ಆಗಸ್ಟ್ 12 ರಂದು ಯುರೋಪಿನಲ್ಲಿ ಸಂಭವಿಸಲಿರುವ ಸಂಪೂರ್ಣ ಸೂರ್ಯಗ್ರಹಣದ ವೇಳೆ ಸೂರ್ಯನ ಕರೋನಾವು ಸಂಕೀರ್ಣ ರಚನೆಯನ್ನು ಹೊಂದಲಿದೆ ಎಂದು ಬೆಂಗಳೂರಿನ ರಾಮನ್ ಸಂಶೋಧನಾ ಸಂಸ್ಥೆಯ ನೇತೃತ್ವದ ಭಾರತೀಯ ಸೌರ ಭೌತಶಾಸ್ತ್ರಜ್ಞರು ಮುನ್ಸೂಚನೆ ನೀಡಿದ್ದಾರೆ. ಈ ಅಧ್ಯಯನವು ಬಾಹ್ಯಾಕಾಶ ಹವಾಮಾನವನ್ನು ಅರ್ಥಮಾಡಿಕೊಳ್ಳಲು ಮತ್ತು ಭೂಮಿಯ ಮೇಲಿನ ಅದರ ಪರಿಣಾಮಗಳನ್ನು ಊಹಿಸಲು ನಿರ್ಣಾಯಕವಾಗಿದೆ.
ಆಗಸ್ಟ್ 12 ರಂದು ಯುರೋಪಿನ ಹಲವು ಭಾಗಗಳಲ್ಲಿ ಸಂಭವಿಸಲಿರುವ ಸಂಪೂರ್ಣ ಸೂರ್ಯಗ್ರಹಣಕ್ಕೂ ಮುನ್ನ, ಭಾರತೀಯ ಸೌರ ಭೌತಶಾಸ್ತ್ರಜ್ಞರು ಸೂರ್ಯನ ಅತಿ ಹೆಚ್ಚು ತಾಪಮಾನ ಹೊಂದಿರುವ 'ಮಿಲಿಯನ್ ಡಿಗ್ರಿ ಕರೋನಾ'ದ (Corona) ಸಂಕೀರ್ಣ ರಚನೆ ಆಗಲಿದೆ ಎಂದು ಮುನ್ಸೂಚನೆ ನೀಡಿದ್ದಾರೆ. ಸೂರ್ಯ-ಭೂಮಿ ಲ್ಯಾಗ್ರೇಂಜ್ ಪಾಯಿಂಟ್ 1 (L1) ನಲ್ಲಿರುವ ಹಾಲೋ ಕಕ್ಷೆಯಿಂದ ಸೂರ್ಯನ ಹೊರಗಿನ ಪದರಕ್ಕೆ ಕರೋನಾ ಎನ್ನಲಾಗುತ್ತದೆ.
ಬೆಂಗಳೂರಿನ ಪ್ರಸಿದ್ಧ ರಾಮನ್ ಸಂಶೋಧನಾ ಸಂಸ್ಥೆ (RRI) ನೇತೃತ್ವದ ಸಂಶೋಧಕರ ತಂಡವು ಸೂರ್ಯನ ಹೊರ ವಾತಾವರಣದಲ್ಲಿ ಮೂಡಲಿರುವ ಬೃಹತ್ ದಳಗಳಂತಹ ಆಕಾರಗಳು ಮತ್ತು ಉದ್ದನೆಯ ಪ್ಲಾಸ್ಮಾ ಸ್ಟ್ರೀಮರ್‌ಗಳ (Streamers) ಬಗ್ಗೆ ಭವಿಷ್ಯ ನುಡಿದಿದೆ. ಆಗಸ್ಟ್ 10 ರವರೆಗೆ ಲಭ್ಯವಿದ್ದ ಸೌರ ವೀಕ್ಷಣಾ ದತ್ತಾಂಶಗಳನ್ನು ಬಳಸಿಕೊಂಡು, ಸೂರ್ಯನ ಕಾಂತಕ್ಷೇತ್ರದ ಎರಡು ವಿಭಿನ್ನ ಕಂಪ್ಯೂಟೇಶನಲ್ ಮಾದರಿಗಳ (Computational Models) ಆಧಾರದ ಮೇಲೆ ಈ ನಿಖರ ಅಂದಾಜನ್ನು ಮಾಡಲಾಗಿದೆ
