ಖಾಸಗಿ ಯೂಟ್ಯೂಬ್ ವಾಹಿನಿಯೊಂದರಲ್ಲಿ ನಟ ಕಿಚ್ಚ ಸುದೀಪ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಆರ್ಯವರ್ಧನ್ ಗುರೂಜಿ, ತೀವ್ರ ವಿವಾದಕ್ಕೆ ಗುರಿಯಾಗಿದ್ದರು. ಸುದೀಪ್ ಅಭಿಮಾನಿಗಳು ಕಚೇರಿಗೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದ ಬೆನ್ನಲ್ಲೇ, ಗುರೂಜಿ ಬೇಷರತ್ ಕ್ಷಮೆ ಕೋರಿ ವಿಡಿಯೋ ಬಿಡುಗಡೆ ಮಾಡಿದ್ದಾರೆ.

ಬೆಂಗಳೂರು (ಜ.03): 'ದರ್ಶನ್ ಹೋದ ಮೇಲೆ ಸುದೀಪ್ ಜಾಸ್ತಿ ನಿಗರಾಡ್ತಾವ್ರೆ..., ಮಾಧ್ಯಮಗಳ ಮುಂದೆ ಜಾಸ್ತಿ ಮಾತಾಡ್ತವ್ರೆ, ಮೊನ್ನೆ ಅದ್ಯಾರೋ ಮುಂದೆ ಪ್ಯಾಂಟ್ ಬಿಚ್ಚಿ ತೋರಿಸ್ಲಾ ಅಂತಿದ್ರು' ಎಂದು ಹೇಳುತ್ತಾ ಆರ್ಯವರ್ಧನ್ ಗುರೂಜಿ ವ್ಯಂಗ್ಯವಾಗಿ ನಕ್ಕಿದ್ದರು. ಇದರ ಬೆನ್ನಲ್ಲಿಯೇ ಸುದೀಪ್ ಅಭಿಮಾನಿಗಳಿಂದ ಭಾರೀ ಆಕ್ರೋಶ ಮತ್ತು ಕಚೇರಿಗೆ ಮುತ್ತಿಗೆ ಹಾಕುವ ಎಚ್ಚರಿಕೆ ರವಾನೆಯಾದ ಬೆನ್ನಲ್ಲಿಯೇ ಬೇಷರತ್ ಕ್ಷಮೆ ಕೋರಿ ವಿಡಿಯೋ ಬಿಡುಗಡೆ ಮಾಡಿದ್ದಾರೆ.

ವಿವಾದದ ಹಿನ್ನೆಲೆ

'ನಂಬರ್ ಅಂದ್ರೆ ನಾನು, ನಾನು ಅಂದ್ರೆ ನಂಬರ್' ಎಂದು ಹೇಳುತ್ತಾ ಸಂಖ್ಯಾಶಾಸ್ತ್ರದ ಮೂಲಕ ಜನಪ್ರಿಯರಾದ ಆರ್ಯವರ್ಧನ ಗುರೂಜಿ ಮಾತನಾಡುವ ಭರಾಟೆಯಲ್ಲಿ ಯಾರಿಗೆ ಮರ್ಯಾದೆ ಕೊಡಬೇಕು ಎನ್ನುವುದನ್ನೇ ಮೈಮರೆತು ಮಾತನಾಡುವ ಮೂಲಕ ವಿವಾದ ಮೈಮೇಲೆ ಎಳೆದುಕೊಳ್ಳುತ್ತಾರೆ. ಇದೀಗ ಖಾಸಗಿ ಯೂಟ್ಯೂಬ್ ವಾಹಿನಿಯೊಂದರಲ್ಲಿ ಸಂಖ್ಯಾಶಾಸ್ತ್ರದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಆರ್ಯವರ್ಧನ್ ಗುರೂಜಿ, 2026ನೇ ಸಾಲಿನ ಭವಿಷ್ಯ ನುಡಿಯುವ ಭರದಲ್ಲಿ ನಟ ಕಿಚ್ಚ ಸುದೀಪ್ ಬಗ್ಗೆ ಅಸಭ್ಯವಾಗಿ ಮಾತನಾಡಿದ್ದರು. 'ದರ್ಶನ್ ಹೋದ ಮೇಲೆ ಸುದೀಪ್ ಜಾಸ್ತಿ ನಿಗರಾಡ್ತಾವ್ರೆ..., ಮಾಧ್ಯಮಗಳ ಮುಂದೆ ಜಾಸ್ತಿ ಮಾತಾಡ್ತವ್ರೆ, ಮೊನ್ನೆ ಅದ್ಯಾರೋ ಮುಂದೆ ಪ್ಯಾಂಟ್ ಬಿಚ್ಚಿ ತೋರಿಸ್ಲಾ ಅಂತಿದ್ರು' ಎಂದು ಹೇಳುತ್ತಾ ವ್ಯಂಗ್ಯವಾಗಿ ನಕ್ಕಿದ್ದರು.

