ಆ್ಯಪಲ್‌ನ ಮುಂಬರುವ ಐಫೋನ್ 18 ಪ್ರೊ ಸರಣಿಯು ಚಿಕ್ಕದಾದ ಡೈನಾಮಿಕ್ ಐಲ್ಯಾಂಡ್, ಸುಧಾರಿತ A20 ಪ್ರೊ ಚಿಪ್, ಮತ್ತು ದೊಡ್ಡ ಬ್ಯಾಟರಿ ಸಾಮರ್ಥ್ಯದೊಂದಿಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ಕ್ಯಾಮೆರಾದಲ್ಲಿ 48MP ಫ್ಯೂಷನ್ ಸೆನ್ಸರ್ ಮತ್ತು ಕನೆಕ್ಟಿವಿಟಿಯಲ್ಲಿ ಹೊಸ ವೈರ್‌ಲೆಸ್ ಚಿಪ್‌ಗಳಂತಹ ಪ್ರಮುಖ ಬದಲಾವಣೆಗಳ ಬಗ್ಗೆ ಸೋರಿಕೆಯಾದ ವರದಿಗಳು ಸುಳಿವು ನೀಡಿವೆ.

ಆ್ಯಪಲ್‌ನ ಮುಂದಿನ ಜನರೇಷನ್ ಐಫೋನ್ ಸರಣಿ, ಅಂದ್ರೆ ಐಫೋನ್ 18 ಪ್ರೊ ಬಗ್ಗೆ ಈಗಾಗ್ಲೇ ಒಂದೊಂದೇ ಮಾಹಿತಿ ಲೀಕ್ ಆಗ್ತಿದೆ. ಈ ವರ್ಷ ಸೆಪ್ಟೆಂಬರ್‌ನಲ್ಲಿ ಐಫೋನ್ 18 ಪ್ರೊ ಮತ್ತು ಐಫೋನ್ 18 ಪ್ರೊ ಮ್ಯಾಕ್ಸ್ ಮಾಡೆಲ್‌ಗಳು ಜಾಗತಿಕವಾಗಿ ಲಾಂಚ್ ಆಗುವ ನಿರೀಕ್ಷೆ ಇದೆ. ವರದಿಗಳ ಪ್ರಕಾರ, ಡಿಸೈನ್ ಹೆಚ್ಚು ಕಡಿಮೆ ಈಗಿನಂತೆಯೇ ಇರಲಿದ್ದು, ಕ್ಯಾಮೆರಾ, ಬ್ಯಾಟರಿ, ಪ್ರೊಸೆಸರ್ ಮತ್ತು ಕನೆಕ್ಟಿವಿಟಿಯಲ್ಲಿ ದೊಡ್ಡ ಬದಲಾವಣೆಗಳಾಗಲಿವೆ.

ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಸೆಪ್ಟೆಂಬರ್ ಕೊನೆಯ ಹೊತ್ತಿಗೆ ಸೇಲ್ ಶುರುವಾಗುವ ಸಾಧ್ಯತೆ ಇದೆ. ಅಷ್ಟೇ ಅಲ್ಲ, ಪ್ರೊ ಮಾಡೆಲ್‌ಗಳ ಜೊತೆಗೆ ಆ್ಯಪಲ್ ತನ್ನ ಮೊದಲ ಮಡಚುವ (foldable) ಐಫೋನ್ ಅನ್ನು ಕೂಡ ಪರಿಚಯಿಸಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಸಾಮಾನ್ಯ ಐಫೋನ್ 18, ಕಡಿಮೆ ಬೆಲೆಯ ಐಫೋನ್ 18E ಮತ್ತು ಹೊಸ ಐಫೋನ್ ಏರ್ ಮಾಡೆಲ್‌ಗಳು 2027ರಲ್ಲಿ ಮಾರುಕಟ್ಟೆಗೆ ಬರುವ ನಿರೀಕ್ಷೆ ಇದೆ.

