ನೋಡಲು ಐದು ಇಂಚಿನ ಸಾಮಾನ್ಯ ಫೋನುಗಳಂತೆಯೆ ಕಾಣಿಸುತ್ತದೆ. ಮೊಬೈಲನ್ನು ಕೈಯಲ್ಲಿ ಹಿಡಿದು ಮಧ್ಯದಲ್ಲಿ ತೆರೆದರೆ ಟ್ಯಾಬ್‌ನಂತೆ ಬದಲಾಗುತ್ತದೆ! 

Google ತೆರೆದು ಬ್ರೌಸ್‌ ಮಾಡಿದ ನಂತರ ಬೇಕಾದರೆ ಮೊದಲಿನಂತೆ ಮಡಚಿ ಕಿಸೆಗಿಟ್ಟುಕೊಳ್ಳಬಹುದು. ಇದು ಫೋಲ್ಡೇಬಲ್‌ ಮೊಬೈಲ್‌ಗಳ ಮ್ಯಾಜಿಕ್‌. ಈಗಾಗಲೇ Samsung ಕಂಪನಿ ತನ್ನ ಗ್ಯಾಲಕ್ಸಿ ಫೋಲ್ಡ್‌ ಸ್ಮಾರ್ಟ್‌ಫೋನಿನ ಡಿಸೈನು, ಅದು ಹೇಗೆ ಕೆಲಸ ಮಾಡುತ್ತದೆ ಎಂಬೆಲ್ಲಾ ಮಾಹಿತಿಗಳನ್ನು ಬಿಡುಗಡೆ ಮಾಡಿ ಆಗಿದೆ. 

Apple ತಾನೂ ಫೋಲ್ಡೇಬಲ್‌ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಅದರ ಬೆನ್ನಲ್ಲೇ Honor ಕಂಪನಿ ತನ್ನ Honor Mate X ಲೋಕಾರ್ಪಣೆ ಮಾಡಲಿದೆ. Motorola ಕೂಡ ಮಡಚುವ ಫೋನು ತಯಾರಿಯಲ್ಲಿ ತೊಡಗಿಕೊಂಡಿದೆ. 

ಇದನ್ನೂ ಓದಿ: Samsungನಿಂದ 3 ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ; ಏನು ವಿಶೇಷ? ಬೆಲೆ ಎಷ್ಟು?

ಇವೆಲ್ಲಾ ಕಂಪನಿಗಳು ಮಡಚುವ ಫೋನ್‌ಗಳ ಹಿಂದೆ ಬಿದ್ದಿವೆ ಎಂದರೆ ಯೋಚನೆ ಮಾಡಿ, Vivo, Oppo, Xiaomi ಎಲ್ಲಾ ಕಂಪನಿಗಳೂ ಮಡಚುವ ಫೋನನ್ನು ತಯಾರಿಸುವುದು ನಿಶ್ಚಿತವೇ. ಹಾಗಾಗಿ 2019ರಲ್ಲಿ ಮಡಚಿ ಕಿಸೆಗಿಡುವ ಫೋನುಗಳದೇ ಕಾರುಬಾರು.

Samsung ಗ್ಯಾಲಕ್ಸಿ ಫೋಲ್ಡ್‌:

ಈ ಫೋನಿನ ಸೈಜು ಮೊದಲು 4.8 ಇಂಚು ಇರುತ್ತದೆ. ಅದೇ ಫೋನನ್ನು ತೆರೆದರೆ 7.3 ಇಂಚಿನಷ್ಟು ಡಿಸ್‌ಪ್ಲೇ ಕಾಣಿಸುತ್ತದೆ. ಒಂದು ಟ್ಯಾಬ್‌ನಷ್ಟು. ಅಥವಾ ಅದಕ್ಕಿಂತ ದೊಡ್ಡದು. ನೀವು ಫೋನ್‌ ಬಂದರೆ ತೆರೆಯಬೇಕಿಲ್ಲ. ಹಾಗೆಯೇ ರಿಸೀವ್‌ ಮಾಡಿ ಮಾತನಾಡಬಹುದು. 
ಆದರೆ ಇಂಟರ್‌ನೆಟ್‌ ಬಳಸುವಾಗ ಈ ಫೋನನ್ನು ತೆರೆದರೆ ಕೆಲಸವಿನ್ನೂ ಸುಲಭ.

