ಸ್ಕಂದ ಆಗುಂಬೆ

ಆಗುಂಬೆ, ಮಲೆನಾಡಿನ ಮಡಿಲಿನಲ್ಲಿರುವ ಒಂದು ಪುಟ್ಟಊರು. ಮಳೆಗಾಲದಲ್ಲಿ ಸೂರ್ಯನ ಅಸ್ತಿತ್ವವನ್ನೂ ಮರೆಯಿಸುವಂತೆ ಗಾಢವಾದ ಮೋಡಗಳಿಂದ ಆವೃತವಾಗಿ ಭೋರ್ಗರೆವ ಮಳೆಯಲ್ಲಿ ತೊಯ್ಯುವ ಊರು ಮಳೆಗಾಲ ಮುಗಿಯುತ್ತಿದ್ದಂತೆಯೇ ಸೂರ್ಯಾಸ್ತಮಾನದ ಭವ್ಯ ನೋಟಕ್ಕೆ ಅವಕಾಶ ಕಲ್ಪಿಸಿಕೊಡುತ್ತದೆ. ಹೊರಜಗತ್ತಿಗೆ ದಕ್ಷಿಣ ಭಾರತದ ಚಿರಾಪುಂಜಿ ಎಂದು ಪರಿಚಿತವಾಗಿರುವುದರಿಂದ ಆಗುಂಬೆಯ ಹೆಸರನ್ನು ಕೇಳದೇ ಇರುವವರ ಸಂಖ್ಯೆ ವಿರಳಾತಿವಿರಳ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಮಾತಿಗೆ ತಕ್ಕಂತೆ ಭೂ ವಿಸ್ತೀರ್ಣದಲ್ಲಿ ಚಿಕ್ಕ ಊರಾದರೂ ತನ್ನ ವಿಶಿಷ್ಟತೆಗಳ ಕಾರಣದಿಂದ ಪ್ರಸಿದ್ಧಿಯಾಗಿದೆ. ಆಗುಂಬೆಯ ಹಿನ್ನೆಲೆಯನ್ನು ಕೆದಕುತ್ತಾ ಹೋದರೆ ಘಾಟಿಯ ತಿರುವುಗಳಂತೆಯೇ ಹಲವು ಕತೆಗಳು ಒಂದರ ಹಿಂದೊಂದು ತೆರೆದುಕೊಳ್ಳುತ್ತವೆ.

ದೇಶ ಸುತ್ತಲು ಬಜೆಟ್ ಪ್ರಾಬ್ಲಂ? ಡೋಂಟ್ ವರಿ, ಸರ್ಕಾರ ಭರಿಸುತ್ತೆ ಪ್ರವಾಸ ವೆಚ್ಚ

ಆಗುಂಬೆಯ ಹಳೆ ಕತೆ ಗೊತ್ತುಂಟಾ?

