ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವ ಭಾರತೀಯ ಮಹಿಳಾ ವಿಜ್ಞಾನಿಗಳು, ನವೋದ್ಭಾವಕರಗಳ ಕಾರ್ಯಕ್ಷಮತೆಯನ್ನು ಗಮನಿಸಿದರೆ, 2047ರ ವೇಳೆಗೆ ಆತ್ಮನಿರ್ಭರ ಭಾರತವನ್ನಾಗಿಸುವುದು ಕಷ್ಟವಲ್ಲ ಎಂದು ತಿಳಿಯುತ್ತದೆ.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವ ಭಾರತೀಯ ಮಹಿಳಾ ವಿಜ್ಞಾನಿಗಳು, ನವೋದ್ಭಾವಕರಗಳ ಕಾರ್ಯಕ್ಷಮತೆಯನ್ನು ಗಮನಿಸಿದರೆ, 2047ರ ವೇಳೆಗೆ ಆತ್ಮನಿರ್ಭರ ಭಾರತವನ್ನಾಗಿಸುವುದು ಕಷ್ಟವಲ್ಲ ಎಂದು ತಿಳಿಯುತ್ತದೆ. ವಿಶೇಷವೆಂದರೆ ಇಂತಹ ಸಾಧನೆಯನ್ನು ಭಾರತೀಯ ಮಹಿಳೆಯರು ಮಾಡುತ್ತಿದ್ದರು ಕೂಡಾ, ಶಿಕ್ಷಣದಲ್ಲಿ, ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್‌ನಲ್ಲಿ ವಿಶೇಷವಾಗಿ ಸಂಶೋಧನೆ ಮಾಡುವವರನ್ನು ನೋಡುವುದಾದರೆ, ನಾವು ಇನ್ನೂ ಪ್ರಗತಿ ಸಾಧಿಸಬೇಕಿದೆ.

-ಡಾ। ಬಿ.ಈ.ರಂಗಸ್ವಾಮಿ,

ಕುಲಸಚಿವರು (ನಿಕಟಪೂರ್ವ) ವಿ.ಟಿ.ಯು., ಬೆಳಗಾವಿ

ಪ್ರಾಧ್ಯಾಪಕರು, ಜೈವಿಕ ತಂತ್ರಜ್ಞಾನ ವಿಭಾಗ

ಬಿ.ಐ.ಇ.ಟಿ. ದಾವಣಗೆರೆ

ಪ್ರತಿವರ್ಷ ಫೆಬ್ರುವರಿ 28ಅನ್ನು ಭಾರತದಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತದೆ. ಕಾರಣ ಜನಸಾಮಾನ್ಯರಲ್ಲಿ ವಿಜ್ಞಾನದ ಬಗ್ಗೆ ಅರಿವು ಮೂಡಿಸುವುದು ‘ರಾಷ್ಟ್ರಿಯ ವಿಜ್ಞಾನ ದಿನ’ ಆಚರಣೆಯ ಮುಖ್ಯಉದ್ದೇಶ. 1928ರ ಫೆಬ್ರವರಿ 28ರಂದು ಭಾರತದ ಹೆಮ್ಮೆಯ ವಿಜ್ಞಾನಿ ಸರ್.ಸಿ.ವಿ.ರಾಮನ್‌ ಅವರು ಜಗತ್ತಿಗೆ ‘ರಾಮನ್‌ ಪರಿಣಾಮ’ (Raman effect) ಅಧ್ಯಯನದ ವಿವರಗಳನ್ನು ವಿಶ್ವಕ್ಕೆ ತಿಳಿಯಪಡಿಸಿದ ದಿನ. ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಚಟುವಟಿಕೆಗಳನ್ನು ಒಂದು ನಿರ್ದಿಷ್ಟ ವಿಷಯದ ಸುತ್ತ ಆಯೋಜಿಸಲಾಗುತ್ತದೆ.ಈ ವರ್ಷದ ಚರ್ಚೆಯ ವಿಷಯ ವಿಜ್ಞಾನದಲ್ಲಿ ಮಹಿಳೆಯರು: ವಿಕಸಿತ ಭಾರತ ನಿರ್ಮಾಣಕ್ಕೆ ಪ್ರೇರಣೆ.

