ಡ್ರೋನ್ ಪ್ರತಾಪ್ ಅಮ್ಮನ ಕಣ್ಣೀರು: ಕಾಗೆ ಹಾರಿಸೋದು ಇನ್ನಾದ್ರೂ ಬಿಡಪ್ಪ ಎಂದ ನೆಟ್ಟಿಗರು
ನನ್ನಮ್ಮ ಸೂಪರ್‌ಸ್ಟಾರ್ ವೇದಿಕೆಯಲ್ಲಿ ಅಮ್ಮನಿಗೆ ಕೈತುತ್ತು ತಿನ್ನಿಸಿದ್ದಾರೆ ಡ್ರೋನ್ ಪ್ರತಾಪ್. ಕಣ್ಣೀರಾದ ಅಮ್ಮನ ನೋಡಿ ನೆಟ್ಟಿಗರು ಏನು ಹೇಳಿದ್ರು?
ವಿವಿಧ ಕ್ಷೇತ್ರಗಳ ಗಣ್ಯಾತಿಗಣ್ಯರನ್ನು ಮಾತಿನ ಮೋಡಿಯಲ್ಲಿ ಸಿಲುಕಿಸಿ ಮೋಸ, ವಂಚನೆ ಮಾಡಿರುವ ಗಂಭೀರ ಆರೋಪ ಎದುರಿಸುತ್ತಿದ್ದ ಡ್ರೋನ್ ಪ್ರತಾಪ್ ಇದೀಗ ಬಿಗ್‌ಬಾಸ್‌ನಲ್ಲಿ ರನ್ನರ್ ಅಪ್ ಆಗುವ ಮೂಲಕ ಅಸಂಖ್ಯೆ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಇವರ ಫ್ಯಾನ್ಸ್ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಬಿಗ್‌ಬಾಸ್‌ನಲ್ಲಿ ರನ್ನರ್ ಅಪ್ ಆದ ಬಳಿಕ ಡ್ರೋನ್ ಹೀರೋ ಆಗಿಬಿಟ್ಟಿದ್ದಾರೆ. ಯಾವುದೇ ಸ್ಟಾರ್ ನಟರಿಗೂ ಕಡಿಮೆ ಇಲ್ಲದಂತೆ ಅದ್ಧೂರಿ ಸ್ವಾಗತ ಇವರಿಗೆ ಸಿಗುತ್ತಿದೆ. ಕೊನೆಯವರೆಗೂ ಬಿಗ್‌ಬಾಸ್‌ನಲ್ಲಿ ಇರುತ್ತೇನೆ. ಫಿನಾಲೆಯಲ್ಲಿ ಸುದೀಪ್ ಅವರು ಎತ್ತಲು ಹಿಡಿಯುವ ಕೈಯಲ್ಲಿ ನನ್ನದೂ ಒಂದಾಗಿರುತ್ತದೆ ಎಂದು ಅಂದುಕೊಂಡಿರಲೇ ಇಲ್ಲ. ಮೊದಲ ವಾರದಲ್ಲಿಯೇ ಅಲ್ಲಿ ನಡೆದ ಕೆಲವು ಘಟನೆಗಳನ್ನು ನೋಡಿ ಶೀಘ್ರವೇ ಬಿಗ್‌ಬಾಸ್‌ನಿಂದ ಹೊರಕ್ಕೆ ಹೋಗುತ್ತೇನೆ ಅಂದುಕೊಂಡಿದ್ದೆ. ಆದರೆ ಎಲ್ಲರ ಆಶೀರ್ವಾದದಿಂದ ರನ್ನರ್ ಅಪ್ ಆದೆ ಎಂದು ಹೇಳಿಕೊಂಡಿರುವ ಡ್ರೋನ್ ಪ್ರತಾಪ್ ಅವರಿಗೆ ಬಿಗ್ಬಾಸ್ ಹೊಸದೊಂದೇ ಜೀವನ ಕೊಟ್ಟಿದೆ.