ಚಿಕ್ಕದಾದ ಡೈನಾಮಿಕ್ ಐಲ್ಯಾಂಡ್ ಮತ್ತು ಹೊಸ ಡಿಸ್‌ಪ್ಲೇ ತಂತ್ರಜ್ಞಾನ

ಐಫೋನ್ 18 ಪ್ರೊ ಸರಣಿಯಲ್ಲಿ ಎಲ್ಲರ ಗಮನ ಸೆಳೆಯುವ ಒಂದು ಪ್ರಮುಖ ಬದಲಾವಣೆ ಅಂದ್ರೆ, ಚಿಕ್ಕದಾದ ಡೈನಾಮಿಕ್ ಐಲ್ಯಾಂಡ್. ಫೇಸ್ ಐಡಿ ಸಿಸ್ಟಮ್‌ನ ಕೆಲವು ಭಾಗಗಳನ್ನು, ಅದರಲ್ಲೂ ಫ್ಲಡ್ ಇಲ್ಯುಮಿನೇಟರ್ ಅನ್ನು ಡಿಸ್‌ಪ್ಲೇ ಕೆಳಗೆ ಅಳವಡಿಸುವ ತಂತ್ರಜ್ಞಾನವನ್ನು ಆ್ಯಪಲ್ ಪರೀಕ್ಷಿಸುತ್ತಿದೆ ಎಂದು ಹೇಳಲಾಗ್ತಿದೆ. ಈಗಿನ ಪ್ರೊ ಮಾಡೆಲ್‌ಗಳಂತೆಯೇ 6.3 ಇಂಚು ಮತ್ತು 6.9 ಇಂಚಿನ ಡಿಸ್‌ಪ್ಲೇ ಸೈಜ್‌ಗಳು ಮುಂದುವರಿಯುವ ನಿರೀಕ್ಷೆ ಇದೆ. ಆದರೆ, ಹೆಚ್ಚು ವಿದ್ಯುತ್ ಉಳಿತಾಯ ಮಾಡುವ ಎಲ್.ಟಿ.ಪಿ.ಒ ಪ್ಲಸ್ ಡಿಸ್‌ಪ್ಲೇ ತಂತ್ರಜ್ಞಾನವನ್ನು ಇದರಲ್ಲಿ ಬಳಸುವ ಸಾಧ್ಯತೆ ಇದೆ.

ಹೆಚ್ಚಿನ ಸಾಮರ್ಥ್ಯದ ಬ್ಯಾಟರಿ

ಐಫೋನ್ 18 ಪ್ರೊ ಮ್ಯಾಕ್ಸ್‌ನಲ್ಲಿ ಬ್ಯಾಟರಿ ಸಾಮರ್ಥ್ಯ ದೊಡ್ಡ ಮಟ್ಟದಲ್ಲಿ ಹೆಚ್ಚಾಗಲಿದೆ ಎಂದು ವರದಿಗಳು ಹೇಳುತ್ತಿವೆ. ಐಫೋನ್ 17 ಪ್ರೊ ಮ್ಯಾಕ್ಸ್‌ಗಿಂತ ಸುಮಾರು 10% ದೊಡ್ಡ ಬ್ಯಾಟರಿ ಇದರಲ್ಲಿ ಇರಲಿದೆ.

ಲೀಕ್ ಆದ ಮಾಹಿತಿಯ ಪ್ರಕಾರ, ಬ್ಯಾಟರಿ ಸಾಮರ್ಥ್ಯ ಹೀಗಿರಬಹುದು: ಐಫೋನ್ 18 ಪ್ರೊ (ನ್ಯಾನೋ ಸಿಮ್) – ಸುಮಾರು 4,056 mAh, ಐಫೋನ್ 18 ಪ್ರೊ (ಇ-ಸಿಮ್) – ಸುಮಾರು 4,288 mAh, ಐಫೋನ್ 18 ಪ್ರೊ ಮ್ಯಾಕ್ಸ್ (ನ್ಯಾನೋ ಸಿಮ್) – ಸುಮಾರು 5,391 mAh, ಐಫೋನ್ 18 ಪ್ರೊ ಮ್ಯಾಕ್ಸ್ (ಇ-ಸಿಮ್) – ಸುಮಾರು 5,567 mAh. ದೊಡ್ಡ ಬ್ಯಾಟರಿ ಅಳವಡಿಸುವುದರಿಂದ ಫೋನ್ ಸ್ವಲ್ಪ ದಪ್ಪ ಆಗಬಹುದು ಎಂದೂ ಹೇಳಲಾಗ್ತಿದೆ.

