Asianet Suvarna News Asianet Suvarna News

ಬಿಗ್‌ಬಾಸ್ ಮನೆಯಿಂದ ಹೊರಬಿದ್ದ ತುಕಾಲಿ ಸಂತೋಷ್‌: ಚಾಣಾಕ್ಷ ತಂತ್ರ ಮನರಂಜನೆಯ ಮಂತ್ರ ತುಕಾಲಿ ಬಗ್ಗೆ ನಿಮಗೆಷ್ಟು ಗೊತ್ತು?

‘ತುಕಾಲಿ ಸಂತೋಷ್’ ಈ ಹೆಸರು ಕೇಳಿದರೆ ಸಾಕು ಒಮ್ಮೆ ಹುಬ್ಬು ಮೇಲೇರುತ್ತದೆ. ಮರುಗಳಿಗೆ ತುಟಿಗಳಲ್ಲಿ ನಗು ಮೂಡುತ್ತದೆ. ಹುಬ್ಬೇರಿಸುವ ಅಚ್ಚರಿ, ನಗುಮೂಡಿಸುವ ವೈಖರಿ ಇದು ತುಕಾಲಿ ಸಂತೋಷ್‌ ಬಿಗ್‌ಬಾಸ್‌ ಸೀಸನ್‌ 10ನಲ್ಲಿ ಮೂಡಿಸಿರುವ ಹೆಜ್ಜೆಗುರುತಿಗೆ ಪುರಾವೆ.
 

BBK10 Tukali Santhosh has been evicted from the Bigg Boss Kannada Season 10 gvd
Author
First Published Jan 27, 2024, 11:47 PM IST

‘ತುಕಾಲಿ ಸಂತೋಷ್’ ಈ ಹೆಸರು ಕೇಳಿದರೆ ಸಾಕು ಒಮ್ಮೆ ಹುಬ್ಬು ಮೇಲೇರುತ್ತದೆ. ಮರುಗಳಿಗೆ ತುಟಿಗಳಲ್ಲಿ ನಗು ಮೂಡುತ್ತದೆ. ಹುಬ್ಬೇರಿಸುವ ಅಚ್ಚರಿ, ನಗುಮೂಡಿಸುವ ವೈಖರಿ ಇದು ತುಕಾಲಿ ಸಂತೋಷ್‌ ಬಿಗ್‌ಬಾಸ್‌ ಸೀಸನ್‌ 10ನಲ್ಲಿ ಮೂಡಿಸಿರುವ ಹೆಜ್ಜೆಗುರುತಿಗೆ ಪುರಾವೆ. ಅಂತಿಮ ಹಂತಕ್ಕೆ ಇನ್ನೊಂದೇ ಹೆಜ್ಜೆ ಬಾಕಿ ಇರುವಾಗ ತುಕಾಲಿ ಸಂತೋಷ್‌ ಅವರು ಮನೆಯಿಂದ ಹೊರಗೆ ಬಂದಿದ್ದಾರೆ. ಮನೆಯಲ್ಲಿ ಇದ್ದಷ್ಟೂ ದಿನ ಎಲ್ಲರನ್ನೂ ನಗಿಸುತ್ತಲೇ ಇದ್ದ ತುಕಾಲಿ, ನಗುನಗುತ್ತಲೇ ಹೊರಗೆ ಬಂದಿದ್ದಾರೆ. ತಮ್ಮ ಸಹಸ್ಪರ್ಧಿಗಳಿಗೆ ಶುಭಾಶಯ ಕೋರಿದ್ದಾರೆ. 

