ಹಬಲ್ ಕಣ್ಣಿಗೆ ಬಿದ್ದ ಕುದಿಯುತ್ತಿರುವ ಫುಟ್ಬಾಲ್ ಆಕಾರದ ಗ್ರಹ!
ಭೂಮಿಯಿಂದ 900 ಜ್ಯೋತಿವರ್ಷ ದೂರದ ಗ್ರಹ ಪತ್ತೆ| ಹಬಲ್ ಕಣ್ಣಿಗೆ ಬಿದ್ದ ಕುದಿಯುತ್ತಿರುವ ಫುಟ್ಬಾಲ್ ಆಕಾರದ ಗ್ರಹ| ಗ್ರಹಕಾಯ ವ್ಯವಸ್ಥೆಯನ್ನೇ ಪ್ರಶ್ನಿಸುವಂತಿರುವ WASP-121b ಗ್ರಹ| ಮಾತೃ ನಕ್ಷತ್ರವನ್ನು ಅತ್ಯಂತ ಹತ್ತಿರದಿಂದ ಸುತ್ತುತ್ತಿರುವ WASP-121b ಗ್ರಹ| ಹೈಡ್ರೋಜನ್ ಮತ್ತು ಹಿಲಿಯಂಗಿಂತಲೂ ಭಾರವಾದ ಅಂಶಗಳು|
ವಾಷಿಂಗ್ಟನ್(ಆ.02): ಅದು ಭೂಮಿಯಿಂದ ಬರೋಬ್ಬರಿ 900 ಜ್ಯೋತಿವರ್ಷ ದೂರ ಇರುವ ಗ್ರಹ. WASP-121b ಎಂಬ ಹೆಸರಿನ ಈ ಗ್ರಹದ ರಚನೆ, ಗ್ರಹಕಾಯ ವ್ಯವಸ್ಥೆಯನ್ನೇ ಪ್ರಶ್ನಿಸುವಂತಿದೆ.
ನಾಸಾದ ಹಬಲ್ ಟೆಲಿಸ್ಕೋಪ್ ಕಣ್ಣಿಗೆ ಬಿದ್ದಿರುವ WASP-121b ಗ್ರಹ ತನ್ನ ಮಾತೃ ನಕ್ಷತ್ರವನ್ನು ಅತ್ಯಂತ ಹತ್ತಿರದಿಂದ ಸುತ್ತುತ್ತಿದೆ. ಈ ಕಾರಣಕ್ಕೆ ಈ ಗ್ರಹದ ಮೇಲ್ಮೈ ವಾತಾವರಣ 4,600 ಡಿಗ್ರಿ ಫ್ಯಾರನ್ ಹೀಟ್’ವರೆಗೂ ತಲುಪುತ್ತದೆ.
ಸಾಮಾನ್ಯವಾಗಿ ಗ್ರಹಕಾಯವೊಂದರ ಮೇಲ್ಮೈ ವಾತಾವರಣಕ್ಕಿಂತ 10 ಪಟ್ಟು ಹೆಚ್ಚು ವಾತಾವರಣವನ್ನು WASP-121b ಗ್ರಹ ಹೊಂದಿದೆ. ನಮ್ಮ ಸೌರಮಂಡಲದ ಗುರು ಗ್ರಹದಷ್ಟು ಗಾತ್ರ ಹೊಂದಿರುವ ಈ ಗ್ರಹ, ನೋಡಲು ಫುಡ್ಬಾಲ್ ಆಕಾರವನ್ನು ಹೊಂದಿರುವುದು ವಿಶೇಷ.
ಹೈಡ್ರೋಜನ್ ಮತ್ತು ಹಿಲಿಯಂಗಿಂತಲೂ ಭಾರವಾದ ಅಂಶಗಳನ್ನು ಹೊಂದಿರುವ WASP-121b ಗ್ರಹ, ತನ್ನ ಮಾತೃ ನಕ್ಷತ್ರಕ್ಕೆ ತುಂಬ ಹತ್ತಿರದಲ್ಲಿ ಸುತ್ತುತ್ತಿರುವ ಪರಿಣಾಮ ಕಬ್ಬಿಣ ಮತ್ತು ಮ್ಯಾಗ್ನೇಶಿಯಂ ವಸ್ತುಗಳೂ ಕೂಡ ದ್ರವ ಮತ್ತು ಅನಿಲ ರೂಪದಲ್ಲಿ ಶೇಖರಣೆಗೊಂಡಿವೆ ಎಂದು ನಾಸಾ ತಿಳಿಸಿದೆ.
ಆದರೆ ನಮ್ಮ ಸೂರ್ಯನಿಗಿಂತಲೂ ಹತ್ತಿರದಲ್ಲಿರುವ ಮಾತೃ ನಕ್ಷತ್ರ, ಕಬ್ಬಿಣ ಮತ್ತು ಮ್ಯಾಗ್ನೇಶಿಯಂ ವಸ್ತುಗಳನ್ನು WASP-121b ಗ್ರಹದ ಗುರುತ್ವಾಕರ್ಷಣೆಗೆ ಸಿಲುಕದಂತೆ ಸೆಳೆಯುತ್ತಿರುವುದು ಇವುಗಳ ಅಪರಿಮಿತ ಚಲನೆಗೂ ಕಾರಣವಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.