ತಂತ್ರಜ್ಞಾನದಲ್ಲಿ ನಾಳೆ ಏನಾಗಲಿದೆಯೋ ಖಚಿತವಾಗಿ ಊಹೆ ಮಾಡುವುದೇ ಕಷ್ಟ. ಈ ವಿಚಾರದಲ್ಲಿ ಇಂದಿಗಿದ್ದ ಜಗತ್ತು ನಾಳೆ ಇರುವುದಿಲ್ಲ. ಕ್ಷಣಕ್ಷಣಕ್ಕೂ ಬದಲಾಗುತ್ತಿರುತ್ತದೆ. ಹಾಗಿದ್ದರೂ 2020ನೇ ಇಸವಿಯಲ್ಲಿ ಟೆಕ್ನಾಲಜಿಯಲ್ಲಿ ಯಾವ್ಯಾವ ಹೊಸ ಆವಿಷ್ಕಾರಗಳು ಆಗಬಹುದು ಎಂದು ಊಹಿಸುವ ಒಂದು ಪ್ರಯತ್ನ ಇಲ್ಲಿದೆ.

2020ರೊಳಗೆ ವಿಜ್ಞಾನಿಗಳು ಹೇಳಿದ್ದೆಲ್ಲ ನಿಜವಾಯ್ತಾ? ಏನೆಲ್ಲಾ ಹೇಳಿದ್ರು

ಹಾರುವ ಪ್ಯಾಕೇಜ್‌ಗಳು

ಇನ್ನು ಐದೇ ವರ್ಷದಲ್ಲಿ, ಅಮೆಜಾನ್‌ ಮುಂತಾದ ಆನ್‌ಲೈನ್‌ ಮಾರಾಟ ಸಂಸ್ಥೆಗಳು ಪ್ಯಾಕೇಜ್‌, ಕೊರಿಯರ್‌ಳನ್ನು ಡ್ರೋನ್‌ ಮುಖಾಂತರ ಮನೆಮನೆಗೆ ಸರಬರಾಜು ಮಾಡಲಿವೆ ಎಂದು ಅಮೆಜಾನ್‌ನ ಮುಖ್ಯಸ್ಥ ಜೆಫ್‌ ಬೆಜೋಸ್‌ 2013ರಲ್ಲೇ ಹೇಳಿದ್ದರು. ಆದರೆ ಅವರ ಗಡುವು ಮುಗಿದು ಒಂದಯ ವರ್ಷವಾಗಿದ್ದರೂ ಅದು ನಿಜವಾಗಿಲ್ಲ .ಇನ್ನೂ ಟ್ರಯಲ್‌ ಹಂತದಲ್ಲೇ ಇದೆ. ಈ ವರ್ಷವಾದರೂ ಅದು ಈಡೇರಬಹುದು ಎಂಬುದೊಂದು ನಿರೀಕ್ಷೆ.

ಚಿಕ್ಕ ಮಕ್ಕಳ ಕೈಗೂ ಮೊಬೈಲ್‌

6 ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿ, 10ರಲ್ಲಿ ಒಂಬತ್ತು ಮಕ್ಕಳ ಕೈಗೆ ಈ ವರ್ಷ ಮೊಬೈಲ್‌ ಬರುತ್ತದಂತೆ, ನಾವು ಕೊಡಿಸೋದೇ ಇಲ್ಲ ಅಂತ ಹೇಳಬೇಡಿ. ಪರಿಸ್ಥಿತಿಯ ಅನಿವಾರ್ಯತೆ ಹ್ಯಾಗೆ ಬರುತ್ತೋ ಹೇಳೋಕಾಗಲ್ಲ. ಜಗತ್ತಿನ ಸುಮಾರು 67% ಮಂದಿ ಬಳಿ ಈಗಾಗಲೇ ಸ್ಮಾರ್ಟ್‌ಫೋನ್‌ ಇದೆ. ಆದರೆ, ಜಗತ್ತಿನ ಜನಸಂಖ್ಯೆಗಿಂತ ಅಧಿಕ ಮೊಬೈಲ್‌ಗಳು ಉತ್ಪಾದನೆಯಾಗಿವೆ. ಅದಕ್ಕೆ ಕಾರಣ ಒಬ್ಬೊಬ್ಬರ ಬಳಿ ಅನೇಕ ಮೊಬೈಲ್‌ಗಳಿರುವುದು. ಮುಂದುವರಿದ ದೇಶಗಳಲ್ಲಿ ಮಕ್ಕಳು ಮೊಬೈಲ್‌ ಹೊಂದುವುದು ಈಗ ಸಾಮಾನ್ಯವಾಗಿದೆ.