ಶನಿವಾರದ ಸಂಚಿಕೆಯಲ್ಲಿ ಮನೆಯಿಂದ ಹೊರಗೆ ಬಂದ ತುಕಾಲಿ ಸಂತೋಷ್ ಅವರ ಜರ್ನಿಯೂ ಅಷ್ಟೇ ಮನರಂಜನಾತ್ಮಕವಾಗಿತ್ತು. ಅದನ್ನು ಕಟ್ಟಿಕೊಡುವ ಪ್ರಯತ್ನವನ್ನು ಜಿಯೊಸಿನಿಮಾ ಮಾಡುತ್ತಿದೆ. ‘ಈ ಸಲ ಎಂಟರ್‍‌ಟೈನ್ಮೆಂಟ್ ಕಡಿಮೆ ಇದೆ’ ಎಂಬ ಕೆಲವರ ಗೊಣಗಾಟಕ್ಕೆ ಉತ್ತರವಾಗಿ ತುಕಾಲಿ ಸಂತೋಷ್ ಮನೆಯೊಳಗಿದ್ದರು. ಅಗ್ರೆಶನ್‌ನಲ್ಲಿ ಆಡಲಾಗದ, ಸ್ಪೋರ್ಟ್ಸ್‌ ಹಿನ್ನೆಲೆ ಇಲ್ಲದ ಅವರು ಮನೆಯೊಳಗೆ ವಾರದಿಂದ ವಾರಕ್ಕೆ ತಮ್ಮ ಜಾಗವನ್ನು ವಿಸ್ತರಿಸುತ್ತ ಬಂದಿದ್ದೊಂದು ಕುತೂಹಲಕಾರಿ ವಿದ್ಯಮಾನ. ಅದೂ ಮನೆಯೊಳಗೆ ಜನರು ಕಡಿಮೆಯಾಗುತ್ತ ಬಂದಷ್ಟೂ ತುಕಾಲಿ ಸಂತೋಷ್‌ ಪ್ರಭಾವ ಹೆಚ್ಚುತ್ತಲೇ ಹೋಗಿದ್ದು ಇನ್ನೊಂದು ಕುತೂಹಲಕಾರಿ ಬೆಳವಣಿಗೆ. ಎಲ್ಲರೊಳಗೆ ಒಂದಾಗುತ್ತ, ಎಲ್ಲರಿಗೂ ಪಿನ್ನು ಚುಚ್ಚುತ್ತ ತಮ್ಮ ಪಯಣವನ್ನು ಮುಂದುವರಿಸಿಕೊಂಡು ಬಂದಿರುವ ತುಕಾಲಿ ಅವರ ಜರ್ನಿಯ ಕೆಲವು ಮುಖ್ಯಘಟ್ಟಗಳ ನೆನಪು ಇಲ್ಲಿವೆ. 

ಜೋರಾಗಿ ಮಾತಾಡಿದ ತಕ್ಷಣ ಏನೂ ಕಿತ್ಕೊಳಕ್ಕಾಗಲ್ಲ ಇಲ್ಲಿ: ವಿನಯ್ ಅವಾಜ್, ತುಕಾಲಿ ಜವಾಬ್!

ಮಾತಿನಲ್ಲೇ ಮನೆಯ ಕಟ್ಟುವ ಮಲ್ಲ!: ತುಕಾಲಿ ಸಂತೋಷ್ ಅವರು ಮೈಕಟ್ಟಿನಲ್ಲಂತೂ ‘ಮಲ್ಲ’ನಲ್ಲ. ಆದರೆ ಮಾತಿಗೆ ನಿಂತರೆ ಮಲ್ಲರ ಮಲ್ಲ. ನೋಡನೋಡುತ್ತಿದ್ದ ಹಾಗೆಯೇ ಮಾತಲ್ಲೇ ಮಹಡಿಮೇಲೆ ಮಹಡಿ ಕಟ್ಟಿ ಅದರ ಮೇಲಿಂದ ಕಾಗೆ ಹಾರಿಸುವ ಅವರ ಪ್ರತಿಭೆ ಆರಂಭದ ಕೆಲವು ದಿನಗಳಲ್ಲಿಯೇ ಮನೆಮಂದಿಗೆಲ್ಲ ಪರಿಚಯವಾಗಿತ್ತು. ‘ನನ್ನ ತಾಯಿ ಗರ್ಭಿಣಿಯಾಗಿದ್ದಾಗ, ನಿನ್ನ ಹೊಟ್ಟೆಯಲ್ಲಿ ಮಹಾತ್ಮ ಹುಟ್ತಾನೆ ಅಂತ ಹೇಳಿದ್ರಂತೆ ದೊಡ್ಡವರೊಬ್ಬರು. ನಾನು ಹುಟ್ಟುವಾಗ ಗುಡುಗು ಸಿಡಿಲು ಎಲ್ಲ ಇತ್ತು. ಮಳೆ ಬರ್ತಿತ್ತು. ಆಗ ನಾನು ಹುಟ್ಟಿದೆ…’ ಎಂದು ತಮ್ಮ ಜನ್ಮವೃತ್ತಾಂತವನ್ನು ಅರುಹುತ್ತ ಹೋದ ಹಾಗೆ ಮನೆಯವರೆಲ್ಲರೂ ಬೆಕ್ಕಸ ಬೆರಗಾಗಿ ನೋಡುತ್ತಿದ್ದರು. ಅವರು ಕಾಗೆ ಹಾರಿಸುತ್ತಿದ್ದಾರೆ ಎಂದು ಗೊತ್ತಿದ್ದೂ ಅವರ ಮಾತುಗಳನ್ನು ಕೇಳಿಸಿಕೊಳ್ಳಲು ಬಿಗ್‌ಬಾಸ್ ಮನೆಯ ಸದಸ್ಯರು ಕಾದು ಕೂತಿರುತ್ತಿದ್ದದ್ದು ಸುಳ್ಳಲ್ಲ. 

