ಟ್ಯಾರಿಫ್ ಏರಿಕೆಯ ನಂತರ ಖಾಸಗಿ ಕಂಪನಿಗಳಿಂದ ಬಿಎಸ್‌ಎನ್‌ಎಲ್‌ಗೆ ಗ್ರಾಹಕರು ವಲಸೆ ಹೋಗಿದ್ದರು. ಆದರೆ ಈಗ ಬಿಎಸ್‌ಎನ್‌ಎಲ್‌ನಿಂದ ಗ್ರಾಹಕರು ಹಿಂದಕ್ಕೆ ಏರ್‌ಟೆಲ್ ಮತ್ತು ಜಿಯೋಗೆ ಮರಳುತ್ತಿದ್ದಾರೆ. 

ನವದೆಹಲಿ: ಭಾರತದ ಪ್ರಮುಖ ಟೆಲಿಕಾ ಕಂಪನಿಗಳಾದ ರಿಲಯನ್ಸ್ ಜಿಯೋ , ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಜುಲೈನಲ್ಲಿ ಟ್ಯಾರಿಫ್ ಬೆಲೆಗಳನ್ನು ಏರಿಕೆ ಮಾಡಿಕೊಂಡಿದ್ದವು. ಪರಿಣಾಮ ಕಡಿಮೆ ಬೆಲೆಯ ರೀಚಾರ್ಜ್ ನೀಡುತ್ತಿರುವ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ ಬಿಎಸ್‌ಎನ್‌ಎಲ್‌ನತ್ತ ಮುಖ ಮಾಡಿದ್ದರು. ಇತ್ತೀಚಿನ IIFL ಸೆಕ್ಯುರಿಟೀಸ್‌ನ ವರದಿಯ ಪ್ರಕಾರ, ಖಾಸಗಿ ಕಂಪನಿಗಳಿಂದ ಬಿಎಸ್‌ಎನ್‌ಎಲ್‌ಗೆ ಹೋಗುತ್ತಿರುವ ಬಳಕೆದಾರರ ಸಂಖ್ಯೆ ಇಳಿಮುಖವಾಗಿದೆ. ಇಷ್ಟು ಮಾತ್ರವಲ್ಲ ಗ್ರಾಹಕರು ಬಿಎಸ್‌ಎನ್‌ಎಲ್ ತೊರೆದು ಏರ್‌ಟೆಲ್ ಮತ್ತು ಜಿಯೋ ನೆಟ್‌ವರ್ಕ್ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

BSNLನ ನೆಟ್‌ವರ್ಕ್ ಗುಣಮಟ್ಟದಲ್ಲಿನ ಕೆಲವು ಸಮಸ್ಯೆಗಳಿಂದಾಗಿ ಗ್ರಾಹಕರು ಬೆಲೆ ಏರಿಕೆಯಾದ್ರೂ ಪರವಾಗಿಲ್ಲ ಎಂದು ಹಳೆ ಕಂಪನಿಗಳಿಗೆ ಪೋರ್ಟ್ ಆಗ್ತಿದ್ದಾರೆ. ಗ್ರಾಹಕರು ಮತ್ತೆ ನಿಧಾನವಾಗಿ ಜಿಯೋ ಮತ್ತು ಏರ್‌ಟೆಲ್‌ಗೆ ಹಿಂತಿರುಗುತ್ತಿರುವುದನ್ನು ಸಿಮ್ ಮಾರಾಟಗಾರರು ಗಮನಿಸಿದ್ದಾರೆ. ಜುಲೈನಲ್ಲಿ ಪೋರ್ಟ್ ಮಾಡಿಕೊಂಡವರಿಗೆ ಬಿಎಸ್ಎನ್‌ಎಲ್ 3 ತಿಂಗಳ ಆಫರ್ ನೀಡಿತ್ತು. ಈ ಆಫರ್ ಅವಧಿ ಮುಗಿಯುತ್ತಿದ್ದಂತೆ ಜನರು ಬಿಎಸ್‌ಎನ್ಎಲ್ ಅಂಗಳದಿಂದ ಹೊರ ಬರುತ್ತಿದ್ದಾರೆ.

ಖಾಸಗಿ ಕಂಪನಿಗಳ ಟ್ಯಾರಿಫ್ ಏರಿಕೆ ನಂತರ ಸೋಶಿಯಲ್ ಮೀಡಿಯಾದಲ್ಲಿ ಬಿಎಸ್‌ಎನ್‌ಎಲ್‌ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿ ಬಂದವು. ಹೀಗಾಗಿ ಬಿಎಸ್ಎನ್ಎಲ್ ಬಳಕೆದಾರರ ಸಂಖ್ಯೆಯೂ ಸಹ ಏರಿಕೆಯಾಯ್ತು. ಆದ್ರೆ ಏರ್‌ಟೆಲ್ ಮತ್ತು ಜಿಯೋ 5ಜಿ ಸೇವೆಯನ್ನು ಆರಂಭಿಸಿದೆ. ಆದರೆ ಬಿಎಸ್ಎನ್‌ಎಲ್ ಮಾತ್ರ ಇನ್ನು 4ಜಿ ಟವರ್ ಅಳವಡಿಕೆಯಲ್ಲಿದ್ದು, 1 ಜನರೇಷನ್‌ನಷ್ಟು ಹಿಂದಿದೆ. ಹಾಗಾಗಿ ಇಂಟರ್‌ನೆಟ್ ಬಳಕೆದಾರರು ಮತ್ತೆ ಖಾಸಗಿ ಕಂಪನಿಗಳಿಗೆ ತಮ್ಮ ನೆಟ್‌ವರ್ಕ್ ಬದಲಾಯಿಸಿಕೊಳ್ಳುತ್ತಿದ್ದಾರೆ. ಕಡಿಮೆ ಆದಾಯ ಮತ್ತು ಗ್ರಾಮೀಣ ಭಾಗದ ಅತ್ಯಧಿಕ ಜನರು ಬಿಎಸ್‌ಎನ್‌ಎಲ್ ಗೆ ಪೋರ್ಟ್ ಆಗಿರೋದು ಕಂಡು ಬಂದಿದೆ.