ಭೂಮಿ ಮೇಲೆ ಕೀಟಗಳೇ ಇಲ್ಲ ಅಂದ್ರೆ ಏನಾಗತ್ತೆ?

ಡ್ರೈವರ್‌ ಇಲ್ಲದ ಕಾರ್‌

ಗೂಗಲ್‌ ಕಂಪನಿಯ ಡ್ರೈವರ್‌ಲೆಸ್‌ ಕಾರುಗಳು ಈಗಾಗಲೇ ಟ್ರಯಲ್‌ ರನ್‌ ಆಗುತ್ತಿವೆ. ಕಳೆದ ವರ್ಷವೇ ಇವು ರಸ್ತೆಗೆ ಇಳಿಯುವುದು ಅಂತ ಇತ್ತು. ಆದರೆ ಅದು ಮುಂದಕ್ಕೆ ಹೋಗಿದೆ. ಈ ವರ್ಷವಾದರೂ ಮುಂದುವರಿದ ದೇಶಗಳ ಸುರಕ್ಷಿತ ಹೈವೇಗಳಲ್ಲಿ ಅವು ಓಡಾಡುವುದನ್ನು ಕಾಣಬಹುದು. ನಮ್ಮಲ್ಲಿ ಅದರ ಪ್ರಯೋಗವಾಗುವುದಕ್ಕೆ ಮುನ್ನ ರಸ್ತೆಗಳು ಸರಿಯಾಗಬೇಕಾಗಬಹುದು.

ಸೋಲಾರ್‌ನಿಂದ ಮೊಬೈಲ್‌ ಚಾರ್ಜ್‌

ಈಗ ನಿಮ್ಮ ಮೊಬೈಲ್‌ ಚಾರ್ಜ್‌ ಮಾಡೋದಕ್ಕೆ ವಿದ್ಯುತ್ತೇ ಬೇಕು. ಆದರೆ ಮುಂದಿನ ವರ್ಷ, ಸೂರ‍್ಯನ ಬೆಳಕಿನಿಂದ ಚಾರ್ಜ್‌ ಆಗಲಿರುವ ಮೊಬೈಲ್‌ಗಳು ಬರಲಿವೆಯಂತೆ. ಅಂದರೆ ಇವು ನೇರವಾಗಿ ಸೂರ‍್ಯಕಿರಣಗಳಿಂದಲೇ ಚಾರ್ಜ್‌ ಆಗುವುದಲ್ಲ. ನೀವು ಎಲ್ಲಿ ಬೇಕಾದರೂ ಸಾಗಿಸಬಹುದಾದ ಪುಟ್ಟ ಸೋಲಾರ್‌ ಪ್ಯಾನೆಲ್‌ಗಳ ಮೇಲೆ ಇದನ್ನಿಟ್ಟರೆ ಸಾಕು, ಚಾರ್ಜ್‌ ಆಗುತ್ತವೆ. ವಿದ್ಯುತ್‌ ಚಾರ್ಜ್‌ ಮೊಬೈಲ್‌ಗಳಲ್ಲೂ ಈ ಸೌಲಭ್ಯ ಸಿಗಬಹುದು.

