ಹೊಸ ಉದ್ಯಮಕ್ಕೆ ಕೈ ಹಾಕಿದ ಫೇಸ್ಬುಕ್! ನಿಮಗೇನು ಲಾಭ?
ಡಿಜಿಟಲ್ ತಂತ್ರಜ್ಞಾನ ಬೆಳೆಯುತ್ತಾ ಹೋದಂತೆ ಕಳೆದೆರಡು ದಶಕಗಳಲ್ಲಿ ಬಹಳಷ್ಟು ವಿಚಾರಗಳು, ಉಪಕರಣಗಳು ಹಾಗೂ ವಸ್ತುಗಳು ಅಪ್ರಸ್ತುತವಾಗಿವೆ. ಯಾವ ಮಟ್ಟಿಗೆ ಅಂದರೆ, ಹೆಣವೂ ಬಾಯಿ ಬಿಡುವ ‘ಹಣ’ಕ್ಕೂ ಪರ್ಯಾಯ ವ್ಯವಸ್ಥೆಗಳು ಹುಟ್ಟಿಕೊಂಡಿವೆ.
ಬೆಂಗಳೂರು (ಜೂ.18): ಜಗತ್ತಿನಾದ್ಯಂತ ಕಡಿಮೆ ಸಮಯದಲ್ಲಿ ಹೆಚ್ಚು ಜನಪ್ರಿಯವಾಗಿರುವ ಸೋಶಿಯಲ್ ಮೀಡಿಯಾಗಳ ಪೈಕಿ ಫೇಸ್ಬುಕ್ ಪ್ರಮುಖವಾದುದ್ದು. ಗೆಳೆಯರನ್ನು ಜೋಡಿಸುವ ಕೆಲಸದಿಂದ ಆರಂಭವಾದ ಫೇಸ್ಬುಕ್, ಇಂದು ದೊಡ್ಡ ಮಾಹಿತಿ ಮತ್ತು ತಂತ್ರಜ್ಞಾನ ಉದ್ಯಮವಾಗಿ ಬೆಳೆದಿದೆ.
ಈಗ ಲಭ್ಯವಿರುವ ಮಾಹಿತಿ ಪ್ರಕಾರ, ಡಿಜಿಟಲ್ ಕರೆನ್ಸಿ ವ್ಯವಹಾರವನ್ನು ಮುಖ್ಯವಾಹಿನಿಗೆ ತರಲು ಫೇಸ್ಬುಕ್ ಸಿದ್ಧತೆ ನಡೆಸಿದೆ. ಸರ್ಕಾರಿ ಮತ್ತು ಹಣಕಾಸು ಸಂಸ್ಥೆಗಳ ಅನುಮೋದನೆ ಬಳಿಕ ಲಿಬ್ರಾ ಎಂಬ ಕ್ರಿಪ್ಟೊಕರೆನ್ಸಿಯನ್ನು ಅಭಿವೃದ್ಧಿಪಡಿಸುತ್ತಿದೆ.
ವೀಸಾ, ಮಾಸ್ಟರ್ ಕಾರ್ಡ್, ಪೇಪಾಲ್ ಮತ್ತು ಉಬರ್‌ನಂತಹ ಹತ್ತಾರು ಕಂಪನಿಗಳು ಈಗಾಗಲೇ ಫೇಸ್ಬುಕ್ ಹೊಸ ಯೋಜನೆಗೆ ಕೈಜೋಡಿಸಿವೆ. ಕಂಪನಿಯು ತನ್ನ ಉದ್ಯೋಗಿಗಳಿಗೆ ವೇತನವನ್ನೂ ಕೂಡಾ ಇದರ ಮೂಲಕ ಪಾವತಿಸುವ ಯೋಜನೆ ಹಾಕಿಕೊಂಡಿದೆ.
ಈ ವ್ಯವಸ್ಥೆಗೆ ಪೂರಕವಾಗುವಂತೆ ಕ್ಯಾಲಿಬ್ರಾ ಎಂಬ ಡಿಜಿಟಲ್ ವ್ಯಾಲೆಟ್ ಸೇವೆಯನ್ನು ಫೇಸ್ಬುಕ್ ಈಗಾಗಲೇ ಪ್ರಕಟಿಸಿದೆ. ಫೇಸ್ಬುಕ್‌ನ ಅಂಗಸಂಸ್ಥೆಯಾದರೂ, ಇದು ಸ್ವತಂತ್ರವಾಗಿ ಕಾರ್ಯಾಚರಿಸಲಿದೆ.
