ಸಂತು ಹಿಂದೆ ಪಂತು ಕೂಡ ಔಟ್: ಬಿಗ್‌ಬಾಸ್ ಮನೆಯಲ್ಲಿ ಹಳ್ಳಿಕಾರ್ ಒಡೆಯ ವರ್ತೂರು ಸಂತೋಷ್ ಭರ್ಜರಿ ಜರ್ನಿ ಹೇಗಿತ್ತು ಗೊತ್ತಾ!
ಬಿಗ್‌ಬಾಸ್ ಕನ್ನಡ ಸೀಸನ್ 10ರ ಗ್ರ್ಯಾಂಡ್ ಫಿನಾಲೆಯ ನಾಲ್ಕನೇ ರನ್ನರ್ ಅಪ್ ಆಗಿ ಮನೆಯಿಂದ ವರ್ತೂರು ಸಂತೋಷ್ ಹೊರಹೊಮ್ಮಿದ್ದಾರೆ. ಬಿಗ್‌ಬಾಸ್ ಹತ್ತನೇ ಸೀಸನ್‌ನ ಸ್ಪರ್ಧಿಯಾಗಿದ್ದ ನಮ್ರತಾ ಗೌಡ ಅವರು ‘ಪಟಾಕಿ ಪೋರಿಯೋ’ ಎಂಬ ಹಾಡಿನ ಮೂಲಕ ಮನೆಯೊಳಗೆಕ ಹೋಗಿ, ಎವಿಕ್ಟೆಡ್ ಕಂಟೆಸ್ಟೆಂಟ್ ವರ್ತೂರು ಸಂತೋಷ್ ಎಂದು ಘೋಷಿಸಿ ಅವರನ್ನು ಕರೆತಂದರು.
ಬಿಗ್‌ಬಾಸ್ ಕನ್ನಡ ಸೀಸನ್ 10ರ ಗ್ರ್ಯಾಂಡ್ ಫಿನಾಲೆಯ ನಾಲ್ಕನೇ ರನ್ನರ್ ಅಪ್ ಆಗಿ ಮನೆಯಿಂದ ವರ್ತೂರು ಸಂತೋಷ್ ಹೊರಹೊಮ್ಮಿದ್ದಾರೆ. ಬಿಗ್‌ಬಾಸ್ ಹತ್ತನೇ ಸೀಸನ್‌ನ ಸ್ಪರ್ಧಿಯಾಗಿದ್ದ ನಮ್ರತಾ ಗೌಡ ಅವರು ‘ಪಟಾಕಿ ಪೋರಿಯೋ’ ಎಂಬ ಹಾಡಿನ ಮೂಲಕ ಮನೆಯೊಳಗೆಕ ಹೋಗಿ, ಎವಿಕ್ಟೆಡ್ ಕಂಟೆಸ್ಟೆಂಟ್ ವರ್ತೂರು ಸಂತೋಷ್ ಎಂದು ಘೋಷಿಸಿ ಅವರನ್ನು ಕರೆತಂದರು. ಮನೆಯ ಸದಸ್ಯರು ‘ಜೈ ಹಳ್ಳಿಕಾರ್’ ಎಂದು ಘೋಷಣೆ ಕೂಗಿ ಕಳಿಸಿಕೊಟ್ಟರು. ಸೀಸನ್‌ನಲ್ಲಿ ಹಲವು ಏರಿಳಿತಗಳನ್ನು ಕಂಡ ಜರ್ನಿ ವರ್ತೂರು ಸಂತೋಷ್ ಅವರದ್ದು. ‘ರೈತ ಅಂದ್ರೆ ಸಗಣಿನೇ ಎತ್ಕೊಬೇಕು ಅಂತಿಲ್ಲ. ಶೋಕಿನೂ ಮಾಡ್ಬೋದು ಕೃಷಿನೂ ಮಾಡ್ಬೋದು ಅಂತ ತೋರಿಸಿಕೊಟ್ಟಿದೀನಿ’ ಎನ್ನುತ್ತ ಬಿಗ್‌ಬಾಸ್ ವೇದಿಕೆಗೆ ಬಂದ ತರುಣ ರೈತ ವರ್ತೂರು ಸಂತೋಷ್ ಅವರ ಕತ್ತಿನಲ್ಲಿ ಹುಲಿಯುಗುರಿನ ಪೆಂಡೆಂಟ್ ನೇತಾಡುತ್ತಿತ್ತು.
