ಭಾರತದ ಪತ್ರಕರ್ತರು ಹಾಗೂ ಸಾಮಾಜಿಕ ಹೋರಾಟಗಾರರ ಮೊಬೈಲ್ ಮಾಹಿತಿ ಕದ್ದ ಪ್ರಕರಣ; ವಾಟ್ಸಪ್ ವಿರುದ್ಧ ಕೇಂದ್ರ ಆಕ್ರೋಶ  ಇಸ್ರೇಲ್‌ನ ಪೆಗಾಸಸ್‌ ಎಂಬ ಬೇಹುಗಾರಿಕಾ ಸಾಫ್ಟ್‌ವೇರ್‌ ಬಳಸಿ ಭಾರತೀಯರು ಸೇರಿದಂತೆ ವಿಶ್ವದ 4 ಖಂಡಗಳ 1400 ಮಂದಿಯ ಮೊಬೈಲ್ ಗೆ ಕನ್ನ

ನವದೆಹಲಿ (ನ.02): ಸಾಮಾಜಿಕ ಜಾಲತಾಣ ವಾಟ್ಸಪ್ ಬಳಸಿ ಹ್ಯಾಕರ್‌ಗಳು, ಭಾರತದ ಪತ್ರಕರ್ತರು ಹಾಗೂ ಸಾಮಾಜಿಕ ಹೋರಾಟಗಾರರ ಮೊಬೈಲ್ ಮಾಹಿತಿ ಕದ್ದ ಪ್ರಕರಣದ ಬಗ್ಗೆ ವಾಟ್ಸಪ್ ಕಂಪನಿಯ ಮೇಲೆ ಕೇಂದ್ರ ಸರ್ಕಾರ ಆಕ್ರೋಶ ವ್ಯಕ್ತಪಡಿಸಿದೆ.

ಜೂನ್ ತಿಂಗಳಲ್ಲಿ ವಾಟ್ಸಪ್ ಮಾತೃ ಕಂಪನಿ ಫೇಸ್ಬುಕ್ ಅಧಿಕಾರಿಗಳು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್‌ರನ್ನು ಭೇಟಿಯಾಗಿದ್ದರು. ಆದರೆ ಆಗ ಈ ಮೊಬೈಲ್ ಬೇಹುಗಾರಿಕೆ ಪ್ರಕರಣದ ಬಗ್ಗೆ ಅವರು ಮಾಹಿತಿಯನ್ನೇ ನೀಡಲಿಲ್ಲ. 

ಭಾರತ ಸರ್ಕಾರವು ಸಾಮಾಜಿಕ ಮಾಧ್ಯಮಗಳ ದುರ್ಬಳಕೆ ತಡೆಯಲು ನಿಯಮ ಬಿಗಿಗೊಳಿಸುತ್ತಿದ್ದು, ಇದನ್ನು ತಡೆಯುವ ಉದ್ದೇಶದಿಂದಲೇ ಮಾಹಿತಿ ಬಹಿರಂಗಪಡಿಸಲು ವಾಟ್ಸಪ್ ಅಧಿಕಾರಿಗಳು ಹಿಂದೇಟು ಹಾಕಿದ್ದರು, ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ಶಂಕಿಸಿದ್ದಾರೆ. 

ಈ ರೀತಿ ಬೇಹುಗಾರಿಕೆ ಮಾಡುವವರ ಮೂಲ ಪತ್ತೆ ಮಾಡುವಂಥ ಸಾಫ್ಟ್‌ವೇರ್ ರೂಪಿಸಬೇಕು ಎಂದು ಭಾರತ ಸರ್ಕಾರ ಈ ಹಿಂದೆಯೇ ವಾಟ್ಸಪ್‌ಗೆ ತಾಕೀತು ಮಾಡಿತ್ತು. ಆದರೆ ಖಾಸಗಿತನಕ್ಕೆ ಧಕ್ಕೆ ಬರುತ್ತದೆ ಎಂಬ ನೆಪ ಹೇಳಿ ಸಾಫ್ಟ್‌ವೇರ್ ರೂಪಿಸಲು ಅದು ಹಿಂದೇಟು ಹಾಕಿತ್ತು.

ಈ ನಡುವೆ, ವಾಟ್ಸಪ್ ದುರ್ಬಳಕೆ ಮಾಡಿಕೊಂಡು ಮೊಬೈಲ್‌ನಲ್ಲಿನ ಮಾಹಿತಿ ಕದಿಯುತ್ತಿರುವ ಸೈಬರ್ ದಾಳಿಕೋರರ ಮೂಲ ಪತ್ತೆ ಮಾಡಿ ಅವರ ಮೇಲೆ ಕಂಪನಿ ಕ್ರಮ ಜರುಗಿಸಲಿದೆ. ಬಳಕೆದಾರರ ಹಿತರಕ್ಷಣೆಗೆ ಕ್ರಮ ಜರುಗಿಸಲಿದೆ ಎಂದು ವಾಟ್ಸಪ್ ವಕ್ತಾರರರು ಹೇಳಿದ್ದಾರೆ.