ಇದನ್ನೂ ಓದಿ | Instagramನಿಂದ ಹೊಸ ಸೌಲಭ್ಯ; ಬಳಕೆದಾರರಿಗೆ ಟೆನ್ಶನ್ ಕಮ್ಮಿ!
ಕ್ಯಾಲಿಬ್ರಾ ಬಳಕೆ ಹೇಗೆ?
ಫೇಸ್ಬುಕ್‌ನ ಮೆಸೆಂಜರ್/ ವಾಟ್ಸಪ್ ಆ್ಯಪ್ ಜೊತೆಗೆ ಕ್ಯಾಲಿಬ್ರಾ ಆ್ಯಪ್ ಗೂಗಲ್ ಪ್ಲೇ ಸ್ಟೋರ್ ಮತ್ತು ಆ್ಯಪ್ ಸ್ಟೋರ್‌ನಲ್ಲಿ ಲಭ್ಯವಿರಲಿದೆ. ಆ ಮೂಲಕ ಕ್ಯಾಲಿಬ್ರಾ ಬಳಕೆದಾರರು ಟೆಕ್ಸ್ಟ್ ಮೆಸೇಜನ್ನು ವಿನಿಮಯ ಮಾಡಿಕೊಂಡಷ್ಟೇ ಸುಲಭವಾಗಿ ಹಣವನ್ನು ವರ್ಗಾಯಿಸಬಹುದಾಗಿದೆ! ಫೇಸ್ಬುಕ್ ಖಾತೆ ಅಥವಾ ವಾಟ್ಸಪ್ ಇಲ್ಲದಿದ್ದರೂ ಕ್ಯಾಲಿಬ್ರಾವನ್ನು ಬಳಸಬಹುದು. ಕ್ಯಾಲಿಬ್ರಾ ಖಾತೆ ತೆರೆಯಬೇಕಾದರೆ ಸರ್ಕಾರ ನೀಡಿದ ಗುರುತು ಪತ್ರ ಹೊಂದಿರುವುದು ಕಡ್ಡಾಯ.
ವ್ಯಾಪಾರ ವ್ಯವಹಾರ ಉದ್ದೇಶಕ್ಕಾಗಿಯೂ ಕ್ಯಾಲಿಬ್ರಾವನ್ನು ಬಳಸಬಹುದಾಗಿದ್ದು, ವರ್ತಕರು ಗ್ರಾಹಕರಿಂದ ಹಣ ಪಡೆಯಬಹುದು. ಈಗ ಅಸ್ತಿತ್ವಕ್ಕೆ ಬಂದಿರುವ ಕ್ಯಾಲಿಬ್ರಾ ಆವೃತ್ತಿಯಲ್ಲಿ ಹಣ-ವಿನಿಮಯಕ್ಕೆ ಇಂಟರ್ನೆಟ್ ಸೌಲಭ್ಯ ಇರೋದು ಕಡ್ಡಾಯ. ಆದರೆ ಮುಂದಿನ ದಿನಗಳಲ್ಲಿ QR ಕೋಡ್ ಮೂಲಕವೂ ವ್ಯವಹಾರ ನಡೆಸುವ ವ್ಯವಸ್ಥೆ ಬರಲಿದೆ ಎಂದು ಕಂಪನಿಯು ಹೇಳಿದೆ.
ಇದನ್ನೂ ಓದಿ | Facebook ಸಿಇಒ ಸಂಬಳ ಕೇವಲ 70 ರು.!: ಜುಕರ್‌ಬರ್ಗ್ ಸುರಕ್ಷತೆಗೆ ಖರ್ಚಾಗಿದ್ದು ಮಾತ್ರ...!?
ಎಷ್ಟು ಸುರಕ್ಷಿತ?
