2000ನೇ ಇಸವಿಯಲ್ಲಿ ಪ್ರಳಯವಾಗಲಿದೆ ಎಂದು ಕೆಲವರು ಹೇಳಿದ್ದರು. ಅದು ನಿಜವಾಗಲಿಲ್ಲ. 2010ನೇ ಇಸವಿಯಲ್ಲಿ ಪ್ರಳಯವಾಗಲಿದೆ ಎಂದು ಅದನ್ನು ಮುಂದೂಡಿದರು. ಅದೂ ನಿಜವಾಗಲಿಲ್ಲ. ಈಗ ಪ್ರಳಯ 2020ಕ್ಕೆ ಮುಂದೂಡಲ್ಪಟ್ಟಿದೆ! ಇದೂ ನಿಜವಾಗುವ ಸಾಧ್ಯತೆಗಳಿಲ್ಲ. ತಂತ್ರಜ್ಞಾನದ ಆಧುನಿಕ ಬೆಳವಣಿಗೆಯ ಹಿನ್ನೆಲೆಯಲ್ಲಿ ಇಂತಿಷ್ಟು ವರ್ಷದ ಒಳಗೆ ಏನೇನೋ ಆಗಬಹುದು ಎಂದು ನಾವೆಲ್ಲ ಊಹಿಸುತ್ತೇವೆ.

2000ನೇ ಇಸವಿಯ ಒಳಗೆ ನಾವು ಮನುಷ್ಯ ಮಂಗಳ ಗ್ರಹದ ಮೇಲೆ ಕಾಲಿಡಲಿದ್ದಾನೆ ಎಂದು ವಿಜ್ಞಾನ ಕತೆ ಕಾದಂಬರಿ ಬರೆಯುವವರು ಊಹಿಸಿದ್ದರು, ಅದೂ ನಿಜವಾಗಲಿಲ್ಲ. ಹೀಗೇ 2020ರೊಳಗೆ ಏನೇನೋ ಆಗಬಹುದು ಎಂದು ಊಹಿಸಿದ ಹಲವು ಸಂಗತಿಗಳು ನಿಜವಾಗಿಲ್ಲ. ಆದ್ರೂ ಅವು ತುಂಬ ತಮಾಷೆಯಾಗಿವೆ. ಅಂಥ ಹುಸಿಹೋದ ನಿರೀಕ್ಷೆಗಳು ಯಾವುದು ಅಂತ ನೋಡೋಣ.

ಗುಡ್‌ ಬೈ 2019: ಕಿರುತೆರೆಯಲ್ಲಿ ಸದ್ದು ಮಾಡಿದ ಟಾಪ್ 10 ಸೀರಿಯಲ್‌ಗಳಿವು!

ಮನುಷ್ಯನ ಕಾಲು ಹೆಬ್ಬೆಟ್ಟಾಗಲಿದೆ!

2020ರೊಳಗೆ ಮನುಷ್ಯನ ಕಾಲ ಬೆರಳುಗಳೆಲ್ಲ ಒಟ್ಟಾಗಿ ಸೇರಿಕೊಂಡು ಒಂದೇ ದೊಡ್ಡ ಹೆಬ್ಬೆಟ್ಟಾಗಿ ಪರಿವರ್ತನೆ ಆಗಲಿದೆ ಅಂತ 1911ರಲ್ಲಿ ರಾಯಲ್‌ ಕಾಲೇಜ್‌ ಆಫ್‌ ಸರ್ಜನ್ಸ್‌ನಲ್ಲಿ ಲೆಕ್ಚರ್‌ ನೀಡಿದ ರಿಚರ್ಡ್‌ ಕ್ಲೆಮೆಂಟ್‌ ಲ್ಯೂಕಾಸ್‌ ಎಂಬ ಸರ್ಜನ್‌ ಹೇಳಿದ್ದ! ಬಳಕೆಯಲ್ಲಿ ಉಳಿಯದ ಬೆರಳುಗಳು ಸೇರಿಕೊಂಡು ಹೀಗಾಗಲಿವೆ ಎಂದವನ ನಿರೀಕ್ಷೆಯಾಗಿತ್ತು. ಇದು ನಿಜವಾಗಿದ್ದರೆ ಚಪ್ಪಲಿಗಳು ಹೇಗಿರುತ್ತಿದ್ದವೋ!

