ನನ್ನ ಮದುವೆ ತಡವಾಗಿದೆ ಎಂದು ಹೇಳುತ್ತ, ಹುಡುಗ ಯಾರು? ಸಿಕ್ಕಿದ್ದೆಲ್ಲಿ? ಲವ್ ಹೇಗೆ ಶುರುವಾಯ್ತು ಎಂದು ಅನುಶ್ರೀ ಅವರು ಹೇಳಿದ್ದಾರೆ.
ನಿರೂಪಕಿ ಅನುಶ್ರೀ ಹಾಗೂ ರೋಶನ್ ಅವರು ಬೆಂಗಳೂರಿನಲ್ಲಿ ಮದುವೆ ಆಗಿದ್ದಾರೆ. ಮದುವೆ ಬಳಿಕ ಅವರು ಮಾಧ್ಯಮದ ಮುಂದೆ ಲವ್ ಸ್ಟೋರಿ, ಮದುವೆ ಬಗ್ಗೆ ಮಾತನಾಡಿದ್ದಾರೆ.
ಸರಳ ಮದುವೆ ಆಸೆ ಇತ್ತು!
“ಬಹಳ ಕಡಿಮೆ ಜನರ ಜೊತೆಗೆ ಮದುವೆ ಆಗಬೇಕು ಅನ್ನೋದು ನಮ್ಮ ಆಸೆಯಾಗಿತ್ತು. ಅಷ್ಟು ಸರಳವಾಗಿ ಮದುವೆ ಆಗೋಕೆ ಆಗಲಿಲ್ಲವಾದರೂ ಕೂಡ ಅದಕ್ಕಿಂತ ಸ್ವಲ್ಪ ಗ್ರ್ಯಾಂಡ್ ಆಗಿ ನಡೆದಿದೆ. ಮದುವೆ ಬಹಳ ಸುಂದರ ಸರಳವಾಗಿ ನಡೆದಿದೆ. ಎಲ್ಲರೂ ನಮ್ಮೆಲ್ಲರ ಪ್ರೈವೆಸಿಯನ್ನು ಗೌರವಿಸಿದ್ದಕ್ಕೆ ಖುಷಿಯಾಗಿದೆ” ಎಂದು ಅನುಶ್ರೀ ಹೇಳಿದ್ದಾರೆ.
ಪರಿಚಯ ಆಗಿದ್ದೆಲ್ಲಿ?
“ನಮ್ಮ ಮದುವೆಗೆ ತುಂಬ ಜನರು ಬಂದಿದ್ದಾರೆ ಅಂತ ಗೊತ್ತಾಯ್ತು. ನಿಮ್ಮೆಲ್ಲರ ಪ್ರೀತಿ, ಬೆಂಬಲಕ್ಕೆ ಧನ್ಯವಾದಗಳು. ನಮ್ಮದು ಲವ್ ಮ್ಯಾರೇಜ್. ಯಾರಿಗೆ ನಮ್ ಲವ್ ಸ್ಟೋರಿ ಬಗ್ಗೆ ಹೇಳಿದ್ರೂ ಕೂಡ ನಂಬುತ್ತಿರಲಿಲ್ಲ. ಪುನೀತ ಪರ್ವ ಕಾರ್ಯಕ್ರಮದಲ್ಲಿಯೆ ನಮ್ಮಿಬ್ಬರ ಪರಿಚಯ ಆಗಿದೆ. ಇಬ್ಬರು ಫ್ರೆಂಡ್ಸ್ ಆದೆವು, ಲವ್ ಮಾಡಿ ಮದುವೆ ಆದೆವು. ಪುನೀತ ಪರ್ವದಲ್ಲಿ ನಮ್ಮಿಬ್ಬರ ಪರಿಚಯ ಆಯ್ತು, ಅಪ್ಪು ಸರ್ ಅವರೇ ನಮ್ಮ ಇಬ್ಬರನ್ನೂ ಸೇರಿಸಿದಂಗಾಯ್ತು” ಎಂದು ಅನುಶ್ರೀ ಅವರು ಖುಷಿ ವ್ಯಕ್ತಪಡಿಸಿದ್ದಾರೆ.
ಎಲ್ಲರೂ ಮದುವೆಗೆ ಬಂದಿರೋದು ಖುಷಿಯಾಯ್ತು!
“ಜೀವನವನ್ನು ನಾನು, ರೋಶನ್ ಸಿಂಪಲ್ ಆಗಿ ನೋಡುತ್ತೇವೆ. ನಾವಿಬ್ಬರೂ ಚಿಕ್ಕ ಚಿಕ್ಕ ವಿಷಯಗಳನ್ನು ಸೆಲೆಬ್ರೇಟ್ ಮಾಡ್ತೀವಿ, ಅವರಿಗೆ ಸಹಾಯ ಮಾಡುವ ಗುಣ ಇದೆ, ಅವರ ಫೋಟೋ ಕೂಡ ನಮ್ಮ ಮದುವೆ ಮಂಟಪ ಜಾಗದಲ್ಲಿ ಇಟ್ಟಿದ್ದೀವಿ, ಅಪ್ಪು ಸರ್ ಇರುವಿಕೆಯಲ್ಲಿ ನಮ್ಮ ಮದುವೆ ಆಗಿದೆ, ಶಿವರಾಜ್‌ಕುಮಾರ್, ಗೀತಕ್ಕ, ರಚಿತಾ ರಾಮ್ ಸೇರಿದಂತೆ ಹಲವರು ಬಂದು ಆಶೀರ್ವಾದ ಮಾಡಿದ್ದಾರೆ. ರಚಿತಾ ರಾಮ್ ಅವರು ಅಷ್ಟಾಗಿ ಮದುವೆಗಳಲ್ಲಿ ಭಾಗಿ ಆಗೋದಿಲ್ಲ, ಆದರೂ ಬಂದಿರೋದು ತುಂಬ ಖುಷಿ ಕೊಟ್ಟಿದೆ. ರಾಜ್ ಬಿ ಶೆಟ್ಟಿ ಅವರು ತನ್ನ ಮದುವೆ ಎನ್ನುವಂತೆ ಓಡಾಡ್ತಿದ್ದಾರೆ. ಶಿವರಾಜ್‌ಕುಮಾರ್ ಅವರು ಕೂಡ ರೋಷನ್ ಅವರನ್ನ ಮುಂಚೆಯೇ ನೋಡಿದ್ದರು, ನಾನೇ ಪರಿಚಯ ಮಾಡಿಕೊಟ್ಟಿದ್ದೆ” ಎಂದು ಅವರು ಹೇಳಿದ್ದಾರೆ.