ಬ್ಲಾಕ್‌ಚೈನ್ ತಂತ್ರಜ್ಞಾನ ಬಳಸಿ ಲಿಬ್ರಾ ಕ್ರಿಪ್ಟೊಕರೆನ್ಸಿಯನ್ನು ಅಭಿವೃದ್ಧಿ ಪಡಿಸಿರುವುದರಿಂದ ವಂಚನೆ ಸುಲಭವಲ್ಲ. ಮೋಸದ ವ್ಯವಹಾರಗಳನ್ನು ಸುಲಭವಾಗಿ ಪತ್ತೆ ಮಾಡಬಹುದು. ಮತ್ತೊಂದು ವಿಚಾರ ಏನಂದ್ರೆ, ಇತರ ಕ್ರಿಪ್ಟೊಕರೆನ್ಸಿಗಳಿಗಿಂತ ಫೇಸ್ಬುಕ್‌ನ ಲಿಬ್ರಾ ಸ್ವಲ್ಪ ಭಿನ್ನವಾಗಿದೆ. ಏಕೆಂದರೆ, ಇಲ್ಲಿ ನಡೆಸುವ ವ್ಯವಹಾರ ಸರ್ಕಾರಿ ಗುರುತು ಚೀಟಿಯೊಂದಿಗೆ ಲಿಂಕ್ ಆಗಿರುತ್ತದೆ. ಆದುದರಿಂದ ಮೋಸ-ವಂಚನೆ ಸುಲಭವಲ್ಲ.
ಕ್ಯಾಲಿಬ್ರಾಗೆ ತನ್ನದೇ ಆದ ಕಸ್ಟಮರ್ ಕೇರ್ ವ್ಯವಸ್ಥೆ, ಆ್ಯಪ್ ಮೂಲಕ ದೂರು ನೀಡುವ ಸೌಲಭ್ಯಗಳಿವೆ. ಯಾರಿಗಾದರೂ ವಂಚನೆಯಾದರೆ, ವಂಚನೆಯ ಪೂರ್ಣ ಮೊತ್ತವನ್ನು ಕೂಡಾ ಭರಿಸಲಾಗುತ್ತಂತೆ!
ಖಾಸಗಿತನ ವಿಚಾರದ ಬಗ್ಗೆ ಹೇಳೋದಾದರೆ, ಕಂಪನಿ ಪ್ರಕಾರ ವೈಯುಕ್ತಿಕ ಮಾಹಿತಿ ಅಥವಾ ಹಣಕಾಸು ವ್ಯವಹಾರ ವಿವರಗಳನ್ನು ಯಾವುದೇ ತೃತೀಯ ಸಂಸ್ಥೆಗಳೊಂದಿಗೆ ಬಳಕೆದಾರರ ಅನುಮತಿಯಿಲ್ಲದೇ ಹಂಚಿಕೊಳ್ಳಲಾಗದು, ಫೇಸ್ಬುಕ್ ಜೊತೆ ಕೂಡಾ ಇಲ್ಲ! ಫೇಸ್ಬುಕ್‌ನ ಅಂಗಸಂಸ್ಥೆಯಾಗಿದ್ದರೂ, ಫೇಸ್ಬುಕ್ ಪ್ರಾಡಕ್ಟ್‌ಗಳ ಪ್ರಚಾರಕ್ಕೆ ಇದನ್ನು ಬಳಸಲ್ಲ ಎಂದು ಕ್ಯಾಲಿಬ್ರಾದ ಅಂಬೋಣ.
ಇದನ್ನೂ ಓದಿ | ಸೋಶಿಯಲ್ ಮೀಡಿಯಾ ಅಕೌಂಟ್ ನೋಡಿ ಸರ್ಕಾರದಿಂದ ಪಿಂಚಣಿ ಸೌಲಭ್ಯ?
ವಾಟ್ಸಪ್ ಪೇ ಭವಿಷ್ಯ?
ಫೇಸ್ಬುಕ್‌ನದ್ದೇ ಇನ್ನೊಂದು ಸಂಸ್ಥೆಯಾಗಿರುವ ವಾಟ್ಸಪ್ ಇತ್ತೀಚೆಗೆ ಭಾರತದಲ್ಲಿ ಹಣ-ವರ್ಗಾವಣೆ ಉದ್ದೇಶಕ್ಕಾಗಿ ವಾಟ್ಸಪ್ ಪೇ ವ್ಯವಸ್ಥೆಯನ್ನು ಆರಂಭಿಸಿದೆ. ಹಾಗಾದ್ರೆ ಇದರ ಭವಿಷ್ಯವೇನು? ಭಾರತದಲ್ಲಿ ಕ್ಯಾಲಿಬ್ರಾಗೆ ಯಾವಾಗ ಚಾಲನೆ ಸಿಗಲಿದೆ? ಎಂಬುವುದಕ್ಕೆ ಸ್ಪಷ್ಟ ಉತ್ತರ ಇನ್ನೂ ಸಿಕ್ಕಿಲ್ಲ.
