ನಾವು ಜೀವಿಸುತ್ತಿರೋದು ಆ್ಯಪ್‌ ಜಮಾನದಲ್ಲಿ. ಇಲ್ಲಿ ಪ್ರತಿಯೊಂದಕ್ಕೂ ಈಗ ಆ್ಯಪ್‌ ಬಂದುಬಿಟ್ಟಿದೆ. ಮನೆಗೆ ನೀರು-ಹಾಲು ತರಿಸಿಕೊಳ್ಳುವುದರಿಂದ ಹಿಡಿದು, ಶಾಪಿಂಗ್- ಟಿಕೆಟಿಂಗ್, ವಧು-ವರಾಣ್ವೇಷಣೆ - ಟಿಕೆಟ್ ಬುಕ್ಕಿಂಗ್, ಫಿಲ್ಮು-ಫೋಟೋಗ್ರಫಿ, ತಿಂಡಿ-ತೀರ್ಥ, ಶಿಕ್ಷಣ- ಭಕ್ಷಣ, ಸುದ್ದಿ-ಸಮಾಚಾರ,  ಚಾಟಿಂಗು, ಡೇಟಿಂಗು, ಬೆಟ್ಟಿಂಗು..... ಹೀಗೆ  ಆ್ಯಪ್‌ಗಳು ಕಾಲಿಡದ ಕ್ಷೇತ್ರವಿಲ್ಲ.

ಇಷ್ಟೊಂದು ಪೀಠಿಕೆ ಯಾಕಂದ್ರೆ, ತಂತ್ರಜ್ಞಾನದ ಎಷ್ಟೇ ಅಭಿವೃದ್ಧಿ ಹೊಂದಿದರೂ ಅದಕ್ಕೆ ಕೆಲವು ಇತಿಮಿತಿಗಳಿವೆ. ಒಂದೋ ನಾವು ಅವುಗಳನ್ನು ಸ್ವೀಕರಿಸಬೇಕು ಅಥವಾ ಆ ತಂತ್ರಜ್ಞಾನವನ್ನು ಬಳಸೋದನ್ನು ಬಿಟ್ಟುಬಿಡಬೇಕು ಅಷ್ಟೇ...!

ಈಗ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿರೋ ವಾಟ್ಸಪ್‌ನದ್ದು ಕೂಡಾ ಕಥೆ ಅಷ್ಟೇ. ವಾಟ್ಸಪ್‌ ಬಗ್ಗೆ ಹೆಚ್ಚು ಹೇಳೋ ಅಗತ್ಯ ಇಲ್ಲ. ಅಪ್ಡೇಟ್ ಆಗಿರ್ಬೇಕು ಇಲ್ಲ, ಔಟ್‌ಡೇಟ್ ಆಗಿರಬೇಕು. ಅದರಲ್ಲೇನು ಮಹಾ, ಆ್ಯಪ್‌ ಅಪ್ಡೇಟ್ ಮಾಡ್ಕೊಂಡ್ರೆ ಆಯ್ತು ಅಷ್ಟೇ ಅಂತ ಭಾವಿಸ್ಬೇಡಿ.

ಇದನ್ನೂ ನೋಡಿ  | ಕೇವಲ 200ರೂ. ಗೆ ಹೊಚ್ಚ ಹೊಸ ಮೊಬೈಲ್, ಮುಗಿಬಿದ್ದ ಜನ!...

ಈ ಬಾರಿ ಸಮಸ್ಯೆ ಸಾಫ್ಟ್‌ವೇರ್‌ನದ್ದು ಅಲ್ಲ, ಹಾರ್ಡ್‌ವೇರ್‌ನದ್ದು! ಹೌದು, ಮುಂಬರುವ ಫೆಬ್ರವರಿಯಿಂದ ವಾಟ್ಸಪ್‌,  ಕೆಲ ಆ್ಯಂಡ್ರಾಯಿಡ್ ಮತ್ತು ಐಓಎಸ್ ಫೋನ್‌ಗಳಿಗೆ ಅಪ್ಡೇಟ್ಸ್‌ಗಳನ್ನು ನಿಲ್ಲಿಸಲಿದೆ. ಅಂದ್ರೆ, ಆ ಫೋನ್‌ಗಳಲ್ಲಿ ವಾಟ್ಸಪ್ ಕೆಲಸ ಮಾಡಲ್ಲ. ಈ ವಿಷಯವನ್ನು ಖುದ್ದು ವಾಟ್ಸಪ್ ತನ್ನ FAQನಲ್ಲಿ ಪ್ರಕಟಿಸಿದೆ.