ಆದರೆ ಆರಂಭಿಕ ಹಂತದಲ್ಲಿ ತುಕಾಲಿ ಅವರು ಮನೆಯ ಸದಸ್ಯರನ್ನು ನಗಿಸಲು ಅನುಸರಿದ ದಾರಿ ಟೀಕೆಗೂ ಒಳಗಾಗಿತ್ತು. ಅವರು ಪ್ರತಾಪ್ ಬಗ್ಗೆ ಆಡಿದ ಮಾತುಗಳು, ಮನೆಯ ಉಳಿದ ಸದಸ್ಯರ ಬಗ್ಗೆ ಆಡಿದ ಮಾತುಗಳ ಬಗ್ಗೆ ಕಿಚ್ಚ ಸುದೀಪ್ ವಾರಾಂತ್ಯದ ಎಪಿಸೋಡ್‌ನಲ್ಲಿ ತರಾಟೆಗೆ ತೆಗೆದುಕೊಂಡಿದ್ದರು. ಭಾಗ್ಯಶ್ರೀ ಮತ್ತು ಸಿರಿ ಅವರನ್ನು ಮಿಮಿಕ್ ಮಾಡಿದ್ದಕ್ಕಾಗಿ ಸುದೀಪ್ ವಾರವಿಡೀ ತುಕಾಲಿ ಅವರ ಸೊಂಟಕ್ಕೆ ಹಗ್ಗ ಕಟ್ಟಿ ಅದರ ಎರಡುಬದಿಗಳಲ್ಲಿ ಸಿರಿ ಮತ್ತು ಭಾಗ್ಯಶ್ರೀ ಇರುವ ಶಿಕ್ಷೆ ಕೊಟ್ಟಿದ್ದರು. ಇಂಥ ಶಿಕ್ಷೆಯನ್ನು ತುಕಾಲಿ ಕಾಮಿಡಿ ಸೃಷ್ಟಿಗೇ ಬಳಸಿಕೊಂಡರು ಅನ್ನುವುದು ಬೇರೆ ಮಾತು. ‘ಅನ್ಯರನ್ನು ನೋಯಿಸಿ ಮತ್ಯಾರನ್ನೋ ನಗಿಸುವುದು ಹಾಸ್ಯನಟನ ಘನತೆಗೆ ತಕ್ಕುದಲ್ಲ’ ಎಂಬ ಕಿಚ್ಚನ ಮಾತುಗಳನ್ನು ತುಕಾಲಿ ಗಂಭೀರವಾಗಿಯೇ ತೆಗೆದುಕೊಂಡರು. ಆದರೆ ಮನೆಯ ಸದಸ್ಯರು ಮಾತ್ರ ‘ಅವರು ಉಳಿದವರನ್ನು ನೋಯಿಸಿ ಹಾಸ್ಯ ಮಾಡುತ್ತಾರೆ’ ಎಂದು ಆರೋಪಿಸುವುದನ್ನು ನಿಲ್ಲಿಸಲಿಲ್ಲ. ಇದರಿಂದ ತುಕಾಲಿ ಅವರು ಕೆಲಕಾಲ ಕುಗ್ಗಿದ್ದು, ಮಾತಾಡಲೇ ಹಿಂಜರಿಯುವಂತಾಗಿದ್ದು ಸುಳ್ಳಲ್ಲ.

