Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಮಹಾ ತಿರುವು ಸಿಕ್ಕಿದೆ. ಇಲ್ಲಿವರೆಗೂ ತಾನು ಆಡಿದ್ದೇ ಆಟ ಎಂದು ಬೀಗುತ್ತಿದ್ದ ವೀರಭದ್ರನ ಅಹಂ ಪೆಟ್ಟು ಬೀಳುವಂತೆ, ಇದೀಗ ಚುನಾವಣೆಯಲ್ಲಿ ಅಳಿಯ ಶಿವು ಗೆದ್ದು ಬೀಗಿದ್ದಾನೆ. ಇನ್ನು ಮುಂದೆ ಶಿವುನೇ ‘ಜನನಾಯಕ’ ಅನ್ನೋದನ್ನು ಪಾರು ಹೇಳಿದ್ದಾಳೆ.
ಮಾರಿಗುಡಿಗೆ ಇನ್ನು ಮುಂದೆ ಶಿವುನೆ ‘ಜನನಾಯಕ’
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ‘ಅಣ್ಣಯ್ಯ’. ಇಲ್ಲಿವರೆಗೆ ಮಾರಿಗುಡಿಯ ಅಧಿಕಾರದ ಗದ್ದುಗೆ ಏರಿದ್ದ ವೀರಭದ್ರ, ಮಾಡಿದ್ದೆಲ್ಲಾ ಬರೀ ಮೋಸ, ತಂತ್ರ, ಕುತಂತ್ರ. ತನ್ನ ಅಹಂ ನಿಂದ ಶಿವುನನ್ನು ಕಾಲ ಕಸದಂತೆ ಕಾಣುತ್ತಿದ್ದ ವೀರಭದ್ರ. ಆದರೆ ಇದೀಗ ಪಾರು ತೋರಿದ ಜಾಣ್ಮೆ ಮತ್ತು ದಿಟ್ಟತನದ ಮುಂದೆ ವೀರಭದ್ರನ ಅಹಂಕಾರ ಸೋತು ಸುಣ್ಣವಾಗಿದೆ. ತನ್ನ ತಂದೆಯ ದುಷ್ಟತನಕ್ಕೆ ಬ್ರೇಕ್ ಹಾಕಿರುವ ಪಾರು, ಶಿವಣ್ಣನಿಗೆ ಆತನಿಗೆ ಸಿಗಬೇಕಾದ ಸೂಕ್ತ ಗೌರವ ಹಾಗೂ ಸ್ಥಾನಮಾನವನ್ನು ಕೊಡಿಸುವಲ್ಲಿ ಯಶಸ್ವಿಯಾಗಿದ್ದಾಳೆ.
ಶಿವಣ್ಣನೇ ನಿಜವಾದ ವಾರಸ್ದಾರ!
ಮಾರಿಗುಡಿಯಲ್ಲಿ ನಡೆದ ಚುನಾವಣೆಯಲ್ಲಿ, ತಾನು ಗೆಲ್ಲಲು ವೀರಭದ್ರ ಏನೇನೋ ಕಸರತ್ತು ಮಾಡಿದ್ದ, ಅಷ್ಟೇ ಅಲ್ಲ ಶಿವು ಚುನಾವಣೆಗೆ ನಿಲ್ಲದಂತೆ ತಡೆಯಲು ಸಹ ಸಿಕ್ಕಾಪಟ್ಟೆ ಆಟ ಆಡಿದ. ಆದರೆ ಪಾರು ಮಾಡಿ, ತಂತ್ರ-ಪ್ರತಿತಂತ್ರದಿಂದ ಇದೀಗ ಚುನಾವಣೆಯಲ್ಲಿ ಶಿವು ಗೆದ್ದಿದ್ದಾನೆ. ವೀರಭದ್ರನ ಎಲ್ಲಾ ಅಧಿಕಾರ ಹಾಗೂ ಹೊಣೆಗಾರಿಕೆಗೆ ಇನ್ಮುಂದೆ ಶಿವಣ್ಣನೇ ನಿಜವಾದ ವಾರಸ್ದಾರನಾಗಿ ಹೊರಹೊಮ್ಮಿದ್ದಾನೆ. ಶಿವಣ್ಣನ ಈ ಗೆಲುವು ಧಾರಾವಾಹಿ ಪ್ರಿಯರಿಗೆ ಹಾಗೂ ಆತನ ಅಭಿಮಾನಿಗಳಿಗೆ ತೀವ್ರ ಖುಷಿ ತಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ‘ವೀರಭದ್ರ ಶಾಕ್, ಪಾರು ರಾಕ್’ ‘ಮಾರಿಗುಡಿ ಶಿವಣ್ಣಂಗೆ ಜೈ’ ಎಂದು ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ ಸಂಭ್ರಮ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಲ್ಲಿ ಶಿವಣ್ಣನ ಈ ಗೆಲುವು ಮಾತ್ರ ವೀಕ್ಷಕರಿಗೆ ಸಂಭ್ರಮ ತಂದಿದೆ.
ಜನನಾಯಕನಾದ ಶಿವು
ಇನ್ನು ಮುಂದೆ ಶಿವು ಮಾರಿಗುಡಿಯ ಜನನಾಯಕನಾಗಿ ಹೊರಹೊಮ್ಮಿದ್ದಾರೆ. ಆದರೆ ಶಿವು ಮುಂದೆ ಅನಾವರಣ ಆಗಬೇಕಿರುವ ಸತ್ಯಗಳು ಸಾಕಷ್ಟಿವೆ. ವೀರಭದ್ರನ ನಿಜ ಮುಖ ಇನ್ನೂ ಕೂಡ ಶಿವುಗೆ ಗೊತ್ತಿಲ್ಲ, ಅದು ಗೊತ್ತಾದರೆ, ಹಾಗೂ ತನ್ನ ತಂಗಿಯನ್ನು ತಾನು ದೇವರೆಂದು ನಂಬಿಕೊಂಡಿರುವ ಮಾವ ನಡೆಸಿಕೊಳ್ಳುತ್ತಿರುವ ರೀತಿ ತಿಳಿದ್ರೆ, ಕೆರಳಿ ಕೆಂಡವಾಗುವುದು ಖಚಿತಾ. ಅಷ್ಟೇ ಅಲ್ಲ ಇನ್ನು ಮುಂದೆ ತನ್ನ ಮಾವನ ಮುಂದೆ ಶಿವು ಅಧಿಕಾರ ವಹಿಸಿಕೊಳ್ಳುತ್ತಾನೋ, ಇಲ್ಲವೋ ಅನ್ನೋದನ್ನು ಸಹ ಕಾದು ನೋಡಬೇಕಾಗಿದೆ.


