ವಾಷಿಂಗ್ಟನ್(ಫೆ.02): ಸ್ಪಿಟ್ಜರ್ ಬಾಹ್ಯಾಕಾಶ ಟೆಲಿಸ್ಕೋಪ್‌ಗೆ ನಾಸಾ ಗುಡ್ ಬೈ ಹೇಳಿದ್ದು, 16 ವರ್ಷಗಳ ಸುದೀರ್ಘ ಕಾರ್ಯಾಚರಣೆ ಅಂತ್ಯಗೊಂಡಿದೆ. 

ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೋರೇಟರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಸ್ಪಿಟ್ಜರ್ ಬಾಹ್ಯಾಕಾಶ ಟೆಲಿಸ್ಕೋಪ್‌ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತು.

ಸ್ಪಿಟ್ಜರ್ ಬಾಹ್ಯಾಕಾಶ ಟೆಲಿಸ್ಕೋಪ್‌ಗೆ ಗುಡ್ ಬೈ ಹೇಳಿದ ನಾಸಾ!

 ಈ ಕುರಿತು ಮಾಹಿತಿ ನೀಡಿರುವ ನಾಸಾದ ಖಗೋಳ ಭೌತಶಾಸ್ತ್ರದ ನಿರ್ದೇಶಕ ಪಾಲ್ ಹರ್ಟ್ಜ್,  ನಾಸಾದ ನಾಲ್ಕು ಐತಿಹಾಸಿಕ ಬಾಹ್ಯಾಕಾಶ ಟೆಲಿಸ್ಕೋಪ್‌ಗಳಲ್ಲಿ ಒಂದಾದ ಸ್ಪಿಟ್ಜರ್ ತನ್ನ ಕಾರ್ಯಾಚರಣೆಯನ್ನು ಅಧಿಕೃತವಾಗಿ ಸ್ಥಗಿತಗೊಳಿಸಿದೆ ಎಂದು ಹೇಳಿದ್ದಾರೆ.

ಸ್ಪಿಟ್ಜರ್ ಟೆಲಿಸ್ಕೋಪ್ ಆಗಸ್ಟ್ 25, 2003 ರಂದು ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು. ಸತತ 16 ವರ್ಷಗಳ ಕಾಲ ಬ್ರಹ್ಮಾಂಡದ ಅಧ್ಯಯನ ನಡೆಸಿದ್ದ ಸ್ಪಿಟ್ಜರ್, ವಿಶ್ವ ರಚನೆಯ ಕುರಿತು ಮಹತ್ವದ ಮಾಹಿತಿಗಳನ್ನು ರವಾನಿಸಿತ್ತು.

ಸ್ಪಿಟ್ಜರ್ ಎಕ್ಸೋಪ್ಲಾನೆಟ್(ಸೌರಮಂಡಲದ ಆಚೆಯ ಗ್ರಹ) ವಾಯುಮಂಡಲದ ಅಧ್ಯಯನ ಮಾಡಿದ ಮೊದಲ ಟೆಲಿಸ್ಕೋಪ್. TRAPPIST-1 ನಕ್ಷತ್ರದ ಸುತ್ತಲಿನ ಏಳು ಭೂಮಿಯ ಗಾತ್ರದ ಐದು ಗ್ರಹಗಳನ್ನು ಕಂಡುಹಿಡಿದ ಹೆಗ್ಗಳಿಕೆ ಸ್ಪಿಟ್ಜರ್ ಟೆಲಿಸ್ಕೋಪ್‌ಗೆ ಸಲ್ಲುತ್ತದೆ.