ಕ್ಯಾಪ್ಟನ್ ಆಗುವ ಕನಸು: ಮನೆಯ ಕ್ಯಾಪ್ಟನ್ ಆಗಬೇಕು ಎಂಬುದು ಈ ಸೀಸನ್‌ ಉದ್ದಕ್ಕೂ ತುಕಾಲಿ ಸಂತೋಷ್ ಕಂಡಂತ ಕನಸು. ಆ ಕನಸು ಮೊಳೆತಿದ್ದು ಮೊದಲ ವಾರದಲ್ಲಿಯೇ. ಮೊದಲ ವಾರ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಸ್ನೇಹಿತ್ ಮತ್ತು ನಮ್ರತಾ ಅವರ ಜೊತೆಯಲ್ಲಿ ತುಕಾಲಿ ಕೂಡ ರೇಸ್‌ನಲ್ಲಿ ಇದ್ದರು. ತಿರುಗುವ ಚಕ್ರದ ಮೇಲೆ ಅತಿಹೆಚ್ಚು ಕಾಲ ನಿಲ್ಲುವ ಟಾಸ್ಕ್‌ನಲ್ಲಿ ಬರಿಗಾಲಿನಲ್ಲಿ ನಿಂತಿದ್ದ ತುಕಾಲಿ ಎಲ್ಲರಿಗಿಂತ ಮೊದಲೇ ಕೆಳಗಿಳಿದರು. ಮೊದಲ ವಾರದ ಸೋಲು ಕೊನೆಯ ಹಂತದವರೆಗೂ ಬೆನ್ನುಬಿಟ್ಟಿಲ್ಲ. ಹಲವು ಸಲ ಅವರು ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಭಾಗವಹಿಸಿ ಚೆನ್ನಾಗಿ ಆಡಿ ಗೆಲುವಿನ ಹೊಸ್ತಿಲವರೆಗೂ ಹೋಗಿ ಬಂದಿದ್ದಾರೆ. ಆದರೆ ಗೆದ್ದು ಕ್ಯಾಪ್ಟನ್ ಆಗುವ ಕನಸು ಮಾತ್ರ ನನಸಾಗಿಲ್ಲ. ನಾಲ್ಕನೇ ವಾರದಲ್ಲಿ ಹಳ್ಳಿ ಮನೆ ಟಾಸ್ಕ್‌ನಲ್ಲಿ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಅಂತಿಮ ಹಂತದವರೆಗೂ ತುಕಾಲಿ ಬಂದಿದ್ದರು. ಆಗ ಅವರು ಸಿರಿ ಮತ್ತು ವಿನಯ್ ಇಬ್ಬರಲ್ಲಿ ಒಬ್ಬರನ್ನು ಆರಿಸಿಕೊಳ್ಳಬೇಕಾಗಿತ್ತು. ಆಗ ಅವರು ಸಿರಿ ಅವರನ್ನು ಹೊರಗಿಟ್ಟು ವಿನಯ್ ಅವರನ್ನು ಆಯ್ದುಕೊಂಡರು. ವಿನಯ್ ವಿರುದ್ಧ ಸೋತರು. ಕೊನೆಗೂ ತುಕಾಲಿ ಸಂತೋಷ್ ಕ್ಯಾಪ್ಟನ್ ಆಗಲೇ ಇಲ್ಲ. ಆದರೆ ಅವರು ತಮ್ಮ ಆಸೆ ಈಡೇರಿಸಿಕೊಳ್ಳದೇ ಬಿಡಲೂ ಇಲ್ಲ. ಕಳೆದ ವಾರ ನಡುರಾತ್ರಿ ಬಿಗ್‌ಬಾಸ್‌ ಮನೆಯ ಕ್ಯಾಪ್ಟನ್ ರೂಮ್ ಹೊಕ್ಕು ಬೆಡ್ ಮೇಲೆ ಎರಡು ನಿಮಿಷ ಮಲಗಿ ಖುಷಿಪಟ್ಟರು.

ನಗುವಿನ ಜೊತೆಯಲಿ ಆಕ್ರೋಶವೂ ಇದೆ: ತುಕಾಲಿ ಸಂತೋಷ್ ಅವರ ಬಿಗ್‌ಬಾಸ್‌ ಜರ್ನಿಯಲ್ಲಿ ನಗುವಿನ ಸಿಕ್ವೇಲ್‌ಗಳು ಸಾಕಷ್ಟಿವೆ. ತಾನು ಸದಾ ಎಲ್ಲರನ್ನೂ ನಗಿಸುತ್ತ ಇರುತ್ತೇನೆ ಎಂದು ಹೇಳುವ ತುಕಾಲಿ ಕೆಲವು ಸಲ ತಾಳ್ಮೆಗೆಟ್ಟಿದ್ದೂ ಇದೆ. ಆರಂಭಿಕ ವಾರದಲ್ಲಿ ತಮ್ಮ ನೆಚ್ಚಿನ ಸ್ಪರ್ಧಿಯನ್ನು ನಾಮಿನೇಷನ್‌ನಿಂದ ಕಾಪಾಡುವ ಟಾಸ್ಕ್‌ನಲ್ಲಿ ಇಶಾನಿ ಜೊತೆಗೆ ಮಾತಿಗೆ ಮಾತು ಬೆಳೆದು ಅದು ದೊಡ್ಡ ಜಗಳವಾಗಿಬಿಟ್ಟಿತ್ತು. ಹಾಗೆಯೇ ಸಂಗೀತಾ ಜೊತೆಗೂ ಅವರಿಗೆ ಹಲವು ಬಾರಿ ಮಾತಿನ ಚಕಮಕಿ ನಡೆದಿದೆ. ಕಳೆದ ವಾರವಷ್ಟೇ ಟಾಸ್ಕ್‌ ವೋಟಿಂಗ್ ಸಂದರ್ಭದಲ್ಲಿ ವಿನಯ್ ಜೊತೆಗೆ ಜೋರಾಗಿಯೇ ಮಾತಿನ ಚಕಮಕಿ ನಡೆದಿದೆ. ಆದರೆ ಈ ಜಗಳದ ಕಿಡಿ ನಂದಿದ ನಂತರ ಅವರು ಮತ್ತೆ ಆ ಸ್ಪರ್ಧಿಯ ಜೊತೆಗೆ ಕೈ ಜೊಡಿಸುತ್ತಾರೆ. ಅದು ಅವರ ಸ್ವಭಾವ. 
 
