ಪಾವಗಡ ತಾಲೂಕಿನಲ್ಲಿ ಅತ್ಯಂತ ವಿಷಾದನೀಯ ಘಟನೆ ನಡೆದಿದೆ. ಓದಿ ದೊಡ್ಡ ಅಧಿಕಾರಿಯಾಗಬೇಕೆಂಬ ಕನಸು ಹೊತ್ತಿದ್ದ 8ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ. ಹಾಸ್ಟೆಲ್‌ನ ಶೌಚಾಲಯದಲ್ಲಿ ಬಾಲಕಿ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಪೋಷಕರ ಕಣ್ಣೀರಿಗೆ ಕಾರಣವಾಗಿದೆ.

ತುಮಕೂರು: ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ಅತ್ಯಂತ ವಿಷಾದನೀಯ ಘಟನೆ ನಡೆದಿದೆ. ಓದಿ ದೊಡ್ಡ ಅಧಿಕಾರಿಯಾಗಬೇಕೆಂಬ ಕನಸು ಹೊತ್ತಿದ್ದ 8ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ. ಹಾಸ್ಟೆಲ್‌ನ ಶೌಚಾಲಯದಲ್ಲಿ ಬಾಲಕಿ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಪೋಷಕರ ಕಣ್ಣೀರಿಗೆ ಕಾರಣವಾಗಿದೆ.

ಘಟನೆಯ ವಿವರ

ಮೃತ ಬಾಲಕಿಯನ್ನು ಕಾರಗಾನಹಟ್ಟಿ ಗ್ರಾಮದ ನರಸಿಂಹ ಮೂರ್ತಿ ಹಾಗೂ ಶಾರದಮ್ಮ ದಂಪತಿಯ ಪುತ್ರಿ ಪ್ರಿಯಾಂಕ (14) ಎಂದು ಗುರುತಿಸಲಾಗಿದೆ. ಈಕೆ ಪಾವಗಡ ತಾಲೂಕಿನ ರಂಗಸಮುದ್ರ ಗ್ರಾಮದ ಕಸ್ತೂರಿ ಬಾ ಗಾಂಧಿ ಬಾಲಕಿಯರ ಹಾಸ್ಟೆಲ್‌ನಲ್ಲಿ ಉಳಿದುಕೊಂಡು, ತ್ರೀಯಂಬಕೇಶ್ವರ ಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು.

ಕಳೆದ ಒಂದು ವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಪ್ರಿಯಾಂಕ, ಚಿಕಿತ್ಸೆಗಾಗಿ ತನ್ನ ಊರಿಗೆ ತೆರಳಿದ್ದಳು. ಗುಣಮುಖಳಾದ ನಂತರ ಆಗಸ್ಟ್ 7ರಂದು ಮತ್ತೆ ಹಾಸ್ಟೆಲ್‌ಗೆ ವಾಪಸ್ ಬಂದಿದ್ದಳು. ನಿನ್ನೆ ಮುಂಜಾನೆ ಹಾಸ್ಟೆಲ್‌ನ ಶೌಚಾಲಯಕ್ಕೆ ತೆರಳಿದ್ದ ವೇಳೆ ಹಠಾತ್ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾಳೆ. ಲೋ ಬಿಪಿ (Low BP) ಯಿಂದಾಗಿ ಆಕೆ ಪ್ರಜ್ಞೆ ತಪ್ಪಿದ್ದಾಳೆ ಎಂದು ಹೇಳಲಾಗಿದೆ. ತಕ್ಷಣವೇ ಹಾಸ್ಟೆಲ್ ಸಿಬ್ಬಂದಿ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರಾದರೂ, ದಾರಿ ಮಧ್ಯೆಯೇ ಬಾಲಕಿ ಕೊನೆಯುಸಿರೆಳೆದಿದ್ದಾಳೆ. ವೈದ್ಯರು ಹೃದಯಾಘಾತದಿಂದ ಸಾವು ಸಂಭವಿಸಿದೆ ಎಂದು ತಿಳಿಸಿದ್ದಾರೆ.

ಬಾಲಕಿಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಪೋಷಕರು ಹಾಗೂ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಸ್ಟೆಲ್‌ನಲ್ಲಿ ಕನಿಷ್ಠ ಮೂಲಭೂತ ಸೌಕರ್ಯಗಳ ಕೊರತೆಯಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಹಾಸ್ಟೆಲ್ ಆವರಣದಲ್ಲಿ ನೀರು ನಿಂತು ಸೊಳ್ಳೆಗಳ ಉತ್ಪತ್ತಿಯಾಗುತ್ತಿದೆ, ಸ್ವಚ್ಛತೆ ಕಾಪಾಡುತ್ತಿಲ್ಲ. ಇಂತಹ ಅವ್ಯವಸ್ಥೆಯೇ ಮಗುವಿನ ಅನಾರೋಗ್ಯಕ್ಕೆ ಮತ್ತು ಸಾವಿಗೆ ಕಾರಣ ಎಂದು ಪೋಷಕರು ಕಣ್ಣೀರು ಹಾಕಿದ್ದಾರೆ. ಘಟನಾ ಸ್ಥಳಕ್ಕೆ ಪಾವಗಡ ತಹಸಿಲ್ದಾರ್ ವೈ. ರವಿ ಹಾಗೂ ಪಾವಗಡ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಪೋಷಕರಿಗೆ ಹಸ್ತಾಂತರಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.