ಅಂದಹಾಗೆ, ಡ್ರೋನ್ ಪ್ರತಾಪ್ ಕೆಲ ವರ್ಷಗಳ ಹಿಂದೆ ತುಂಬಾ ಆರೋಪ, ಟೀಕೆಗಳಿಗೆ ಗುರಿಯಾದವರು. ತಾವೊಬ್ಬ ಯುವ ವಿಜ್ಞಾನಿ ಎಂದು ಹೇಳಿಕೊಂಡು ಹಲವರನ್ನು ಯಾಮಾರಿಸಿರುವ ಗಂಭೀರ ಆರೋಪ ಇವರ ಮೇಲಿದೆ. ಮಾತಿನಲ್ಲಿ ಎಂಥವರನ್ನೂ ಮೋಡಿ ಮಾಡಬಲ್ಲ ಚಾಣಾಕ್ಷತೆ ಇವರಿಗೆ ಇದೆ. ಭಿನ್ನ ಕ್ಷೇತ್ರಗಳ ನುರಿತರು, ಮೇಧಾವಿಗಳು ಎನಿಸಿಕೊಂಡವರೂ ಪ್ರತಾಪ್ ಮಾತಿಗೆ ತಲೆದೂಗಿದರು. ಎಷ್ಟೋ ವೇದಿಕೆಗಳಲ್ಲಿ ಇವರು ಮಾಡುತ್ತಿದ್ದ ಪ್ರೇರಣಾತ್ಮಕ ಭಾಷಣಕ್ಕೆ ತಲೆದೂಗಿದರು. ಕೇಳುವ ಪ್ರಶ್ನೆಗಳಿಗೆ ಅಷ್ಟೇ ಚೆನ್ನಾಗಿ ಉತ್ತರಿಸುವ ಮೇಧಾವಿ ಎನಿಸಿಕೊಂಡವರು ಡ್ರೋಣ್. ಡ್ರೋನ್ ತಯಾರಿಸಲು ತಾನು ಪಟ್ಟಿರುವ ಕಷ್ಟಗಳನ್ನು, ಬೀದಿ ಬದಿಯಲ್ಲಿ ಮಲಗಿ ತುತ್ತು ಅನ್ನಕ್ಕಾಗಿ ಪರದಾಡಿದ ದಿನಗಳನ್ನು ಕಣ್ಣಿಗೆ ಕಟ್ಟುವಂತೆ ಹೇಳುತ್ತಾ ಕೇಳುಗರ ಕಣ್ಣಲ್ಲಿ ನೀರು ತರಿಸಿದ್ದ ಪ್ರತಾಪ್ ನಿಜ ಬಣ್ಣ ಬದಲಾಗಲು ಹಲವಾರು ವರ್ಷಗಳೇ ಬೇಕಾದವು. ಕೊನೆಗೂ ಇಷ್ಟು ವರ್ಷ ಹೇಳಿದ್ದು, ಮಾತನಾಡಿದ್ದು, ತಮ್ಮ ಬಗ್ಗೆ ಹೇಳಿಕೊಂಡಿದ್ದು, ಡ್ರೋನ್ ತಯಾರಿಕೆ ಕುರಿತು ವಿವರಣೆ ನೀಡಿದ್ದು ಎಲ್ಲವೂ ಹಸಿಹಸಿ ಸುಳ್ಳು ಎಂದು ತಿಳಿದು ಹಲವು ಕೇಸ್ಗಳು ದಾಖಲಾದವು. ಸ್ವಲ್ಪ ಸಮಯ ತಲೆ ಮರೆಸಿಕೊಂಡಿದ್ದ ಪ್ರತಾಪ್ ಬಿಗ್‌ಬಾಸ್‌ನಲ್ಲಿ ಪ್ರತ್ಯಕ್ಷ ಆಗಿ ಭಾರಿ ಅಭಿಮಾನಿಗಳನ್ನೂ ಗಳಿಸಿದರು. ಜೊತೆಗೆ ಅಚ್ಚರಿ ಎನ್ನುವಂತೆ ರನ್ನರ್ ಅಪ್ ಕೂಡ ಆದರು.