ಸೂಪರ್‌ಫೋನ್‌ ಬರಲಿದೆ

ಪ್ರಸ್ತುತ ಸ್ಮಾರ್ಟ್‌ಫೋನ್‌ಗಳು ಮನುಷ್ಯನ ಬಲಗೈ ಎಂಬಂತಾಗಿವೆ. ಈ ಟೆಕ್ನಾಲಜಿಯಲ್ಲಿ ಇನ್ನಷ್ಟು ಸುಧಾರಣೆ ಮಾಡಿ, ಮನುಷ್ಯನ ಬಾಯಿಮಾತು, ಮನಸ್ಸಿನ ಮಾತನ್ನೂ ಕೇಳುವಂತೆ ಸ್ಮಾರ್ಟ್‌ಫೋನ್‌ಗಳನ್ನು ರೆಡಿ ಮಾಡಲಾಗುತ್ತಿದೆ. ಹುವೈ ಕಂಪನಿ ಸೂಪರ್‌ಫೋನ್‌ಗಳನ್ನು ತಯಾರಿಸುತ್ತಿದ್ದು, ಅದರಲ್ಲಿ ನಾವು ಈಗ ಊಹಿಸಲೂ ಸಾಧ್ಯವಾಗದೆ ಟೆಕ್ನಾಲಜಿಗಳೆಲ್ಲ ಇರುತ್ತವಂತೆ, ಅದೇನು ಎಂಬ ಗುಟ್ಟನ್ನು ಕಂಪನಿ ಬಿಟ್ಟುಕೊಟ್ಟಿಲ್ಲ. ಆದರೆ ಈಗಲಿಂದ ಇನ್ನೊಂದು ಹೆಜ್ಜೆ ಮುಂದಂತೂ ಹೋಗಿರುತ್ತೇವೆ.

2019ರಲ್ಲಿ ಭಾರತದ ಟಾಪ್ 10 ಟ್ರೆಂಡ್ಸ್; 10ನೇಯದ್ದು ತುಂಬಾ ಇಂಟ್ರೆಸ್ಟಿಂಗ್!

ಬಿಟ್‌ಕಾಯಿನ್‌ ಮೌಲ್ಯ ದುಬಾರಿ

ಬಿಟ್‌ಕಾಯಿನ್‌ ಎಂಬ ಆನ್‌ಲೈನ್‌ ಹಣದ ಬಗ್ಗೆ ನೀವು ಕೇಳಿರಬಹುದು. ಸದ್ಯಕ್ಕೆ ಅದರ ಮೌಲ್ಯ ಸುಮಾರು 5.30 ಲಕ್ಷ ರೂಪಾಯಿಗಳಷ್ಟಿದೆ. ಮುಂದಿನ ಒಂದು ವರ್ಷದಲ್ಲಿ ಅವರ ಬೆಲೆ ಸುಮಾರು 80 ಲಕ್ಷ ರೂಪಾಯಿಗಳಿಗೆ ಏರಲಿದೆ ಎಂದು ಅಂದಾಜಿಸಲಾಗಿದೆ. ಇದಕ್ಕೆ ಕಾರಣ, ಎಲ್ಲ ದೇಶಗಳ ಕಾಗದದ ಹಣಕಾಸಿನ ಮೇಲೆ ನಂಬಿಕೆ ಕುಸಿಯುತ್ತಿರುವದು ಹಾಗೂ ಆನ್‌ಲೈನ್‌ ವಹಿವಾಟು ಹೆಚ್ಚುತ್ತಿರುವುದು.