ಹೊಸ A20 ಪ್ರೊ ಚಿಪ್

ಐಫೋನ್ 18 ಪ್ರೊ ಮಾಡೆಲ್‌ಗಳಿಗೆ ಹೊಸ A20 ಪ್ರೊ ಚಿಪ್ ಶಕ್ತಿ ತುಂಬಲಿದೆ. TSMC ಕಂಪನಿಯು ತನ್ನ ಹೊಸ 2 ನ್ಯಾನೋಮೀಟರ್ ತಂತ್ರಜ್ಞಾನದಲ್ಲಿ ಈ ಚಿಪ್ ಅನ್ನು ತಯಾರಿಸಲಿದೆ ಎಂದು ವರದಿಗಳು ತಿಳಿಸಿವೆ. ಈಗಿನ A19 ಪ್ರೊ ಚಿಪ್‌ಗಿಂತ ಇದು ಉತ್ತಮ ಪರ್ಫಾರ್ಮೆನ್ಸ್ ಮತ್ತು ಕಡಿಮೆ ವಿದ್ಯುತ್ ಬಳಸಲಿದೆ ಎಂದು ನಿರೀಕ್ಷಿಸಲಾಗಿದೆ. ಇದರ ಜೊತೆಗೆ, ಆ್ಯಪಲ್‌ನ ಹೊಸ C2 ಮೋಡೆಮ್ ಕೂಡ ಇರಲಿದ್ದು, ಇದು ವೇಗದ 5G ಕನೆಕ್ಟಿವಿಟಿ ಮತ್ತು ಉತ್ತಮ ನೆಟ್‌ವರ್ಕ್ ಪರ್ಫಾರ್ಮೆನ್ಸ್ ನೀಡಲಿದೆ. ಸ್ಯಾಟಲೈಟ್ ಮೂಲಕ 5G ಕನೆಕ್ಟಿವಿಟಿ ನೀಡುವ ವ್ಯವಸ್ಥೆಯೂ ಈ ಹೊಸ ಮಾಡೆಲ್‌ನಲ್ಲಿ ಇರಬಹುದು ಎನ್ನಲಾಗ್ತಿದೆ.

ಕ್ಯಾಮೆರಾದಲ್ಲಿ ದೊಡ್ಡ ಬದಲಾವಣೆಗಳು

ಕ್ಯಾಮೆರಾ ವಿಭಾಗದಲ್ಲೂ ದೊಡ್ಡ ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ. ಐಫೋನ್ 18 ಪ್ರೊ ಮಾಡೆಲ್‌ಗಳಲ್ಲಿ 48 ಮೆಗಾಪಿಕ್ಸೆಲ್ ಫ್ಯೂಷನ್ ಪ್ರೈಮರಿ ಕ್ಯಾಮೆರಾ ಮತ್ತು ವೇರಿಯಬಲ್ ಅಪರ್ಚರ್ ತಂತ್ರಜ್ಞಾನ ಇರಲಿದೆ ಎಂದು ವರದಿಗಳು ಹೇಳುತ್ತಿವೆ. ಲೆನ್ಸ್‌ಗೆ ಬರುವ ಬೆಳಕಿನ ಪ್ರಮಾಣವನ್ನು ನಿಯಂತ್ರಿಸುವ ಈ ವ್ಯವಸ್ಥೆಯು, ಉತ್ತಮ ಪೋರ್ಟ್ರೇಟ್ ಫೋಟೋಗಳನ್ನು ತೆಗೆಯಲು ಮತ್ತು ಬೇರೆ ಬೇರೆ ಬೆಳಕಿನ ಸ್ಥಿತಿಗಳಲ್ಲಿ ಫೋಟೋಗ್ರಫಿ ಮಾಡಲು ಸಹಾಯ ಮಾಡುತ್ತದೆ.

