ʼಬಿಗ್‌ ಬಾಸ್‌ ಕನ್ನಡ ಸೀಸನ್‌ 11ʼ ಶೋ ಆರಂಭವಾಗುವ ಪ್ರಯುಕ್ತ ಒಂದೆರಡು ಧಾರಾವಾಹಿಗಳು ಅಂತ್ಯ ಆಗಿತ್ತು. ಈಗ ʼಬಿಗ್‌ ಬಾಸ್ʼ‌ ಮುಕ್ತಾಯ ಆದ್ಮೇಲೆ ಎರಡು ಹೊಸ ಧಾರಾವಾಹಿಗಳು ಆರಂಭ ಆಗಲಿವೆ. ಅವು ಯಾವುವು? 

‘ಬಿಗ್‌ ಬಾಸ್‌ ಕನ್ನಡ ಸೀಸನ್‌ 11’ ಶೋ ಮುಕ್ತಾಯ ಹಂತಕ್ಕೆ ಬಂದಿದೆ. ಇನ್ನೊಂದು ದಿನ ಕಳೆದರೆ ʼವಧುʼ ಮತ್ತು ʼಯಜಮಾನʼ ಧಾರಾವಾಹಿಯು ಪ್ರಸಾರ ಆಗಲಿದೆ. ನಟಿ ಶ್ರುತಿ, ಸಪ್ತಮಿ ಗೌಡ ಅವರು ಈ ಎರಡು ಹೊಸ ಕಥೆಗಳನ್ನು ಪರಿಚಯಿಸುತ್ತಿರೋದು ವಿಶೇಷ ಎನ್ನಬಹುದು. 

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಜನವರಿ 27ರಿಂದ ʼ'ವಧು' ಮತ್ತು 'ಯಜಮಾನ' ಧಾರಾವಾಹಿಗಳು ಪ್ರಸಾರ ಆಗಲಿವೆ. ಡಿವೋರ್ಸ್‌ ಲಾಯರ್‌ ಕಥೆ ʼವಧುʼ ರಾತ್ರಿ 9.30ಕ್ಕೆ ಪ್ರಸಾರ ಆಗುವುದು. ಅಂದಹಾಗೆ ಕಾಂಟ್ರಾಕ್ಟ್ ಮದುವೆ ಕತೆ ‘ಯಜಮಾನ’ ರಾತ್ರಿ 10 ಗಂಟೆಗೆ ಪ್ರಸಾರವಾಗಲಿದೆ. 

ʼವಧುʼ ಕಥೆ ಏನು?
 ಸಂಬಂಧಗಳನ್ನು ಪ್ರೀತಿಸುವ, ಅಷ್ಟೇ ಗೌರವಿಸುವ 'ವಧು' ಒಬ್ಬ ಅವಿವಾಹಿತೆ. ವಧು ಎಂದರೆ ಈ ಧಾರಾವಾಹಿಯಲ್ಲಿ ಓರ್ವ ಹುಡುಗಿಯ ಹೆಸರು, ಅಂದ್ರೆ ನಾಯಕಿಯ ಹೆಸರು. ವೃತ್ತಿಯಲ್ಲಿ ಅವಳು ಡಿವೋರ್ಸ್ ಲಾಯರ್. ಮನುಷ್ಯ ಸಂಬಂಧಗಳ ಬಗ್ಗೆ ಅವಳಿಗಿರುವ ಗೌರವವೇ ಅವಳನ್ನು ತನ್ನ ವೃತ್ತಿಯಲ್ಲಿ ಹಿಂದುಳಿಯುವಂತೆ ಮಾಡಿದೆ ಅಂದರೂ ತಪ್ಪಾಗೋದಿಲ್ಲ. 