ಮುಖದಲ್ಲಿ ಮುಗ್ಧತೆ ಎದ್ದು ಕಾಣುತ್ತಿತ್ತು. ಈಗ ಫಿನಾಲೆಯ ದಿನ ಐದು ಸ್ಪರ್ಧಿಗಳಲ್ಲಿ ಮೊದಲಿಗರಾಗಿ ಮನೆಯಿಂದ ಹೊರಗೆ ಬಂದಾಗ ವರ್ತೂರು ಅವರ ಮುಖದಲ್ಲಿನ ಮುಗ್ಧತೆ ಕಿಂಚಿತ್ ಮಾಸದೆ ಹಾಗೆಯೇಉಳಿದಿತ್ತು. ಆದರೆ ಕತ್ತಿನಲ್ಲಿ ನೇತಾಡುತ್ತಿದ್ದ ಹುಲಿಯುಗುರು ಮಾಯವಾಗಿತ್ತು! ಕಳೆದುಕೊಂಡಿದ್ದು ಒಂದು ಹುಲಿಯುಗುರು, ಆದರೆ ಈ ಮನೆಯಲ್ಲಿ ವರ್ತೂರು ಗಳಿಸಿಕೊಂಡಿದ್ದಕ್ಕೆ ಲೆಕ್ಕವಿಲ್ಲ. ಅದಕ್ಕೆ ಮೌಲ್ಯಕಟ್ಟಲು ಸಾಧ್ಯವೂ ಇಲ್ಲ. ಹಳ್ಳಿಕಾರ್ ಒಡೆಯ ಎಂಬ ಬಿರುದನ್ನು ಗಳಿಸಿಕೊಂಡಿದ್ದ, ಹಳ್ಳಿಕಾರ್ ತಳಿಯ ಹೈನುಗಳನ್ನು ಸಲುಹುತ್ತಿದ್ದ ವರ್ತೂರು, ಹಳ್ಳಿಕಾರ್ ರೇಸ್‌ನಿಂದ ಬಿಗ್‌ಬಾಸ್ ರೇಸ್‌ಗೆ ಬಂದಿದ್ದು ಖುಷಿಖುಷಿಯಾಗಿಯೇ ಆದರೆ ಈ ಮನೆಯೊಳಗೆ ಅವರ ದಿನಗಳಲ್ಲಿ ಖುಷಿಯಷ್ಟೇ ಇರಲಿಲ್ಲ. ಹಲವು ಭಾವಗಳು, ನೋವು ನಲಿವುಗಳು ತುಂಬಿದ್ದ ವರ್ತೂರು ಸಂತೋಷ್ ಜರ್ನಿಯನ್ನು ಕಟ್ಟಿಕೊಡುವ ಪ್ರಯತ್ನವನ್ನು ಜಿಯೊಸಿನಿಮಾ ಇಲ್ಲಿ ಮಾಡುತ್ತಿದೆ.
ಅಸಮರ್ಥರಾಗಿ ಒಳಹೊಕ್ಕು…: ಬಿಗ್‌ಬಾಸ್ ಮನೆಯೊಳಗೆ ಅಸಮರ್ಥರಾಗಿ ಒಳಗೆ ಹೋದವರು ವರ್ತೂರು ಸಂತೋಷ್. ಅಸಮರ್ಥರ ಗುಂಪಿನಿಂದ ಸಮರ್ಥರ ಗುಂಪಿಗೆ ಜಿಗಿದರೂ ಮನೆಯೊಳಗೆ ಅತ್ಯಂತ ಕ್ರಿಯಾತ್ಮಕವಾಗಿಯೇನೂ ವರ್ತೂರು ಪಾಲ್ಗೊಳ್ಳುತ್ತಿರಲಿಲ್ಲ. ಹಾಗಾಗಿಯೇ ಪ್ರತಿ ವಾರ ನಾಮಿನೇಷನ್ ಆಗುವಾಗಲೂ ಈ ಕಾರಣ ಎಲ್ಲರ ಬಾಯಿಯಲ್ಲಿ ಬರುತ್ತಿತ್ತು. ಆದರೆ ಕ್ರಮೇಣ ಮನೆಯೊ ಸದಸ್ಯರ ಜೊತೆಗೆ ಬೆರೆಯುತ್ತ, ಆಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತ, ಗಲಾಟೆ, ಜಗಳದಿಂದ ಮಾರುದೂರವೇ ಉಳಿದುಕೊಳ್ಳುತ್ತ ವರ್ತೂರು ರೇಸ್‌ನ ಕಣದೊಳಗೆ ಎಂಟ್ರಿ ಕೊಡತೊಡಗಿದರು.
