ʼಅಮೃತಧಾರೆʼ ಧಾರಾವಾಹಿ ನಟ ರಾಜೇಶ್ ನಟರಂಗ ಅವರಿಗೆ ಒಂದು ವಿಷಯದಲ್ಲಿ ತುಂಬ ಬೇಸರ ಇದೆಯಂತೆ.
ʼಅಮೃತಧಾರೆʼ ಧಾರಾವಾಹಿ ನಟ ರಾಜೇಶ್ ನಟರಂಗ ಅವರು ಇಂದು ಸಾಕಷ್ಟು ಧಾರಾವಾಹಿ, ಸಿನಿಮಾಗಳಲ್ಲಿ ವಿವಿಧ ಪಾತ್ರದ ಮೂಲಕ ಗುರುತಿಸಿಕೊಂಡು, ಹೆಸರು ಮಾಡಿದ್ದಾರೆ. ಹೀಗಿರುವಾಗ ಅವರಿಗೆ ಒಂದು ವಿಷಯ ತುಂಬ ಕಾಡಿದೆ. ಅದು ಡಾ ರಾಜ್‌ಕುಮಾರ್ ವಿಷಯಕ್ಕಂತೆ. ಈ ಬಗ್ಗೆ ಅವರು Asianet Suvarna News ಜೊತೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಗುಪ್ತಗಾಮಿನಿ ಧಾರಾವಾಹಿ ಅಭಿಮಾನಿಯಾಗಿದ್ರು!
ರಾಜೇಶ್ ನಟರಂಗ ಮಾತನಾಡಿ, “ಡಾ ರಾಜ್‌ಕುಮಾರ್ ಹಾಗೂ ನಾನು ಎದುರು ಬದುರು ಮುಖಾಮುಖಿಯಾಗಿದ್ದೆವು. ಗುಪ್ತಗಾಮಿನಿ ಧಾರಾವಾಹಿ ಆಗ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ನಮ್ಮ ಧಾರಾವಾಹಿಗಳನ್ನು ಡಾ ರಾಜ್‌ಕುಮಾರ್ ಅವರು ತುಂಬ ಇಷ್ಟಪಟ್ಟು ನೋಡುತ್ತಿದ್ದರು. ಆ ಟೈಮ್‌ನಲ್ಲಿ ಅಶೋಕ್ ಅವರು ನನ್ನ ಬಳಿ ಬಂದು, ಆ ಹುಡುಗ ಚೆನ್ನಾಗಿ ಮಾಡ್ತಾನೆ, ಮನೆಗೆ ಬರೋಕೆ ಹೇಳು ಅಂತ ಹೇಳಿದ್ದರಂತೆ. ನಾನು ಹೋಗೋಣ ಅಂತ ಅಂದುಕೊಂಡರೂ ಕೂಡ ಹೋಗಲಾಗಲಿಲ್ಲ. ಇದಕ್ಕೆ ಕಾರಣ ಏನು ಅಂತ ನನಗೆ ಅರ್ಥ ಆಗಲಿಲ್ಲ. ಈ ವಿಷಯಕ್ಕೆ ಇಂದು ಕೂಡ ಹಿಂಸೆ ಆಗುತ್ತದೆ” ಎಂದಿದ್ದಾರೆ.
ಡಾ ರಾಜ್‌ಕುಮಾರ್ ತೀರಿಕೊಂಡ ದಿನ ಸಿಕ್ಕಾಪಟ್ಟೆ ಅತ್ತೆ!
“ʼಕುಮಾರ ರಾಮʼ ಸಿನಿಮಾದಲ್ಲಿ ನಾನು ನಟಿಸಬೇಕಿತ್ತು. ಅಂದಿನ ಸಿನಿಮಾ ಮುಹೂರ್ತಕ್ಕೆ ಡಾ ರಾಜ್‌ಕುಮಾರ್ ಅವರು ಬಂದಿದ್ದರು, ಆಗಲೇ ಮಾತನಾಡಿಸಿದ್ದೆ. ಆಮೇಲೆ ಇನ್ನೊಂದು ಸಿನಿಮಾ ಡೇಟ್ ಸಮಸ್ಯೆಯಾಗಿ ನಾನು ನಟಿಸಲಾಗಲಿಲ್ಲ. ಆಮೇಲೆ ಒಂದು ದಿನ ಡಾ ರಾಜ್‌ಕುಮಾರ್ ಅವರು ತೀರಿಕೊಂಡರು. ಧಾರಾವಾಹಿ ಸೆಟ್‌ನಿಂದ ಬಂದು ಹೋದೆ, ಆಗಲೂ ಅವರ ಪಾರ್ಥೀವ ಶರೀರವನ್ನು ನೋಡೋಕೆ ಆಗಲಿಲ್ಲ. ನನ್ನ ತಾಯಿ ಸತ್ತಾಗಲೂ ಕೂಡ ಅಷ್ಟು ಅತ್ತಿರಲಿಲ್ಲ, ಅಷ್ಟು ಡಾ ರಾಜ್‌ಕುಮಾರ್ ಅವರು ಸತ್ತಾಗ ಅತ್ತಿದ್ದೇನೆ” ಎಂದಿದ್ದಾರೆ.