ಸಂತು- ಪಂತು ಫವರ್‍‌ಫುಲ್‌ ಫ್ರೆಂಡ್‌ಷಿಪ್: ‘ಮತ್ಯಾರಲ್ಲೂ ನೋಡದ, ನಿಷ್ಕಳಂಕವಾದ ಸ್ನೇಹವನ್ನು ನಿಮ್ಮಿಬ್ಬರಲ್ಲಿ ನೋಡಿದ್ದೀನಿ’ ಕಿಚ್ಚ ಸುದೀಪ್‌ ವಾರಾಂತ್ಯದ ಎಪಿಸೋಡ್‌ನಲ್ಲಿ ಹೀಗೆ ಹೇಳಿದ್ದು ವರ್ತೂರು ಸಂತೋಷ್ ಮತ್ತು ತುಕಾಲಿ ಸಂತೋಷ್ ಸ್ನೇಹದ ಬಗ್ಗೆ. ಎಲಿಮಿನೇಷನ್‌ ಸಂದರ್ಭದಲ್ಲಿ ಇಬ್ಬರಲ್ಲಿ ಒಬ್ಬರು ಹೊರಗೆ ಹೋಗುತ್ತಾರೆ ಎಂಬ ಹಂತದಲ್ಲಿ ಕೂತಿದ್ದಾಗಲೂ ಅವರಿಬ್ಬರೂ ಒಬ್ಬರಿಗೊಬ್ಬರು ಬೆಂಬಲವಾಗಿಯೇ ಮಾತಾಡಿದ್ದರು. ಸಂತು – ಪಂತು ಜೋಡಿಯಾದ ಇಬ್ಬರೂ ಆಡಿದ ಮಾತುಗಳಿಗೆ, ಆಡಿದ ಆಟಗಳಿಗೆ ಲೆಕ್ಕವೇ ಇಲ್ಲ. ಎಷ್ಟೇ ಮಾತುಗಳು ಕೇಳಿಬಂದರೂ ಅವರ ಸ್ನೇಹದಲ್ಲಿ ಬಿರುಕು ಬರಲೇ ಇಲ್ಲ. ಹಾಗೆಂದು ಭಿನ್ನಾಭಿಪ್ರಾಯಗಳಿಲ್ಲ ಎಂದಲ್ಲ. ಒಬ್ಬರಿಗೊಬ್ಬರು ಮಾತುಗಳಲ್ಲಿ ತಿವಿದುಕೊಂಡಿದ್ದು ಇದೆ, ಮುನಿಸಿಕೊಂಡಿದ್ದು ಇದೆ. ಆದರೆ ಮರುಕ್ಷಣದಲ್ಲಿಯೇ ಅದು ಸರಿಹೋಗಿ ಬಿಗ್‌ಬ್ಯಾಗ್‌ ಮೇಲೆ ಕೂತು ಹರಟಿದ್ದಾರೆ. ಈ ಬಿನ್‌ಬ್ಯಾಗ್‌ ಸ್ಟೋರಿ ಮನೆಯೊಳಗೂ ಹೊರಗೂ ಸಾಕಷ್ಟು ಸದ್ದು ಮಾಡಿತು. ತುಕಾಲಿ ಅವರ ತಂತ್ರಗಾರಿಕೆ ರೂಪುಗೊಳ್ಳುತ್ತಿದ್ದದ್ದೇ ಈ ಬಿನ್‌ಬ್ಯಾಗ್‌ ಮೇಲೆ.

