ವಾಷಿಂಗ್ಟನ್(ಡಿ.20): ಬ್ರಹ್ಮಾಂಡ ನಿಜಕ್ಕೂ ಅಚ್ಚರಿಗಳ ಆಗರ. ಹಲವು ರೋಚಕ ಸಂಗತಿಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುವ ವಿಶ್ವ, ಶತಶತಮಾನಗಳಿಂದ ಖಗೋಳಪ್ರಿಯರನ್ನು ತನ್ನತ್ತ ಸೆಲೆಯುತ್ತಲೇ ಇದೆ.

ನಮ್ಮ ಸೌರಮಂಡಲದ ಹೊರಗೂ ಅನೇಕ ನಕ್ಷತ್ರ ವ್ಯವಸ್ಥೆ ಅಸ್ತಿತ್ವದಲ್ಲಿದ್ದು, ಇವುಗಳನ್ನು ಪತ್ತೆ ಹಚ್ಚುವಲ್ಲಿ ನಾಸಾದ ಕೆಪ್ಲರ್ ಹಾಗೂ ಹಬಲ್ ಟೆಲಿಸ್ಕೋಪ್'ಗಳ ಪಾತ್ರ ಮಹತ್ವದ್ದು.

ಹಬಲ್ ಕಣ್ಣಿಗೆ ಬಿದ್ದ ಕುದಿಯುತ್ತಿರುವ ಫುಟ್ಬಾಲ್ ಆಕಾರದ ಗ್ರಹ!

ಅದರಂತೆ ಕೆಪ್ಲರ್ ಟೆಲಿಸ್ಕೋಪ್ 2012ರಲ್ಲಿ ಪತ್ತೆ ಹಚ್ಚಿದ್ದ ಕೆಪ್ಲರ್ 51 ಸೌರಮಂಡಲದಲ್ಲಿ ವಿಚಿತ್ರ ಗ್ರಹಕಾಯ ವ್ಯವಸ್ಥೆ ಪತ್ತೆಯಾಗಿದೆ. ಅತ್ಯಂತ ಕಡಿಮೆ ದ್ರವ್ಯರಾಶಿ ಹಾಗೂ ಸಾಂದ್ರತೆಯನ್ನು ಹೊಂದಿರುವ ಗ್ರಹಗಳು ಸೂರ್ಯ ಗಾತ್ರದ ನಕ್ಷತ್ರವೊಂದನ್ನು ಸುತ್ತುತ್ತಿರುವುದನ್ನು ಗುರುತಿಸಲಾಗಿದೆ.

ಭೂಮಿಯಿಂದ ಸುಮಾರು 2,400 ಜ್ಯೋತಿರ್ವರ್ಷ ದೂರದಲ್ಲಿರುವ ಕೆಪ್ಲರ್ 51 ನಕ್ಷತ್ರ ವ್ಯವಸ್ಥೆಯನ್ನು, ಹಬಲ್ ಟೆಲಿಸ್ಕೋಪ್'ನಿಂದ ಹೆಚ್ಚಿನ ಅಧ್ಯಯನ ನಡೆಸಿದಾಗ ಅತ್ಯಂತ ಕಡಿಮೆ ದ್ರವ್ಯರಾಶಿ ಹಾಗೂ ಸಾಂದ್ರತೆಯುಳ್ಳ ಗ್ರಹಗಳನ್ನು ಪತ್ತೆ ಮಾಡಿಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಕೊಲೊರಾಡೋ ಬೌಲ್ಡರ್ ವಿಶ್ವವಿದ್ಯಾಲಯದ ಖಗೋಳ ಭೌತಶಾಸ್ತ್ರ ಮತ್ತು ಗ್ರಹ ವಿಜ್ಞಾನ ವಿಭಾಗದ ಪದವಿ ವಿದ್ಯಾರ್ಥಿನಿ ಜೆಸ್ಸಿಕಾ ಲಿಬ್ಬಿ-ರಾಬರ್ಟ್ಸ್, ಕೆಪ್ಲರ್ 51 ನಕ್ಷತ್ರ ವ್ಯವಸ್ಥೆಯಲ್ಲಿರುವ ಮೂರು ಪ್ರಮುಖ ಗ್ರಹಗಳು ಪ್ರತಿ ಘನ ಸೆಂಟಿಮೀಟರ್ ಪರಿಮಾಣಕ್ಕೆ 0.1 ಗ್ರಾಂಗಿಂತ ಕಡಿಮೆ ಸಾಂದ್ರತೆಯನ್ನು ಹೊಂದಿವೆ ಎಂದು ಸಂಶೋಧಕರು ಹೇಳಿದ್ದಾರೆ.

ಹಬಲ್ ಕಣ್ಣಿಗೆ ಬಿದ್ದ ತೀವ್ರ ವಿಕಿರಣ ಹೊರಸೂಸುತ್ತಿರುವ ಗ್ಯಾಲಕ್ಸಿ!

ಗುರು ಗ್ರಹದಷ್ಟೇ ಗಾತ್ರ ಹೊಂದಿರುವ ಈ ಗ್ರಹಗಳು, ಸುಮಾರು 100 ಪಟ್ಟು ಕಡಿಮೆ ದ್ರವ್ಯರಾಶಿ ಹಾಗೂ ಸಾಂದ್ರತೆಯನ್ನು ಹೊಂದಿವೆ ಎನ್ನಲಾಗಿದೆ. ಹಗುರ ಅನಿಲಗಳಾದ ಹೈಡ್ರೋಜನ್ ಹಾಗೂ ಹಿಲಿಯಂಗಳಿಂದ ರಚಿತವಾದ ಈ ಗ್ರಹಗಳು ಕಡಿಮೆ ದ್ರವ್ಯರಾಶಿ ಹಾಗೂ ಸಾಂದ್ರತೆಯನ್ನು ಹೊಂದಿವೆ.