ಹುಲಿಯುಗುರಿನ ಸಹವಾಸ!: ಕೆಲವು ವಾರಗಳು ಕಳೆಯುತ್ತಿದ್ದ ಹಾಗೆಯೇ ವರ್ತೂರುಸಂತೋಷ್ ಇದ್ದಕ್ಕಿದ್ದಂತೆಯೇ ಮನೆಯಿಂದ ಮಾಯವಾದರು. ಆಗ ಮನೆಯವರೆಲ್ಲ ಅಚ್ಚರಿಪಟ್ಟರು. ಯಾಕೆ ಹೋಗಿರಬಹುದು? ಎಲ್ಲಿ ಹೋಗಿರಬಹುದು ಎಂದು ಊಹಿಸತೊಡಗಿದ್ದರು. ಮನೆಯಲ್ಲಿ ಯಾರಿಗೋ ಅನಾರೋಗ್ಯ ಉಂಟಾದ ಕಾರಣಕ್ಕೆ ಹೋಗಿದ್ದಾರೆ ಎಂದುಮನೆಯವರು ತಿಳಿದುಕೊಂಡಿದ್ದರು. ಆದರೆ ಪರಿಸ್ಥಿತಿ ಬೇರೆಯೇ ಇತ್ತು. ವರ್ತೂರು ಸಂತೋಷ್ ಹುಲಿಯುಗುರನ್ನು ಧರಿಸಿರುವುದು ವನ್ಯಜೀವಿ ರಕ್ಷಣಾ ಕಾನೂನಿನ ಪ್ರಕಾರ ಕಾನೂನುಬಾಹಿರ ಎಂಬ ಕಾರಣ ನೀಡಿ ವರ್ತೂರು ಸಂತೋಷ್ ಅವರನ್ನು ಬಂಧಿಸಲಾಗಿತ್ತು. ಈ ಸಂಗತಿ ರಾಷ್ಟ್ರಮಟ್ಟದಲ್ಲಿಸದ್ದು ಮಾಡಿತ್ತು. ಮತ್ತೆ ವರ್ತೂರು ಮನೆಯೊಳಗೆ ಹೋಗುವುದು ಸಾಧ್ಯವೇ ಇಲ್ಲ ಎಂದು ಎಲ್ಲರೂ ನಿರ್ಧರಿಸಿಬಿಟ್ಟಿದ್ದರು. ಆದರೆ ಎಲ್ಲ ನಿರೀಕ್ಷೆಗಳನ್ನು ಹುಸಿಗೊಳಿಸಿ ವರ್ತೂರು ಸಂತೋಷ್ ನಗುನಗುತ್ತ ಮತ್ತೆ ಮನೆಯೊಳಗೆ ಎಂಟ್ರಿ ಕೊಟ್ಟಿದ್ದರು. ಆದರೆ ಮೊದಲಿನ ಉತ್ಸಾಹವಾಗಲಿ, ನೆಮ್ಮದಿಯಾಗಲಿ ಅವರಿಗೆ ಇರಲಿಲ್ಲ.
