ಬೆಂಗಳೂರು (ಫೆ.06): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಫೆ.28ಕ್ಕೆ ಭಾರತದ ಮೂರು ಪ್ಲೇಲೋಡ್ಸ್‌ ಮತ್ತು ಬ್ರೆಜಿಲ್‌ನ ‘ಅಮೆಜೋನಿಯಾ-1’ ಹೆಸರಿನ ಉಪಗ್ರಹಗಳ ಉಡಾವಣೆಗೆ ಯೋಜನೆ ರೂಪಿಸಿದೆ. ನಾಲ್ಕೂ ಉಪಗ್ರಹಗಳನ್ನು ಪಿಎಸ್‌ಎಲ್‌ವಿ ಸಿ-51 ಮೂಲಕ ಆಂಧ್ರಪ್ರದೇಶದ ಶ್ರೀಹರಿಕೋಟದಿಂದ ಫೆ.28ರ ಬೆಳಿಗ್ಗೆ 10:24ಕ್ಕೆ ಉಡಾವಣೆ ಮಾಡಲಾಗುತ್ತದೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್‌ ಹೇಳಿದ್ದಾರೆ.

ಈ ಮೂಲಕ 2021ರ ಮೊದಲ ಮಿಷನ್‌ ಆರಂಭಕ್ಕೆ ಇಸ್ರೋ ಸಜ್ಜಾಗಿದೆ. ಭಾರತದ 3 ಉಪಗ್ರಹಗಳ ಪೈಕಿ ಒಂದು ಬೆಂಗಳೂರಿನ ಸ್ಟಾರ್ಟಪ್‌ ಅಭಿವೃದ್ಧಿಪಡಿಸಿರುವುದು ಎನ್ನುವುದು ಇನ್ನೊಂದು ವಿಶೇಷ.

ಅಮೆಜೋನಿಯಾ-1 ಉಪಗ್ರಹವು ಬ್ರೆಜಿಲ್‌ ದೇಶವೇ ಅಭಿವೃದ್ಧಿಪಡಿಸಿರುವ ಮೊಟ್ಟಮೊದಲ ಭೂ ಅವಲೋಕನಾ ಉಪಗ್ರಹ ಎನ್ನಲಾಗಿದೆ. ಹಾಗೆಯೇ ‘ಆನಂದ್‌’, ‘ಸತೀಶ್‌ ಧವನ್‌’ ಮತ್ತು ‘ಯುನಿಟಿ ಸ್ಯಾಟ್‌’ ಉಪಗ್ರಹಗಳೂ ಸಹ ಇದರೊಂದಿಗೆ ಉಡಾವಣೆಯಾಗಲಿವೆ.

ವಿದ್ಯಾರ್ಥಿಗಳ ಉಪಗ್ರಹ ಉಡಾವಣೆಗೆ ಸಿದ್ಧ; ವೆಚ್ಚ ಎಷ್ಟು ಗೊತ್ತಾ? .

‘ಆನಂದ್‌’ ಅನ್ನು ಬೆಂಗಳೂರು ಮೂಲದ ‘ಪಿಕ್ಸೆಲ್‌’ ನವೋದ್ಯಮ ಅಭಿವೃದ್ಧಿಪಡಿಸಿದೆ. ಇದು ದೇಶದ ಮೊಟ್ಟಮೊದಲ ಖಾಸಗಿ ವಾಣಿಜ್ಯ ರಿಮೋಟ್‌ ಚಾಲಿತ ಉಪ್ರಗಹವಾಗಿದೆ. ‘ಸತೀಶ್‌ ಧವನ್‌’ ಉಪಗ್ರಹವನ್ನು ಚೆನ್ನೈ ಮೂಲದ ಸ್ಪೇಸ್‌ ಕಿಡ್ಸ್‌ ಇಂಡಿಯಾ ಸಂಸ್ಥೆ, ಹಾಗೂ ‘ಯುನಿಟಿ ಸ್ಯಾಟ್‌’ ಉಪಗ್ರಹವನ್ನು ಜಿಟ್‌ ಸ್ಯಾಟ್‌ ಮತ್ತಿತರ ಸಂಸ್ಥೆಗಳು ಜಂಟಿಯಾಗಿ ಅಭಿವೃದ್ಧಿಪಡಿಸಿವೆ.