ತಿರುಗುವ ಟ್ರಿಪಲ್ ಕ್ಯಾಮೆರಾವುಳ್ಳ ಸ್ಯಾಮ್ಸಂಗ್ ಹೊಸ ಫೋನ್ ಮಾರುಕಟ್ಟೆಗೆ!
ವಿನೂತನ ತಂತ್ರಜ್ಞಾನಗಳನ್ನು ಅಳವಡಿಸುವ ಮೂಲಕ ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿ ಟ್ರೆಂಡ್ ಸೆಟ್ಟರ್ ಆಗಿರುವ Samsungನ ಇನ್ನೊಂದು ಹೊಸ ಪೋನ್ ಮಾರುಕಟ್ಟೆಗೆ ಕಾಲಿಟ್ಟಿದೆ.
ಬೆಂಗಳೂರು (ಜು.01): ವಿನೂತನ ತಂತ್ರಜ್ಞಾನಗಳನ್ನು ಪರಿಚಯಿಸುವ ಮೂಲಕ Samsung ಸ್ಮಾರ್ಟ್‌ಫೋನ್ ಪ್ರಿಯರ ಅಚ್ಚುಮೆಚ್ಚಿನ ಬ್ರ್ಯಾಂಡ್ ಆಗಿ ಬೆಳೆದಿರುವುದು ಇತಿಹಾಸ. ಈಗ ತಿರುಗುವ ಕ್ಯಾಮೆರಾ ಇರೋ ಸ್ಮಾರ್ಟ್‌ಫೋನ್ ಮಾರಾಟಕ್ಕೆ Samsung ಸಿದ್ಧತೆ ನಡೆಸಿದೆ.
ಇತ್ತೀಚೆಗೆ ಜಾಗತಿಕ ಮಟ್ಟದಲ್ಲಿ ಬಿಡುಗಡೆಯಾದ Galaxy A80 ಸ್ಮಾರ್ಟ್‌ಫೋನ್ ಇಂದಿನಿಂದ (ಜು. 01) ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟ ಶುರುವಾಗಿದೆ. ಆದರೆ ಭಾರತದಲ್ಲಿ ಮಾರಾಟ ದಿನಾಂಕ ಇನ್ನೂ ನಿಗದಿಯಾಗಿಲ್ಲದಿದ್ದರೂ, ಜುಲೈ ತಿಂಗಳಾಂತ್ಯದಲ್ಲಿ ಮೊಬೈಲ್ ಪ್ರಿಯರ ಕೈಸೇರೋದು ಖಚಿತ ಎಂದು ಹೇಳುತ್ತಿವೆ ಕಂಪನಿ ಮೂಲಗಳು!
ಇದನ್ನೂ ಓದಿ | ಶೀಘ್ರದಲ್ಲೇ ಹೊಸ ಪೀಳಿಗೆಯ ಸ್ಯಾಮ್ಸಂಗ್ ಫೋನ್ ಭಾರತದಲ್ಲಿ ಬಿಡುಗಡೆ!
Galaxy A80 ಸ್ಮಾರ್ಟ್‌ಫೋನ್- 48, 8 ಮೆಗಾ ಪಿಕ್ಸೆಲ್ ಮತ್ತು 3D ಸೆನ್ಸಿಂಗ್ ಕ್ಯಾಮೆರಾ ಒಳಗೊಂಡಿರುವ ತಿರುಗುವ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ.
ಸೂಪರ್ AMOLED ಪರದೆ, ನಾಚ್‌ಲೆಸ್ ಮತ್ತು ಹೋಲ್‌ಲೆಸ್ 6.7 ಇಂಚು ಡಿಸ್ಪ್ಲೇ ಈ ಫೋನಿನ ವಿಶೇಷ. ಇನ್ಫಿನಿಟಿ ಡಿಸ್ಪ್ಲೇ ತಂತ್ರಜ್ಞಾನ ಹೊಂದಿರುವ ಮೊದಲ Samsung ಫೋನ್ ಇದಾಗಿದೆ.
ಸಾಮಾನ್ಯವಾಗಿ ಫೋನಿನ ಹಿಂಬದಿಯಲ್ಲಿರುವ ಫಿಂಗರ್ ಪ್ರಿಂಟ್ ಸೆನ್ಸರ್ Galaxy A80ನಲ್ಲಿ ಪರದೆಯ ಮೇಲೆಯೇ ಇರುವುದು ಇನ್ನೊಂದು ವಿಶೇಷತೆ.
ಪ್ರೊಸೆಸರ್ ಬಗ್ಗೆ ಯಾವುದೇ ಮಾಹಿತಿಯನ್ನು Samsung ನೀಡಿರದಿದ್ದರೂ, Octa core ಚಿಪ್‌ಸೆಟ್ ಹೊಂದಿದೆಯೆನ್ನಲಾಗಿದೆ. 8GB RAM ಮತ್ತು 128GB ಸ್ಟೋರೆಜ್ ಸಾಮರ್ಥ್ಯ ಇರುವ ಈ ಫೋನ್ 25W ಫಾಸ್ಟ್ ಚಾರ್ಜಿಂಗ್ ಸೌಲಭ್ಯವುಳ್ಳ 3700mAH ಬ್ಯಾಟರಿ ಹೊಂದಿದೆ.
ಇದನ್ನೂ ಓದಿ | ನಂಬ್ತೀರೋ ಇಲ್ವೋ ಸಾರ್... 2019ರಲ್ಲಿ ಮಡಚಿ ಕಿಸೆಗಿಡುವ ಫೋನ್‌ಗಳದ್ದೇ ಕಾರುಬಾರ್!
ಭಾರತದಲ್ಲಿ ಕಂಪನಿಯು ಬೆಲೆಯನ್ನು ನಿಗದಿ ಮಾಡಿರದಿದ್ದರೂ, ಸುಮಾರು 40-45 ಸಾವಿರ ರೂ. ಇರಬಹುದು ಎಂದು ಅಂದಾಜಿಸಲಾಗಿದೆ.