ಉಳಿಯಲಾರೆ ಮನೆಯೊಳಗೆ: ಮನೆಯಿಂದ ಹೊರಗೆ ಹೋಗಿ ರೀ ಎಂಟ್ರಿ ಕೊಟ್ಟಾಗಿನಿಂದಲೂ ವರ್ತೂರು ನೆಮ್ಮದಿಯಿಂದ ಇರಲಿಲ್ಲ. ‘ನನಗೆ ಇಲ್ಲಿ ಇರಲಾಗುತ್ತಿಲ್ಲ. ದಯವಿಟ್ಟು ಹೊರಗೆ ಬಿಟ್ಟುಬಿಡಿ’ ಎಂದು ಪದೇ ಪದೇ ಕೇಳಿಕೊಳ್ಳಲು ಶುರುಮಾಡಿದರು. ಮನೆಯ ಸದಸ್ಯರೆಲ್ಲರೂ ಕೇಳಿದರೂ ಅವರು ಜಗ್ಗಲಿಲ್ಲ. ಮನೆಯಿಂದ ಹೊರಗೆ ಕಳಿಸದಿದ್ದರೆ ನಾನು ಯಾವ ಗೇಮ್ ಕೂಡ ಆಡುವುದಿಲ್ಲ ಎಂದು ಹಟ ಹಿಡಿದು ಕೂತರು. ಭಾಗ್ಯಲಕ್ಷ್ಮಿ ಧಾರಾವಾಹಿಯ ನಟಿ ಸುಷ್ಮಾ ಬಂದಾಗಲೂ ವರ್ತೂರುಅವರ ಮನವೊಲಿಸಲು ಯತ್ನಿಸಿದ್ದರು. ಆದರೆ ಅವರು ಕರಗಲಿಲ್ಲ. ಕೊನೆಗೆ ವರ್ತೂರುಅವರ ಅಮ್ಮನೇ ಮನೆಯೊಳಗೆ ಬಂದು, ವರ್ತೂರು ಅವರಿಗೆ ಊಟ ತಿನ್ನಿಸಿ ಬುದ್ಧಿವಾದ ಹೇಳಿದಾಗ ವರ್ತೂರು ಮನಸ್ಸು ಬದಲಾಯಿಸಿದರು. ‘ಈಗಿನಿಂದ ಆಟ ಶುರು’ ಎಂದು ಹೇಳಿ ಕಣ್ಣೀರು ಒರೆಸಿಕೊಂಡು ನಕ್ಕರು. ವಾರಾಂತ್ಯದ ಎಪಿಸೋಡ್‌ನಲ್ಲಿ ಸುದೀಪ್ ಕೂಡ ವರ್ತೂರು ಅವರಿಗೆ ಪ್ರೋತ್ಸಾಹದ ಮಾತು ಹೇಳಿದರು. ಅಲ್ಲದೆ ಅವರಗೆ ಕರ್ನಾಟಕದ ಜನರು ನೀಡಿರುವ ಮತಗಳನ್ನೂ ಬಹಿರಂಗಪಡಿಸಿದ್ದರು. ಈ ಎಲ್ಲವೂ ವರ್ತೂರು ಅವರಲ್ಲಿ ಹೊಸ ಉತ್ಸಾಹ ತುಂಬಿತ್ತು. ಮತ್ತೆ ಮನೆಯೊಳಗೆ ಬಂದಾಗ ಅವರು ಹೊಸದಾಗಿದ್ದರು.
ತುಕಾಲಿ ಜೊತೆಗಿನ ಸ್ನೇಹ: ತುಕಾಲಿ ಸಂತೋಷ್ ಮತ್ತು ವರ್ತೂರು ಸಂತೋಷ್ ಇಬ್ಬರ ಜೋಡಿ ಸಂತು-ಪಂತು ಜೋಡಿ ಎಂದೇ ಮನೆಯೊಳಗೆ ಜನಪ್ರಿಯವಾಗಿತ್ತು. ಅವರಿಬ್ಬರೂ ಸೇರಿ ಬಿನ್ ಬ್ಯಾಗ್‌ನಲ್ಲಿ ಕೂತು ಆಡಿದ ಮಾತುಗಳಿಗೆ ಲೆಕ್ಕವಿಲ್ಲ. ಮಾಡಿದ ತಂತ್ರಗಳಿಗೆ ಮೇರೆಯೇ ಇಲ್ಲ. ಬರೀ ತಂತ್ರಗಾರಿಕೆ, ಉಳಿದವರ ಬಗ್ಗೆ ಚಾಡಿಯಷ್ಟೇ ಅಲ್ಲ, ತಮ್ಮಕಷ್ಟಸುಖಗಳನ್ನೂ ಹಂಚಿಕೊಂಡಿದ್ದಾರೆ. ಸಂತೈಸಿಕೊಂಡಿದ್ದಾರೆ. ಅವರಿಬ್ಬರ ಸ್ನೇಹಬಂಧನ ಗಟ್ಟಿಗೊಂಡಿದ್ದೇ ಬಾಲ್ಕನಿ ಮೇಲಿನ ಬಿನ್‌ಬ್ಯಾಗ್‌ನಲ್ಲಿ. ಒಬ್ಬರಿಗೊಬ್ಬರು ಯಾವ ಸಂದರ್ಭದಲ್ಲಿಯೂ ಬಿಟ್ಟುಕೊಡದ ಅವರ ಸ್ನೇಹದ ಬಗ್ಗೆ ಸ್ವತಃ ಕಿಚ್ಚ ಸುದೀಪ್ ಅವರೇ ‘ಅಪರೂಪದ ನಿಷ್ಕಳಂಕ ಸ್ಣೇಹವಿದು’ ಎಂದು ಉದ್ಘರಿಸಿದ್ದಿದೆ. ಈ ಸ್ನೇಹಸಂಬಂಧ ಈ ಸೀಸನ್‌ನ ಬಿಗ್‌ಬಾಸ್‌ನ ಅದ್ಭುತ ಕಥನ. ಜೊತೆಗೆ ವರ್ತೂರು ಜರ್ನಿಯ ಬಹುಮುಖ್ಯ ಅಧ್ಯಾಯವೂ ಹೌದು.