ಯಾವೆಲ್ಲಾ ಫೋನ್‌ಗಳು ಆ್ಯಂಡ್ರಾಯಿಡ್  2.3.7  ಮತ್ತು iOS8 ಆವೃತ್ತಿಯ ಆಪರೇಟಿಂಗ್‌ ಸಿಸ್ಟಮ್ ಹೊಂದಿದೆಯೋ, ಅವುಗಳಿಗೆ ಇನ್ಮುಂದೆ ವಾಟ್ಸಪ್‌ನಿಂದ ಸಪೋರ್ಟ್ ಸಿಗದು.

ಹಾಗಾಗಿ ಆ ಫೋನ್‌ ಬಳಕೆದಾರರು 2020 ಫೆಬ್ರವರಿ 1ರಿಂದ ಹೊಸ ಖಾತೆಗಳನ್ನು ತೆರೆಯುವುದಾಗಲಿ, ಅಥವಾ ಚಾಲ್ತಿಯಲ್ಲಿರುವ ಖಾತೆಗಳನ್ನು ರಿ-ವೆರಿಫೈ ಮಾಡೋದಾಗಲಿ ಸಾಧ್ಯವಿಲ್ಲ ಎಂದು ಕಂಪನಿಯು ಹೇಳಿದೆ.

ಇದನ್ನೂ ಓದಿ | ಇನ್ಮುಂದೆ ಮೊಬೈಲ್ ಇಂಟರ್ನೆಟ್ ಬಳಸಬೇಕಾದ್ರೆ ಚಹರೆ ಸ್ಕ್ಯಾನ್ ಮಾಡೋದು ಕಡ್ಡಾಯ!...

ವಿಂಡೋ ಫೋನ್‌ಗಳಿಗೂ ಇಲ್ಲ ವಾಟ್ಸಪ್!

ಡಿ.31ರಿಂದ ವಿಂಡೋಸ್  ಫೋನ್‌ಗಳಿಗೂ ವಾಟ್ಸಪ್‌ ಇರಲ್ಲ. ವಿಂಡೋಸ್ 10 ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಫೋನ್‌ಗಳಿಗೆ ಮೈಕ್ರೋಸಾಫ್ಟ್ ಕಂಪನಿಯೇ ಸಪೋರ್ಟ್ ನಿಲ್ಲಿಸಲಿದೆ.

ನಿಮ್ಮ ಫೋನ್  ಆ್ಯಂಡ್ರಾಯಿಡ್ ವರ್ಶನ್ ತಿಳಿದುಕೊಳ್ಳುವುದು ಹೇಗೆ?

ನಿಮ್ಮ ಫೋನ್‌ನಲ್ಲಿ ಸೆಟ್ಟಿಂಗ್ಸ್‌ಗೆ (Seetings) ಹೋಗಿ. ಸ್ಕ್ರಾಲ್‌ ಮಾಡಿ ಕೊನೆವರೆಗೂ ಹೋಗಿ. ಅಲ್ಲಿ ಅಬೌಟ್ ಫೋನ್ ಅಥವಾ ಅಬೌಟ್ ಡಿವೈಸ್ (About Phone/ About Device) ಆಯ್ಕೆಯನ್ನು ಒತ್ತಿ. ಆಗ ಅಲ್ಲಿ ಕಾಣಿಸಿಕೊಳ್ಳುವ -ಸಾಫ್ಟ್‌ವೇರ್ ಇನ್ಫೋ (Software Info) ಆಪ್ಷನ್ ಆಯ್ದುಕೊಳ್ಳಿ. ಅಲ್ಲಿ ನಿಮ್ಮ ಆ್ಯಂಡ್ರಾಯಿಡ್ ವರ್ಶನ್ ಬಗ್ಗೆ ಮಾಹಿತಿಯನ್ನು ನೋಡ್ಬಹುದು.