ಹೈಪರ್‌ಲೂಪ್‌ ಪ್ರಯಾಣ

ಹೈಪರ್‌ಲೂಪ್‌ ಪ್ರಯಾಣ ಎಂಬುದು ಎಲಾನ್‌ ಮಸ್ಕ್‌ ಎಂಬ ಬೃಹತ್‌ ಉದ್ಯಮಿಯ ಕನಸು. ಇದು ಭೂಮಿಯ ಮೇಲೋ ಕೆಳಗೋ ಜೋಡಿಸಿದ ಬೃಹತ್‌ ಕೊಳವೆಗಳಲ್ಲಿ ವಾಹನಗಳು ಒಂದೆಡೆಯಿಂದ ಇನ್ನೊಂದೆಡೆ ವೇಗವಾಗಿ ಸಾಗುವ ವ್ಯವಸ್ಥೆ. ಇದರಲ್ಲಿ ಪೆಟ್ರೋಲ್‌ ಅಥವಾ ಡೀಸೆಲ್‌ ಇರಬೇಕಿಲ್ಲ. ಈ ಕನಸು ನಿಜವಾದರೆ ಗಂಟೆಗೆ ಸುಮಾರು 800 ಕಿಲೋಮೀಟರ್‌ನಷ್ಟು ದೂರವನ್ನು ಕ್ರಮಿಸಬಹುದು. ಲಾಸ್‌ಏಂಜಲೀಸ್‌ನಲ್ಲಿ ಇಂಥದೊಂದು ಲೂಪ್‌ ಪ್ರಗತಿಯಲ್ಲಿದೆ.

ಫೋಟೋಗ್ರಫಿಗೆ ಕಿರು ಡ್ರೋನ್‌ಗಳು

ಈಗ ಡ್ರೋನ್‌ ಫೋಟೋಗ್ರಫಿ ಸಾಮಾನ್ಯ. ಆದರೆ ಒಂದೊಂದು ಡ್ರೋನ್‌ಗೆ ಲಕ್ಷಾಂತರ ರೂಪಾಯಿ ಬೆಲೆಯಿದೆ. ಸಾಮಾನ್ಯರು ಇದನ್ನು ಕೊಳ್ಳಲು ಸಾಧ್ಯವಿಲ್ಲ. ನಿಮ್ಮ ಮೊಬೈಲ್‌ನಿಂದಲೇ ನಿಯಂತ್ರಿಸಬಹುದಾದ, ಕೀಚೈನ್‌ ಗಾತ್ರದ, ಫೋಟೋ ತೆಗೆದು ನಿಮ್ಮ ಮೊಬೈಲ್‌ಗೆ ಕಳುಹಿಸುವ ಡ್ರೋನ್‌ಗಳು ಬಂದರೆ ಫೋಟೋಗ್ರಫಿಗೆ ಎಷ್ಟು ಚಂದ ಅಲ್ಲವೇ? ಈ ಕನಸು ನನಸಾಗುವ ಕಾಲ ಹತ್ತಿರದಲ್ಲಿದೆ. ಕೆಲವು ಕಂಪನಿಗಳು ಇದರ ಸೃಷ್ಟಿಗೆ ತೊಡಗಿವೆ.

ಹಾರುವ ಟ್ಯಾಕ್ಸಿಗಳು

ಸೌದಿ ಅರೇಬಿಯದಲ್ಲಿ ಹಾರುವ ಟ್ಯಾಕ್ಸಿಗಳ ಮೊದಲ ಪ್ರಯೋಗವನ್ನು ನಡೆಸಲು ಬಾಡಿಗೆ ಟ್ಯಾಕ್ಸಿ ಕಂಪನಿ ಉಬರ್‌ ಸಿದ್ಧವಾಗಿದೆ. ಇದಿನ್ನೂ ಪ್ರಾಯೋಗಿಕ ಹಂತ ತಲುಪಿಲ್ಲ. ವಾಸ್ತವದಲ್ಲಿ ಇದು ಕಾರ್ಯರೂಪಕ್ಕೆ ಬಂದರೆ, ಬೆಂಗಳೂರಿನ ಟ್ರಾಫಿಕ್‌ ಜಾಮ್‌ ಸಮಸ್ಯೆಯಿಂದ ನಾವು ಸುಲಭದಲ್ಲಿ ಪಾರಾಗಬಹುದು. ಆದರೆ ಆಕಾಶದಲ್ಲೂ ಟ್ರಾಫಿಕ್‌ ಜಾಮ್‌ ಆದರೆ ನಾವು ಹೊಣೆಯಲ್ಲ.
 

ಡಿಸೆಂಬರ್ 30ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