ಇಂಟರೆಸ್ಟಿಂಗ್‌ ಅಂದ್ರೆ ಮೂರು ಪೇಜ್‌ ಅನ್ನು ಒಮ್ಮೆಲೇ ತೆರೆಯಬಹುದು. ಉದಾಹರಣೆಗೆ Youtubeನಲ್ಲಿ ಏನೋ ವಿಡಿಯೋ ನೋಡುತ್ತಿದ್ದೀರಿ ಎಂದಿಟ್ಟುಕೊಳ್ಳಿ. ಈ ವಿಡಿಯೋ ಕುರಿತ ಮಾಹಿತಿಯನ್ನು Googleನಲ್ಲಿ ಬ್ರೌಸ್‌ ಮಾಡಬಹುದು. ಅದೇ ವೇಳೆಯಲ್ಲಿ ವಾಟ್ಸಪ್‌ ಓಪನ್‌ ಮಾಡಿ ಚಾಟ್‌ ಕೂಡ ಮಾಡಬಹುದು. ಈ ಮೂರೂ ಆ್ಯಪ್‌ಗಳೂ ತೆರೆದಿರುತ್ತವೆ. ಮಿನಿಮೈಸ್‌ ಮಾಡುವ ಅವಶ್ಯಕತೆಯೇ ಇಲ್ಲ.

ಇನ್‌ಫಿನಿಟಿ ಫ್ಲೆಕ್ಸ್‌ ಡಿಸ್‌ಪ್ಲೇ ಹೊಂದಿರುವ ಮೊಬೈಲ್‌ ಇದು. ಮಡಚುವ ಮೊಬೈಲ್‌ ಆಗಿದ್ದರೂ ಮಧ್ಯದಲ್ಲಿ ಒಂದು ಸಣ್ಣ ಗೆರೆ ಇರುವಂತೆಯೂ ಕಾಣಿಸುವುದಿಲ್ಲ. ಎರಡು ಬ್ಯಾಟರಿ ಇದೆ. 4380 ಎಂಎಎಚ್‌ ಸಾಮರ್ಥ್ಯದ್ದು. ಇನ್ನು ಆರು ಕ್ಯಾಮೆರಾಗಳಿವೆ. ಮೂರು ಹಿಂದೆ, ಎರಡು ಪಕ್ಕದಲ್ಲಿ, ಒಂದು ಮುಂದೆ. ಹೀಗೆಲ್ಲಾ ಸಾಮರ್ಥ್ಯ ಇರುವ ಈ ಮೊಬೈಲ್‌ ಬಳಸುವುದೇ ಹಬ್ಬ. ಅದಕ್ಕೆ ತಕ್ಕಂತೆ ಇದರ ಬೆಲೆಯೂ ಇದೆ ಅನ್ನಿಸುತ್ತದೆ. ಒಂದು ಲಕ್ಷದ ಆಸುಪಾಸು ಇರಬಹುದು.

ರೆಡಿಯಾಗುತ್ತಿದೆ Apple:

Apple ಕಂಪನಿಗೆ ಗ್ಲಾಸ್‌ಗಳನ್ನು ಸಪ್ಲೈ ಮಾಡುವ ಕಾರ್ನಿಂಗ್‌ ಕಂಪನಿ ತಾನು ಈಗಾಗಲೇ ಫೋಲ್ಡ್‌ ಮಾಡಬಹುದಾದ ಗ್ಲಾಸ್‌ಗಳನ್ನು ತಯಾರಿಸುವ ಸಿದ್ಧತೆಯಲ್ಲಿ ತೊಡಗಿಸಿಕೊಂಡಿರುವುದಾಗಿ ಹೇಳಿಕೊಂಡಿದೆ. ಹಾಗಾಗಿ ಈ ವರ್ಷದ ಕೊನೆಗೆ ಅಥವಾ ಮುಂದಿನ ವರ್ಷದ ಆರಂಭಕ್ಕೆ Apple ಮಡಚುವ ಫೋನ್‌ ಬರುವುದು ಬಹುತೇಕ ನಿಶ್ಚಿತ.

ಇದನ್ನೂ ಓದಿ: ಕ್ಷುದ್ರಗ್ರಹ ನೆಲ ತಲುಪಿದ ನೌಕೆ: ಸಂಭ್ರಮದಲ್ಲಿ ಜಪಾನ್ ಕೇಕೆ!