ವಾಷಿಂಗ್ಟನ್(ಸೆ.28): ಬ್ರಹ್ಮಾಂಡದ ಅಚ್ಚರಿಗಳು ಒಂದೇ, ಎರಡೇ? ಬಗೆದಷ್ಟು ರೋಚಕ ರಹಸ್ಯಗಳು ದಿಗಂತದ ಒಡಲಾಳದಿಂದ ಹೊರ ಬರುತ್ತಲೇ ಇರುತ್ತವೆ. ಇರುವ ಒಂದು ಜಗತ್ತನ್ನೇ ಸಂಭಾಳಿಸಲಾಗದ ಮಾನವನಿಂದ ಬೇರೊಂದು ಜಗತ್ತಿನ ಅನ್ವೇಷಣೆ ನಿಜಕ್ಕೂ ಅಚ್ಚರಿಯ ಹಾಗೂ ಅದ್ಭುತ ಸಂಗತಿ.

ಅದರಂತೆ ಖಗೋಳ ವಿಜ್ಞಾನಿಗಳು ಭೂಮಿಯಿಂದ ಸುಮಾರು 31 ಜ್ಯೋತಿವರ್ಷ ದೂರ ಇರುವ ಪುಟ್ಟ ಹಾಗೂ ಅಷ್ಟೇ ಅಚ್ಚರಿಯ ಜಗತ್ತೊಂದನ್ನು ಪತ್ತೆ ಹಚ್ಚಿದ್ದಾರೆ. ನಮ್ಮ ಸೂರ್ಯನಿಗಿಂತ ಕೇವಲ ಶೇ.12ರಷ್ಟು ದ್ರವ್ಯರಾಶಿ ಹೊಂದಿರುವ ನಕ್ಷತ್ರವೊಂದನ್ನು ಅದರಷ್ಟೇ ಗಾತ್ರದ ಗ್ರಹವೊಂದು ಸುತ್ತುತ್ತಿರುವ ವಿಚಿತ್ರ ವಿದ್ಯಮಾನವನ್ನು ದಾಖಲಿಸಲಾಗಿದೆ.

GJ3512 ಎಂಬ ಪುಟ್ಟ ನಕ್ಷತ್ರಕ್ಕೆ ಅದರಷ್ಟೇ ಗಾತ್ರದ ಗ್ರಹ ಇದ್ದು, ಈ ಗೃಹ ನಮ್ಮ ಸೌರಮಂಡಲದ ಅತ್ಯಂತ ದೊಡ್ಡ ಗ್ರಹವಾದ ಗುರು ಗ್ರಹದಷ್ಟು ಗಾತ್ರ ಹೊಂದಿದೆ ಎನ್ನಲಾಗಿದೆ.

ಗುರು ಗ್ರಹದಂತೆ ಈ ಗೃಹ ಕೂಡ ಅನಿಲಕಾಯವಾಗಿದ್ದು, ಇದರ ರಚನಾ ಕ್ರಮ ಮಾತ್ರ ಇತರ ಗೃಹಗಳಿಗಿಂತ ವಿಭಿನವಾಗಿದೆ ಎಂದು ಸ್ಪ್ಯಾನಿಶ್ ಖಗೋಳ ವಿಜ್ಞಾನಿಗಳು ತಿಳಿಸಿದ್ದಾರೆ.

ತನ್ನ ಮಾತೃ ನಕ್ಷತ್ರಕ್ಕೆ ಅತ್ಯಂತ ಹತ್ತಿರದಲ್ಲಿರುವ ಈ ಗ್ರಹ 200 ದಿನಗಳಿಗೊಮ್ಮೆ ಮಾತೃ ನಕ್ಷತ್ರವನ್ನು ಸುತ್ತುತ್ತಿದ್ದು, ಹೆಚ್ಚು ಕಡಿಮೆ ಒಂದೇ ದ್ರವ್ಯರಾಶಿ ಹೊಂದಿರುವ ನಕ್ಷತ್ರ ಮತ್ತು ಗ್ರಹದ ಅನ್ವೇಷಣೆ ಖಗೋಳ ವಿಜ್ಞಾನ ಜಗತ್ತಿಗೆ ಹೊಸದಾಗಿದೆ.

ಇವರೆಡರ ಗುರುತ್ವಾಕರ್ಷಣೆ ಬಲ ಕೂಡ ಸಮನಾಗಿದ್ದು, ಅನತಿ ದೂರದಲ್ಲಿ ಮತ್ತೊಂದು ದೊಡ್ಡ ಗ್ರಹ ಅಸ್ತಿತ್ವದಲ್ಲಿರುವುದರಿಂದ ಇವರೆಡರ ಗುರುತ್ವಾಕರ್ಷಣೆಯ ಘರ್ಷಣೆಯನ್ನು ತಡೆ ಹಿಡಿದಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಸಂಶೋಧನಾ ತಂಡದ ಮುಖ್ಯಸ್ಥ ಜುಹಾನ್ ಕಾರ್ಲೋಸ್ ಮೋರಾಲ್ಸ್, ನಕ್ಷತ್ರವೊಂದರ ಗುರುತ್ವಾಕರ್ಷಣೆ ಬಲದೊಳಗೆ ಸಿಗುವ ಗ್ರಹ ಅದನ್ನು ಸುತ್ತುವ ಸಂಗತಿ ಸಾಮಾನ್ಯವಾದರೂ, ಒಂದೇ ದ್ರವ್ಯರಾಶಿ ಹೊಂದಿರುವ ಎರಡು ಆಕಾಶಕಾಯಗಳು ಪರಸ್ಪರ ಘರ್ಷಣೆಗಿಳಿಯದಿರುವುದು ವಿಚಿತ್ರ ವಿದ್ಯಮಾನ ಎಂದು ತಿಳಿಸಿದ್ದಾರೆ.

ಸೆ.29ರ ಭಾನುವಾರ ಕಿಕ್ ಏರಿಸಿದ ಟಾಪ್ 10 ಸುದ್ದಿ ಇಲ್ಲಿವೆ!