ಗ್ರಹಣದ ಸಮಯ ಮತ್ತು ಗೋಚರತೆ
ಭಾರತೀಯ ಕಾಲಮಾನದ ಪ್ರಕಾರ ಆಗಸ್ಟ್ 12 ರ ರಾತ್ರಿ 9:04 ಕ್ಕೆ ಗ್ರಹಣ ಪ್ರಾರಂಭವಾಗಲಿದೆ. ಚಂದ್ರನ ನೆರಳು ಸೂರ್ಯನನ್ನು ಸುಮಾರು 2 ನಿಮಿಷ 18 ಸೆಕೆಂಡುಗಳ ಕಾಲ ಸಂಪೂರ್ಣವಾಗಿ ಆವರಿಸಿದೆ. ಭಾರತದಲ್ಲಿ ಈ ಸಮಯದಲ್ಲಿ ರಾತ್ರಿಯಾಗಿರುವುದರಿಂದ ಈ ಗ್ರಹಣವು ನಮಗೆ ಗೋಚರಿಸುವುದಿಲ್ಲ. ಸ್ಪೇನ್ ದೇಶದ ಹೆಚ್ಚಿನ ಭಾಗಗಳಲ್ಲಿ ಸಂಪೂರ್ಣ ಸೂರ್ಯಗ್ರಹಣ ಕಾಣಿಸಿದರೆ, ಪಶ್ಚಿಮ ಯುರೋಪ್, ವಾಯುವ್ಯ ಆಫ್ರಿಕಾ ಮತ್ತು ಅಮೆರಿಕದ ಕೆಲವು ಭಾಗಗಳಲ್ಲಿ ಭಾಗಶಃ ಗ್ರಹಣ ಗೋಚರಿಸಲಿದೆ.
ಗ್ರಹಣದ ಸಂದರ್ಭದಲ್ಲಿ ಕರೋನಾ ಅಧ್ಯಯನದ ಮಹತ್ವ
ಸಾಮಾನ್ಯ ದಿನಗಳಲ್ಲಿ ಸೂರ್ಯನ ಪ್ರಖರವಾದ ಗೋಚರ ಮೇಲ್ಮೈಗಿಂತ (Photosphere) ಅದರ ಹೊರ ವಾತಾವರಣವಾದ ಕರೋನಾ ರೇಖೆಗಳು ಅತ್ಯಂತ ಮಸುಕಾಗಿರುವುದರಿಂದ ಅದನ್ನು ಬರಿಗಣ್ಣಿನಿಂದ ಅಥವಾ ಸಾಮಾನ್ಯ ಟೆಲಿಸ್ಕೋಪ್‌ಗಳಿಂದ ವೀಕ್ಷಿಸುವುದು ಅಸಾಧ್ಯ. ಆದರೆ ಸಂಪೂರ್ಣ ಸೂರ್ಯಗ್ರಹಣದ ಸಮಯದಲ್ಲಿ ಚಂದ್ರನು ಸೂರ್ಯನ ಪ್ರಕಾಶಮಾನವಾದ ಡಿಸ್ಕ್ ಅನ್ನು ಸಂಪೂರ್ಣವಾಗಿ ಮರೆಮಾಚಿದಾಗ, ಕರೋನದ ಬೆರಗುಗೊಳಿಸುವ ರಚನೆಗಳು ಸ್ಪಷ್ಟವಾಗಿ ಗೋಚರಿಸುತ್ತವೆ.
