ಪ್ರಯಾಗ್‌ರಾಜ್‌ನಲ್ಲಿ ಪಲ್ಲವಿ ಸಿಂಗ್ ರಜಪೂತ್ ನೇತೃತ್ವದ ಹನಿಟ್ರ್ಯಾಪ್ ಜಾಲವೊಂದು ಡೇಟಿಂಗ್ ಆ್ಯಪ್‌ಗಳ ಮೂಲಕ ಪುರುಷರನ್ನು ಬಲೆಗೆ ಬೀಳಿಸಿ, 6 ಕೋಟಿ ರೂ.ಗೂ ಅಧಿಕ ಹಣ ಲೂಟಿ ಮಾಡಿದೆ. ಹೈಕೋರ್ಟ್ ವಕೀಲರೊಬ್ಬರು ದೂರು ನೀಡಿದ ನಂತರ ಈ ಬ್ಲ್ಯಾಕ್‌ಮೇಲ್ ದಂಧೆ ಬೆಳಕಿಗೆ ಬಂದಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಪ್ರಯಾಗ್‌ರಾಜ್ (ಉತ್ತರ ಪ್ರದೇಶ): ಡೇಟಿಂಗ್ ಆ್ಯಪ್‌ಗಳ ಮೂಲಕ ಪುರುಷರನ್ನು ಬಲೆಗೆ ಬೀಳಿಸಿ, ಅವರಿಂದ ಬರೋಬ್ಬರಿ 6 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಲೂಟಿ ಮಾಡಿರುವ ಭೀಕರ ಹನಿಟ್ರ್ಯಾಪ್ ಜಾಲವೊಂದು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಬೆಳಕಿಗೆ ಬಂದಿದೆ. ಹೈಕೋರ್ಟ್ ವಕೀಲರೊಬ್ಬರು ಈ ಸಂಬಂಧ ದೂರು ನೀಡಿದ ನಂತರ ಈ ದಂಧೆಯ ಕರಾಳ ಮುಖ ಅನಾವರಣಗೊಂಡಿದೆ.
ಈ ಹನಿಟ್ರ್ಯಾಪ್ ಜಾಲದ ಮುಖ್ಯಸ್ಥೆಯನ್ನು ಪಲ್ಲವಿ ಸಿಂಗ್ ರಜಪೂತ್ ಎಂದು ಗುರುತಿಸಲಾಗಿದೆ. ಈಕೆ 'ಸ್ವೀಟಿ ತಿವಾರಿ' ಸೇರಿದಂತೆ ವಿವಿಧ ಹೆಸರುಗಳಲ್ಲಿ ಸೋಶಿಯಲ್ ಮೀಡಿಯಾ ಮತ್ತು ಟೀಂಡರ್ (Tinder) ಡೇಟಿಂಗ್ ಆ್ಯಪ್‌ನಲ್ಲಿ ಸಕ್ರಿಯಳಾಗಿದ್ದಳು. ಈಕೆಗೆ ಇಬ್ಬರು ಮಹಿಳೆಯರು ಮತ್ತು ಇಬ್ಬರು ಪುರುಷರು ಸಾಥ್ ನೀಡುತ್ತಿದ್ದರು ಎಂದು ತಿಳಿದುಬಂದಿದೆ.
ದಂಧೆಯ ಹಾದಿ ಹೀಗಿತ್ತು..