ಸ್ಕೂಲ್‌ ಟಾಸ್ಕ್‌ನಲ್ಲಿ ಮಾಡಿದ ಮೋಡಿ: ತುಕಾಲಿ ಸಂತೋಷ್ ಅವರ ರಂಜನೀಯ ಪ್ರತಿಭೆ ಹೊರಗೆ ಬಂದಿದ್ದು ಸ್ಕೂಲ್‌ ಟಾಸ್ಕ್‌ನಲ್ಲಿ. ಉಳಿದವರು ತಮ್ಮ ಎದುರಾಳಿಗಳನ್ನು ತಿವಿಯಲು, ದೂರಲುಈ ಅವಕಾಶವನ್ನು ಬಳಸಿಕೊಂಡರೆ, ತುಕಾಲಿ ಸಂತೋಷ್ ಮಾತ್ರ ಬಾಲ್ಯದೊಳಗೆ ಹೋಗಿ  ಬಂದಂತಿದ್ದರು. ‘ಹೊಡಿತೀನಿ’ ಎಂದು ಅವರು ಆಡುತ್ತಿದ್ದ ರೀತಿ ಹಲವು ವಾರಗಳ ಕಾಲ ಆಗಾಗ ಮನೆಯೊಳಗೆ ಪ್ರತಿಧ್ವನಿಸುತ್ತಲೇ ಇತ್ತು. ಅಲ್ಲದೇ ಬೃಂದಾವನ ಧಾರಾವಾಹಿ ತಂಡ ಮನೆಯೊಳಗೆ ಬಂದಾಗ ತುಕಾಲಿ ಸಂತೋಷ್‌, ವರ್ತೂರು ಸಂತೋಷ್, ಭಾಗ್ಯ, ತನಿಷಾ ಸೇರಿಕೊಂಡು ಮಾಡಿದ್ದ ಕಾಮಿಡಿಸ್ಕಿಟ್ ಕೂಡ ಎಲ್ಲರನ್ನೂ ನಕ್ಕುನಲಿಸಿತ್ತು. ಇದೇ ವಾರ ಅವರು ತೆಗೆದುಕೊಂಡ ಇಂಗ್ಲಿಷ್‌ ಕ್ಲಾಸ್‌ ಅಂತೂ ಮನೆಯ ಉಳಿದ ಸದಸ್ಯರಿಗೆ ಇಂಗ್ಲಿಷ್ ಕಲಿಸುವ ಬದಲು ಬರುವ ಇಂಗ್ಲಿಷ್ ಅನ್ನೂ ಮರೆಸುವಂತೆ ಮಾಡಿತ್ತು. ವಾರಾಂತ್ಯದಲ್ಲಿಯೂ ಕಿಚ್ಚ ಸುದೀಪ್ ಅವರು ತುಕಾಲಿ ಬಾಯಲ್ಲಿ ಇಂಗ್ಲಿಷ್ ಕೇಳಲು ಇಷ್ಟಪಡುತ್ತಿದ್ದರು.

ತಂತ್ರದಲ್ಲಿ ಚಾಣಕ್ಯ!: ಬರೀ ನಗಿಸುವುದನ್ನೇ ನೆಚ್ಚಿಕೊಂಡಿದ್ದರೆ ತುಕಾಲಿ ಸಂತೋಷ್ ಇಷ್ಟು ದಿನಗಳ ಕಾಲ ಮನೆಯೊಳಗೆ ಇರಲು ಸಾಧ್ಯವೇ ಇರಲಿಲ್ಲವೇನೋ. ಆದರೆ ತುಕಾಲಿ ವ್ಯಕ್ತಿತ್ವ ಅಷ್ಟಕ್ಕೇ ಸೀಮಿತವಾಗಿರಲಿಲ್ಲ. ಅವರೊಳಗೊಬ್ಬ ತಂತ್ರಗಾರನೂ ಇದ್ದ. ಗಾಸಿಪ್ ಮಾಡುತ್ತೇನೆ ಎಂದು ಹೇಳಿಕೊಂಡೇ ಅವರು ಆಡಿದ ಗಾಳಿಸುದ್ದಿಗಳು ಮನೆಯೊಳಗೆ ಬೆಂಕಿ ಹಚ್ಚಿದ್ದೂ ಇದೆ. ಅದರಲ್ಲಿಯೂ ಕಳೆದ ಕೆಲವು ವಾರಗಳಿಂದ ಅವರು ವರ್ತೂರು ಸಂತೋಷ್ ಅವರೊಂದಿಗೆ ಸೇರಿ ಮಾಡಿದ ತಂತ್ರಗಾರಿಕೆಗೆ ಉಳಿದ ಸದಸ್ಯರೆಲ್ಲ ಬೆಕ್ಕಸ ಬೆರಗಾಗಿದ್ದಂತೂ ಹೌದು. ಇತ್ತೀಚೆಗೆ ಕೂಡ, ಫಿನಾಲೆಯಲ್ಲಿ ನಿಮ್ಮ ಜೊತೆ ಇರಬೇಕಾದ ಇನ್ನೊಂದು ಕೈ ಯಾರದು ಎಂಬಪ್ರಶ್ನೆಗೆ ತುಕಾಲಿ ಅವರು, ‘ಸಂಗೀತಾ’ ಎಂದಿದ್ದರು. ಆದರೆ ಮುಂದಿನ ವಾರವೇ ಅವರು ಸಂಗೀತಾ ವಿರುದ್ಧ ಕಾರ್ತಿಕ್ ಅವರಿಗೆ ಸಪೋರ್ಟ್‌ ಮಾಡಿ ಮುಂದೆ ಬಿಟ್ಟರು. ಹೀಗೆ ಕಾಲಕ್ಕೆ ತಕ್ಕ ಹಾಗೆ ತಮ್ಮ ತಂತ್ರಗಾರಿಕೆ ಬದಲಿಸುತ್ತ, ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ವಾತಾವರಣ ರೂಪಿಸಿಕೊಳ್ಳುವ ಚಾಣಕ್ಯ ಜಾಣತನವೇ ಅವರನ್ನು ಇಲ್ಲಿಯವರೆಗೆ ತಂದಿದೆ. 