ಪ್ರಸ್ತುತ ಲೇಖನದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮಹಿಳೆಯರ ಸ್ಥಿತಿ ಮತ್ತು ಸಾಧನೆಗಳು ಮತ್ತು ಉನ್ನತ ಸಾಧನೆಗೆ ಬೇಕಾಗುವ ಅವಕಾಶಗಳನ್ನು ತಿಳಿಸುವ ಪ್ರಯತ್ನವಾಗಿದೆ. ಇಂದಿನ ಸಮಾಜದಲ್ಲಿ ಶಿಕ್ಷಣವು ಮಹಿಳೆಯರಿಗೆ ಅಧಿಕಾರ ನೀಡುವ ಅತ್ಯಂತ ಶಕ್ತಿಯುತ ಸಾಧನವಾಗಿದೆ. ಶಾಲೆಗಳು ನೀಡುವ ವೈಜ್ಞಾನಿಕ ಶಿಕ್ಷಣವು ಜೀವನ ಶಕ್ತಿಯ ಜೊತೆಗೆ ಮಹಿಳೆಯರಿಗೆ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್‌ ಮತ್ತು ಗಣಿತಶಾಸ್ತ್ರದಲ್ಲಿ ಸಮಾನ ಶೈಕ್ಷಣಿಕ ಲಾಭ ಕೊಡಬಲ್ಲದು. ಎಲ್ಲ ವರ್ಗದ ಹೆಣ್ಣುಮಕ್ಕಳು ಹೆಚ್ಚಾಗಿ ವಿಜ್ಞಾನ ಮತ್ತು ತಂತ್ರಜ್ಞಾನದ ವಿಷಯಗಳನ್ನು ಅಧ್ಯಯನ ಮಾಡುವಂತಹ ಪೂರಕ ವಾತಾವರಣದ ನಿರ್ಮಾಣ ಅತಿಮುಖ್ಯ. ಪ್ರಸ್ತುತ ಸಮಾಜವು ಮಹಿಳೆಯರು ಕೂಡ ಸಮಾಜದ ಅತಿಮುಖ್ಯ ಭಾಗ ಎಂದು ಅರ್ಥೈಸಿಕೊಳ್ಳಬೇಕು. ವಿಜ್ಞಾನ, ತಂತ್ರಜ್ಞಾನ ಮತ್ತು ಉದ್ಯಮ ಕ್ಷೇತ್ರದ ಮಹಿಳಾ ನವೋದ್ಯಮಿಗಳು (ಮಹಿಳಾ ಚೇಂಟ್‌ ಮೇಕರ್ಸ್) ಭಾರತದಲ್ಲಿ ಮಹಿಳಾ ನವೋದ್ಯಮಿಗಳು ಮತ್ತು ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ಬದಲಾವಣೆ ತಂದ ಹಲವಾರು ಮಹಿಳೆಯರು ಇತ್ತೀಚಿನ ವರ್ಷಗಳಲ್ಲಿ ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ತಂತ್ರಜ್ಞಾನ, ವಿಜ್ಞಾನ, ಸಾಮಾಜಿಕ ಕ್ಷೇತ್ರಗಳಲ್ಲಿ ಅವರ ಕೊಡುಗೆಗಳು ದೇಶವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿವೆ.

ಸಾಧಕಿ ಭಾರತದ ಸ್ತ್ರೀಯರು:

ಪ್ರಮುಖ ನವೋದ್ಭಾವಕರಗಳಲ್ಲಿ ಡಾ। ಟೆಸ್ಸಿ ಥಾಮಸ್‌ ಅವರು ‘ಮಿಸೈಲ್‌ ವುಮೆನ್ ಆಫ್ ಇಂಡಿಯಾ’ ಎಂದು ಕರೆಯಲ್ಪಡುವರು. ಇವರು ಅಗ್ನಿ ಮಿಸೈಲ್‌ ಅಭಿವೃದ್ಧಿಯಲ್ಲಿ ನಾಯಕತ್ವ ವಹಿಸಿ ಡಿಆರ್‌ಡಿಒದಲ್ಲಿ ಇವರು ರಕ್ಷಣಾ ತಂತ್ರಜ್ಞಾನದಲ್ಲಿ ಮಹಿಳಾ ಪ್ರತಿನಿಧಿತ್ವ ಹೆಚ್ಚಿಸಿದರು.