ಹೊಸ ಬಣ್ಣಗಳು ಮತ್ತು ಡಿಸೈನ್ ಬದಲಾವಣೆಗಳು

ಐಫೋನ್ 18 ಪ್ರೊ ಸರಣಿಯಲ್ಲಿ ಹೊಸ ಬಣ್ಣಗಳನ್ನು ಪರಿಚಯಿಸುವ ಸಾಧ್ಯತೆ ಇದೆ. ಡಾರ್ಕ್ ಚೆರ್ರಿ, ಲೈಟ್ ಬ್ಲೂ, ಡಾರ್ಕ್ ಗ್ರೇ ಮತ್ತು ಸಿಲ್ವರ್ ಬಣ್ಣಗಳನ್ನು ನಿರೀಕ್ಷಿಸಲಾಗಿದೆ. ಈಗಿರುವ ಕಾಸ್ಮಿಕ್ ಆರೆಂಜ್ ಮತ್ತು ಡೀಪ್ ಬ್ಲೂ ಬಣ್ಣಗಳು ಮುಂದುವರಿಯುತ್ತವೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕ್ಯಾಮೆರಾ ಕಂಟ್ರೋಲ್ ಬಟನ್‌ನಲ್ಲೂ ಬದಲಾವಣೆಗಳಾಗಬಹುದು. ಟಚ್ ಸೆನ್ಸಿಟಿವ್ ಮತ್ತು ಹ್ಯಾಪ್ಟಿಕ್ ಫೀಡ್‌ಬ್ಯಾಕ್ ವ್ಯವಸ್ಥೆಗಳನ್ನು ತೆಗೆದುಹಾಕಿ, ಕೇವಲ ಪ್ರೆಶರ್ ಸೆನ್ಸಿಟಿವ್ ಕಂಟ್ರೋಲ್ ಅನ್ನು ಮಾತ್ರ ಉಳಿಸಿಕೊಳ್ಳಲು ಆ್ಯಪಲ್ ಯೋಚಿಸುತ್ತಿದೆ ಎಂದು ವರದಿಗಳು ಹೇಳುತ್ತಿವೆ.

ಹೊಸ ವೈರ್‌ಲೆಸ್ ಚಿಪ್ ಮತ್ತು ಉತ್ತಮ ಕನೆಕ್ಟಿವಿಟಿ

ಐಫೋನ್ 18 ಪ್ರೊನಲ್ಲಿ ಹೊಸ N2 ಚಿಪ್ ಕೂಡ ಇರಲಿದೆ ಎಂಬ ಮಾಹಿತಿ ಇದೆ. ಈ ಚಿಪ್ ವೈ-ಫೈ, ಬ್ಲೂಟೂತ್ ಮತ್ತು ಥ್ರೆಡ್ ಕನೆಕ್ಟಿವಿಟಿಯನ್ನು ಇನ್ನಷ್ಟು ಸುಧಾರಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಒಟ್ಟಿನಲ್ಲಿ, ಕ್ಯಾಮೆರಾ, ಬ್ಯಾಟರಿ, ಪ್ರೊಸೆಸಿಂಗ್ ಪವರ್ ಮತ್ತು ಕನೆಕ್ಟಿವಿಟಿಯಲ್ಲಿನ ಈ ಬದಲಾವಣೆಗಳೊಂದಿಗೆ ಐಫೋನ್ 18 ಪ್ರೊ ಸರಣಿಯು ಆ್ಯಪಲ್‌ನ ಅತಿದೊಡ್ಡ ಅಪ್‌ಗ್ರೇಡ್‌ಗಳಲ್ಲಿ ಒಂದಾಗಲಿದೆ ಎಂದು ಅಂದಾಜಿಸಲಾಗಿದೆ. ಆದರೆ, ಈಗ ಲಭ್ಯವಿರುವ ಎಲ್ಲಾ ಮಾಹಿತಿಗಳು ಕೇವಲ ಲೀಕ್ ಆದ ವರದಿಗಳನ್ನು ಆಧರಿಸಿವೆ. ಫೋನ್ ಅಧಿಕೃತವಾಗಿ ಲಾಂಚ್ ಆದಾಗ ಮಾತ್ರ ಆ್ಯಪಲ್ ನಿಜವಾದ ಫೀಚರ್‌ಗಳನ್ನು ಖಚಿತಪಡಿಸುತ್ತದೆ.