ಹೆಚ್ಚಿನ ಎಸಿಗಳು ಬಿಳಿ ಬಣ್ಣದಲ್ಲಿರುವುದಕ್ಕೆ ಉತ್ಪಾದನಾ ವೆಚ್ಚ ಕಡಿಮೆ ಇರುವುದು, ಉಷ್ಣತೆಯನ್ನು ಪ್ರತಿಫಲಿಸುವ ಸಾಮರ್ಥ್ಯ, ಮನೆಯ ಇಂಟೀರಿಯರ್‌ಗೆ ಸುಲಭವಾಗಿ ಹೊಂದಿಕೊಳ್ಳುವುದು ಮತ್ತು ಧೂಳು-ಗೀಚುಗಳು ಕಡಿಮೆ ಕಾಣಿಸುವುದು ಪ್ರಮುಖ ಕಾರಣಗಳಾಗಿವೆ.
ಇಂದಿನ ದಿನಗಳಲ್ಲಿ ಪ್ರತಿಯೊಬ್ಬರ ಮನೆ, ಅಂಗಡಿಹಾಗೂ ಕಚೇರಿಗಳಲ್ಲಿ ಎಸಿ (Air Conditioner) ಬಳಕೆ ಸಾಮಾನ್ಯವಾಗಿದೆ. ಬೇಸಿಗೆಯ ಬಿಸಿಲಿನಿಂದ ಬಚಾವಾಗಲು ಪ್ರತಿಯೊಬ್ಬರೂ ಎಸಿ ಮೊರೆ ಹೋಗುತ್ತಾರೆ. ಕಚೇರಿಗಳಲ್ಲಂತೂ ಸೆಂಟ್ರಲೈಸ್ಡ್ ಎಸಿ ವ್ಯವಸ್ಥೆ ಇರುತ್ತದೆ. ಎಸಿಯ ತಂಪಾದ ಗಾಳಿಯಲ್ಲಿ ಕುಳಿತುಕೊಳ್ಳುವುದು ಎಲ್ಲರಿಗೂ ಆರಾಮದಾಯಕ ಎನಿಸುತ್ತದೆ. ಆದರೆ, ಬಹುತೇಕ ಎಸಿಗಳು ಬಿಳಿ ಬಣ್ಣದಲ್ಲೇ (White Color) ಏಕಿರುತ್ತವೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಅದು ಇನ್‌ಡೋರ್ ಯುನಿಟ್ ಆಗಿರಲಿ ಅಥವಾ ಔಟ್‌ಡೋರ್ ಯುನಿಟ್ ಆಗಿರಲಿ, ಬಿಳಿ ಬಣ್ಣವನ್ನು ಹೊರತುಪಡಿಸಿ ಕಪ್ಪು, ಕೆಂಪು ಅಥವಾ ನೀಲಿ ಬಣ್ಣಗಳಲ್ಲಿ ಎಸಿಗಳು ಏಕೆ ಇರುವುದಿಲ್ಲ? ಇದನ್ನು ಬೇಕೆಂದೇ ಕಂಪನಿಗಳು ಈ ರೀತಿ ವಿನ್ಯಾಸಗೊಳಿಸಿವೆ. ಇದರ ಹಿಂದೆ ಹಲವು ಪ್ರಮುಖ ಕಾರಣಗಳಿವೆ. ಅದರಲ್ಲಿ ನಾಲ್ಕು ಪ್ರಮುಖ ಕಾರಣಗಳಿವು.
ಉತ್ಪಾದನಾ ವೆಚ್ಚ ಕಡಿಮೆಯಾಗುತ್ತದೆ (Production Cost)
ಎಸಿ ತಯಾರಕ ಕಂಪನಿಗಳು ಒಂದೇ ಬಣ್ಣದ (ಬಿಳಿ) ಮಾಡೆಲ್‌ಗಳನ್ನು ತಯಾರಿಸುವುದರಿಂದ ಅವುಗಳ ಉತ್ಪಾದನಾ ಪ್ರಕ್ರಿಯೆ ಅತ್ಯಂತ ಸರಳವಾಗುತ್ತದೆ ಮತ್ತು ವೆಚ್ಚವೂ ಗಣನೀಯವಾಗಿ ಕಡಿಮೆಯಾಗುತ್ತದೆ. ಒಂದು ವೇಳೆ ವಿಭಿನ್ನ ಬಣ್ಣಗಳಲ್ಲಿ ಎಸಿಗಳನ್ನು ತಯಾರಿಸಲು ಪ್ರಾರಂಭಿಸಿದರೆ, ಕಂಪನಿಗಳಿಗೆ ಉತ್ಪಾದನಾ ವೆಚ್ಚ ಹೆಚ್ಚಾಗುತ್ತದೆ. ಇದರಿಂದ ಕಂಪನಿಗಳ ಲಾಭದ ಮೇಲೆಯೂ ಪರಿಣಾಮ ಬೀರುತ್ತದೆ. ಹಾಗಾಗಿ, ಬಿಳಿ ಬಣ್ಣವನ್ನು ಕಾಮನ್ ಆಗಿಟ್ಟುಕೊಂಡು ಎಸಿಗಳನ್ನು ಉತ್ಪಾದಿಸಲಾಗುತ್ತದೆ.