ಸವಾಲಿಗೆ ಸವಾಲ್‌: ಆರಂಭಿಕ ದಿನಗಳಲ್ಲಿ ವಿನಯ್ ಅವರ ಗುಂಪಿನಲ್ಲಿ ಗುರ್ತಿಸಿಕೊಂಡಿದ್ದ ತುಕಾಲಿ ಅವರು, ಹಳ್ಳಿ ಟಾಸ್ಕ್‌ನಲ್ಲಿ ಅವರ ತಂಡವನ್ನೇ ಸಪೋರ್ಟ್‌ ಮಾಡಿ ಸಂಗೀತಾ ತಂಡ ಸೋಲುವಂತೆ ಮಾಡಿದ್ದರು. ನಂತರದ ದಿನಗಳಲ್ಲಿ ವಿನಯ್ ತಂಡದಿಂದ ಒಬ್ಬೊಬ್ಬರಾಗಿ ಎಲಿಮಿನೇಟ್ ಆಗಿ ಮನೆಯಿಂದ ಹೊರಬೀಳತೊಡಗಿದರು. ಆಗ ತುಕಾಲಿ ಅವರ ತಂಡದಿಂದ ಹೊರಬಿದ್ದು ಸಂಗೀತಾ ಅವರಿಗೆ ಹತ್ತಿರವಾದರು. ಆದರೆ ಎಂಟನೇ ವಾರದಲ್ಲಿ ಸಂಗೀತಾ, ವಿನಯ್ ತಂಡವನ್ನು ಸೇರಿಕೊಂಡಾಗ ತುಕಾಲಿ ಅವರಿಗೆ ಎದುರಾಳಿಯಾದರು. ‘ನಿಮ್ಮ ತಂಡದಿಂದ ಕಾರ್ತಿಕ್ ಮತ್ತು ತುಕಾಲಿ ತಲೆ ಬೋಳಿಸಿಕೊಳ್ಳಬೇಕು’ ಎಂದು ಸಂಗೀತಾ ಸವಾಲು ಹಾಕಿದಾಗ ಕೊಂಚವೂ ಯೋಚಿಸದೆ ತಲೆಯನ್ನು ಬೋಳಿಸಿಕೊಂಡು ತಮ್ಮ ಬದ್ಧತೆಯನ್ನು ಮೆರೆದರು. 

ನಗುವಿನ ಬುಗ್ಗೆಯ ಹಿಂದೆ ನೋವಿನ ಒರತೆ: ಸದಾ ನಗುತ್ತ ನಗಿಸುತ್ತ ಇರುವ ತುಕಾಲಿ ಸಂತೋಷ್ ಅವರು ಮನೆಮಂದಿಯನ್ನೆಲ್ಲ ಭಾವುಕತೆಯಲ್ಲಿ ಮುಳುಗಿಸಿದ್ದೂ ಇದೆ. ಬಿಗ್‌ಬಾಸ್ ಮನೆಯ ಸದಸ್ಯರ ಕುಟುಂಬದವರು ಮನೆಗೆ ಭೇಟಿ ಕೊಡುವ ವಾರದಲ್ಲಿ ತುಕಾಲಿ ಅವರ ಹೆಂಡತಿ ಕೊಟ್ಟ ಎಂಟ್ರಿ ಮಾತ್ರ ತುಂಬ ವಿಚಿತ್ರವಾಗಿತ್ತು. ಎಲ್ಲರೂ ಕೈಯಲ್ಲಿ ತಿನಿಸಿನ ಡಬ್ಬ ಹಿಡಿದು ಬಂದರೆ ಅವರು ಬೆತ್ತ ಹಿಡಿದು ಬಂದಿದ್ದರು. ಎಲ್ಲ ಮನೆಯವರ ಮಂದಿ ಬರುವಾಗ, ‘ಬಿಗ್‌ಬಾಸ್ ದಯವಿಟ್ಟು ನನ್ ಹೆಂಡ್ತಿನ ಮಾತ್ರ ಇಲ್ಲಿಗೆ ಕರೆಸ್ಬೇಡಿ’ ಎಂದು ಬೇಡಿಕೊಳ್ಳುತ್ತಿದ್ದರು. ಇದನ್ನೇ ಇಟ್ಟುಕೊಂಡು ತುಕಾಲಿ ಹೆಂಡತಿ ಮನೆಯನ್ನೆಲ್ಲ ಅಟ್ಟಾಡಿಸಿಕೊಂಡು ಹೊಡೆದಿದ್ದರು. ಅವರನ್ನು ನೋಡಿ ಮನೆಯ ಸದಸ್ಯರೆಲ್ಲ ನಕ್ಕು ನಕ್ಕು ಸುಸ್ತಾಗಿದ್ದರು. ಆದರೆ ತುಕಾಲಿ ಅವರ ಹೆಂಡತಿ, ತುಕಾಲಿ ಅವರ ಒಳ್ಳೆಯ ಗುಣಗಳ ಬಗ್ಗೆ ಹೇಳುತ್ತ, ತಮ್ಮ ಕುಟುಂಬದ ಕಷ್ಟಕ್ಕೆ ಅವರು ಒದಗಿದ ರೀತಿ, ಕಷ್ಟದ ದಿನಗಳನ್ನು ನೆನಪಿಸಿಕೊಂಡಾಗ ಕ್ಷಣಕಾಲದ ಹಿಂದೆ  ನಕ್ಕವರೇ ಕಣ್ಣಲ್ಲಿ ನೀರು ತುಂಬಿಕೊಂಡಿದ್ದರು. 