ಸೆಪ್ಟೆಂಬರ್‌ನಲ್ಲಿ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ದ ಮಾಹಿತಿಯ ಪ್ರಕಾರ, ಜಿಯೋ ಬಳಕೆದಾರರ ಸಂಖ್ಯೆಯು ಸುಮಾರು 463.78 ಮಿಲಿಯನ್‌ಗೆ ಇಳಿಕೆಯಾಗಿತ್ತು. ಇದು ಆಗಸ್ಟ್‌ನಲ್ಲಿ 471.74 ಮಿಲಿಯನ್ ಆಗಿತ್ತು. ಅದೇ ರೀತಿ, ಏರ್‌ಟೆಲ್ ಬಳಕೆದಾರರ ಸಂಖ್ಯೆ 384.91 ಮಿಲಿಯನ್‌ನಿಂದ ಸುಮಾರು 383.48 ಮಿಲಿಯನ್‌ಗೆ ಇಳಿಕೆಯಾಗಿದ್ರೆ ಮತ್ತು ವೊಡಾಫೋನ್ ಐಡಿಯಾದ ಚಂದಾದಾರರ ಸಂಖ್ಯೆ 214 ಮಿಲಿಯನ್‌ನಿಂದ ಸುಮಾರು 212.45 ಮಿಲಿಯನ್‌ಗೆ ಇಳಿಕೆಯಾಗಿದೆ.

ಇದನ್ನೂ ಓದಿ: ಇಡೀ ವರ್ಷ ಟೆನ್ಷನ್ ಫ್ರೀ, ಜಿಯೋದಿಂದ ಧಮಾಕಾ ಆಫರ್; ಸಿಗುತ್ತೆ 912GB ಡೇಟಾ, 365000 ಎಸ್‌ಎಂಎಸ್ 

ಬಿಎಸ್ಎನ್‌ಎಲ್ 199 ರೂಪಾಯಿಯ 28 ದಿನ ವ್ಯಾಲಿಡಿಟಿ ಹೊಂದಿರುವ ಪ್ರಿಪೇಯ್ಡ್ ಪ್ಲಾನ್ ಪರಿಚಯಿಸಿದೆ. ಈ ಪ್ಲಾನ್ ಅಡಿ ಗ್ರಾಹಕರಿಗೆ ಪ್ರತಿದಿನ 2GB ಡೇಟಾ ಬಳಸಬಹುದು. ಜಿಯೋ ಮತ್ತು ಏರ್‌ಟೆಲ್ ಪ್ಲಾನ್‌ಗಳಿಗೆ ಹೋಲಿಕೆ ಮಾಡಿದ್ರೆ, ಇದು ಅತ್ಯಂತ ಕಡಿಮೆ ಎಂದು IIFL ಹೇಳಿದೆ. ಬಿಎಸ್‌ಎನ್‌ಎಲ್ ನ ಈ ಪ್ಲಾನ್ ಗ್ರಾಹಕರನ್ನು ಹೆಚ್ಚು ಅಕರ್ಷಿಸಿದೆ.

BSNL ದೇಶಾದ್ಯಂತ ತನ್ನ 4G ಸೇವೆಗಳನ್ನು ಪ್ರಾರಂಭಿಸುವ ಪ್ರಕ್ರಿಯೆಯಲ್ಲಿದೆ. Jio ಮತ್ತು Airtel ಎರಡೂ ಈ ವರ್ಷದ ಆರಂಭದಲ್ಲಿ ಭಾರತದ ಎಲ್ಲಾ ಭಾಗಗಳಲ್ಲಿ ತಮ್ಮ 5G ನೆಟ್‌ವರ್ಕ್‌ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿವೆ. Vodafone Idea (Vi) ಶೀಘ್ರದಲ್ಲೇ ತನ್ನ 5G ಸೇವೆಗಳನ್ನು ನೀಡಲು ಪ್ರಾರಂಭಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಇದನ್ನೂ ಓದಿ: ಹೊಸ ವರ್ಷಕ್ಕೂ ಮೊದಲೇ ಬಂಪರ್ ಆಫರ್- ಸೂಪರ್ ಪ್ಲಾನ್‌ನಲ್ಲಿ ₹200 ಇಳಿಕೆ, ಪ್ರತಿದಿನ 2 ಅಲ್ಲ, 3GB ಡೇಟಾ ಫ್ರೀ