ಮೊದಲು ಟೀಂಡರ್ ಅಥವಾ ಫೇಸ್‌ಬುಕ್ ಮೂಲಕ ಶ್ರೀಮಂತ ಪುರುಷರ ಜೊತೆ ಸ್ನೇಹ ಬೆಳೆಸುತ್ತಿದ್ದಳು. ಸ್ನೇಹ ಗಾಢವಾದ ನಂತರ ಅವರನ್ನು ಭೇಟಿಯಾಗುತ್ತಿದ್ದಳು. ಆ ಸಂದರ್ಭದಲ್ಲಿ ಪುರುಷರ ಜೊತೆಗಿನ ಆಪ್ತ ಕ್ಷಣಗಳನ್ನು ರಹಸ್ಯವಾಗಿ ಫೋಟೋ ಅಥವಾ ವಿಡಿಯೋ ಮಾಡಿಕೊಳ್ಳುತ್ತಿದ್ದಳು. ಈ ಫೋಟೋ ಮತ್ತು ವಿಡಿಯೋಗಳನ್ನು ಇಟ್ಟುಕೊಂಡು ಪುರುಷರನ್ನು ಬ್ಲ್ಯಾಕ್‌ಮೇಲ್ ಮಾಡಲು ಶುರು ಮಾಡುತ್ತಿದ್ದಳು. ಒಂದು ವೇಳೆ ಹಣ ನೀಡದಿದ್ದರೆ ಅತ್ಯಾ*ರ ಅಥವಾ ಕೊಲೆ ಯತ್ನದಂತಹ ಗಂಭೀರ ಕೇಸ್ ದಾಖಲಿಸುವುದಾಗಿ ಬೆದರಿಕೆ ಹಾಕುತ್ತಿದ್ದಳು.
5 ಮಂದಿ ಜೈಲು ಪಾಲು!
ದೂರಿನ ಪ್ರಕಾರ ಈಕೆಯ ಮಾತು ಕೇಳದ ಐವರು ಪುರುಷರು ಈಗಾಗಲೇ ಜೈಲು ಸೇರಿದ್ದಾರೆ. ಈಕೆ ನೀಡಿದ ಸುಳ್ಳು ದೂರಿನ ಆಧಾರದ ಮೇಲೆ ಪೊಲೀಸರು ಅವರನ್ನು ಬಂಧಿಸಿದ್ದರು. ಸಮಾಜದಲ್ಲಿ ಮರ್ಯಾದೆ ಹೋಗುತ್ತದೆ ಮತ್ತು ಜೈಲು ಶಿಕ್ಷೆಯಾಗುತ್ತದೆ ಎಂಬ ಭಯದಿಂದ ಅನೇಕರು ಈಕೆಗೆ ಲಕ್ಷಾಂತರ ರೂಪಾಯಿ ಹಣ ನೀಡಿದ್ದಾರೆ. ಹೀಗೆ ಈಕೆ ಇದುವರೆಗೆ ಸುಮಾರು 6 ಕೋಟಿ ರೂಪಾಯಿಗೂ ಅಧಿಕ ಹಣವನ್ನು ವಸೂಲಿ ಮಾಡಿದ್ದಾಳೆ ಎನ್ನಲಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದ ಕೆಲವು ಫೋಟೋಗಳು ವೈರಲ್ ಆಗಿವೆ. ಒಂದು ಫೋಟೋದಲ್ಲಿ ಮಹಿಳೆಯೊಬ್ಬಳು ಬೆಡ್ ಮೇಲೆ ಹರಡಿರುವ ನೋಟಿನ ಕಂತೆಗಳ ಪಕ್ಕದಲ್ಲಿ ಕುಳಿತಿರುವುದು ಕಂಡುಬಂದಿದೆ. ಇನ್ನೊಂದು ಫೋಟೋದಲ್ಲಿ ಈಕೆ ಶಸ್ತ್ರಾಸ್ತ್ರ ಹಿಡಿದು ಪೋಸ್ ನೀಡಿದ್ದಾಳೆ. ಈ ಫೋಟೋಗಳು ತನಿಖೆಯ ಪ್ರಮುಖ ಸಾಕ್ಷ್ಯಗಳಾಗುವ ಸಾಧ್ಯತೆ ಇದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪಲ್ಲವಿ ಸಿಂಗ್ ಮತ್ತು ಆಕೆಯ ತಂಡದ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಆನ್‌ಲೈನ್ ಡೇಟಿಂಗ್ ಆ್ಯಪ್‌ಗಳನ್ನು ಬಳಸುವವರು ಎಷ್ಟು ಜಾಗರೂಕರಾಗಿರಬೇಕು ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.


