ನಟ ಕಿಶೋರ್ ಅವರು ಬಿಜೆಪಿ, ಆರೆಸ್ಸೆಸ್ ಹಾಗೂ ಕೇಂದ್ರ ಸರ್ಕಾರದ ನೀತಿಗಳನ್ನು ತೀವ್ರವಾಗಿ ಟೀಕಿಸಿದ್ದಾರೆ. 'ಹಿಂದೂ ಹಿಂದಕ್ಕೆ, ಜಾತಿ ಮುಂದಕ್ಕೆ' ಎಂದು ಹೇಳುವ ಮೂಲಕ, ಯುಜಿಸಿ ನಿರ್ಧಾರ ಹಾಗೂ ದೇಶದ ಜಾಗತಿಕ ಸೂಚ್ಯಂಕಗಳ ಕುಸಿತದ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. 

ಬೆಂಗಳೂರು (ಫೆ.2): ಸ್ಯಾಂಡಲ್‌ವುಡ್‌ ನಟ ಹಾಗೂ ಸಾಮಾಜಿಕ ಕಾರ್ಯಕರ್ತ ನಟ ಕಿಶೋರ್‌ ತಮ್ಮ ಅಭಿಪ್ರಾಯಗಳನ್ನು ಅತ್ಯಂತ ಮುಕ್ತವಾಗಿ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡುತ್ತಿರುತ್ತಾರೆ. ದೇಶಕ್ಕೆ, ರಾಜಕೀಯಕ್ಕೆ ಸಂಬಂಧಪಟ್ಟ ಯಾವುದೇ ವಿಚಾರವಾಗಲಿ ಅವರು ಮಾತನಾಡಲು ಹಿಂಜರಿಯೋದಿಲ್ಲ. ಬಿಜೆಪಿ, ಆರೆಸ್ಸೆಸ್‌ ಹಾಗೂ ಪ್ರಧಾನಿ ಮೋದಿ ನಿರ್ಧಾರಗಳ ಬಗ್ಗೆ ತಮ್ಮದೊಂದು ಟೀಕೆಯನ್ನು ಯಾವಾಗಲೂ ಇರಿಸುವ ನಟ ಕಿಶೋರ್‌ ಇತ್ತೀಚೆಗೆ ಯುಜಿಸಿ ನಿರ್ಧಾರಗಳ ವಿಚಾರವಾಗಿ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. ಯುಜಿಸಿಯಲ್ಲಿ ಕೇಂದ್ರ ತರಲಿರುವ ಹೊಸ ಬದಲಾವಣೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಗಿತ್ತು. ಕೊನೆಗೆ ಸುಪ್ರೀಂ ಕೋರ್ಟ್‌ ಹೊಸ ನಿಯಮಗಳಿಗೆ ತಡೆ ನೀಡಿತ್ತು.

ಈ ಬಗ್ಗೆ ಇನ್ಸ್‌ಟಾಗ್ರಾಮ್‌ನಲ್ಲಿ ಬರೆದುಕೊಂಡಿರುವ ಕಿಶೋರ್‌, 'ಹಿಂದೂ ಹಿಂದಕ್ಕೆ ಜಾತಿ ಮುಂದಕ್ಕೆ. ಇದ್ದ ಕಾನೂನನ್ನೇ ಅರೆಬರೆ ತಿರುಚಿ ಓಬಿಸಿ ಓಟಿಗೆ ಕೈಹಾಕಿ, ಮೇಲ್ಜಾತಿಯ ಕಿಚ್ಚೆಬ್ಬಿಸಿ, ರೈತ ಹೋರಾಟದಲ್ಲಿ ವರ್ಷಗಟ್ಟಲೆ ತೆಪ್ಪಗೆ ಮಲಗಿದ್ದ ಸುಪ್ರೀಂಕೋರ್ಟನ್ನು ಮೂರೇ ದಿನದಲ್ಲೆಬ್ಬಿಸಿ ಅರೆಬರೆ ಕಾನೂನನ್ನೂ ಇಲ್ಲವಾಗಿಸಿ ಸುಪ್ರೀಂ ಮೂತಿಗೆ ಎಂಜಲು ಬಳಿದು ಮೊಸರು ತಿನ್ನುವ ಕುತಂತ್ರಿ ಬಿಜೆಪಿ ಆರೆಸ್ಸೆಸ್ ನ ಬಣ್ಣ ಬಯಲು. ಈ ಭಾರತದಲ್ಲಿ ಹಿಂದೂ ಎಲ್ಲಿ? ಏಕ್ ಹೈ ತೊ ಸೇಫ್ ಹೈ. ಕಾಟೇಂಗೆ ತೊ ಬಾಟೇಂಗೆ ಹಿಂದೂ ಖತರೇ ಮೆ ಎಲ್ಲ ಬರೀ ರಾಜಕೀಯದ ಸುಳ್ಳು ದಾಳಗಳು. ಒಟ್ಟಿನಲ್ಲಿ ಹಿಂದೂ ಎನ್ನುವುದೇ ಇಲ್ಲಿಲ್ಲ. ಭಾರತದ ಸತ್ಯ ಬರೀ ಜಾತಿಯಷ್ಟೆ ಎಂದು ಬರೆದುಕೊಂಡಿದ್ದಾರೆ.