Scroll to load tweet…

ಹೃದಯಪೂರ್ವಕ ಕ್ಷಮೆ

ಈ ಮೂಲಕ ದರ್ಶನ್ ಅವರ ಅನುಪಸ್ಥಿತಿಯಲ್ಲಿ ಸುದೀಪ್ ಅಹಂಕಾರ ಪ್ರದರ್ಶಿಸುತ್ತಿದ್ದಾರೆ ಎಂಬರ್ಥದಲ್ಲಿ ನೀಡಿದ್ದ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹರಡಿತ್ತು. ನಟ ಕಿಚ್ಚ ಸುದೀಪ್ ಹಾಗೂ ದರ್ಶನ್ ಹೆಸರನ್ನು ಪ್ರಸ್ತಾಪಿಸಿ ಲಘುವಾಗಿ ಮಾತನಾಡಿದ್ದ ಗುರೂಜಿಗೆ ಬಹಳ ದಿನ ತಮ್ಮ ವಿವಾದಾತ್ಮಕ ಮಾತನ್ನು ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ. ಇದೀಗ ಸುದೀಪ್ ಅಭಿಮಾನಿಗಳ ತೀವ್ರ ಆಕ್ರೋಶದ ಹಿನ್ನೆಲೆಯಲ್ಲಿ ಹೃದಯಪೂರ್ವಕ ಕ್ಷಮೆ ಯಾಚಿಸಿದ್ದಾರೆ.

ಅಭಿಮಾನಿಗಳ ಆಕ್ರೋಶ

ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಕಿಚ್ಚ ಸುದೀಪ್ ಅಭಿಮಾನಿಗಳು ಕೆಂಡಾಮಂಡಲವಾಗಿದ್ದರು. 'ಮಾರ್ಕ್' ಸಿನಿಮಾ ಸಕ್ಸಸ್ ಸಂಭ್ರಮದಲ್ಲಿರುವ ಸುದೀಪ್ ಅವರ ಘನತೆಗೆ ಧಕ್ಕೆ ತರುವಂತೆ ಗುರೂಜಿ ಮಾತನಾಡಿದ್ದಾರೆ ಎಂದು ಕಿಡಿಕಾರಿದ್ದರು. ಅಷ್ಟೇ ಅಲ್ಲದೆ, ಚಾಮರಾಜಪೇಟೆಯಲ್ಲಿರುವ ಗುರೂಜಿ ಕಚೇರಿಗೆ ಮುತ್ತಿಗೆ ಹಾಕುವ ಎಚ್ಚರಿಕೆಯನ್ನೂ ನೀಡಲಾಗಿತ್ತು. ಆರ್ಯವರ್ಧನ್ ಅವರು ಈ ಹಿಂದೆ ಬಿಗ್‌ಬಾಸ್ ಮನೆಯಲ್ಲಿದ್ದಾಗಲೂ ಸುದೀಪ್ ಅವರ ಬಗ್ಗೆ ಲಘುವಾಗಿ ಮಾತನಾಡಿ ಅಭಿಮಾನಿಗಳಿಂದ ತರಾಟೆಗೆ ಒಳಗಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

Scroll to load tweet…

ಅಭಿಮಾನಿಗಳಿಗೆ ಹೆದರಿ ಕ್ಷಮೆಯಾಚಿಸಿದ ಗುರೂಜಿ

ಸುದೀಪ್ ಅವರ ಅಭಿಮಾನಿಗಳ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಘೋಷಣೆ ಮಾಡಿದ ಬೆನ್ನಲ್ಲಿಯೇ ಪರಿಸ್ಥಿತಿ ಕೈಮೀರುತ್ತಿರುವುದನ್ನು ಅರಿತ ಆರ್ಯವರ್ಧನ್ ಗುರೂಜಿ, ತಕ್ಷಣವೇ ವಿಡಿಯೋ ಬಿಡುಗಡೆ ಮಾಡಿ ಸಾರ್ವಜನಿಕವಾಗಿ ಕ್ಷಮೆ ಕೇಳಿದ್ದಾರೆ. 'ಸುದೀಪ್ ಸರ್ ಮೇಲೆ ನನಗೆ ಅಪಾರ ಗೌರವ ಇದೆ. ಕಾರ್ಯಕ್ರಮವೊಂದರಲ್ಲಿ ಮಾತನಾಡುವ ಭರದಲ್ಲಿ ಏನೋ ಮಾತನಾಡಿಬಿಟ್ಟೆ. ಅದರಿಂದ ಸುದೀಪ್ ಸರ್ ಹಾಗೂ ಅವರ ಅಭಿಮಾನಿಗಳ ಮನಸ್ಸಿಗೆ ನೋವಾಗಿದ್ದರೆ ನಾನು ಹೃದಯಪೂರ್ವಕವಾಗಿ ಕ್ಷಮೆ ಕೇಳುತ್ತೇನೆ. ಸಾರಿ.. ಸಾರಿ.. ಸಾರಿ.. ದೇವರು ಅವರಿಗೆ, ಅವರ ಕುಟುಂಬಕ್ಕೆ ಒಳ್ಳೆಯದು ಮಾಡಲಿ' ಎಂದು ಕೈಮುಗಿದು ಬೇಡಿಕೊಂಡಿದ್ದಾರೆ.