BBK 11: ತ್ರಿವಿಕ್ರಮ್‌, ಮೋಕ್ಷಿತಾ ಪೈ ಬಗೆಗಿನ ಅತಿ ದೊಡ್ಡ ಸೀಕ್ರೇಟ್‌ ರಿವೀಲ್‌ ಮಾಡಿದ Bigg Boss

ಗಂಡ-ಹೆಂಡ್ತಿ ನಡುವೆ ಬಿರುಕು ಮೂಡಿದಾಗ, ಡಿವೋರ್ಸ್ ಕೇಳಿಕೊಂಡು ಬಂದ ಜೋಡಿಗಳ ನಡುವೆ ಸಾಮರಸ್ಯ ಮೂಡಿಸಿ ಅವರನ್ನು ಒಂದು ಮಾಡುವುದರಲ್ಲೇ ಅವಳಿಗೆ ಆಸಕ್ತಿ ಜಾಸ್ತಿ. ಹೀಗಿರುವಾಗ ಒಂದು ಮಹತ್ವದ ಕೇಸ್ ಎಲ್ಲವನ್ನೂ ತಲೆಕೆಳಗು ಮಾಡುತ್ತದೆ. ಯಶಸ್ವಿ ಉದ್ಯಮಿ ಸಾರ್ಥಕ್ ದಾಂಪತ್ಯದಲ್ಲಿ ಬಿರುಕುಂಟಾಗಿ, ಪತ್ನಿ ಪ್ರಿಯಾಂಕಾ ವಿಚ್ಛೇದನಕ್ಕೆ ಬೇಡಿಕೆ ಇಡುತ್ತಾಳೆ. ಆಗ ಸಾರ್ಥಕ್ ವಧು ಬಳಿ ಸಹಾಯ ಕೇಳಿಕೊಂಡು ಬರುತ್ತಾನೆ. ಈ ವೇಳೆ ಕತೆ ಕುತೂಹಲಕರ ತಿರುವು ಪಡೆಯುತ್ತದೆ. 

ಇಲ್ಲಿ ಸಂಬಂಧಗಳು ಪರೀಕ್ಷೆಗೊಳಪಡಿಸುತ್ತವೆ, ವೃತ್ತಿಧರ್ಮ ಮತ್ತು ಆತ್ಮಸಾಕ್ಷಿಗಳ ನಡುವಿನ ತಿಕ್ಕಾಟ ಹೇಳುತ್ತದೆ. ಪ್ರೀತಿ, ಮೋಸ, ನಂಬಿಕೆಗಳು ನಮ್ಮನ್ನು ಹೇಗೆಲ್ಲ ಘಾಸಿಗೊಳಿಸಬಹುದು ಎಂಬುದನ್ನು ಎಲ್ಲರ ಎದುರು ಬಿಡಿಸಿಡುತ್ತದೆ. ತನ್ನ ಭಾವನೆಗಳ ಜೊತೆಗೆ ಗುದ್ದಾಡುತ್ತಲೇ ತನಗೆ ಸಿಕ್ಕಿರುವ ಈ ಹೊಸ ಪ್ರಕರಣವನ್ನು ವಧು ಸರಿಯಾಗಿ ನಿಭಾಯಿಸುತ್ತಾಳಾ? ಪ್ರೀತಿ, ಬದ್ಧತೆಗಳ ಬಗೆಗಿನ ಅವಳ ನಿಲುವುಗಳನ್ನು ಈ ಪ್ರಕರಣ ಬದಲಾಯಿಸುತ್ತದೆಯೇ ಎನ್ನೋದು ಈ ಕಥೆಯ ಸಾರ. 

Bigg Boss Kannada 11 ವಿಜೇತರಿಗೆ ಸಿಕ್ಕ ಮತ ಎಷ್ಟು? ಸೃಷ್ಟಿಯಾಯ್ತು ಇತಿಹಾಸ!