ಅಮ್ಮನ ಜೊತೆಗಿನ ರೀ ಯೂನಿಯನ್: ಕುಟುಂಬದ ಸದಸ್ಯರೆಲ್ಲರೂ ಮನೆಗೆ ಭೇಟಿ ನೀಡಿದಾಗ ವರ್ತೂರು ಸಂತೋಷ್ ಅಮ್ಮ ಬುತ್ತಿಯ ಜೊತೆಗೆ ಮನೆಯೊಳಗೆ ಬಂದು ಎಲ್ಲರಿಗೂ ಊಟ ಬಡಿಸಿದ್ದರು. ಸಂತೋಷ್ ಅವರಿಗೆ ಎಣ್ಣೆಹಾಕಿ ತಲೆಗೆ ಮಸಾಜ್ ಮಾಡಿದ್ದರು. ಇದು ಅವರಲ್ಲಿ ಹೊಸ ಉತ್ಸಾವನ್ನು ತುಂಬಿತ್ತು. ಅಮ್ಮ ಮನೆಗೆ ಬಂದು ಹೋದ ಮೇಲೆ ವರ್ತೂರು ಅವರ ಆಟವೇ ಬದಲಾಗಿತ್ತು.
ಜೈಲಿಂದ ಹೊರಗೆ ಬಂದ ಚರಿತ್ರೆ: ತುಕಾಲಿ ಸಂತೋಷ್ ಮತ್ತು ವರ್ತೂರು ಸಂತೋಷ್ ಸೇರಿಕೊಂಡು ಮಾಡಿದ ತರಲೆಗಳಿಗೆ ಲೆಕ್ಕವಿಲ್ಲ. ವರ್ತೂರು ಸಂತೋಷ್ ಕಳಪೆ ಪಟ್ಟ ಗಳಿಸಿಕೊಂಡು ಜೈಲು ಪಾಲಾಗಿದ್ದರು. ಎಲ್ಲರೂ ಮಲಗಿದ್ದರೂ ತುಕಾಲಿ ಸಂತೋಷ್ ಜೈಲಿನ ಪಕ್ಕದಲ್ಲೇ ಕೂತು ಮಾತಾಡುತ್ತಿದ್ದರು. ನಡುರಾತ್ರಿ ‘ಅಣ್ಣಾ ಜೈಲಿಂದ ಹೊರಗೆ ಬಂದುಬಿಡು’ ಎಂದು ವರ್ತೂರು ಅವರಿಗೆ ತುಕಾಲಿ ಆಹ್ವಾನ ನೀಡಿದ್ದರು. ಅದಕ್ಕೆ ವರ್ತೂರು ಹಿಂಜರಿದಾಗ, ‘ಜೈಲಿಂದ ಹೊರಗೆ ಬಂದ್ರೆ ಚರಿತ್ರೆನೇ ಸೃಷ್ಟಿಯಾಗತ್ತೆ. ಏನಾಗಲ್ಲ ಬಾ’ ಎಂದು ಪ್ರೋತ್ಸಾಹಿಸಿದರು. ಅವರ ಮಾತು ಕೇಳಿಕೊಂಡು ಬಿಗ್‌ಬಾಸ್ ಮನೆ ನಿಯಮ ಉಲ್ಲಂಘಿಸಿ ಜೈಲಿಂದ ಹೊರಗೆ ಬಂದಿದ್ದರು. ಆದರೆ ಮನೆಯಿಂದ ಹೊರಗೆ ಬಂದ ತಕ್ಷಣ, ‘ಬಿಗ್‌ಬಾಸ್ ನಂಗೂ ಶಿಕ್ಷೆ ಕೊಟ್ರೆ ಏನ್ಮಾಡೋದು ಅಣ್ಣಾ, ಒಳಗೆ ಹೋಗ್ಬಿಡು’ ಎಂದು ಮತ್ತೆ ಮನೆಯೊಳಗೆ ಕಳಿಸಿಬಿಟ್ಟಿದ್ದರು. ಇದಕ್ಕಾಗಿ ಶಿಕ್ಷೆ ಅನುಭವಿಸಿದ್ದು ಬೇರೆ ಮಾತು. ಆದರೆ ಜೈಲಿಂದ ತಪ್ಪಿಸಿಕೊಂಡ ಏಕೈಕೆ ಸ್ಪರ್ಧಿಯಾಗಿ ದಾಖಲಾಗಿದ್ದಾರೆ.
