮ್ಮಾ ನೀವು ಈ ಸೀರಿಯಲ್ ಅಂದೇ ಮುಗಿಸಿಬಿಡಬೇಕಿತ್ತು ಎಂದು ಕಮೆಂಟ್ಸ್ ತುಂಬಾ ಹಲವರು ಹೇಳುತ್ತಿದ್ದಾರೆ. ಈ ಸೀರಿಯಲ್ಗೆ ಬಹುದೊಡ್ಡ ಹಿನ್ನಡೆಯಾಗಿದ್ದು ನಾಯಕಿ ಸ್ನೇಹಾಳ ಸಾವು! ಆಕೆಯ ಸಾವಿನ ಬೆನ್ನಲ್ಲೇ ಕಥೆ ಏನೇನೋ ತಿರುವು ಪಡೆದುಕೊಂಡು ಎಲ್ಲೆಲ್ಲಿಯೋ ಹೋಗುತ್ತಾ ಹಳಿ ತಪ್ಪುತ್ತಿದೆ ಎಂದು ವೀಕ್ಷಕರು ಅಸಮಾಧಾನ ಹೊರಹಾಕುತ್ತಲೇ ಇದ್ದಾರೆ.
ಇದೀಗ ಸ್ನೇಹಾಳಿಗೆ ಅಂಟಿರುವ ಕಳಂಕವನ್ನು ತೊಡೆದು ಹಾಕಲು ಪುಟ್ಟಕ್ಕ ಪಣತೊಟ್ಟಿದ್ದಾಳೆ. ಅದಕ್ಕಾಗಿ ಉಪವಾಸ ಕುಳಿತಿದ್ದಾಳೆ. ಇದು ಸೀರಿಯಲ್ ಕಥೆಯಾದರೆ, ಶೂಟಿಂಗ್ ಸೆಟ್ನಲ್ಲಿ ನಟ-ನಟಿಯರು ಹಾಗೂ ಹಿನ್ನೆಲೆಯವರ ಗೋಳು ಯಾರಿಗೂ ಬೇಡ. ಕಳೆದ ಕೆಲವು ದಿನಗಳಿಂದ ಸುಡು ಬಿಸಿಲಿಗೆ ಹೊರಗೆ ಹೋಗುವುದು ಕಷ್ಟ ಎನ್ನುವಂಥ ಸ್ಥಿತಿ ಇದೆ. ಆದರೆ ಬಿಸಿಲೇ ಇರಲಿ, ಚಳಿಯೇಇರಲಿ, ಮಳೆಯೇ ಬರಲಿ ಶೂಟಿಂಗ್ ಅಂತೂ ನಿಲ್ಲುವಂತಿಲ್ಲ. ಇದೀಗ ಪುಟ್ಟಕ್ಕನ ಮಕ್ಕಳು ಶೂಟಿಂಗ್ ಸೆಟ್ನಲ್ಲಿ ಕಲಾವಿದರ ಬಿಸಿಲಿನಿಂದ ಬಸವಳಿದಿರುವುದನ್ನು ನೋಡಬಹುದಾಗಿದೆ. ನೀರು ನೀರು ಎಂದು ಎಲ್ಲರೂ ಹೇಳುತ್ತಿದ್ದಾರೆ. ಎಲ್ಲರೂ ಬಿಸಿಲಿನಿಂದ ಸುಸ್ತಾಗಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು.
900 ಸಂಚಿಕೆ ಮುಗಿಸಿದ ಪುಟ್ಟಕ್ಕನ ಮಕ್ಕಳು! ಸಾವಿನ ಹೊಡೆತಕ್ಕೆ ತತ್ತರಿಸಿದ ಸೀರಿಯಲ್- ಮುಂದೇನು?