ಮನುಷ್ಯನಿಗೆ ವಾನರ ಸೇವಕರು!

ರಾರ‍ಯಂಡ್‌ ಕಾರ್ಪೊರೇಶನ್‌ ಎಂಬ ಬಾಹ್ಯಾಕಾಶ ಸೇವಾ ಸಂಸ್ಥೆಯೊಂದು 1990ರಲ್ಲಿ ಊಹಿಸಿದ ಪ್ರಕಾರ, 2020ನೇ ಇಸವಿಯೊಳಗೆ ಮನುಷ್ಯನ ಬಹುಪಾಲು ಕೆಲಸಗಳನ್ನು ಬುದ್ಧಿವಂತ ಮಂಗಗಳು, ಗೊರಿಲ್ಲಾಗಳು, ಚಿಂಪಾಂಜಿಗಳು ಮಾಡಲಿವೆ. ಮನುಷ್ಯ ಅವುಗಳನ್ನು ಎಷ್ಟು ಪಳಗಿಸಲಿದ್ದಾನೆ ಎಂದರೆ, ಅವನ ಕಾರನ್ನೂ ಅವುಗಳೇ ತಪ್ಪಿಲ್ಲದಂತೆ ಡ್ರೈವ್‌ ಮಾಡಿಕೊಂಡು ಹೋಗುತ್ತವೆ! ಇಂಥ ಸಂಬಳರಹಿತ ಸೇವಕರು ಯಾರಿಗೆ ಬೇಡ?

ಹಾರುವ ಮನೆಗಳು!

ವಿಜ್ಞಾನ ಕಾದಂಬರಿಕಾರ ಆರ್ಥರ್‌ ಸಿ ಕ್ಲಾರ್ಕ್‌ ಊಹೆ ಮಾಡಿದ ಪ್ರಕಾರ, 21ನೇ ಶತಮಾನದ ಒಳಗೆ ಹಾರುವ ಮನೆಗಳು ಸೃಷ್ಟಿಯಾಗುತ್ತವೆ. ಒಂದೆರಡಲ್ಲ, ಹಾರುವ ಮನೆಗಳ ಕಾಲನಿಗಳೇ ಉಂಟಾಗಲಿವೆ. ಇವು ಚಳಿಗಾಲದಲ್ಲಿ ಉತ್ತರದಿಂದ ದಕ್ಷಿಣಕ್ಕೆ ಬೆಚ್ಚಗಿನ ಪ್ರದೇಶಗಳಿಗೆ ಹಾರುತ್ತವೆ! ಮನೆ ಯಜಮಾನರಿಗೆ ಹಿಮಾಲಯಕ್ಕೆ ಹೋಗಬೇಕನಿಸಿದರೆ ಹಿಮಾಲಯದ ಬುಡದಲ್ಲಿ, ಸಮುದ್ರ ತೀರæ್ಕ ಹೋಗಬೇಕೆನಿಸಿದರೆ ಅಲ್ಲಿ ಹೋಗಿ ಇಳಿಯುತ್ತವೆ!

2020ಕ್ಕೂ ಮುನ್ನ ನೀವು ಈ 20 ಕೆಲಸಗಳನ್ನು ಮಾಡಲೇಬೇಕು!