ಬಿಳಿ ಬಣ್ಣವು ಉಷ್ಣತೆಯನ್ನು ಕಡಿಮೆ ಹೀರಿಕೊಳ್ಳುತ್ತದೆ (Heat Reflection)
ಸ್ಪ್ಲಿಟ್ ಎಸಿಯ 'ಔಟ್‌ಡೋರ್ ಯುನಿಟ್' ಅನ್ನು ಮನೆಯ ಹೊರಗೆ ಅಳವಡಿಸಲಾಗುತ್ತದೆ. ಇದು ನೇರವಾಗಿ ಸೂರ್ಯನ ಬಿಸಿಲಿಗೆ ಒಡ್ಡಿಕೊಳ್ಳುತ್ತದೆ. ಬಿಳಿ ಬಣ್ಣಕ್ಕೆ ಸೂರ್ಯನ ಕಿರಣಗಳನ್ನು ಪ್ರತಿಫಲಿಸುವ ಸಾಮರ್ಥ್ಯ ಹೆಚ್ಚಿರುತ್ತದೆ ಎಂಬುದು ಹೆಚ್ಚಿನವರಿಗೆ ತಿಳಿದಿರುವ ವಿಷಯ. ಬಿಳಿ ಬಣ್ಣವು ಅತ್ಯಂತ ಕಡಿಮೆ ಪ್ರಮಾಣದ ಶಾಖವನ್ನು ಹೀರಿಕೊಳ್ಳುತ್ತದೆ. ಇದರ ಪರಿಣಾಮವಾಗಿ ಎಸಿಯ ಕಾರ್ಯಾಚರಣೆಯ ಸಾಮರ್ಥ್ಯ (Performance) ದೀರ್ಘಕಾಲದವರೆಗೆ ಉತ್ತಮವಾಗಿರಲು ನೆರವಾಗುತ್ತದೆ. ಈ ಕಾರಣಕ್ಕಾಗಿಯೇ ಎಸಿಗೆ ಬಿಳಿ ಬಣ್ಣವನ್ನು ಬಳಸಲಾಗುತ್ತದೆ.
ಮನೆಯ ಇಂಟೀರಿಯರ್ ವಿನ್ಯಾಸಕ್ಕೆ ಸುಲಭವಾಗಿ ಹೊಂದಿಕೊಳ್ಳುತ್ತದೆ
ಬಿಳಿ ಬಣ್ಣವನ್ನು ತಟಸ್ಥ (Neutral) ಬಣ್ಣವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಇದು ಯಾವುದೇ ಬಣ್ಣದ ಗೋಡೆ ಅಥವಾ ಮನೆಯ ಒಳಗಿನ ಇಂಟೀರಿಯರ್ ವಿನ್ಯಾಸದೊಂದಿಗೆ ಸುಲಭವಾಗಿ ಹೊಂದಿಕೊಳ್ಳುತ್ತದೆ. ಈ ಕಾರಣದಿಂದ ಬಿಳಿ ಬಣ್ಣದ ಎಸಿ ಮನೆಯಲ್ಲಿ ನೋಡಲು ಹೆಚ್ಚು ಆಕರ್ಷಕವಾಗಿ ಕಾಣುತ್ತದೆ. ಗ್ರಾಹಕರು ಕೂಡ ಬಿಳಿ ಬಣ್ಣದ ಎಸಿಗಳಿಗೇ ಹೆಚ್ಚಿನ ಆದ್ಯತೆ ನೀಡುತ್ತಾರೆ.
ಧೂಳು ಮತ್ತು ಗೀಚುಗಳು (Scratching) ಎದ್ದು ಕಾಣುವುದಿಲ್ಲ
ಒಂದು ವೇಳೆ ಎಸಿಗಳನ್ನು ಕಪ್ಪು, ಕಡು ಬೂದು (Dark Grey) ಅಥವಾ ಇತರ ಗಾಢ ಬಣ್ಣಗಳಲ್ಲಿ ತಯಾರಿಸಿದ್ದರೆ, ಅವುಗಳ ಮೇಲೆ ಬೀಳುವ ಧೂಳು, ಮಣ್ಣು ಮತ್ತು ಸಣ್ಣಪುಟ್ಟ ಗೀಚುಗಳು (Scratching) ತಕ್ಷಣವೇ ಎದ್ದು ಕಾಣುತ್ತಿದ್ದವು. ಇದರಿಂದ ಎಸಿ ಅತ್ಯಂತ ವೇಗವಾಗಿ ಹಳೆಯದಾದಂತೆ ಹಾಗೂ ಹಾಳಾದಂತೆ ಕಾಣುತ್ತಿತ್ತು. ಆದರೆ, ಬಿಳಿ ಬಣ್ಣದ ಎಸಿಯ ಮೇಲೆ ಧೂಳು ಮತ್ತು ಸಣ್ಣಪುಟ್ಟ ಗೀಚುಗಳು ಅಷ್ಟಾಗಿ ಎದ್ದು ಕಾಣುವುದಿಲ್ಲ. ಪರಿಣಾಮವಾಗಿ ಎಸಿ ದೀರ್ಘಕಾಲದವರೆಗೆ ಶುಭ್ರವಾಗಿ ಕಾಣಿಸುತ್ತದೆ. ಈ ಎಲ್ಲಾ ಪ್ರಮುಖ ಕಾರಣಗಳಿಂದಾಗಿಯೇ ಎಸಿಗಳನ್ನು ಸಾಮಾನ್ಯವಾಗಿ ಬಿಳಿ ಬಣ್ಣದಲ್ಲೇ ತಯಾರಿಸಲಾಗುತ್ತದೆ.