ವಿನಯಾ ಪ್ರಸಾದ್, ಸುಧಾ ಬೆಳವಾಡಿ, ರವಿ ಭಟ್, ರವಿ ಕುಮಾರ್, ರೇಖಾ ಸಾಗರ್ ಅವರು ಈ ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ. ಸಾರ್ಥಕ್ ಪಾತ್ರದಲ್ಲಿ ʼಲಕ್ಷಣʼ ಧಾರಾವಾಹಿ ಖ್ಯಾತಿಯ ಅಭಿಷೇಕ್‌ ಶ್ರೀಕಾಂತ್, ವಧು ಪಾತ್ರದಲ್ಲಿ ದುರ್ಗಾಶ್ರೀ, ಪ್ರಿಯಾಂಕಾ ಪಾತ್ರದಲ್ಲಿ ಸೋನಿ ಮುಲೇವಾ ನಟಿಸುತ್ತಿದ್ದಾರೆ. 

ʼಯಜಮಾನʼ ಧಾರಾವಾಹಿ 
 ಸ್ವಲ್ಪವೂ ಸ್ವಾರ್ಥವಿಲ್ಲದ ಸರಳ ವ್ಯಕ್ತಿ ರಘುಗೆ ತನ್ನ ಕುಟುಂಬದ ಪ್ರೀತಿ ಗಳಿಸುವ ಆಸೆ. ಆದರೆ ಝಾನ್ಸಿ ಹಾಗಲ್ಲ. ತಾತನ ಮಡಿಲಲ್ಲಿ ಬೆಳೆದ ಈ ಹುಡುಗಿಗೆಗ ಗಂಡಸರು ಅಂದ್ರೆ ಇಷ್ಟ ಇಲ್ಲ. ಪುರುಷರನ್ನು ದ್ವೇಷಿಸುವ ಹಠಮಾರಿ ಹುಡುಗಿ ಇವಳು. ಒಂದು ಮದುವೆಯ ರೂಪದಲ್ಲಿ ವಿಧಿ ಇವರಿಬ್ಬರನ್ನೂ ಹತ್ತಿರ ತರುತ್ತದೆ. ಕಷ್ಟದಲ್ಲಿರುವ ಕುಟುಂಬಕ್ಕೆ ಒಳ್ಳೆಯದು ಮಾಡಲು ಈ ಮದುವೆ ದಾರಿಯಾಗಬಹುದು ಎಂದು ರಘು ಈ ಮದುವೆಗೆ ಒಪ್ಪುತ್ತಾನೆ. ಮದುವೆ ಬಳಿಕ ಏನೆಲ್ಲ ತಿರುವುಗಳು ಬಂದು ಈ ಧಾರಾವಾಹಿ ಕತೆಯನ್ನು ಮತ್ತೆಲ್ಲಿಗೋ ಸೆಳೆದೊಯ್ಯುತ್ತವೆ ಎಂದು ಹೇಳಬಹುದು. ರಘು, ಝಾನ್ಸಿ ವ್ಯಕ್ತಿತ್ವದಲ್ಲಿ ತದ್ವಿರುದ್ಧವಾಗಿದ್ದಾರೆ. ಅನುಕೂಲಕ್ಕೆಂದು ಆರಂಭವಾದ ಇವರ ಸಂಬಂಧ ಈಗ ಗಾಢವಾಗುತ್ತ ಬೆಳೆದರೂ ಯಾವುದೇ ಕ್ಷಣದಲ್ಲೂ ಒಡೆದುಹೋಗುವ ಭಯವನ್ನು ಹುಟ್ಟಿಸುತ್ತದೆ.


ಹೊಸ ಮುಖಗಳಾದ ಹರ್ಷ ಬಿಎಸ್, ಮಧುಶ್ರೀ ಭೈರಪ್ಪ ‘ಯಜಮಾನ’ ಧಾರಾವಾಹಿಯ ಮುಖ್ಯ ಭೂಮಿಕೆಯಲ್ಲಿದ್ದಾರೆ. ರಮೇಶ್ ಭಟ್, ನಾಗಾಭರಣ, ಮಂಜುಳಾ, ಅಂಕಿತಾ ಜೈರಾಮ್, ತಿಲಕ್, ಸ್ಪೂರ್ತಿ, ಪ್ರದೀಪ್, ವಿಶ್ವ ಈ ಧಾರಾವಾಹಿಯಲ್ಲಿ ನಟಿಸಿದ್ದಾರೆ.