ಟೆಕ್ನಾಲಜಿ ಉದ್ಯಮದಲ್ಲಿ ಎಕ್ಸ್‌ಪರ್ಟ್‌ ಆಗಿದ್ದ ಮೈಕೆಲ್‌ ಜೆ ಒಫರೇಲ್‌ ಎಂಬಾತ 1985ರಲ್ಲಿ ಊಹಿಸಿದ ಪ್ರಕಾರ ‘ಸೂಕ್ಷ್ಮಸಂಚಾರದ ಯುಗ’ ಬರಲಿದೆ. ಅಂದರೆ ಮನುಷ್ಯರು ಟೆಲಿಪತಿಯ ಮೂಲಕ ಪರಸ್ಪರರನ್ನು ಕಾಂಟ್ಯಾಕ್ಟ್ ಮಾಡುತ್ತಾರೆ; ಅಂದರೆ ಮನಸ್ಸಿನಲ್ಲಿ ಅಂದುಕೊಂಡದ್ದು ಇನ್ನೊಬ್ಬನಿಗೆ ಗೊತ್ತಾಗುತ್ತದೆ. ಹಾಗೂ ಮನಸ್ಸನ್ನೇ ಉಪಯೋಗಿಸಿ ಒಂದೆಡೆಯಿಂದ ಇನ್ನೊಂದೆಡೆಗೆ ಹೋಗುವ ಸಾಮರ್ಥ್ಯ‌ವನ್ನೂ ಗಳಿಸಬಹುದು ಅಂದುಕೊಂಡಿದ್ದ. ಇಂಥ ಯೋಚನೆ ಈಡೇರದೆ ಇರುವುದೇ ಒಳ್ಳೆಯದು ಅನಿಸುತ್ತದೆ ಅಲ್ಲವೇ!

ಎಲ್ಲ ರಸ್ತೆಗಳೂ ಟ್ಯೂಬುಗಳಾಗುತ್ತವೆ!

1957ರಲ್ಲಿ ಪಾಪ್ಯುಲರ್‌ ಮೆಕ್ಯಾನಿಕ್‌ ಎಂಬ ಟೆಕ್ನಾಲಜಿ ಮ್ಯಾಗಜಿನ್‌ ಒಂದರಲ್ಲಿ ಪ್ರಕಟವಾದ ನಿರೀಕ್ಷೆಯಂತೆ, 21ನೇ ಶತಮಾನದ ಆಗಮನದ ಒಳಗೆ ಅಮೆರಿಕೆ ಎಲ್ಲ ರಸ್ತೆಗಳೂ ದೊಡ್ಡ ದೊಡ್ಡ ಟ್ಯೂಬುಗಳಾಗುತ್ತವೆ. ಮನೆಯಿಂದ ಕಾರ್‌ನ ಮೂಲಕ ಈ ಟ್ಯೂಬನ್ನು ತಲುಪಿಕೊಂಡರೆ ಸಾಕು, ನಂತರ ಕಾರನ್ನು ಚಲಾಯಿಸಬೇಕೆಂದಿಲ್ಲ. ಅದು ಎಲ್ಲಿಗೆ ಬೇಕೋ ಅಲ್ಲಿಗೆ ನಮ್ಮನ್ನು ಒಯ್ಯುತ್ತದೆ. ಈಗ ಹೈಪರ್‌ಲೂಪ್‌ ಎಂಬ ಇದೇ ಕಲ್ಪನೆಯ ದಾರಿಯೊಂದರ ಸೃಷ್ಟಿ ಶುರುವಾಗಿದೆ.

ಬಡವರೇ ಇರುವುದಿಲ್ಲ!

1966ರಲ್ಲಿ ಅಮೆರಿಕದ ಟೈಮ್‌ ಎಂಬ ಮ್ಯಾಗಜೈನ್‌, 2020ರಲ್ಲಿ ಯಾರೂ ದುಡಿಯಬೇಕಿಲ್ಲ, ಈ ಜಗತ್ತಿನಲ್ಲಿ ಬಡವರೇ ಇರುವುದಿಲ್ಲ, ಎಲ್ಲರೂ ಶ್ರೀಮಂತರಾಗಿರುತ್ತಾರೆ ಎಂದು ಊಹಿಸಿ ಬರೆದಿತ್ತು. ಎಲ್ಲ ಕೆಲಸಗಳನ್ನೂ ಯಂತ್ರಗಳೇ ಮಾಡುವುದರಿಂದ ಮನುಷ್ಯನಿಗೆ ಕೆಲಸವಿರುವುದಲ್ಲ ಎಂದು ಊಹಿಸಿತ್ತು. ಕೆಲಸ ಮಾಡುವ ಯಂತ್ರಗಳು ಹೆಚ್ಚಿರುವುದೇನೋ ನಿಜ. ಆದರೆ ಬಡತನ ಒಂಚೂರೂ ಕಡಿಮೆಯಾಗಿಲ್ಲ ಎಂಬುದನ್ನು ನೀವು ನೋಡುತ್ತಿದ್ದೀರಿ.