ನವದಾ ಗುಪ್ತಾರ ಅವರು ವ್ಯಾಕ್ಸಿನ್‌ಗಳ ಪರಿಣಾಮಕಾರಿ ಆವಿಷ್ಕಾರಕರಾಗಿದ್ದು, ಭಾರತದ ಲಸಿಕೆ ಉತ್ಪಾದನೆಯಲ್ಲಿ ಇವರ ಕೊಡುಗೆಯಿಂದ ಲಕ್ಷಾಂತರ ಜೀವಗಳು ಉಳಿದಿವೆ. ಡಾ। ಕಿರಣ ಮುಜುಂದಾರ್-ಶಾ ಅವರು ಬಯೋಟೆಕ್‌ ಕ್ಷೇತ್ರದಲ್ಲಿ ಭಾರತವನ್ನು ವಿಶ್ವದಲ್ಲಿ ಮುಂಚೂಣಿಯಾಗಿ ತಂದ ಮಹಿಳಾ ಉದ್ಯಮಿ. ವಿಜ್ಞಾನ ಕ್ಷೇತ್ರದಲ್ಲಿ ರಿತು ಕರಿಧಾಲ್‌ ಅವರ ಸಾಧನೆ ಎಂದರೆ, ಮಂಗಳಯಾನ (Mangalyaan) ಯೋಜನೆಯ ಪ್ರಮುಖ ವಿಜ್ಞಾನಿಯಾಗಿದ್ದು, ಇಸ್ರೋದಲ್ಲಿ ಚಂದ್ರಯಾನ, ಮಂಗಳಯಾನಗಳಲ್ಲಿ ಮಹತ್ವದ ಪಾತ್ರ ವಹಿಸಿದ ಇವರನ್ನು ‘ರಾಕೆಟ್‌ ವುಮೆನ್‌ ಆಫ್‌ ಇಂಡಿಯಾ’ ಎಂದು ಗುರುತಿಸಲಾಗಿದೆ. ಗಗನ್‌ದೀಪ ಕಾಂಗ್ರ್‌ ಅವರು ಮಕ್ಕಳ ಆರೋಗ್ಯ ಮತ್ತು ಸೋಂಕು ರೋಗಗಳ ಸಂಶೋಧನೆಯಲ್ಲಿ ತಜ್ಞರಾಗಿದ್ದು, ಭಾರತದ ಮೊದಲ ಮಹಿಳಾ ರಾಯಲ್‌ ಸೊಸೈಟಿಫೆಲೋ (FRS) ಆಗಿದ್ದರು. ಇಮ್ಯುನಿಟಿ ಮತ್ತು ಇನ್ಫೆಕ್ಷನ್‌ ಸಂಶೋಧನೆಯಲ್ಲಿ ವಿಶ್ವ ಪ್ರಸಿದ್ಧರು. ವಿದಿತಾ ವೈಧ್ಯ ಅವರು ಮೆದುಳಿನ ಸಂಶೋಧನೆ ಮತ್ತು ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ನವೋದ್ಯಮಿಯಾಗಿದ್ದು, TIFR-ನಲ್ಲಿ ಪ್ರೊಫೆಸರ್‌ ಆಗಿರುವ ಇವರು ಡಿಪ್ರೆಶನ್‌ ಮತ್ತು ಆಂಕ್ಸೈಟಿ ಸಂಶೋಧನೆಯಲ್ಲಿ ಪ್ರಮುಖರು.

ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವ ಭಾರತೀಯ ಮಹಿಳಾ ವಿಜ್ಞಾನಿಗಳು, ನವೋದ್ಭಾವಕರಗಳ ಕಾರ್ಯಕ್ಷಮತೆಯನ್ನು ಗಮನಿಸಿದರೆ, 2047ರ ವೇಳೆಗೆ ಆತ್ಮನಿರ್ಭರ ಭಾರತವನ್ನಾಗಿಸುವುದು ಕಷ್ಟವಲ್ಲ ಎಂದು ತಿಳಿಯುತ್ತದೆ. ವಿಶೇಷವೆಂದರೆ ಇಂತಹ ಸಾಧನೆಯನ್ನು ಭಾರತೀಯ ಮಹಿಳೆಯರು ಮಾಡುತ್ತಿದ್ದರು ಕೂಡಾ, ಶಿಕ್ಷಣದಲ್ಲಿ, ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್‌ನಲ್ಲಿ ವಿಶೇಷವಾಗಿ ಸಂಶೋಧನೆ ಮಾಡುವವರನ್ನು ನೋಡುವುದಾದರೆ, ನಾವು ಇನ್ನೂ ಪ್ರಗತಿ ಸಾಧಿಸಬೇಕಿದೆ.

ಸಂಶೋಧಕಿಯರ ಸಂಖ್ಯೆ ಕಡಿಮೆ:

ಯುನೆಸ್ಕೋ ಇನ್‌ಸ್ಟಿಟ್ಯೂಟ್‌ ಆಫ್‌ ಸ್ಟ್ಯಾಟಿಸ್ಟಿಕ್ಸ್‌ನ ಇತ್ತೀಚಿನ ವರದಿಯ ಪ್ರಕಾರ ಶೇ.28.8ರಷ್ಟು ಮಹಿಳೆಯರು ವಿಜ್ಞಾನದ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ತೊಡಗಿದ್ದಾರೆ. ಅಂದರೆ ಪ್ರಪಂಚದಲ್ಲಿನ ಎಲ್ಲ ರಾಷ್ಟ್ರಗಳಲ್ಲಿರುವ ಒಟ್ಟು ಮಹಿಳಾ ಸಂಶೋಧಕರ ಸಂಖ್ಯೆ ಶೇ.30ಕ್ಕಿಂತ ಕಡಿಮೆ. ಇನ್ನು ಭಾರತದಲ್ಲಿನ ಅಂಕಿ ಅಂಶಗಳನ್ನು ಪರಿಶೀಲಿಸಿದಾಗ ಒಟ್ಟಾರೆ ಸುಮಾರು 3.42 ಲಕ್ಷ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಸಂಶೋಧಕರಲ್ಲಿ, ಕೇವಲ 56747 ಅಂದರೆ ಶೇ.16.6ರಿಂದ 17ರಷ್ಟು ಮಾತ್ರ ಮಹಿಳಾ ಸಂಶೋಧಕರಿದ್ದಾರೆ. ಹಾಗೆಯೇ, ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ 2017-18ರ ವರದಿಯ ಪ್ರಕಾರ ವಿವಿಧ ಕ್ಷೇತ್ರಗಳ ಸಂಶೋಧನೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ನೋಡಿದಾಗ 1999-2000ದಲ್ಲಿ ಕೇವಲ 232 ಮಹಿಳೆಯರು ಮಾತ್ರ ಸಂಶೋಧನಾ ಪ್ರಾಜೆಕ್ಟ್‌ಗಳಿಗೆ ಹಣಕಾಸು ನೆರವು ಪಡೆದಿದ್ದು, 2015-16ರಲ್ಲಿ ಸುಮಾರು 1400 ಮಹಿಳೆಯರಿಗೆ ಕೇಂದ್ರ ಸಚಿವಾಲಯದಿಂದ ಸಂಶೋಧನಾ ಪ್ರಾಜೆಕ್ಟ್‌ಗಳಿಗೆ ಧನ ಸಹಾಯ ನೀಡಲಾಗಿದೆ.