ಬೆಂಕಿಯ ಜೊತೆಗೆ ಸರಸ!: ಬಿಗ್‌ಬಾಸ್ ಮನೆಯ ಬೆಂಕಿ ಎಂದೇ ಖ್ಯಾತರಾಗಿದ್ದ ತನಿಷಾ ಜೊತೆಗಿನ ವರ್ತೂರು ಒಡನಾಟ ಹಲವು ರಸಪ್ರಸಂಗಗಳನ್ನು ಸೃಷ್ಟಿಸಿತ್ತು. ತನಿಷಾ, ವರ್ತೂರು ಅವರ ಕಾಲಿಗೆ ಮಸಾಜ್ ಮಾಡುವುದೇನು, ವರ್ತೂರು, ತನಿಷಾ ಅವರ ಮಡಿಲಲ್ಲಿ ಮಲಗುವುದೇನು…. ಪರಸ್ಪರ ಮಾತುಗಳನ್ನು ಹಂಚಿಕೊಳ್ಳುವುದೇನು… ಇದೊಂದು ತಮಾಷೆಯ ಟ್ರ್ಯಾಕ್ ಆಗಿ ಸಖತ್ ಹಿಟ್ ಆಗಿತ್ತು. ಟಾಸ್ಕ್‌ನಲ್ಲಿ ವರ್ತೂರು ಅವರಿಂದಲೇ ತನಿಷಾ ಗಾಯಗೊಂಡಂತಾಗಿ ಹೊರಗೆ ಹೋಗುವಂತಾಗಿದ್ದು ವರ್ತೂರು ಅವರ ಮನಸಲ್ಲಿ ಗಿಲ್ಟ್ ಹುಟ್ಟಿಸಿತ್ತು. ಹಾಗಾಗಿಯೇ ತನಿಷಾ ವಾಪಸ್ ಮನೆಗೆ ಬಂದಾಗ ವರ್ತೂರು ತುಸು ಹೆಚ್ಚೇ ಕಾಳಜಿ ತೋರಿಸಿದ್ದರು. ಶಾಲಾ ಟಾಸ್ಕ್‌ನಲ್ಲಿ ವರ್ತೂರು ‘ಪಟಾಕಿ ಯಾರದ್ದಾದ್ರೂ ಆಗಿರ್ಲಿ, ಹಚ್ಚೋರು ನಾವಾಗಿರ್ಬೇಕು’ ಎಂಬಡೈಲಾಗ್‌ಗೆ ತನಿಷಾ ಜೊತೆಗೆ ನೀಡಿದ ಆಕ್ಟ್ ಕೂಡ ಸಖತ್ ವೈರಲ್ ಆಗಿತ್ತು. ವಾರಾಂತ್ಯದಲ್ಲಿ ಕಿಚ್ಚ ಕೂಡ ಅದನ್ನು ವರ್ತೂರು ಮತ್ತು ತನಿಷಾ ಕೈಲಿ ಮಾಡಿಸಿ ನೋಡಿದ್ದರು.