ಸಾಮಾನ್ಯ ದಿನಗಳಲ್ಲಿ ಕರೋನಾವನ್ನು ಅಧ್ಯಯನ ಮಾಡಲು ವಿಜ್ಞಾನಿಗಳು 'ಕರೋನಾಗ್ರಾಫ್‌ಗಳನ್ನು' (Artificial Disks) ಬಳಸುತ್ತಾರೆ. ಭಾರತದ ಆದಿತ್ಯ-L1 (Aditya-L1) ಉಪಗ್ರಹ ಹಾಗೂ ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯ (ESA) SOHO ಮತ್ತು ಪ್ರೋಬಾ-3 (Proba-3) ಕಾರ್ಯಾಚರಣೆಗಳು ಇಂತಹ ಕೃತಕ ತಂತ್ರಜ್ಞಾನದ ಮೂಲಕವೇ ಕರೋನಾವನ್ನು ಮೇಲ್ವಿಚಾರಣೆ ಮಾಡುತ್ತವೆ. ಪ್ರೋಬಾ-3 ಯೋಜನೆಯನ್ನು ಇಸ್ರೋ ಉಡಾವಣೆ ಮಾಡಿರುವುದು ಭಾರತಕ್ಕೆ ಮತ್ತೊಂದು ಹೆಮ್ಮೆಯ ವಿಷಯವಾಗಿದೆ.
ಬಾಹ್ಯಾಕಾಶ ಹವಾಮಾನ ಮತ್ತು ಭೂಮಿಯ ಮೇಲಿನ ಪರಿಣಾಮ
ಕರೋನಾದ ಆಳವಾದ ಅಧ್ಯಯನವು ಅತ್ಯಂತ ಅಗತ್ಯವಾಗಿದೆ, ಏಕೆಂದರೆ ಅಲ್ಲಿನ ಕಾಂತಕ್ಷೇತ್ರದಲ್ಲಿ ಉಂಟಾಗುವ ಸಣ್ಣ ಬದಲಾವಣೆಗಳೂ ಸಹ ಬೃಹತ್ ಸೌರ ಜ್ವಾಲೆಗಳು (Solar Flares), ಸೌರ ಬಿರುಗಾಳಿಗಳು ಮತ್ತು ಕರೋನಲ್ ಮಾಸ್ ಎಜೆಕ್ಷನ್‌ಗಳಿಗೆ (CMEs) ಕಾರಣವಾಗುತ್ತವೆ. ಸೂರ್ಯನಿಂದ ಚಿಮ್ಮುವ ಅತ್ಯಂತ ಶಕ್ತಿಯುತವಾದ ಕಣಗಳು ಭೂಮಿಯ ಕಡೆಗೆ ಬಂದಾಗ ಭೂಮಿಯ ಕಕ್ಷೆಯಲ್ಲಿರುವ ಉಪಗ್ರಹಗಳ ಕಾರ್ಯಾಚರಣೆಗೆ ಅಡಚಣೆಯಾಗಬಹುದು, ಜಿಪಿಎಸ್ (GPS), ಉಪಗ್ರಹ ಸಂವಹನ ಮತ್ತು ವಿದ್ಯುತ್ ಗ್ರಿಡ್‌ಗಳು ಸ್ಥಗಿತಗೊಳ್ಳುವ ಅಪಾಯವಿರುತ್ತದೆ. ಜೊತೆಗೆ ಬಾಹ್ಯಾಕಾಶದಲ್ಲಿರುವ ಗಗನಯಾತ್ರಿಗಳು ಅಪಾಯಕಾರಿ ವಿಕಿರಣಗಳಿಗೆ (Radiation) ಈಡಾಗುವ ಸಾಧ್ಯತೆಯೂ ಇರುತ್ತದೆ.