ಪಾರ್ವತಮ್ಮ ರಾಜ್‌ಕುಮಾರ್ ಅಂದು ಸಿಕ್ಕಿದಾಗ….!
“ಕಂಠೀರವ ಸ್ಟುಡಿಯೋದಲ್ಲಿ ರಾಜ್‌ಕುಮಾರ್ ಅವರ ದೇಹ ಇಟ್ಟಿದ್ದರು. ನಾನು ನೋಡೋಕೆ ಅಂತ ಹೋಗುತ್ತಿದ್ದೆ, ಕಾರ್ಪೋರೇಶನ್ ಸರ್ಕಲ್ ಬಳಿ ಹೋದಾಗ ಎಲ್ಲಿ ನೋಡಿದರೂ ಜನರು. ಆಗ ಪೊಲೀಸರೇ ಬಂದು, “ಕೈ ಮುಗಿಯುತ್ತೇವೆ, ದಯವಿಟ್ಟು ಮನೆಗೆ ಹೋಗಿ, ನಮಗೆ ಇಲ್ಲಿ ನಿಭಾಯಿಸೋಕೆ ಆಗ್ತಿಲ್ಲ” ಎಂದು ಹೇಳಿದ್ದರು. ರಾಜ್‌ಕುಮಾರ್ ಅವರು ಮನೆಗೆ ಕರೆದಾಗಲೂ ಹೋಗಲಿಲ್ಲ, ಸತ್ತಾಗಲೂ ಹೋಗೋಕೆ ಆಗಲಿಲ್ಲ ಅಂತ ತುಂಬ ಬೇಸರ ಇದೆ. ಕಂಠೀರವ ಸ್ಟುಡಿಯೋದಲ್ಲಿ ʼಗುಪ್ತಗಾಮಿನಿʼ ಧಾರಾವಾಹಿ ನಡೆಯುತ್ತಿತ್ತು. ರಾಜ್‌ಕುಮಾರ್ ಅವರು ತೀರಿಕೊಂಡ ಮೊದಲ ತಿಂಗಳು ಪೂರ್ತಿ ಆಗ ಪಾರ್ವತಮ್ಮ ರಾಜ್‌ಕುಮಾರ್ ಅವರು ಅಲ್ಲಿಗೆ ಬರುತ್ತಿದ್ದರು. ಒಮ್ಮೆ ನನ್ನ ನೋಡಿ “ನಿನ್ನ ಧಾರಾವಾಹಿ ಅಂದ್ರೆ ನಮ್ಮ ಯಜಮಾನ್ರಿಗೆ ತುಂಬ ಇಷ್ಟ. ಒಂದು ಸಿನಿಮಾದಲ್ಲಿ ನಟಿಸು” ಅಂತ ಹೇಳಿದ್ರು. ನಾನು ಏನು ಹೇಳಬೇಕು ಅಂತ ಗೊತ್ತಾಗಲಿಲ್ಲ, ನಟಿಸ್ತೀನಿ ಅಮ್ಮಾ ಅಂತ ಹೇಳಿದೆ” ಎಂದಿದ್ದಾರೆ.
ಸದ್ಯ ʼಅಮೃತಧಾರೆʼ ಧಾರಾವಾಹಿಯಲ್ಲಿ ಗೌತಮ್ ದಿವಾನ್ ಪಾತ್ರದಲ್ಲಿ ಕಾಣಿಸಿಕೊಳ್ತಿರುವ ರಾಜೇಶ್ ನಟರಂಗ ಅವರು ಕನ್ನಡ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ.