ಕ್ಯಾಪ್ಟನ್ ಎಂಬ ಕನಸು: ಕ್ಯಾಪ್ಟನ್ ಆಗಬೇಕು ಎಂದು ಜಿದ್ದಿಗೆ ಬಿದ್ದವರೇನಲ್ಲ ವರ್ತೂರು. ಆದರೆ ಅವರಿಗೂ ಕ್ಯಾಪ್ಟನ್ ಆಗುವ ಅವಕಾಶ ಬಂದಿತ್ತು. ತಿರುಗುವ ಚಕ್ರದಲ್ಲಿ ಕೂತು ನಿಗದಿತ ಸಮಯವನ್ನು ಊಹಿಸುವ ಟಾಸ್ಕ್‌ನಲ್ಲಿ ಗೆದ್ದು ವರ್ತೂರು ಕ್ಯಾಪ್ಟನ್ ರೂಮು ಪ್ರವೇಶಿಸಿದ್ದರು. ಆದರೆ ಅವರು ಗೆದ್ದಿದ್ದು ವಿನಯ್ ಅವರ ಸಹಾಯದೊಂದಿಗೆ ಎಂಬುದು ವಾರಾಂತ್ಯದಲ್ಲಿ ಕಿಚ್ಚು ಸುದೀಪ್ ಜಾಹೀರುಮಾಡಿದ್ದರು. ಅಷ್ಟೇ ಅಲ್ಲ, ‘ಕ್ಯಾಪ್ಟನ್‌ಗೆ ಗೌರವ ಕೊಡುವ ಅಭ್ಯಾಸ ಇಲ್ಲದ ಈ ಮನೆಗೆ ಕ್ಯಾಪ್ಟನ್ ಅಗತ್ಯ ಇಲ್ಲ’ ಎಂದು ಬಿಗ್‌ಬಾಸ್ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ಕ್ಯಾಪ್ಟನ್ ರೂಮ್ ಲಾಕ್ ಮಾಡಿಸಿಬಿಟ್ಟಿದ್ದರು. ಹಾಗಾಗಿ ಕ್ಯಾಪ್ಟನ್ ರೂಮಿಗೆ ಕೀಲಿ ಹಾಕಿಸಿದ ದಾಖಲೆಯೂ ವರ್ತೂರು ಅವರ ಹೆಸರಿನಲ್ಲಿಯೇ ಇದೆ.
ಟಿಕೆಟ್ ಟು ಫಿನಾಲೆ: ಟಿಕೆಟ್ ಟು ಫಿನಾಲೆ’ಯಲ್ಲಿ ವರ್ತೂರು ಸಂತೋಷ್ ತೋರಿದ ಗೇಮ್ ಫರ್ಪಾರ್ಮೆನ್ಸ್ ನೋಡಿ ಮನೆಯ ಜನರೆಲ್ಲ ಬೆರಗಾಗಿದ್ದರು. ಹಲವು ಆಟಗಳಲ್ಲಿ ಭಾಗವಹಿಸಿ ಕೆಲವನ್ನು ಗೆದ್ದು ಎಲ್ಲರಿಗಿಂತ ಮೊದಲು 200 ಪಾಯಿಂಟ್ಸ್ ಪಡೆದುಕೊಂಡಿದ್ದರು. ಇದರಿಂದಾಗಿ ಒಂದು ಹಂತಕ್ಕೆ ವರ್ತೂರು ಅವರೇ ಎಲ್ಲರಿಗಿಂತ ಮೊದಲು ಫಿನಾಲೆ ಪ್ರವೇಶಿಸುತ್ತಾರೇನೋ ಎಂಬ ಊಹೆಯೂ ಹುಟ್ಟಿತ್ತು. ಆದರೆ ನಂತರ ಪ್ರತಾಪ್, ಸಂಗೀತಾ ಮತ್ತು ನಮೃತಾ ವರ್ತೂರು ಅವರನ್ನ ಹಿಂದಿಕ್ಕಿದರು. ಆದರೆ ಈ ವಾರದಲ್ಲಿ ತುಕಾಲಿ ಸಂತೋಷ್ ಜೊತೆಗೂಡಿ ವರ್ತೂರು ಸಂತೋಷ್ ಮಾಡಿದ ತಂತ್ರಗಾರಿಕೆಯೂ ಅವರ ವ್ಯಕ್ತಿತ್ವದ ಮತ್ತೊಂದು ಆಯಾಮವನ್ನು ತೆರೆದಿಟ್ಟಿತ್ತು.