ಸಂಶೋಧನಾ ತಂಡ ಮತ್ತು ಮುನ್ಸೂಚನೆ ಮಾದರಿ
ಆರ್‌ಆರ್‌ಐ ಹಿರಿಯ ಪ್ರಾಧ್ಯಾಪಕ ದಿಬ್ಯೇಂದು ನಂದಿ ಅವರ ನೇತೃತ್ವದ ತಂಡವು, ಇಂತಹ ಸಂಕೀರ್ಣ ಸಿಮ್ಯುಲೇಶನ್ ಮುನ್ಸೂಚನೆಗಳನ್ನು ನೀಡುವ ಸಾಮರ್ಥ್ಯ ಹೊಂದಿರುವ ಜಾಗತಿಕ ಮಟ್ಟದ ಐದು ಪ್ರಮುಖ ಸಂಶೋಧನಾ ಗುಂಪುಗಳಲ್ಲಿ ಒಂದಾಗಿದೆ. 2026ರ ಗ್ರಹಣಕ್ಕಾಗಿ, ಈ ತಂಡವು ಸೂರ್ಯನ ಮೇಲ್ಮೈ ಕಾಂತೀಯ ಕ್ಷೇತ್ರವನ್ನು ಊಹಿಸಲು ಹಲವು ವರ್ಷಗಳ ದತ್ತಾಂಶಗಳನ್ನು ಆಧರಿಸಿದ ಡೇಟಾ-ಚಾಲಿತ ಮಾದರಿಯನ್ನು ಬಳಸಿದೆ.
"ನಮ್ಮ ಸಿಮ್ಯುಲೇಟೆಡ್ ಭವಿಷ್ಯವಾಣಿಗಳನ್ನು ನೈಜ ವೀಕ್ಷಣೆಗಳೊಂದಿಗೆ ಹೋಲಿಸುವ ಮೂಲಕ ಮಾದರಿಗಳನ್ನು ನಿರಂತರವಾಗಿ ಸುಧಾರಿಸುತ್ತೇವೆ. ಯಾವುದೇ ಸೈದ್ಧಾಂತಿಕ ಮಾದರಿಗೆ ಸೌರ ಗ್ರಹಣವೇ ಅತ್ಯುತ್ತಮ ಪರೀಕ್ಷಾ ವೇದಿಕೆಯಾಗಿದೆ" ಎಂದು ಪ್ರೊ. ನಂದಿ ತಿಳಿಸಿದ್ದಾರೆ.
ಈ ಅಧ್ಯಯನ ತಂಡದಲ್ಲಿ RRI ಯ ಸಾಗ್ನಿಕ್ ಸಹಾ, IISER ಕೋಲ್ಕತ್ತಾದ ಬಾಹ್ಯಾಕಾಶ ವಿಜ್ಞಾನ ಭಾರತದ ಶ್ರೇಷ್ಠತಾ ಕೇಂದ್ರದ ಪ್ರಿಯಾಂಶ್ ಜಸ್ವಾಲ್, ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆ (IIA) ಹಾಗೂ ಪಶ್ಚಿಮ ಬಂಗಾಳ ಸರ್ಕಾರದ ತಾಂತ್ರಿಕ ಶಿಕ್ಷಣ ಇಲಾಖೆಯ ಶಾನ್ವಿತಾ ಪಾಲ್, US ರಾಷ್ಟ್ರೀಯ ಸೌರ ವೀಕ್ಷಣಾಲಯದ ಸೌಮ್ಯರಂಜನ್ ಡ್ಯಾಶ್ ಮತ್ತು UK ಯ ರೀಡಿಂಗ್ ವಿಶ್ವವಿದ್ಯಾಲಯದ ಚಿತ್ರದೀಪ್ ಸಹಾ ಭಾಗವಹಿಸಿದ್ದಾರೆ. ಗ್ರಹಣದ ಸಂದರ್ಭದಲ್ಲಿ ದೊರೆಯುವ ನೈಜ ಚಿತ್ರಗಳೊಂದಿಗೆ ಈ ಮುನ್ಸೂಚನೆಯನ್ನು ಹೋಲಿಸುವ ಮೂಲಕ, ಭವಿಷ್ಯದಲ್ಲಿ ಬಾಹ್ಯಾಕಾಶ ಹವಾಮಾನ ವೈಪರೀತ್ಯಗಳನ್ನು ಮತ್ತಷ್ಟು ನಿಖರವಾಗಿ ಊಹಿಸಲು ಸಾಧ್ಯವಾಗಲಿದೆ.


