ಮೊಬೈಲ್ ಕಳೆದು ಹೋದ್ರೆ ಏನು ಮಾಡಬೇಕು? ಪೊಲೀಸ್ ಇಲಾಖೆ ಕ್ರಮ ಅನುಸರಿಸಿ ಮೊಬೈಲ್ ಪಡೆದುಕೊಳ್ಳಿ
ನಿಮ್ಮ ಮೊಬೈಲ್ ಕಳೆದು ಹೋಗಿದೆಯೇ? ಕಳ್ಳತನವಾಗಿದೆಯೇ? ಹಾಗಾದರೆ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಕ್ರಮಗಳನ್ನು ಅನುಸರಿಸಿ ನಿಮ್ಮ ಪಡೆದುಕೊಳ್ಳಿ.
ಬೆಂಗಳೂರು (ಸೆ.05): ನಿಮ್ಮ ಮೊಬೈಲ್ ಕಳೆದು ಹೋಗಿದೆಯೇ..? ಕಳ್ಳತನವಾಗಿದೆಯೇ..? ಹಾಗಾದರೆ, ಮುಂದೆ ಅನುಸರಿಸಬೇಕಾದ ಕ್ರಮಗಳನ್ನು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಎಳೆ ಎಳೆಯಾಗಿ ತಿಳಿಸಿದೆ. ಈ ಕ್ರಮಗಳನ್ನು ಅನುಸರಿಸುವ ಮೂಲಕ ಮೊಬೈಲ್ ಪತ್ತೆಗೆ ಮುಂದಾಗುವ ಜೊತೆಗೆ, ನಿಮ್ಮ ಮೊಬೈಲ್ ಸಿಕ್ಕ ನಂತರ ಮರು ಬಳಕೆಗೆ ಇರುವ ಕ್ರಮಗಳನ್ನು ತಿಳಿದುಕೊಳ್ಳಬಹುದು.
ಹೌದು, ಇಡೀ ಜಗತ್ತನ್ನು ಅಂಗೈಯಲ್ಲಿ ಹಿಡಿದುಕೊಂಡು ನೋಡುವುದಕ್ಕೆ ಅವಕಾಶ ಮಾಡಿಕೊಟ್ಟಿರುವ ಮೊಬೈಲ್ ನಮ್ಮ ದೈನಿಕ ಅಗತ್ಯಗಳಲ್ಲಿ ಒಂದಾಗಿದೆ. ನಮ್ಮ ಪ್ರತಿದಿನದ ಬಹುತೇಕ ಕಾರ್ಯಗಳು ಕೂಡ ಮೊಬೈಲ್ ಅನ್ನು ಅವಲಂಬಿಸಿದೆ. ಇನ್ನು ಸರ್ಕಾರದ ಯೋಜನೆಗಳನ್ನು ಪಡೆಯುವುದಕ್ಕೂ ಕೂಡ ಮೊಬೈಲ್ ಇರುವುದು ಅಗತ್ಯವಾಗಿದೆ. ಇಷ್ಟೊಂದು ಅಗತ್ಯವಿರುವ ಮೊಬೈಲ್ ಖರೀದಿ ಮಾಡುವಾಗ ನಾವು ತುಸು ಎಚ್ಚರಿಕೆಯನ್ನು ವಹಿಸಬೇಕು. ಇದಾದ ನಂತರ, ಮೊಬೈಲ್ ಕಳೆದು ಹೋಗದಂತೆ ಕಾಪಾಡಿಕೊಳ್ಳುವುದು ಕೂಡ ಸವಾಲಿನ ಕೆಲಸವಾಗಿದೆ.
ನಿಮ್ಮ ಮೊಬೈಲ್ ಫೋನ್ ಅಸಲಿಯೋ, ನಕಲಿಯೋ ಈಗ್ಲೇ ಪರಿಶೀಲಿಸಿ: ಇಲ್ಲಿದೆ ಪರಿಶೀಲನೆ ಮಾಹಿತಿ
ನಮ್ಮ ಕೈಯಲ್ಲಿರುವ ಮಗುವನ್ನು ಕೆಳಗೆ ಇಳಿಸಿದರೂ, ನಮ್ಮ ಬಳಿಯಿರುವ ಮೊಬೈಲ್ ಅನ್ನು ಬಿಟ್ಟಿರಲಾಗದಷ್ಟು ಹೊಂದಿಕೊಂಡಿರುತ್ತೇವೆ. ಇನ್ನು ಬ್ಯಾಂಕ್ ಖಾತೆ, ಜಿಮೇಲ್, ಯುಪಿಐ ಅಪ್ಲಿಕೇಶನ್‌ಗಳು, ಮೊಬೈಲ್ ಬ್ಯಾಂಕಿಂಗ್, ವೈಯಕ್ತಿಕ ಫೋಟೋ-ವೀಡಿಯೋ, ವೈಯಕ್ತಿಕ ಮಾಹಿತಿ ಇತ್ಯಾದಿಗಳನ್ನು ಮೊಬೈಲ್‌ನಲ್ಲಿ ಇಟ್ಟುಕೊಂಡಿರುತ್ತೇವೆ. ಒಂದು ವೇಳೆ ಮೊಬೈಲ್ ಕಳೆದು ಹೋದಲ್ಲಿ ನಾವು ಮುಂದೆ ಏನು ಮಾಡಬೇಕು ಎನ್ನುವುದು ಗೊತ್ತಾಗದೇ ಪರದಾಡುತ್ತೇವೆ. ಹಲವಾರು ಬಾರಿ ಮೊಬೈಲ್‌ಗೆ ಕರೆ ಮಾಡುತ್ತಲೇ, ಯಾವುದೂ ಸಕಾರಾತ್ಮಕ ಪ್ರತಿಕ್ರಿಯೆ ಸಿಗದಿದ್ದಾಗ ಮೊಬೈಲ್ ಸಿಗಲಿಲ್ಲವೆಂದು ಸುಮ್ಮನಾಗಿಬಿಡುತ್ತೇವೆ. ಆದರೆ, ಮೊಬೈಲ್ ಕಳೆದು ಹೋದ ತಕ್ಷಣ ಯಾವ ಕ್ರಮಗಳನ್ನು ಅನುಸರಿಸಬೇಕು ಎಂಬುದರ ಬಗ್ಗೆ ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.
