ರೈಲು ಪ್ರಯಾಣದಲ್ಲಿ ಮೊಬೈಲ್ ಬಳಕೆ ಹೆಚ್ಚು. ಅದರಲ್ಲೂ ರೀಲ್ಸ್, ಸಿನಿಮಾ, ವಿಡಿಯೋಗಳನ್ನು ನೋಡುತ್ತಾ ಪ್ರಯಾಣದಲ್ಲಿ ಕಾಲಕಳೆಯುವುದು ಸಾಮಾನ್ಯ.ನಿಯಮದಲ್ಲಿ ಕೆಲ ತಿದ್ದುಪಡಿ ತರಲಾಗಿದೆ. ರೀಲ್ಸ್ ನೋಡುತ್ತಾ ಈ ನಿಯಮ ಉಲ್ಲಂಘಿಸಿದರೆ ದಂಡ ಬೀಳುವುದು ಖಚಿತ.
ನವದೆಹಲಿ (ಅ.19) ಭಾರತದ ಸಾರಿಗೆಯಲ್ಲಿ ರೈಲು ಜೀವನಾಡಿಯಾಗಿ ಗುರುತಿಸಿಕೊಂಡಿದೆ. ಬಹುತೇಕರು ರೈಲು ಸಾರಿಗೆಯನ್ನೇ ನೆಚ್ಚಿಕೊಂಡಿದ್ದಾರೆ. ಹೀಗಾಗಿ ಪ್ರತಿ ದಿನ, ಪ್ರತಿ ರೈಲು ತುಂಬಿ ತುಳುಕುತ್ತಿರುತ್ತದೆ. ರೈಲು ಪ್ರಯಾಣದ ವೇಳೆ ಪ್ರಯಾಣಿಕರು ಪಾಲಿಸಬೇಕಾದ ಹಲವು ನಿಯಮಗಳಿವೆ. ಈ ಪೈಕಿ ಕೆಲ ನಿಯಮದಲ್ಲಿ ತಿದ್ದುಪಡಿ ತರಲಾಗಿದೆ. ಹೀಗಾಗಿ ಹಳೇ ನಿಯಮದಂತೆ ಇದೀಗ ರೈಲು ಪ್ರಯಾಣ ಮಾಡಿದರೆ ದಂಡ ಬೀಳುವ ಸಾಧ್ಯತೆ ಇದೆ. ಹೊಸ ನಿಯಮದಡಿ ನೀವು ರೀಲ್ಸ್ ನೋಡುತ್ತಾ ಪ್ರಯಾಣ ಮಾಡುವುದರಲ್ಲಿ ತಪ್ಪೇನಿಲ್ಲ. ಆದರೆ ರೀಲ್ಸ್ ನೋಡುವಾಗ ಈ ನಿಯಮ ಉಲ್ಲಂಘಿಸಿದರೆ ದಂಡ ಬೀಳುವುದು ಖಚಿತ.
ಏನಿದು ರೈಲ್ವೇ ಹೊಸ ನೀತಿ?
ರೈಲು ಪ್ರಯಾಣದಲ್ಲಿ ಪ್ರಯಾಣಿಕರ ಸುರಕ್ಷತೆ, ಆರಾಮಾದಾಯಕ ಪ್ರಯಾಣಕ್ಕೆ ಆದ್ಯತೆ ನೀಡಲಾಗುತ್ತದೆ. ಆದರೆ ಕಿಕ್ಕಿರಿದು ತುಂಬಿದ ರೈಲಿನಲ್ಲಿ ಎಲ್ಲರೂ ಮೊಬೈಲ್ ಬಳಸುತ್ತಾರೆ. ಆದರೆ ಹೊಸ ನೀತಿ ಪ್ರಕಾರ, ಇನ್ಮುಂದೆ ರೈಲಿನಲ್ಲಿ ಮೊಬೈಲ್ ರೀಲ್ಸ್ ನೋಡುವಾಗ ಇಯರ್ಫೋನ್ ಕಡ್ಡಾಯವಾಗಿ ಹಾಕಬೇಕು. ಮೊಬೈಲ್ ಸ್ಪೀಕರ್ ಶಬ್ದ ಪಕ್ಕದಲ್ಲಿ ಕುಳಿತ ಇತರ ಪ್ರಯಾಣಿಕರಿಗೆ ಸಮಸ್ಯೆ ಆಗಬಾರದು. ಇಷ್ಟೇ ಅಲ್ಲ, ಇದರ ಜೊತೆಗೆ ಕೆಲ ಕಟ್ಟು ನಿಟ್ಟಿನ ನೀತಿಗಳನ್ನು ಪಾಲಿಸಬೇಕು.