ಇನ್ನು, ವಾಟ್ಸಪ್ ಪೇ ಬಿಟ್ಟು ಫೇಸ್ಬುಕ್ ಕ್ಯಾಲಿಬ್ರಾವನ್ನು ಬಳಸುವಂತೆ ಭಾರತೀಯ ಬಳಕೆದಾರರ ಮನವರಿಕೆ ಮಾಡೋದು ತುಸು ಕಷ್ಟವೇ ಸರಿ. ವಾಟ್ಸಪ್‌ಗೆ ಹೋಲಿಸಿದಾಗ ಕ್ಯಾಲಿಬ್ರಾದ ಒಂದು ಮುಖ್ಯ ಉಪಯೋಗವೇನಂದ್ರೆ, ಇದರ ಮೂಲಕ ಅಂತರಾಷ್ಟ್ರೀಯ ವ್ಯವಹಾರಗಳನ್ನೂ ನಡೆಸಬಹುದು. ಫೇಸ್ಬುಕ್ ಪ್ರಕಾರ, ಹೊರದೇಶದಲ್ಲಿ ದುಡಿಯುವವರು ತಮ್ಮವರಿಗೆ ಹಣ ವರ್ಗಾಯಿಸಲು ಪ್ರತಿ ವರ್ಷ 25 ಬಿಲಿಯನ್ ಡಾಲರ್ ಹಣವನ್ನು ಶುಲ್ಕದ ರೂಪದಲ್ಲಿ ಖರ್ಚು ಮಾಡುತ್ತಾರೆ.!
ಇದನ್ನೂ ಓದಿ | ಫೇಸ್ಬುಕ್ ಕೈಕೊಟ್ರೆ ಏನ್ಮಾಡಬೇಕು? ಅಪ್ಡೇಟ್ ಆಗೋದು ಹೇಗೆ?
ಭಾರತದಲ್ಲಿ ಯಾವಾಗ? ಹೇಗೆ?
ಒಂದು ಅಂದಾಜಿನ ಪ್ರಕಾರ, ಈ ಹೊಸ ಕ್ರಿಪ್ಟೊಕರೆನ್ಸಿ ವ್ಯವಸ್ಥೆ ಜಾರಿ ಮಾಡಲು ಭಾರತವೇ ಫೇಸ್ಬುಕ್‌ನ ಪ್ರಮುಖ ಟಾರ್ಗೆಟ್ ಆಗಿದೆ. ಆದರೆ, ಕ್ರಿಪ್ಟೊಕರೆನ್ಸಿಗಳು ಕಾನೂನು ಬಾಹಿರವೆಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ಈಗಾಗಲೇ ಸ್ಪಷ್ಟಪಡಿಸಿದೆ.
ಇತ್ತೀಚೆಗೆ ಸಿದ್ಧಪಡಿಸಲಾದ ‘Banning of Cryptocurrency and Regulation of Official Digital Currency Bill 2019' ಕರಡು ಪ್ರತಿ ಕೂಡಾ ಕ್ರಿಪ್ಟೊಕರೆನ್ಸಿಯ ಸೃಷ್ಟಿ, ಹೊಂದುವುದು, ಬಳಕೆ, ಮಾರಾಟ ಹಾಗೂ ಎಲ್ಲಾ ರೀತಿಯ ವ್ಯವಹಾರಗಳಿಗೆ 10 ವರ್ಷ ಜೈಲು ಶಿಕ್ಷೆಯನ್ನು ಪ್ರಸ್ತಾಪಿಸಿದೆ.
ಸೋ... ಫೇಸ್ಬುಕ್ ಭಾರತದಲ್ಲಿ ಕ್ಯಾಲಿಬ್ರಾವನ್ನು ಹೇಗೆ ಚಲಾವಣೆಗೆ ತರಲಿದೆ? ಯಾವಾಗ ತರಲಿದೆ ಎಂಬುವುದನ್ನು ಕಾಲವೇ ಉತ್ತರಿಸಲಿದೆ.