ನಿಮ್ಮ ಮೊಬೈಲ್ ಕಳೆದು ಹೋದ ತಕ್ಷಣ ಬ್ಲಾಕ್ ಮಾಡಬೇಕು: ಒಂದೊಮ್ಮೆ ಮೊಬೈಲ್ ಕಳೆದು ಹೋದಲ್ಲಿ ಅದರ ಮಾಲೀಕರು ಇನ್ನೊಬ್ಬರ ಮೊಬೈಲ್ ಪಡೆದುಕೊಂಡು ನಿಮ್ಮ ಮೊಬೈಲ್ ಅನ್ನು ಬ್ಲಾಕ್ ಮಾಡಬೇಕು. ಇದರಿಂದ ನಿಮ್ಮ ಮೊಬೈಲ್‌ನಲ್ಲಿ ಇರುವ ವೈಯಕ್ತಿಕ ಮಾಹಿತಿ ಹಾಗೂ ಬ್ಯಾಂಕಿಂಗ್ ಸಂಬಂಧಪಟ್ಟಂತೆ ಹಣ ಕದಿಯಲು ಇರುವ ಮಾರ್ಗಗಳನ್ನು ತಪ್ಪಿಸಬಹುದು. ಮೊಬೈಲ್ ಬ್ಲಾಕ್ ಮಾಡಲು ಕೆಎಸ್‌ಪಿ ಇ-ಲಾಸ್ಟ್ ( KSP e-Lost reports) ಮೊಬೈಲ್ ಆ್ಯಪ್ ಮೂಲಕ ದೂರು ದಾಖಲಿಸಿ ಸ್ವೀಕೃತಿ ಪಡೆಯಬೇಕು. ನಂತರ, ಹತ್ತಿರದ ಪೊಲೀಸ್ ಠಾಣೆಗೆ ಭೇಟಿ ನೀಡಿ ಎಫ್‌ಐಆರ್ (ದೂರು) ದಾಖಲಿಸಬೇಕು. ನಂತರ, ಸಂಬಂಧಿಸಿದ ಸಿಪ್‌ಕಾರ್ಡ್ ಪ್ರೊವೈಡರ್‌ನಿಂದ ನಿಮ್ಮ ಹಳೆಯ ನಂಬರಿನ ಸಿಮ್‌ಕಾರ್ಡ್ ಪಡೆದುಕೊಳ್ಳಬೇಕು ಎಂದು ತಿಳಿಸಲಾಗಿದೆ.
ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆ ಸಂಭವನೀಯ ವೇಳಪಟ್ಟಿ ಬಿಡುಗಡೆ: ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್ ಕೊಟ್ಟ ಸರ್ಕಾರ
ಇನ್ನು www.ceir.gov.in ವೆಬ್‌ಸೈಟ್‌ಗೆ ಭೇಟಿ ನೀಡಿ, ಕಳೆದುಹೋಗಿರುವ ಮೊಬೈಲ್ ಬ್ರ್ಯಾಂಡ್ ಮಾಡೆಲ್, ಐಎಂಇಐ (Mobile IMEI Number) ನಂಬರ್ ಸಂಖ್ಯೆ ಹಾಗೂ ಕಳೆದು ಹೋಗಿರುವ ಜಾಗ ಮತ್ತು ಮೊಬೈಲ್ ಖರೀದಿ ಮಾಡಿರುವ ರಶೀದಿಯ ಮಾಹಿತಿಯನ್ನು ಸಲ್ಲಿಕೆ ಮಾಡಬೇಕು. ಬಳಿಕ ಅರ್ಜಿ ಸಲ್ಲಿಕೆಯ ರಿಕ್ವೆಸ್ಟ್ ಐಡಿಯನ್ನು ನೀಡಲಾಗುತ್ತದೆ. ಆಗ ನಿಮ್ಮ ಕಳೆದುಹೋದ ಅಥವಾ ಕಳ್ಳತನವಾದ ಮೊಬೈಲ್ ಅನ್ನು 24 ಗಂಟೆಯೊಳಗೆ ಬ್ಲಾಕ್ ಮಾಡಲಾಗುತ್ತದೆ. ಮೊಬೈಲ್ ದೊರೆತ ನಂತರ (ಪೊಲೀಸರು ಹುಡುಕಿಕೊಟ್ಟ ನಂತರ) ನಿಮ್ಮ ಮೊಬೈಲ್ ರಿಕ್ವೆಸ್ಟ್ ಐಡಿಯನ್ನು ಹಾಗೂ ಐಎಂಇಐ ಸಂಖ್ಯೆಯನ್ನು ಮೊಬೈಲ್ ಅನ್‌ಬ್ಲಾಕ್ ಮಾಡಲು ಬಳಸಬಹುದು.