Rupee value, rupee performance, GDP rating, Women safety, Hunger, education, healthcare, unemployment, press freedom, happiness index ಹೀಗೆ ಎಲ್ಲ ಜಾಗತಿಕ ಸೂಚ್ಯಾಂಕಗಳಲ್ಲೂ ಕೊನೆಯಲ್ಲಿದ್ದರೂ ಬರದ ಕೋಪ, ನಡೆಯದ ಪ್ರತಿಭಟನೆ, ಉದ್ದೇಶಪೂರ್ವಕವಾಗಿ ದಾರಿತಪ್ಪಿಸುವ, ಜಾತಿ ತಾರತಮ್ಯದ ವಿರುದ್ಧ ಏನೂ ಮಾಡದೆಂದು ಅದರ ತಂತ್ರ ನೋಡಿದರೇ ಗೊತ್ತಾಗುವ ಒಂದು ಕಾನೂನಿನ ವಿರುದ್ಧ ಭುಗಿಲೇಳುತ್ತದೆಂದರೆ! ಇಲ್ಲಿ ಹಿಂದೂ ರಾಷ್ಟ್ರವಿರಲಿ.. ಹಿಂದುವೂ ಇಲ್ಲ ರಾಷ್ಟ್ರವೂ ಇಲ್ಲ ಇರುವುದು ಬರೀ ಜಾತಿ, ಜಾತೀವಾದ ಮತ್ತು ಜಾತ್ಯಾಂಧತೆಯಷ್ಟೆ ಎಂದು ಬರೆದಿದ್ದಾರೆ.

View post on Instagram

ಕಿಶೋರ್‌ ಮಾತಿಗೆ ವಿರೋಧ

ಇದಕ್ಕೆ ಹಲವರು ಕಾಮೆಂಟ್‌ ಮಾಡಿದ್ದು, 'ಅಂದರೆ ಕಾಂಗ್ರೆಸ್ ಒಂದು ರಾಷ್ಟ್ರವಿರೋಧಿ ಪಕ್ಷ . ಏಕೆಂದರೆ ಅವರ ಇಡೀ ರಾಜಕೀಯವು ಜಾತಿ ಆಧಾರಿತ ರಾಜಕೀಯವನ್ನು ಅವಲಂಬಿಸಿದೆ. ಬಿಜೆಪಿಯನ್ನು ಕೆಣಕುವ ಅವಕಾಶದಲ್ಲಿ ನೀವು ಕಾಂಗ್ರೆಸ್ ಮತ್ತು ಅವರ ರಾಷ್ಟ್ರವಿರೋಧಿ ಸಿದ್ಧಾಂತವನ್ನು ಬಹಿರಂಗಪಡಿಸುತ್ತಿದ್ದೀರಿ. ನೀವು ಬಿಜೆಪಿಯ ಬಗ್ಗೆ ಕೆಟ್ಟದಾಗಿ ಮಾತನಾಡಲು ಸಾಧ್ಯವಾದರೆ ಅವರ ಒಳ್ಳೆಯದನ್ನು ಎತ್ತಿ ತೋರಿಸುವ ಧೈರ್ಯವನ್ನು ಇಟ್ಟುಕೊಳ್ಳಿ!ಅಂದಹಾಗೆ, ಆ ಸ್ಲೋಗನ್‌ ಬಾಟೇಂಗೆ ತೋ ಕಾಂಟೇಂಗೆ..ಕಾಂಟೇಂಗೆ ತೋ ಬಾಟೇಂಗೆ ಅಲ್ಲ. ಪ್ರೊಪಗಂಡಾ ವಿಚಾರಗಳನ್ನು ಪೋಸ್ಟ್‌ ಮಾಡುವ ಮುನ್ನ ಜ್ಞಾನ ಬೆಳೆಸಿಕೊಳ್ಳಿ ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ.

ಬಿಜೆಪಿಯನ್ನು ಫಾಲೋ ಮಾಡುತ್ತಿರುವ ಎಸ್ಸಿಎಸ್‌ಟಿಗಳು ತಮ್ಮ ಗುಂಡಿಯನ್ನು ತಾವೇ ತೋಡಿಕೊಳ್ಳುತ್ತಿದ್ದಾರೆ ಅನ್ನೋದು ಗೊತ್ತಾಗುತ್ತಿದೆ ಎಂದು ಮತ್ತೊಬ್ಬರು ಬರೆದಿದ್ದರೆ, MRA ಗಳು ಯಾವಾಗಲೂ "ದುರುಪಯೋಗ"ದ ಬಗ್ಗೆ ಅಳುವುದರಿಂದ ಅವರು POCSO ಮತ್ತು ಕಾನೂನುಗಳೊಂದಿಗೆ ಇದೇ ರೀತಿ ಮಾಡಬೇಕು ಎಂದು ಇನ್ನೊಬ್ಬರು ಬರೆದಿದ್ದಾರೆ.