ಶ್ರೀ ಮದಗಂಬಾಪುರ ಎಂಬುದು ಆಗುಂಬಾಪುರವಾಗಿ ನಂತರ ಆಗುಂಬೆ ಎಂಬ ಹೆಸರನ್ನು ಅಂಟಿಸಿಕೊಂಡ ಈ ಊರು ಪ್ರವಾಸಿತಾಣವೆಂಬ ಪಟ್ಟವನ್ನು ಹೊತ್ತಿದ್ದರೂ ಅಭಿವೃದ್ಧಿಯ ವಿಚಾರದಲ್ಲಿ ಮಾತ್ರ ಹಿಮ್ಮುಖವಾಗಿ ಚಲಿಸಿದಂತೆ ಕಾಣುತ್ತದೆ. ಅಲ್ಲಿಯ ಜನರೇ ಹೇಳುವಂತೆ ಹಲವು ವರ್ಷಗಳ ಹಿಂದೆ ವ್ಯಾಪಾರ, ವಹಿವಾಟು ಚಟುವಟಿಕೆಗಳ ಕೇಂದ್ರವಾಗಿದ್ದ ಆಗುಂಬೆ, ಘಟ್ಟಪ್ರದೇಶ ಹಾಗೂ ಕರಾವಳಿಯನ್ನು ಬೆಸೆಯುವ ಬಹುಮುಖ್ಯ ಕೊಂಡಿ ಎಂದು ಗುರುತಿಸಿಕೊಂಡಿದ್ದರಿಂದ ಘಾಟಿಯ ಮೂಲಕ ಹಾದು ಹೋಗಲು ಉಗಿಯಿಂದ ಓಡುವ ಬಸ್‌ ಸೌಲಭ್ಯವಿತ್ತಂತೆ. ಆದರೆ, ಇದ್ದಿದ್ದು ಒಂದೇ ಬಸ್‌ ಆಗಿದ್ದರಿಂದ ಘಟ್ಟಇಳಿಯಲು ಬಂದವರು, ಮುಂಬಯಿಯಂತಹ ನಗರಗಳಿಗೆ ತೆರಳಬೇಕಾದವರು ಆಗುಂಬೆಯಲ್ಲಿ ತಮ್ಮ ಸರತಿ ಬರುವ ತನಕ ಉಳಿದು ನಂತರ ತೆರಳಬೇಕಾಗುತ್ತಿತ್ತು. ಇಂತಹ ಪ್ರಯಾಣಿಕರೇ ಆಗುಂಬೆಯ ವ್ಯಾಪಾರಸ್ಥರ ಆದಾಯದ ಮೂಲವಾಗಿದ್ದರು. ಆಗುಂಬೆಯಲ್ಲಿ ಕಾರ್ಖಾನೆ, ಉದ್ಯಮವನ್ನು ಆರಂಭಿಸಲು ಹಲವು ಪ್ರಯತ್ನಗಳು ನಡೆದಿತ್ತಾದರೂ ಪರಿಸರವಾದಿಗಳ ಪ್ರತಿರೋಧದ ಫಲವಾಗಿ ಅಂತಹ ಯೋಜನೆಗಳು ವಿಫಲಗೊಂಡವು. ಆಗುಂಬೆಯ ಬಳಿಯಿರುವ ನಿಶಾನಿ ಗುಡ್ಡದಿಂದ ಮ್ಯಾಂಗನೀಸ್‌ ಅದಿರನ್ನು ತೆಗೆದು ಸಾಗಿಸುವ ಸಲುವಾಗಿ ಕಾಡನ್ನು ಕಡಿದು ರಸ್ತೆಗಳನ್ನು ಮಾಡಲಾಗಿತ್ತಾದರೂ ಕ್ರಮೇಣ ಆ ಹಾದಿಗಳೂ ಮುಚ್ಚಿ ಹೋದವು. ಮ್ಯಾಂಗನೀಸ್‌ ಅದಿರನ್ನು ತೆಗೆದು ಅದರಿಂದ ಸಿಗುತ್ತಿದ್ದ ಕಿಟ್ಟವನ್ನು (ತ್ಯಾಜ್ಯ) ಒಂದೆಡೆ ಸುರಿದ ಪರಿಣಾಮವಾಗಿ ನಿರ್ಮಿತವಾದ ಗುಡ್ಡವೆಂಬ ಕಾರಣಕ್ಕೆ ಇಂದಿಗೂ ಅಲ್ಲಿನ ಒಂದು ಪ್ರದೇಶವನ್ನು ಕಿಟ್ಟನ ಗುಡ್ಡ ಎಂದೇ ಕರೆಯಲಾಗುತ್ತದೆ.

ಪೂರ್ವ-ಪಶ್ಚಿಮಗಳ ಸಂಗಮ ಗೋಕರ್ಣ; ಇಲ್ಲಿನ ಕಡಲ ತೀರದ ನೋಟ ವಿಹಂಗಮ!

