ಬೆಂಗಳೂರು (ಜು.16): ಅಮೆರಿಕಾ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಫೇಸ್ಬುಕ್ ತನ್ನ ಹೊಸ ಯೋಜನೆಗೆ ತಾತ್ಕಾಲಿಕವಾಗಿ ಬ್ರೇಕ್ ಹಾಕಿದೆ.

ಫೇಸ್ಬುಕ್ ತರಲುದ್ದೇಶಿಸಿದ್ದ ಲಿಬ್ರಾ ಎಂಬ ಕ್ರಿಪ್ಟೊಕರೆನ್ಸಿ ಬಗ್ಗೆ ಅಮೆರಿಕಾ ಖಜಾನೆ ಕಾರ್ಯದರ್ಶಿ ಇತ್ತೀಚೆಗೆ ಆತಂಕ ವ್ಯಕ್ತಪಡಿಸಿದ್ದರು. ಕ್ರಿಪ್ಟೊಕರೆನ್ಸಿ ಕಾನೂನು ಬಾಹಿರ ಚಟುವಟಿಕೆಗಳಿಗೆ ದುರ್ಬಳಕೆಯಾಗುವ ಸಾಧ್ಯತೆಯಿದೆ ಎಂದಿದ್ದರು.

ಇದರ ಬೆನ್ನಲ್ಲೇ, ಈ ಎಲ್ಲಾ ವಿಚಾರಗಳು ಸ್ಪಷ್ಟವಾಗುವವರೆಗೂ ಈ ಪ್ರಾಜೆಕ್ಟ್‌ಗೆ ಸಂಬಂಧಿಸಿ ಮುಂದಡಿಯಿಡಲ್ಲ ಎಂದು ಫೇಸ್ಬುಕ್ ಸ್ಪಷ್ಟಪಡಿಸಿದೆ.

ಇದನ್ನು ಓದಿ | ಫೇಸ್‌ಬುಕ್‌ನಿಂದ ‘ಲೀಬ್ರಾ’ ಕರೆನ್ಸಿ ಬಿಡುಗಡೆ; ಏನಿದರ ಉಪಯೋಗ?

ಸಾಂಪ್ರದಾಯಿಕ ಕರನ್ಸಿ ಜೊತೆ ಪೈಪೋಟಿ ನಡೆಸಲು ಅಥವಾ ಹಾಲಿ ಹಣಕಾಸು ವ್ಯವಸ್ಥೆಯಲ್ಲಿ ಹಸ್ತಕ್ಷೇಪ ನಡೆಸುವ ಉದ್ದೇಶ ನಮಗಿಲ್ಲ ಎಂದು ಫೇಸ್ಬುಕ್ ಇದೇ ಸಂದರ್ಭದಲ್ಲಿ ವಿಷದಪಡಿಸಿದೆ.

ಕಳೆದ ತಿಂಗಳು ಲಿಬ್ರಾ ಎಂಬ ಕ್ರಿಪ್ಟೊಕರೆನ್ಸಿಯನ್ನು ಚಲಾವಣೆಗೆ ತರುವ ಬಗ್ಗೆ ಫೇಸ್ಬುಕ್ ಪ್ರಕಟಿಸಿತ್ತು. ಅದರ ಬೆನ್ನಲ್ಲೇ, ಫೇಸ್ಬುಕ್ ಹೊಸ ಯೋಜನೆಗೆ ಅಮೆರಿಕಾದ ಹಣಕಾಸು ತಜ್ಞರಿಂದ ಭಾರೀ ಆಕ್ಷೇಪ ವ್ಯಕ್ತವಾಗಿತ್ತು. 

ಹೊಸ ಕರೆನ್ಸಿಯ ಸ್ವರೂಪ, ಬಳಕೆ, ಸುರಕ್ಷತೆ ಮತ್ತು ಗ್ರಾಹಕರ ಹಿತಾಸಕ್ತಿ ಬಗ್ಗೆ ಪ್ರಶ್ನೆಗಳನ್ನು ಕೇಳಿರುವ ಅವರು, ಕ್ರಿಪ್ಟೋಕರೆನ್ಸಿಗಳು ಅಕ್ರಮ ಹಣಕಾಸು ವ್ಯವಹಾರಗಳಿಗೆ ಬಳಕೆಯಾಗುತ್ತವೆ ಎಂಬ ಆತಂಕ ಹೊರಹಾಕಿದ್ದರು.