ಗುಡ್‌ ಬೈ 2019: ವಿಭಿನ್ನ ಡ್ರೆಸ್ ಧರಿಸಿ ಹೊಸ ಟ್ರೆಂಡ್ ಕ್ರಿಯೇಟ್ ಮಾಡಿದ ಸೆಲೆಬ್ರಿಟಿಗಳು!

ರಾಕೆಟ್‌ನಲ್ಲಿ ಅಂಚೆ!

1959ರಲ್ಲಿ ಒಂದು ವಿಚಿತ್ರ ಪ್ರಯೋಗ ನಡೆಯಿತು. ಅಮೆರಿಕದ ಸಮುದ್ರದಿಂದ ಅಮೆರಿಕದ ಅಧ್ಯಕ್ಷರಿಗೆ ಸೇರಿದಂತೆ ಹಲವು ನಾಯಕರಿಗೆ ಸುಮಾರು 3000 ಅಂಚೆಪತ್ರಗಳನ್ನು ಕ್ಷಿಪಣಿಯ ಮೂಲಕ ಉಡಾಯಿಸಿ ಪಡೆಯಲಾಯಿತು. ಮುಂದಿನ ಶತಮಾನದಲ್ಲಿ ಇದು ಸರ್ವೇಸಾಧಾರಣ ಆಗಲಿದೆ; ಎಲ್ಲರೂ ಜಗತ್ತಿನ ಒಂದೆಡೆಯಿಂದ ಇನ್ನೊಂದೆಡೆಗೆ ರಾಕೆಟ್‌ ಮೂಲಕ ಅಂಚೆ ಕಳುಹಿಸಬಹುದು ಎಂದು ಆಗ ಊಹಿಸಲಾಯಿತು. ಆದರೆ ಈಗ ನಾವು ಅದಕ್ಕಿಂತ ಉತ್ತಮವಾದ ಇ-ಮೇಲ್‌ ಆವಿಷ್ಕರಿಸಿಕೊಂಡಿದ್ದೇವೆ.

ಮಂಗಳನಲ್ಲಿ ಮಾನವ

ಮಂಗಳ ಗ್ರಹ ಪತ್ತೆಯಾದಂದಿನಿಂದಲೂ ಅಲ್ಲಿ ಕಾಲಿಡುವುದು ಮನುಷ್ಯನ ಕನಸು. ಚಂದ್ರನಲ್ಲಿಗೇನೋ ಮಾನವ ಕಾಲಿಟ್ಟಿದ್ದಾನೆ, ಮಂಗಳನಲ್ಲಿಗೆ ನೌಕೆಯನ್ನೂ ಕಳಿಸಿದ್ದಾನೆ. ಆದರೆ ಮನುಷ್ಯ ಹೋಗುವುದು ಇನ್ನೂ ದೂರದ ಕನಸಾಗಿದೆ. 1997ರಲ್ಲಿ ವೈರ್ಡ್‌ ಮ್ಯಾಗಜಿನ್‌ನಲ್ಲಿ ಪೀಟರ್‌ ಶ್ವಾರ್ಟ್ಸ್ ಮತ್ತು ಪೀಟರ್‌ ಲೇಡೆನ್‌ ಎಂಬ ತಜ್ಞರು ಮಂಗಳನಲ್ಲಿಗೆ 2020ರಲ್ಲಿ ಮನುಷ್ಯರು ನೌಕೆಗಳ ಮೂಲಕ ಹೋಗಿ ಇಳಿಯುತ್ತಾರೆ ಎಂದು ಊಹಿಸಿದ್ದರು. ಆದರೆ ಅಮೆರಿಕದ ನಾಸಾ ಸಂಸ್ಥೆ ಕೂಡ ಈ ಯೋಜನೆಯನ್ನು 2030ಕ್ಕೆ ಮುಂದೂಡಿದೆ.