ಮತ್ತೊಂದು ಕತೆ

ಆಗುಂಬೆಯಲ್ಲಿ ವರ್ಷಕ್ಕೊಮ್ಮೆ ನಡೆಯುವ ಶ್ರೀ ವೇಣುಗೋಪಾಲಸ್ವಾಮಿ ಜಾತ್ರಾ ಮಹೋತ್ಸವ ಸುತ್ತಮುತ್ತಲಿನ ಊರವರನ್ನು ಒಂದೆಡೆ ಸೇರಿಸುವ ಮುಖ್ಯ ಉತ್ಸವ. ಇಲ್ಲಿ ವೇಣುಗೋಪಾಲಸ್ವಾಮಿ ದೇವಸ್ಥಾನ ನಿರ್ಮಾಣವಾಗಿದ್ದಕ್ಕೂ ಒಂದು ಕತೆಯಿದೆ. ಬಹಳ ವರ್ಷಗಳ ಹಿಂದೆ ವೇಣುಗೋಪಾಲ ಸ್ವಾಮಿ ವಿಗ್ರಹವನ್ನು ಬೇರೊಂದು ಊರಿನಿಂದ ತನ್ನೂರಿಗೆ ಕೊಂಡೊಯ್ಯುತ್ತಿದ್ದ ವ್ಯಕ್ತಿ ಆಗುಂಬೆಗೆ ಬರುವಷ್ಟರಲ್ಲಿ ಕತ್ತಲಾದ ಕಾರಣ ಅಲ್ಲಿಯೇ ತಂಗುತ್ತಾನೆ. ಆ ರಾತ್ರಿ ಆತನ ಕನಸಿನಲ್ಲಿ ಶ್ರೀಕೃಷ್ಣ (ವೇಣುಗೋಪಾಲ) ಪ್ರತ್ಯಕ್ಷನಾಗಿ ತನ್ನ ಮೂರ್ತಿಯನ್ನು ಅಲ್ಲಿಯೇ ಪ್ರತಿಷ್ಠಾಪಿಸುವಂತೆ ಸೂಚಿಸಿದನಂತೆ. ಆ ವಿಗ್ರಹಕ್ಕೆ ಕಾವಲುಗಾರರಾಗಿ ಮುಂದಿದ್ದ ಗುತ್ಯಮ್ಮ ಆಗುಂಬೆಯಿಂದ ಎರಡು ಕಿ.ಮೀ ದೂರದಲ್ಲಿರುವ ತಲ್ಲೂರಂಗಡಿಯಲ್ಲಿ ನೆಲೆಸಿದಳಂತೆ. ವಿಗ್ರಹದ ಹಿಂದೆ ಕಾವಲಿಗಿದ್ದ ಭೂತರಾಜ ಆಗುಂಬೆ ಘಾಟಿಯ ಮೂರನೇ ಸುತ್ತಿನಲ್ಲಿ ನೆಲೆಯೂರಿದನಂತೆ. ಒಮ್ಮೆ ಆ ಕಲ್ಲನ್ನು ಒಡೆಯಲು ಮುಂದಾದಾಗ ಅದು ಆನೆಯಂತೆ ಘೀಳಿಟ್ಟಿತ್ತಲ್ಲದೇ ಅದು ದೂರದಿಂದ ನೋಡಲು ಆನೆಯ ಮುಖದಂತಿದೆ ಎಂಬೆಲ್ಲಾ ಪ್ರತೀತಿ, ಕಾರಣಗಳಿಂದ ಇಂದಿಗೂ ಅದನ್ನು ಆನೆಕಲ್ಲು ಎಂದು ಕರೆಯಲಾಗುತ್ತದೆ. ಆಗುಂಬೆ ಘಾಟಿಯ ಮೂಲಕ ಪ್ರಯಾಣಿಸುವಾಗ ಅರ್ಧ ರಸ್ತೆಯ ತನಕ ಚಾಚಿಕೊಂಡಿರುವ ಆನೆಕಲ್ಲನ್ನು ಈಗಲೂ ಕಾಣಬಹುದು.

ಈ ಘಾಟಿಗೆ ತಿರುವುಗಳೆಷ್ಟೋ..

ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಯನ್ನು ಸಂಪರ್ಕಿಸುವ ಮುಖ್ಯಕೊಂಡಿಯಾಗಿರುವ ಹದಿನಾಲ್ಕು ಸುತ್ತಿನ ಆಗುಂಬೆ ಘಾಟಿಯ ಕಡಿದಾದ ತಿರುವುಗಳು, ಘಾಟಿಯುದ್ದಕ್ಕೂ ಕಾಣಸಿಗುವ ಹಸಿರುಹೊದ್ದ ಪರಿಸರ, ಮೇಲಿನ ಸುತ್ತುಗಳಲ್ಲಿ ಕಿವಿ ಹೊಕ್ಕುವ ತಂಪು ಗಾಳಿ, ಕೆಳಗಿನ ಸುತ್ತುಗಳಲ್ಲಿ ಆಗುವ ಬೆಚ್ಚನೆಯ ಅನುಭವ, ಎರಡು ಜಿಲ್ಲೆಗಳ ಮಧ್ಯೆ ಹಂಚಿಕೆಯಾಗಿರುವ ಘಾಟಿ, ಮೇಲ್ಭಾಗದಲ್ಲಿನ ಘಾಟಿ ಚೌಡಮ್ಮನ ಕೆರೆ, ಮಳೆಕಾಡು, ಸಿಂಹಬಾಲದ ಕೋತಿ, ಮುಸಿಯಗಳ ಕೂಗು, ಕಾಳಿಂಗ ಸರ್ಪಗಳ ಅಧ್ಯಯನ ಕೇಂದ್ರ, ಸಸ್ಯ ವೈವಿಧ್ಯತೆ, ಇವೆಲ್ಲದರ ಮಧ್ಯೆ ಸದ್ದುಗದ್ದಲವಿಲ್ಲದೇ ತಣ್ಣಗೆ ನಿಂತಿರುವ ಆಗುಂಬೆಯ ಸಣ್ಣಪೇಟೆ ನೋಡುಗರನ್ನು ವಿಸ್ಮಯಗೊಳಿಸುತ್ತದೆ.

ಹೋಟೆಲ್ ಬುಕ್ ಮಾಡುತ್ತಿದ್ದೀರಾ? ಈ ಮಾಹಿತಿ ಕಲೆ ಹಾಕಿದ್ರಾ?