ಮಂತ್ರಮಾಂಗಲ್ಯ ಆಗುವ ಆಸೆ ಇತ್ತು
“ಮದುವೆ ನಮ್ಮ ಜೀವನದ ಚಿಕ್ಕ ಭಾಗ. ಕೆಲಸ ನಮಗೆ ಬಹಳ ಮುಖ್ಯ. ಸರಳ ವಿವಾಹ ನಮಗೆ ಸಾಕಷ್ಟು ಖುಷಿ ಕೊಟ್ಟಿದೆ. ನನಗೆ ಮಂತ್ರ ಮಾಂಗಲ್ಯ ಆಗಲು ಬಹಳ ಇಷ್ಟ ಇತ್ತು. ಆದರೆ ಇದಕ್ಕೆಲ್ಲ ಒಂದಿಷ್ಟು ನಿಯಮ ಇದೆ. ಇಷ್ಟೇ ಜನರು ಭಾಗಿ ಆಗಬೇಕು ಅಂತ ಕೂಡ ಹೇಳಲಾಗಿತ್ತು. ಹೀಗಾಗಿ ಮಂತ್ರಮಾಂಗಲ್ಯ ಆಗಲು ಆಗಲಿಲ್ಲ. ಮದುವೆ ಅನ್ನೋದು ಒಂದು ಹೆಣ್ಣಿನ ಕನಸು, ನನ್ನ ಮದುವೆ ಸ್ವಲ್ಪ ತಡವಾಗಿದೆ, ನಾವು ಹೇಗೆ ಮದುವೆ ಆಗ್ತೀವಿ ಅನ್ನೋದು ಮುಖ್ಯ ಅಲ್ಲ, ಹೇಗೆ ಬದುಕ್ತೀವಿ ಎನ್ನೋದು ಮುಖ್ಯ. ನಾವಿಬ್ಬರು ಮದುವೆ ಆಗಿದ್ದೇವೆ, ನಮಗೆ ಜವಾಬ್ದಾರಿ ಇದೆ, ನಾವಿಬ್ಬರು ಈ ಜವಾಬ್ದಾರಿಯನ್ನು ಮುಂದುವರೆಸಿಕೊಂಡು ಹೋಗಬೇಕು. ಮದುವೆ ಬಳಿಕ ಹೇಗೆ ಬದುಕ್ತೀವಿ ಅನ್ನೋದು ಮುಖ್ಯವಾಗುತ್ತದೆ. ಅವರು ಕೋಟ್ಯಾಧಿಪತಿ ಅಂತೆಲ್ಲ ಯುಟ್ಯೂಬ್ ವಿಡಿಯೋ ನೋಡಿದೆ. ರೋಶನ್ ಸಿಂಪಲ್ ಹುಡುಗ. ಮುಂದೆ ಅವರು ಕೋಟ್ಯಂತರ ರೂಪಾಯಿ ದುಡಿಯೋ ಹಾಗೆ ಆಗಲಿ, ಅದಿಕ್ಕೆ ನಿಮ್ಮೆಲ್ಲರ ಆಶೀರ್ವಾದ ಬೇಕು. ರೋಷನ್ ಅವರಿಗೆ ಅಡುಗೆ ಮಾಡೋದು ಅಂದ್ರೆ ತುಂಬ ಇಷ್ಟ. ಅವರು ಬಿರಿಯಾನಿ, ಫಿಶ್ ಫ್ರೈ ಸಖತ್ ಆಗಿ ಮಾಡ್ತಾರೆ” ಎಂದು ಅನುಶ್ರೀ ಹೇಳಿದ್ದಾರೆ.
ರೋಶನ್ ಏನು ಹೇಳಿದರು?
"ನಾನು ಐಟಿ ಉದ್ಯೋಗಿ. ಕೋಟ್ಯಧಿಪತಿ ಅಲ್ಲ, ಕಳೆದ ಐದು ವರ್ಷಗಳಿಂದ ಅನುಶ್ರೀ ಪರಿಚಯ ಇದೆ. ಡಾ ರಾಜ್‌ಕುಮಾರ್ ಅಭಿಮಾನಿ ನಾನು, ನನಗೆ ಶ್ರೀದೇವಿ ಭೈರಪ್ಪ ಅವರು ಫ್ರೆಂಡ್. ಇವರ ಮೂಲಕ ಅನುಶ್ರೀ ಪರಿಚಯ ಆಗಿದೆ, ನನಗೆ ಅನುಶ್ರೀ ಸೆಲೆಬ್ರಿಟಿ ಅಂತ ಯಾವಾಗಲೂ ಅನಿಸಲಿಲ್ಲ. ಅವಳು ಸಿಂಪಲ್" ಎಂದು ರೋಶನ್ ಅವರು ಹೇಳಿದ್ದಾರೆ.