ಎಲ್ಲರೂ ಸಸ್ಯಾಹಾರಿಗಳಾಗುತ್ತಾರೆ

1913ರಲ್ಲಿ ಗುಸ್ತಾವ್‌ ಬಿಷೋಫ್‌ ಎಂಬ ಮಾಂಸ ವ್ಯಾಪಾರಿಗಳ ಒಕ್ಕೂಟದ ಅಧ್ಯಕ್ಷ ಊಹಿಸಿದ್ದು ಹೇಗೆಂದರೆ, 21ನೇ ಶತಮಾನದಲ್ಲಿ ಮಾಂಸದ ಕೊರತೆ ಉಂಟಾಗಲಿದೆ. ಆಗ ಎಲ್ಲ ಮನುಷ್ಯರೂ ಸಸ್ಯಾಹಾರಿಗಳಾಗಲಿದ್ದಾರೆ ಎಂದಿದ್ದ.

ಆಹಾರ ಸೇವಿಸುವುದೇ ಬೇಡ!

ಈ ಊಹೆ ಇತ್ತೀಚೆಗೆ ನಡೆದದ್ದು. 2005ರಲ್ಲಿ ರೇ ಕರ್ಜ್‌ವೇಲ್‌ ಎಂಬ ಕಂಪ್ಯೂಟರ್‌ ಸೈಂಟಿಸ್ಟ್‌ ಊಹಿಸಿದ್ದು ಹೀಗೆ: ನ್ಯಾನೋಬೋಟ್‌ ಎಂಬ ಸೂಕ್ಷ್ಮ ರೋಬೋಟ್‌ಗಳ ಆವಿಷ್ಕಾರವಾಗಲಿದ್ದು, ಅವು ಮನುಷ್ಯನ ರಕ್ತಪರಿಚಲನೆಯಲ್ಲಿ ಸೇರಿಕೊಳ್ಳುತ್ತವೆ. ಅವು ಮನುಷ್ಯನ ಜೀವಕೋಶಗಳಿಗೆ ಬಕಾದ್ದನ್ನು ಉಣಿಸುವುದರಿಂದ, ಹಸಿವನ್ನು ಇಲ್ಲವಾಗಿಸಲಿವೆ.

ಕಾಫಿ, ಟೀ ಕುಡಿಯುವವರೇ ಇರೊಲ್ಲ!

1937ರಲ್ಲಿ ನಿಕೋಲಾ ಟೆಸ್ಲಾ ಎಂಬ ಕಂಪ್ಯೂಟರ್‌ ವಿಜ್ಞಾನಿ ಹೇಳಿದ್ದು- ಭವಿಷ್ಯದಲ್ಲಿ ಕಾಫಿ, ಟೀ ಸೇವನೆ ಇಲ್ಲವಾಗಲಿದೆ! ತಂಬಾಕು ಸೇವಿಸುವ ಚಟವೂ ಇರುವುದಿಲ್ಲ! ಇದೊಂದು ಒಳ್ಳೆಯ ಊಹೆಯೇ. ತಂಬಾಕು ಎಲ್ಲ ಕಡೆ ಬ್ಯಾನ್‌ ಆಗಿದೆ. ಆದರೆ ಸೇವನೆ ನಿಂತಿಲ್ಲ. ಇನ್ನು ಕಾಫಿ- ಟೀ ನಿಲ್ಲುವುದಂತೂ ದೂರದ ಮಾತು. ಬಹುಶಃ ಈ ಚಳಿಯ ದಿನ ಕಾಫಿ ಕುಡಿಯುತ್ತಲೇ ನೀವು ಇದನ್ನು ಓದುತ್ತಿರಬಹದು ಅಲ್ಲವೇ!