BBK10: ಜೋರಾಗಿ ಮಾತಾಡಿದ ತಕ್ಷಣ ಏನೂ ಕಿತ್ಕೊಳಕ್ಕಾಗಲ್ಲ ಇಲ್ಲಿ: ವಿನಯ್ ಅವಾಜ್, ತುಕಾಲಿ ಜವಾಬ್!
ಎಲಿಮಿನೇಷನ್ ಬೆಂಕಿ: ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ವಾರಾಂತ್ಯದ ಎಲಿಮಿನೇಷನ್‌ನಲ್ಲಿ ಕೊನೆಯ ಒಬ್ಬರಾಗಿ ವರ್ತೂರು ಸಂತೋಷ್ ಮತ್ತು ತುಕಾಲಿ ಸಂತೋಷ್ ಇಬ್ಬರೂ ಕೂತಿದ್ದರು. ಆ ಸಮಯದಲ್ಲಿ ಸುದೀಪ್, ಇವರಿಬ್ಬರ ಸ್ನೇಹದ ಬಗ್ಗೆ ಮೆಚ್ಚುಗೆಯ ಮಾತಾಡಿದ್ದರು. ಪರಸ್ಪರ ಇಬ್ಬರೂಶುಭ ಹಾರೈಸಿಕೊಂಡಿದ್ದೂ ಮನಕರಗಿಸುವಂತಿತ್ತು. ಆದರೆ ಆ ವಾರ ಎಲಿಮಿನೇಷನ್ ಹೋಲ್ಡ್‌ನಲ್ಲಿ ಇಟ್ಟು ಇಬ್ಬರನ್ನೂ ಉಳಿಸಿದ್ದರು. ಮುಂದಿನ ವಾರದ ಮಿಡ್‌ವೀಕ್ ಎಲಿಮಿನೇಷನ್‌ನಲ್ಲಿ ತನಿಷಾ ಕುಪ್ಪಂಡ ಹೊರಗೆಹೋಗಿದ್ದರು.‘ಜಗಳವಾಡುವುದಕ್ಕಾಗಿ ಇಲ್ಲಿಗೆ ಬಂದಿಲ್ಲ’ ಎಂದು ಪದೇ ಪದೇ ಹೇಳುತ್ತಿದ್ದ ವರ್ತೂರು ಹಲವು ಬಾರಿ ತಾಳ್ಮೆ ಕಳೆದುಕೊಂಡು ಮಾತಾಡಿದ್ದಿದೆ. ಆದರೆ ಯಾರ ವಿರುದ್ಧವೂ ಹದತಪ್ಪಿ ಮಾತಾಡಿಲ್ಲ. ಅವಹೇಳನ ಮಾಡಿಲ್ಲ. ತಮ್ಮ ಮುಗ್ಧತೆಯಿಂದಲೇ ಮನೆಯ ಸದಸ್ಯರ ಮೆಚ್ಚುಗೆಯನ್ನು ಪಡೆದುಕೊಂಡಿರುವ ಅವರು ಮನೆಯ ಹೊರಗೂ ಇದೇ ಕಾರಣಕ್ಕೆ ಜನರಿಂದ ಪ್ರೀತಿಯನ್ನು ಗಳಿಸಿಕೊಂಡಿದ್ದರು. ಮುಗ್ಧತೆ, ಬದ್ಧತೆ ಎರಡನ್ನೂ ಸೇರಿಸಿ ಎರಕ ಹೊಯ್ದಂತಿರುವ ವರ್ತೂರು ಸಂತೋಷ್ ಅವರು ನಾಲ್ಕನೇ ರನ್ನರ್ ಅಪ್ ಆಗಿ ಬಿಗ್‌ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ. ಸಾಕಷ್ಟು ನೆನಪುಗಳನ್ನು ಬಿಗ್‌ಬಾಸ್ ಮನೆಯೊಳಗಿಂದ ಹೊತ್ತು ಬಂದಿದ್ದಾರೆ. ಜಿಯೊಸಿನಿಮಾದಲ್ಲಿ ವರ್ತೂರು ಅವರ ಸಖತ್ ತಿರುವುಗಳುಳ್ಳ ಜರ್ನಿಯನ್ನು ಉಚಿತವಾಗಿ ವೀಕ್ಷಿಸಬಹುದು.