ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಮಾತಿದೆ. ಆದರೆ ಇಲ್ಲೊಬ್ಬ ಪಾಪಿ ಪತಿ ಪತ್ನಿಯನ್ನ ಬರ್ಬರವಾಗಿ ಸಾಯಿಸಿ ಮೋರಿಗೆ ಎಸೆದಿದ್ದಾನೆ. ಅಷ್ಟಕ್ಕೂ ಇಬ್ಬರ ಮಧ್ಯೆ ಆಗಿದ್ದೇನು? ಈ ಸ್ಟೋರಿ ಓದಿ..

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಭೀಕರ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಕ್ಷುಲ್ಲಕ ಕಾರಣಕ್ಕೆ ಪತಿಯೇ ತನ್ನ ಪತ್ನಿಯನ್ನು ಕುತ್ತಿಗೆ ಹಿಸುಕಿ ಹತ್ಯೆ ಮಾಡಿ, ಮೃತದೇಹವನ್ನು ಕಸದ ಮೋರಿಗೆ ಎಸೆದಿರುವ ಅಮಾನವೀಯ ಘಟನೆ ಬೆಂಗಳೂರಿನ ವಿವೇಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಘಟನೆಯ ವಿವರ

ಗೀತಾ (48) ಕೊಲೆಯಾದ ದುರ್ದೈವಿ. ಈಕೆಯ ಪತಿ ಆಂಟೋನಿ (63) ಎಂಬಾತನೇ ಕೊಲೆ ಮಾಡಿದ ಆರೋಪಿ. ದಂಪತಿಗಳ ನಡುವೆ ಆಗಾಗ ಸಣ್ಣಪುಟ್ಟ ವಿಚಾರಕ್ಕೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಆರೋಪಿ ಆಂಟೋನಿ ಕುಡಿತದ ಚಟಕ್ಕೆ ದಾಸನಾಗಿದ್ದ ಎನ್ನಲಾಗಿದ್ದು, ಘಟನೆ ನಡೆದ ದಿನವೂ ಸಹ ಮದ್ಯಪಾನ ಮಾಡಿ ಮನೆಗೆ ಬಂದಿದ್ದ. ಈ ವೇಳೆ ಪತ್ನಿ ಗೀತಾ ಅವರೊಂದಿಗೆ ಗಲಾಟೆ ಆರಂಭಿಸಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿ ಆಕ್ರೋಶಗೊಂಡ ಆಂಟೋನಿ, ಗೀತಾ ಅವರ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ. ಅಷ್ಟೇ ಅಲ್ಲದೆ, ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಮೃತದೇಹವನ್ನು ಮನೆಯ ಸಮೀಪದ ಕಸದ ಮೋರಿಗೆ ಎಸೆದಿದ್ದಾನೆ.

ರಕ್ತದ ಗಾಯಗಳು ಪತ್ತೆ

ಮೃತದೇಹ ಪತ್ತೆಯಾದಾಗ ಗೀತಾ ಅವರ ದೇಹದ ಮೇಲೆ ಹಲವು ರಕ್ತದ ಗಾಯಗಳು ಕಂಡುಬಂದಿವೆ. ಇದು ಕೊಲೆ ಎಂಬುದು ಮೇಲ್ನೋಟಕ್ಕೆ ದೃಢಪಟ್ಟಿದೆ. ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದ ವಿವೇಕನಗರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ವಿವೇಕನಗರ ಪೊಲೀಸರು, ಕಾರ್ಯಾಚರಣೆ ನಡೆಸಿ ಆರೋಪಿ ಪತಿ ಆಂಟೋನಿಯನ್ನ ಬಂಧಿಸಿದ್ದಾರೆ. ಸದ್ಯ ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ಕೊಲೆಗೆ ನಿಖರವಾದ ಕಾರಣವೇನು ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.