ಅನಗತ್ಯ ಕರೆಗಳ ಕಿರಿಕಿರಿ: ತಪ್ಪಿಸಲು ಬಂದಿದೆ ಹೊಸ ಐಡಿಯಾ!
ಬೇಡವೆಂದು ಎಷ್ಟೇ ಗೊಗೆರದರೂ, ಅನಗತ್ಯ ಕರೆಗಳ ಕಾಟ ತಪ್ಪಿದ್ದಲ್ಲ. ಮಹತ್ವದ ಮೀಟಿಂಗ್ ಅಥವಾ ಡ್ರೈವಿಂಗ್ ನಡುವೆ ಯಾರದ್ದೋ ಇಂಪಾರ್ಟೆಂಟ್ ಕಾಲ್ ಇರಬಹುದು ಎಂದು ಕರೆ ಸ್ವೀಕರಿಸಿದರೆ, ಅದು ಮಾರ್ಕೆಟಿಂಗ್ ಕರೆಯಾಗಿದ್ರೆ ಯಾರಿಗೆ ಸಿಟ್ಟು ಬರಲ್ಲ?
'ಹೋದೆಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷಿಯೊಳಗೆ ಎಂಬಂತೆ ಅನಗತ್ಯ ಕರೆಗಳ ಕಾಟ ತಪ್ಪಿದ್ದಲ್ಲ. ಒಂದು ನಿಯಮ ಬಂದ್ರೆ ಇನ್ನೊಂದು ರೀತಿಯಲ್ಲಿ ಈ ಕಾಲರ್‌ಗಳು ಮೊಬೈಲ್ ಬಳಕೆದಾರರ ನೆಮ್ಮದಿಯನ್ನು ಕಸಿಯುತ್ತಾರೆ.
ಈ ಅನಗತ್ಯ ಕಾಲ್ ಮತ್ತು ಮೆಸೇಜ್‌ಗಳ ಕಾಟ ತಪ್ಪಿಸಲು ಮೊಬೈಲ್ ಕಂಪನಿಗಳು ಹೊಸ ತಂತ್ರಜ್ಞಾನದ ಮೊರೆಹೋಗಿವೆ. ಆ ಮೂಲಕ ಒಂದು ಬಿಲಿಯನ್ ಮೊಬೈಲ್ ಬಳಕೆದಾರರಿಗೆ ‘ನಿರಾಳ’ ಸುದ್ದಿಯನ್ನು ಕೊಟ್ಟಿವೆ.
ಭಾರತದ ಪ್ರಮುಖ ಮೊಬೈಲ್ ಕಂಪನಿಗಳಾದ ವೊಡಾಫೋನ್ ಐಡಿಯಾ, ಏರ್ಟೆಲ್ ಮತ್ತು ಜಿಯೋ ಕಂಪನಿಗಳು, ಬ್ಲಾಕ್ ಚೈನ್ ತಂತ್ರಜ್ಞಾನವನ್ನು ಅಳವಡಿಸಲು ಮುಂದಾಗಿವೆ.
ಇದನ್ನೂ ಓದಿ | Honorನಿಂದ 2 ಹೊಸ ಫೋನ್; ಒಂದಲ್ಲ ಎರಡಲ್ಲ ನಾಲ್ಕು ನಾಲ್ಕು ಕ್ಯಾಮೆರಾಗಳು!
ಬ್ಲಾಕ್ ಚೈನ್ ತಂತ್ರಜ್ಞಾನ ಅಳವಡಿಕೆಗೆ ವೊಡಾಫೋನ್- ಐಡಿಯಾ ಟಾನ್ಲಾ ಸೊಲ್ಯೂಶನ್ ಎಂಬ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡಿದ್ದರೆ, ಜಿಯೋ ಕಂಪನಿಯು ಟೆಕ್ ಮಹೀಂದ್ರಾ ಜೊತೆ ಕೈ ಜೋಡಿಸಿದೆ. ಭಾರ್ತಿ ಏರ್ಟೆಲ್ ಕಂಪನಿಯು ಐಬಿಮ್ ಜೊತೆ ಸೇರಿ ಹೊಸ ವ್ಯವಸ್ಥೆಯನ್ನು ಜಾರಿಗೆ ತರುತ್ತಿದೆ.
ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ನಿಯಮಗಳಿಗೆ ಅನುಗುಣವಾಗಿ ಈ ವ್ಯವಸ್ಥೆ ಕಾರ್ಯಾಚರಿಸಲಿದ್ದು, ಈ ತಿಂಗಳಾಂತ್ಯದಲ್ಲೇ ಜಾರಿಗೆ ಬರಲಿದೆ.
ಈ ಹೊಸ ವ್ಯವಸ್ಥೆಯಿಂದ ವೊಡಾಫೋನ್-ಐಡಿಯಾದ ಸುಮಾರು 395 ಮಿಲಿಯನ್ ಬಳಕೆದಾರರು, ಜಿಯೋನ 307 ಮಿಲಿಯನ್ ಬಳಕೆದಾರರು ಮತ್ತು ಏರ್ಟೆಲ್‌ನ 325 ಮಿಲಿಯನ್ ಬಳಕೆದಾರರಿಗೆ ಪ್ರಯೋಜನವಾಗಲಿದೆ.
ಇದನ್ನೂ ಓದಿ | ಹೊಸ ಕೊಡುಗೆ ಹೊತ್ತು ತಂದಿದೆ Airtel; ಗ್ರಾಹಕರಿಗೆ ಡಬಲ್ ಬಂಪರ್!