ಇದೇ ಕಾರಣಕ್ಕೆ ಅಪ್ಪ-ಅಮ್ಮನ ಜೊತೆ ಕೂಡ ಮೂರು ವರ್ಷಗಳಿಂದ ಮಾತನಾಡಿರಲಿಲ್ಲ, ಮನೆಗೆ ಹೋಗಿರಲಿಲ್ಲ. ಆದರೆ ಬಿಗ್‌ಬಾಸ್‌ನಲ್ಲಿ ಖ್ಯಾತಿ ಗಳಿಸಿದ ಬಳಿಕ ಊರಿಗೆ ವಾಪಸಾಗಿ ಅಪ್ಪ-ಅಮ್ಮನ ಕ್ಷಮೆ ಕೋರಿದ್ದಾರೆ ಪ್ರತಾಪ್. ಇದೀಗ ನನ್ನಮ್ಮ ಸೂಪರ್‌ಸ್ಟಾರ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ಬಿಗ್‌ಬಾಸ್‌ನಿಂದ ಮನೆಗೆ ಹೋಗಿ ಅಪ್ಪ-ಅಮ್ಮನಿಗೆ ಮುದ್ದೆ ಮಾಡಿಕೊಟ್ಟು, ಅವರ ಕೈಯಿಂದ ಮುದ್ದೆ ತಿಂದು ಫೇಮಸ್ ಆಗಿದ್ರು ಪ್ರತಾಪ್. ಇದೀಗ ವೇದಿಕೆ ಮೇಲೆಯೇ ಮುದ್ದೆ ಮಾಡಿ ಅಮ್ಮನಿಗೆ ಮುದ್ದೆ ತಿನ್ನಿಸಿದ್ದಾರೆ. ಎಷ್ಟೋ ವಿಚಾರದಲ್ಲಿ ಬೇಜಾರು ಮಾಡಿದ್ದೀನಿ, ಊರೆಲ್ಲಾ ಏನೇನೋ ಮಾತಾಡಿದ್ರೂ ನನ್ನ ಮಗ ಏನು ಅಂತ ನಮಗೆ ಗೊತ್ತು ಅಂತ ಸಾಕಿದ್ದೀರಿ. ಅದಕ್ಕೆ ಧನ್ಯವಾದಗಳು ಎಂದಿದ್ದಾರೆ. ಆಗ ಅಮ್ಮ, ತಾಯಿಯಲ್ವಾ? ನೀನು ಚೆನ್ನಾಗಿದ್ರೆ ಸಾಕು ಎಂದಿದ್ದಾರೆ. ನಂತರ ಕಣ್ಣೀರು ಹಾಕಿದ ಪ್ರತಾಪ್ ಅಮ್ಮ. ಇದರ ಪ್ರೊಮೋ ಬಿಡುಗಡೆಯಾಗಿದೆ.
ಇದನ್ನು ನೋಡಿ ಥಹರೇವಾರಿ ಕಮೆಂಟ್ ಮಾಡಲಾಗಿದೆ. ಈಗಲಾದ್ರೂ ಕಾಗೆ ಹಾರಿಸುವುದನ್ನು ಬಿಟ್ಟು ಅಪ್ಪ-ಅಮ್ಮನನ್ನು ಚೆನ್ನಾಗಿ ನೋಡಿಕೋ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಯುವ ವಿಜ್ಞಾನಿ ಎಂದುಕೊಂಡು ಎಷ್ಟೋ ಮಂದಿಗೆ ಮೋಸ ಮಾಡಿದ್ದೂ ಅಲ್ಲದೇ ಹೆತ್ತ ಅಪ್ಪ-ಅಮ್ಮನನ್ನೇ ದೂರ ಮಾಡಿಕೊಂಡಿದ್ಯಾ. ಈಗ ಅವರ ಜೊತೆ ಇರುವ ಅವಕಾಶ ಬಂದಿದ್ದು, ಇನ್ನಾದರೂ ಚೆನ್ನಾಗಿ ಬಾಳು ಎನ್ನುತ್ತಿದ್ದಾರೆ.
ಹೆಂಡ್ತಿಯನ್ನು ಯಾಕೆ ಅಷ್ಟು ಲವ್ ಮಾಡ್ತೀರಿ ಅಂತ ಯುವತಿ ಕೇಳಿದಾಗ ಹೀಗೆ ಹೇಳೋದಾ ಬಿಗ್ಬಾಸ್ ವಿನಯ್?