ಡಿ.ವಿ.ಡ್ರೀಮ್ಸ್ ಯೂಟ್ಯೂಬ್ ಚಾನೆಲ್ನಲ್ಲಿ ಇದನ್ನು ಶೇರ್ ಮಾಡಲಾಗಿದೆ. ಶೂಟಿಂಗ್‌ನಲ್ಲಿ ಕಲಾವಿದರ ಹಾಗೂ ತಂತ್ರಜ್ಞರು ಎಷ್ಟು ಕಷ್ಟಪಟ್ಟು ಶೂಟಿಂಗ್ ಮಾಡುತ್ತಾರೆ ಎನ್ನುವುದನ್ನು ಇದರಲ್ಲಿ ನೋಡಬಹುದಾಗಿದೆ. ನಟಿ ಉಮಾಶ್ರೀ ಕೂಡ ನಮಗೆ ನೀರು ಬೇಕು, ಆದ್ರೆ ಏನು ಮಾಡೋದು, ಬಾಯಿಗೆ ನೀರು ಕೊಡಿ ಅಂದ್ರೆ ಡೈಲಾಗ್ ಕೊಟ್ತಾರೆ ಏನು ಮಾಡೋದು ಹೇಳಿ ಎಂದು ತಮಾಷೆ ಮಾಡಿದ್ದಾರೆ.
ಪಾತ್ರಗಳಿಗೆ ಪರಕಾಯ ಪ್ರವೇಶ ಮಾಡಿದಂತೆ ನಟಿಸುತ್ತಲೇ ಚಿತ್ರಪ್ರಿಯರ ಕಣ್ಮಣಿಯಾಗಿದವರು ಉಮಾಶ್ರೀ. ಅವರು ಮಾಡುವ ಪ್ರತಿಯೊಂದು ಪಾತ್ರಗಳಲ್ಲೂ ಸ್ವಂತಿಕೆ, ಜೀವಂತಿಕೆ ಇದೆ. ನಟಿಯ ಭಾವುಕತೆಯಲ್ಲಾಗಲಿ, ಹಾವ ಭಾವಗಳಲ್ಲಾಗಲಿ, ಅಭಿವ್ಯಕ್ತಿಯಲ್ಲಾಗಲಿ ಅವರ ಸಮಕ್ಕೆ ಇರುವ ಕಲಾವಿದರು ಅಪರೂಪವೆಂಬುದು ಚಿತ್ರಪ್ರಿಯರ ಅಭಿಪ್ರಾಯ. ಕೆಲವೊಂದು ವೈಶಿಷ್ಟ್ಯಪೂರ್ಣ ಪಾತ್ರಗಳಲ್ಲಿ ಕಣ್ಣುಗಳಲ್ಲಿಯೇ ತುಂಬಿಕೊಡುತ್ತಾರೆ. ಹಲವು ವಿವಿಧ ಪಾತ್ರಗಳಲ್ಲಿ ಲೀಲಾಜಾಲವಾಗಿ ನಟಿಸುವ ಇವರು ಪುಟ್ಟಕ್ಕನ ಪಾತ್ರಕ್ಕೆ ಜೀವ ತುಂಬಿದ್ದರೂ, ಕಥೆಯೇ ಯಾವುದೋ ದಿಕ್ಕಿಗೆ ಹೋಗುತ್ತಿರುವುದರಿಂದ ಯಾಕೋ ಜನರಿಗೆ ಅದು ಹಿಡಿಸುತ್ತಿಲ್ಲ. ಇದೀಗ 900ರ ಸಂಚಿಕೆ ಎಂದು ಜೀ ಕನ್ನಡ ಪೋಸ್ಟ್ ಮಾಡಿದಾಗಲೂ, ಅದಕ್ಕೆ ಬಂದಿರುವ ಕಮೆಂಟ್ಗಳ ತುಂಬೆಲ್ಲಾ ಸೀರಿಯಲ್ ಮುಗಿಸಿ ಎನ್ನುವ ಮಾತೇ ಕೇಳಿಬರುತ್ತಿದೆ. ಹಿಂದೊಮ್ಮೆ ಸಂದರ್ಶನದಲ್ಲಿ ಆರೂರು ಜಗದೀಶ್ ಅವರು, 2025ರಲ್ಲಿಯೂ ಸೀರಿಯಲ್ ಮುಂದುವರೆಯುತ್ತದೆ ಎಂದಿದ್ದರು. ಈ ಹಿನ್ನೆಲೆಯಲ್ಲಿ, ಧಾರಾವಾಹಿ ಮತ್ತೆ ವೀಕ್ಷಕರನ್ನು ತನ್ನತ್ತ ಸೆಳೆಯುವಲ್ಲಿ ಸಫಲವಾಗುತ್ತಾ ಎಂದು ಕಾದು ನೋಡಬೇಕಿದೆ.