ಸ್ಪರ್ಧಾತ್ಮಕ ಅನುದಾನ ವ್ಯವಸ್ಥೆಯಡಿ ಹೊರಗಿನ ಸಂಶೋಧನಾ ಅನುದಾನ (EMR- Extramural Research) ಪಡೆದ ಸಂಶೋಧನಾ ಯೋಜನೆಗಳಲ್ಲಿ ಮಹಿಳಾ ಪ್ರಧಾನ ಸಂಶೋಧಕರ (PIs) ಭಾಗವಹಿಸುವಿಕೆ 2016–17ರಲ್ಲಿ ಶೇ.24 ಇತ್ತು. ಆದರೆ 2018–19ರಲ್ಲಿ ಇದು ಶೇ.28ಕ್ಕೆ ಹೆಚ್ಚಾಗಿದೆ. ನಮ್ಮ ದೇಶದಲ್ಲಿ ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್, ಗಣಿತ (STEM) ವಿಷಯಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಲ್ಲಿ ಸುಮಾರು ಶೇ.43 ಮಹಿಳೆಯರು ಇದ್ದು, ಇದು ಜಾಗತಿಕ ಸರಾಸರಿ (ಸುಮಾರು ಶೇ.35)ಗಿಂತ ಹೆಚ್ಚಾಗಿದೆ. ಈ ಮೇಲಿನ ಸಂಗತಿಯಿಂದ ತಿಳಿಯುವುದೇನೆಂದರೆ ವರ್ಷದಿಂದ ವರ್ಷಕ್ಕೆ ಪದವಿ, ಸ್ನಾತಕೋತ್ತರ ಮತ್ತು ಪಿಎಚ್‌ಡಿ ಮಟ್ಟದಲ್ಲೂ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಾಗಿದೆ. ಇನ್ನು ಉನ್ನತ ಶಿಕ್ಷಣದಲ್ಲಿ ಮಹಿಳೆಯರ ದಾಖಲಾತಿಯನ್ನು ಗಮನಿಸಿದಾಗ, 1999-2000ದಲ್ಲಿ 13.67 ಲಕ್ಷದಿಂದ 2016-17ರಲ್ಲಿ ಈ ಸಂಖ್ಯೆಯು 141.56 ಲಕ್ಷಕ್ಕೆ ಏರಿದೆ. ಅಖಿಲ ಭಾರತ ಉನ್ನತ ಶಿಕ್ಷಣ ಸಮೀಕ್ಷೆ (AISHE) 2021–22 ವರದಿಯ ಪ್ರಕಾರ, ಭಾರತದಲ್ಲಿ ಉನ್ನತ ಶಿಕ್ಷಣದ ಒಟ್ಟು ವಿದ್ಯಾರ್ಥಿ ದಾಖಲಾತಿಯಲ್ಲಿ ಮಹಿಳೆಯರ ಪಾಲು ಸುಮಾರು ಶೇ.48 ಆಗಿದೆ. (ಒಟ್ಟು ಸುಮಾರು 4.33 ಕೋಟಿ ವಿದ್ಯಾರ್ಥಿಗಳಲ್ಲಿ ಸುಮಾರು 2.07 ಕೋಟಿ ಮಹಿಳಾ ವಿದ್ಯಾರ್ಥಿನಿಯರು). ಇದು ಪುರುಷರ ಸಂಖ್ಯೆಗೆ ಸಮೀಪವಾಗಿದ್ದು, ಲಿಂಗ ಅಂತರ ಕಡಿಮೆಯಾಗುತ್ತಿರುವ ನಿರಂತರ ಪ್ರವೃತ್ತಿಯನ್ನು ಸೂಚಿಸುತ್ತದೆ. 2026-27ನೇ ವರ್ಷದ ವೇಳೆಗೆ ಶೇ.50ಕ್ಕಿಂತ ಹೆಚ್ಚು ಮಹಿಳೆಯರು ಉನ್ನತ ಶಿಕ್ಷಣದಲ್ಲಿ ದಾಖಲಾಗಬಹುದೆಂದು ಊಹಿಸಬಹುದು. ಇನ್ನು ಇದೇ ಕ್ಷೇತ್ರದಲ್ಲಿ ಶಿಕ್ಷಕ/ಅಧ್ಯಾಪಕ ವೃತ್ತಿಗೆ ದಾಖಲಾದ ಮಹಿಳೆಯರ ಸಂಖ್ಯೆ 1989-90ರಲ್ಲಿ 3.4 ಲಕ್ಷದಷ್ಟಿದ್ದರೆ, 2018-19ರಲ್ಲಿ ಇವರ ಸಂಖ್ಯೆ 47 ಲಕ್ಷಕ್ಕೆ ಏರಿಕೆ ಕಂಡಿದೆ. ಇವುಗಳಲ್ಲಿ ಶೇ.53.3ರಷ್ಟು ಮೂಲವಿಜ್ಞಾನಕ್ಕೆ ಸೇರಿದವರು. ಶೇ.15.5ರಷ್ಟು, ವೈದ್ಯಕೀಯ ಕ್ಷೇತ್ರ, ಶೇ.29.4ರಷ್ಟು ಎಂಜಿನಿಯರಿಂಗ್‌ ಮತ್ತು ತಂತ್ರಜ್ಞಾನದಲ್ಲಿ ಹಾಗೂ ಶೇ.1.5ರಷ್ಟು ಮಹಿಳೆಯರು ಕೃಷಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಅಧ್ಯಾಪನ ವೃತ್ತಿಯಲ್ಲಿ ಮಹಿಳೆಯರ ಸಂಖ್ಯೆ ಏರಿಕೆ:

ಆದರೆ, ಇತ್ತೀಚಿನ ಅಂಕಿ ಅಂಶಗಳ ಪ್ರಕಾರ, ಭಾರತದಲ್ಲಿ ಅಧ್ಯಾಪನ ವೃತ್ತಿಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಗಮನಾರ್ಹವಾಗಿ ಹೆಚ್ಚಾಗಿದೆ. ಶಾಲಾ ಶಿಕ್ಷಣ ಕ್ಷೇತ್ರದಲ್ಲಿ, UDISE+ 2023–24 ವರದಿಯ ಪ್ರಕಾರ, ಒಟ್ಟು ಶಿಕ್ಷಕರಲ್ಲಿ ಸುಮಾರು ಶೇ.53.3ರಷ್ಟು ಮಹಿಳಾ ಶಿಕ್ಷಕರಿದ್ದಾರೆ. ಅಂದರೆ, ಶಾಲಾ ಮಟ್ಟದಲ್ಲಿ ಮಹಿಳೆಯರು ಈಗ ಬಹುಮತ ಹೊಂದಿದ್ದಾರೆ. ಸುಮಾರು 52 ಲಕ್ಷ ಮಹಿಳಾ ಶಿಕ್ಷಕರು ಮತ್ತು 45 ಲಕ್ಷ ಪುರುಷ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ. ಉನ್ನತ ಶಿಕ್ಷಣ ಕ್ಷೇತ್ರದಲ್ಲಿ (ಕಾಲೇಜು ಮತ್ತು ವಿವಿಗಳು), AISHE 2021–22 ವರದಿ ಪ್ರಕಾರ, ಒಟ್ಟು ಅಧ್ಯಾಪಕರಲ್ಲಿ ಸುಮಾರು ಶೇ.43ರಷ್ಟು ಮಹಿಳೆಯರು ಇದ್ದು, ಭಾರತೀಯ ವಿವಿಗಳಲ್ಲಿ STEM (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್‌ ಮತ್ತು ಗಣಿತ) ವಿಭಾಗದ ಅಧ್ಯಾಪಕರಲ್ಲಿ ಸುಮಾರು ಶೇ.14ರಷ್ಟು ಮಾತ್ರ ಮಹಿಳೆಯರು ಇದ್ದಾರೆ. ಭಾರತದ ಒಟ್ಟಾರೆ STEM ಕ್ಷೇತ್ರದಲ್ಲಿ ಮಹಿಳಾ ಅಧ್ಯಾಪಕರ ಪ್ರಮಾಣವು ಶೇ.16ಕ್ಕಿಂತ ಕಡಿಮೆ ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚು.

ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಮಟ್ಟದ ಹುದ್ದೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಇನ್ನೂ ಕಡಿಮೆ ಎನ್ನುವುದು ಸ್ಪಷ್ಟವಾಗುತ್ತದೆ. ಈ ಸಂಖ್ಯೆಯು ಒಟ್ಟಾರೆ ಮಹಿಳಾ ಜನಸಂಖ್ಯೆಯನ್ನು ನೋಡಿದಾಗ ಕಡಿಮೆ ಎನಿಸುತ್ತದೆ. ಅಂಕಿ ಅಂಶಗಳನ್ನು ನೋಡಿದಾಗ ಮಹಿಳೆಯರು ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಉನ್ನತ ವ್ಯಾಸಂಗ ಮತ್ತು ಡಾಕ್ಟರೆಟ್‌ ಪದವಿಗಳನ್ನು ಪಡೆದ ಮಹಿಳೆಯರ ಸಂಖ್ಯೆ ವಿವಿಧ ಕ್ಷೇತ್ರಗಳಲ್ಲಿ ಪ್ರತಿ ವರ್ಷ ಹೆಚ್ಚುತ್ತಾ ಹೋಗುತ್ತಿದ್ದರೂ ಕೂಡ ಉನ್ನತಮಟ್ಟದಲ್ಲಿ ಮಹಿಳಾ ಸಂಶೋಧಕರು ಮತ್ತು ವಿಜ್ಞಾನಿಗಳ ಸಂಖ್ಯೆ ಇದೇ ವೇಗದಲ್ಲಿ ಬೆಳೆಯುತ್ತಿಲ್ಲ.

ಯಾವುದೇ ಮಹಿಳೆಯರಿಗೆ ವೃತ್ತಿ ಬದುಕಿನಲ್ಲಿ ಅಥವಾ ವೈಯಕ್ತಿಕ ಜೀವನದಲ್ಲಿ ಮಹತ್ತರವಾದುದನ್ನು ಸಾಧಿಸಲು, ಕುಟುಂಬದ ಬೆಂಬಲವು ಪ್ರಮುಖ ಪಾತ್ರ ವಹಿಸುತ್ತದೆ. ಭಾರತದಲ್ಲಿ ಮಹಿಳೆಯರ ವಿದ್ಯಾಭ್ಯಾಸದ ವಿಷಯ ಬಂದಾಗ ತೀರ್ಮಾನವನ್ನು ಕುಟುಂಬದಲ್ಲಿ ಪುರುಷರು ಅಥವಾ ಮಹಿಳೆಯರ ಪತಿ ಮಾಡುತ್ತಾರೆ. ಏಕೆಂದರೆ ಉನ್ನತ ವಿದ್ಯಾಭ್ಯಾಸ ಮತ್ತು ಸಂಶೋಧನೆಗೆ ಹಣಕಾಸಿನ ಜೊತೆಗೆ ಹೆಚ್ಚು ಸಮಯವನ್ನು ಮಹಿಳೆ ನೀಡಬೇಕಾಗಿರುತ್ತದೆ. ಅಲ್ಲದೆ ಕುಟುಂಬದ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನ ಕೊಡುವುದು ಪ್ರಮುಖವಾಗಿರುತ್ತದೆ. ತಮ್ಮ ವೈಯಕ್ತಿಕ ಸಾಧನೆಗಿಂತ, ಕುಟುಂಬದ ನಿರ್ವಹಣೆ ಮಹಿಳೆಯರ ಆದ್ಯ ಕರ್ತವ್ಯವಾಗಿರುತ್ತದೆ.

ವಿಜ್ಞಾನವು ಜೀವನದ ಒಂದು ಮಾರ್ಗವಾಗಿದ್ದು ಕೇವಲ ಕೆಲಸವಲ್ಲ ಎಂಬುದು ಗಮನಾರ್ಹ. ಭಾರತದಲ್ಲಿ ಮಹಿಳೆಯರು ವಿಜ್ಞಾನ ಮತ್ತು ತಂತ್ರಜ್ಞಾನ ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಆದರೆ, ಉದ್ಯೋಗ, ಸಂಶೋಧನೆ ಮತ್ತು ನಾಯಕತ್ವ ಕ್ಷೇತ್ರದಲ್ಲಿ ಸಮಾನ ಪ್ರತಿನಿಧಿತ್ವ ಪಡೆಯಲು ಇನ್ನೂ ಪ್ರಯತ್ನ ಅಗತ್ಯವಿದೆ. ಮಹಿಳೆಯರಿಗೆ ಸಮಾನ ಅವಕಾಶ ದೊರೆತರೆ, ದೇಶದ ವೈಜ್ಞಾನಿಕ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಬಹುದು. ಮುಂಬರುವ ದಶಕದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮಹಿಳೆಯರ ಸಂಖ್ಯೆ ಮತ್ತು ಸಾಧನೆ ಹೆಚ್ಚಾಗಲಿ ಎಂದು ಆಶಿಸುವ.