ಬಂದೆ ಬಿಡ್ತು ಸಂತು ಪಂತು ದೂರಾಗುವ ದಿನ: ಮನೆಯಿಂದ ಹೊರಗೆ ಹೋಗೋದು ವರ್ತೂರಾ- ತುಕಾಲಿನಾ?

ಬಿಗ್‌ಬಾಸ್‌ ಮನೆಯೊಳಗೆ ಉಳಿದ ಎಲ್ಲ ಸದಸ್ಯರಿಗಿಂತ ಲೂ ತುಂಬ ಭಿನ್ನವಾದ ವ್ಯಕ್ತಿತ್ವ ಹೊಂದಿರುವ ತುಕಾಲಿ ಸಂತೋಷ್, ತಂತ್ರಗಾರಿಕೆ ಮತ್ತು ಮನರಂಜನೆಯ ವಿಶಿಷ್ಟ ಮಿಶ್ರಣ. ಕ್ಯಾಪ್ಟನ್ ಆಗುವ ಕನಸು ನನಸಾಗುವುದಿಲ್ಲ ಎಂಬುದು ಖಚಿತವಾಗುತ್ತಿದ್ದ ಹಾಗೆಯೇ ನಡುರಾತ್ರಿ ಕ್ಯಾಪ್ಟನ್ ಕೋಣೆಯ ಒಳಹೊಕ್ಕು, ಹಾಸಿಗೆಯಲ್ಲಿ ಮಲಗಿ ಹೊರಳಾಡಿ, ಆಮೇಲೆ ಕ್ಷಮೆ ಕೇಳುವ ಮುಗ್ಧ ಕೂಡ ಹೌದು. ನಿಮ್ಮ ಆಸೆ ಏನು ಎಂದು ಕೇಳಿದಾಗ ಹುಂಡೆ ಕೋಳಿ ಊಟ ಮಾಡಬೇಕು ಎನ್ನಬಲ್ಲ ರಸಾಸ್ವಾದಕ. ಹೀಗೆ ಹಲವು ಗುಣಗಳು ಸೇರಿ ರೂಪುಗೊಂಡಿರುವ ತುಕಾಲಿ ಸಂತೋಷ್‌ ಬಿಗ್ ಬಾಸ್‌ ಈ ಸೀಸನ್‌ನ ಯಶಸ್ಸಿಗೆ ಕೊಟ್ಟಿರುವ ಕೊಡುಗೆ ಖಂಡಿತ ಗಮನಾರ್ಹವಾದದ್ದು. ಅವರು ಮಾಡಿದ ಕಾಮಿಡಿಯ ತುಣುಕುಗಳು, ಅವರ ತಂತ್ರಗಾರಿಕೆಯ ಮಿಣುಕುಗಳು, ಬಿನ್‌ಬ್ಯಾಗ್‌ ಕಥನಗಳನ್ನು ಈಗಲೂ ಜಿಯೊಸಿನಿಮಾ ಆಪ್‌ನಲ್ಲಿ ಉಚಿತವಾಗಿ ವೀಕ್ಷಿಸಬಹುದು.

Follow Us:
Download App:
  • android
  • ios