ತುಂಬಿದ ರೈಲಿನಲ್ಲಿ ನೀವು ಫೋನ್ ಮಾಡುವಾಗ ಲೌಡ್ ಸ್ಪೀಕರ್ ಇಡುವಂತಿಲ್ಲ. ಫೋನ್ನಲ್ಲಿ ಹಾಡು ಸೇರಿದಂತೆ ಮ್ಯೂಸಿಕ್ ಹಾಕಲು ಇಯರ್ಫೋನ್, ಇಯರ್ ಬಡ್ ಸೇರಿದಂತೆ ಇತರ ಸಾಧನಗಳ ಬಳಕೆ ಮಾಡಬೇಕು. ಫೋನ್ ಲೌಡ್ ಸ್ಪೀಕರ್, ಫೋನ್ ಸ್ಪೀಕರ್ ಮೂಲಕ ಹಾಡು, ರೀಲ್ಸ್, ಮೂವಿ ಸೇರಿದಂತೆ ಏನೂ ಬಳಕೆ ಮಾಡುವಂತಿಲ್ಲ. ಪ್ರಮುಖವಾಗಿ ಇತರ ಪ್ರಯಾಣಿಕರಿಗೆ ಕಿರಿಕಿರಿಯಾಗುವ ಕಾರಣ ನಿಮಯ ಕಟ್ಟು ನಿಟ್ಟಾಗಿ ಜಾರಿಗೊಳಿಸಲಾಗಿದೆ.
ದುಬಾರಿ ದಂಡ ಅಥವಾ ಜೈಲು ಶಿಕ್ಷೆ
ರೈಲು ಪ್ರಯಾಣದ ವೇಳೆ ಫೋನ್ ಹಾಗೂ ಸ್ಪೀಕರ್ ನಿಯಮ ಉಲ್ಲಘಿಸಿದರೆ ದುಬಾರಿ ದಂಡ ವಿಧಿಸಲಾಗುತ್ತದೆ. 1000 ರೂಪಾಯಿಯಿಂದ 5000 ರೂಪಾಯಿವರೆಗೆ ದಂಡ ವಿಧಿಸಲಾಗುತ್ತದೆ. ಪದೇ ಪದೇ ನಿಯಮ ಉಲ್ಲಂಘನೆ ಮಾಡಿದರೆ ಗರಿಷ್ಠ 5000 ರೂಪಾಯಿ ದಂಡ ಹಾಗೂ ಜೈಲು ಶಿಕ್ಷೆ ವಿಧಿಸುವ ಅವಕಾಶವೂ ಇದೆ. ಹೀಗಾಗಿ ಪ್ರಯಾಣಿಕರು ಇನ್ನು ರೈಲು ಪ್ರಯಾಣದ ವೇಳೆ ರೀಲ್ಸ್ ಸೇರಿದಂತೆ ಮೊಬೈಲ್ ಬಳಕೆ ಮಾಡುವಾಗ ಇಯರ್ಫೋನ್ ಬಳಕೆ ದಂಡದಿಂದ ದೂರವಿರಲು ನೆರವಾಗಲಿದೆ.
ದಕ್ಷಿಣ ರೈಲ್ವೇಯಿಂದ ಎಚ್ಚರಿಕೆ
ಸೌಥರ್ನ್ ರೈಲ್ವೇ ಇದೀಗ ನಿಯಮದಲ್ಲಿ ತಿದ್ದುಪಡಿ ಕುರಿತು ಮಹತ್ವದ ಆದೇಶ ಹೊರಡಿಸಿದೆ. ಎಲ್ಲಾ ಆರು ಡಿವಿಶನ್ ಝೋನ್ಗಳಿಗೂ ಈ ಆರ್ಡರ್ ನೀಡಲಾಗಿದೆ. ಜನ ವಿಶ್ವಾಸ ಕಾಯ್ದೆ 2026ರ ಅಡಿಯಲ್ಲಿ ಟಿಕೆಟ್ ಕಲೆಕ್ಟರ್(ಟಿಸಿ) ಈ ಕುರಿತು ಪರಿಶಿಲಿಸಿ ದಂಡ ವಿಧಿಸಲಿದ್ದಾರೆ.
ರೈಲು ನಿಲ್ದಾಣ , ಭಾರತೀಯ ರೈಲ್ವೇ ಆ್ಯಪ್ ಸೇರಿದಂತೆ ಎಲ್ಲಡೆ ಈ ಸಂದೇಶ ನೀಡಲಾಗುತ್ತಿದೆ. ಸಾರ್ವಜನಿಕ ಸಾರಿಗೆಯಲ್ಲಿ ಪ್ರಾಯಣ ಮಾಡುವಾಗ ಪಾಲಿಸಬೇಕಾದ ಕನಿಷ್ಠ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ ನೀಡಲಾಗುತ್ತಿದೆ. ಈ ಕುರಿತು ರೈಲ್ವೇ ಇಲಾಖೆ ಹಲವು ಬಾರಿ ಪ್ರಯಾಣಿಕರಲ್ಲಿ ಮನವಿ ಮಾಡಿದೆ. ಇದೀಗ ಕಟ್ಟು ನಿಟ್ಟಿನ ನಿಯಮದ ಮೂಲಕ ಪ್ರಯಾಣಿಕರನ್ನು ಎಚ್ಚರಿಸಿದೆ