ಕುಂದಾದ್ರಿಯ ಸೂರ್ಯೋದಯ, ಆಗುಂಬೆಯ ಸೂರ್ಯಾಸ್ತ

ಆಗುಂಬೆಯಿಂದ ಕೊಂಚ ಆಚೀಚೆ ಹೆಜ್ಜೆಯಿಟ್ಟರೆ ಇನ್ನೊಂದು ಮಾಯಾಲೋಕ ತೆರೆದುಕೊಳ್ಳುತ್ತದೆ. ಆಗುಂಬೆಯ ಸುತ್ತಮುತ್ತಲು ಕೆಲವೇ ಕಿಲೋಮೀಟರ್‌ ಅಂತರದಲ್ಲಿರುವ ಒನಕೆ ಅಬ್ಬಿ, ಜೋಗಿಗುಂಡಿ, ಬರ್ಕಣ ಎಂಬ ಹೆಸರಿನ ಜಲಪಾತಗಳು ಹಸಿರು ಲೋಕದ ಮಧ್ಯದಲ್ಲಿ ಧುಮ್ಮಿಕ್ಕುತ್ತಾ ಬೆಳ್ಳಿಗೆರೆಗಳಂತೆ ಕಂಗೊಳಿಸುತ್ತವೆ. ಜಲಪಾತಗಳನ್ನು ತಲುಪುವ ಹಾದಿ ದಟ್ಟಕಾನನವನ್ನು ಸೀಳಿಕೊಂಡು ಹೋಗುವುದರಿಂದ ಅಲ್ಲಿ ಹೆಜ್ಜೆ ಹೆಜ್ಜೆಗೂ ಮಲೆನಾಡಿನ ಚಿಕ್ಕಪುಟ್ಟಸಂಗತಿಗಳನ್ನು, ಅವ್ಯಕ್ತ ಕತೆಗಳನ್ನು, ಕಾಡಿನ ಮೌನವನ್ನು ಅನುಭವಿಸಬಹುದು. ಆಗುಂಬೆಯ ಸಂಜೆ ಸೂರ್ಯ ಕರಗುವುದಕ್ಕೆ ಸಾಕ್ಷಿಯಾದರೆ ಆಗುಂಬೆಯಿಂದ ಹದಿನೆಂಟು ದೂರದಲ್ಲಿರುವ ಕುಂದಾದ್ರಿ ಸೂರ್ಯೋದಯದ ಸೊಬಗನ್ನು ಕಟ್ಟಿಕೊಡುತ್ತದೆ.

ಅಂದಹಾಗೆ, ಮಳೆಗಾಲವನ್ನು ಅನುಭವಿಸುತ್ತಾ ಇಂಬಳಗಳಿಗೆ ರಕ್ತದಾನ ಮಾಡಲು ಇಚ್ಛೆಯಿರುವವರು ಜೂನ್‌ನ ನಂತರ ಹಾಗೂ ಸೂರ್ಯಾಸ್ತ, ಸೂರ್ಯೋದಯಗಳ ಸೊಬಗಿನ ಜೊತೆಗೆ ಜಲಪಾತಗಳನ್ನು ನೋಡ ಬಯಸುವವರು ಡಿಸೆಂಬರ್‌ನಿಂದ ಮೇ ತಿಂಗಳ ಒಳಗೆ ಆಗುಂಬೆಗೆ ಬರಬಹುದು. ಮಲೆನಾಡಿನ ಸೂಕ್ಷ್ಮ ಪ್ರದೇಶವಾಗಿರುವ ಕಾರಣ ಪರಿಸ್ಥಿತಿಗೆ ಅನುಗುಣವಾಗಿ ಕೆಲವೊಮ್ಮೆ ಕೆಲವು ತಾಣಗಳ ಪ್ರವೇಶಕ್ಕೆ ನಿರ್ಬಂಧನೆ ಇರುತ್ತದೆ. ಆದ್ದರಿಂದ ಅರಣ್ಯ ಇಲಾಖೆಯವರ ಮಾರ್ಗದರ್ಶನ ಪಡೆದು ತೆರಳುವುದು ಉತ್ತಮ.

ಆಗುಂಬೆಯನ್ನು ನೋಡುವ ಮನಸ್ಸಿದ್ದರೂ ಅದನ್ನು ಈಡೇರಿಸಿಕೊಳ್ಳಲಾಗದವರಿಗೆಂದೇ ಮಾಲ್ಗುಡಿ ಡೇಸ್‌ ಸೀರೀಸ್‌, ಆಕಸ್ಮಿಕ ಚಿತ್ರದ ಆಗುಂಬೆಯ ಪ್ರೇಮ ಸಂಜೆಯ... ಹಾಡು ಇತ್ಯಾದಿ ಅಭ್ಯವಿದೆ. ನೋಡಿ, ಕೇಳಿ, ಆನಂದಿಸಿ!