Tummoc App: ಬಿಎಂಟಿಸಿ ಡೈಲಿ, ವೀಕ್ಲಿ, ಮಂಥ್ಲಿ ಪಾಸ್ ಇನ್ಮುಂದೆ ಡಿಜಿಟಲೈಸ್ಡ್: ಡೌನ್ಲೋಡ್ ಮಾಡೋದು ಹೇಗೆ?
ನಿಗಮ ಇಂದಿನಿಂದ ಪೇಪರ್ ಲೆಸ್ ಡಿಜಿಟಲ್ ಬಸ್ ಪಾಸ್ ವ್ಯವಸ್ಥೆಯನ್ನ ಪರಿಚಯಿಸುತ್ತಿದ್ದು ಇನ್ಮುಂದೆ ಬಸ್ ಪಾಸ್ ಪಡೆಯಲು ಪ್ರಯಾಣಿಕರು ಕ್ಯೂನಲ್ಲಿ ನಿಲ್ಲುವ ಅವಶ್ಯಕತೆ ಇರಲ್ಲ
ವರದಿ: ಮಮತಾ ಮರ್ಧಾಳ, ಏಷ್ಯಾನೆಟ್ ಸುವರ್ಣನ್ಯೂಸ್
ಬೆಂಗಳೂರು (ಜೂ. 01): ಬಿಎಂಟಿಸಿ ಸಾರಿಗೆ ನಿಗಮ ತನ್ನ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡ್ತಿದೆ. ಬಿಎಂಟಿಸಿ ಪ್ರಯಾಣಿಕರು ಇನ್ಮುಂದೆ ಮಂಥ್ಲಿ ಪಾಸ್, ಡೈಲಿ ಪಾಸ್ ತಗೋಬೇಕು ಅಂತಾ ಉದ್ದುದ್ದ ಕ್ಯೂನಲ್ಲಿ ನಿಲ್ಲೋ ಹಾಗಿಲ್ಲ. ಬೇಕಾದಾಗ ಕೂತಲ್ಲೆ ಬಸ್ ಪಾಸನ್ನ (BMTC Pass) ಡೌನ್ ಲೋಡ್ ಮಾಡ್ಕೊಂಡು ಪ್ರಯಾಣ ಮಾಡಬಹುದು. ಯೆಸ್ ಬಿಎಂಟಿಸಿ ಸಾರಿಗೆ ನಿಗಮ ಮತ್ತಷ್ಟು ಡಿಜಿಟಲೈಸ್ಡ್ ಆಗೋ ಮೂಲಕ ಹೊಸ ವ್ಯವಸ್ಥೆ ಜಾರಿ ಮಾಡಿದ್ದು, ಪ್ರಯಾಣಿಕರಿಗೆ ಖುಷಿಯಾಗಿದೆ.
ಇದುವರೆಗೂ ಟಿಕೆಟ್ ಪಡೆಯುತ್ತಿದ್ದ ಪ್ರಯಾಣಿಕರು ಈಗ ಮೊಬೈಲಲ್ಲೆ ಪಾಸ್ ಡೌನ್ ಲೋಡ್ ಮಾಡ್ಕೊಂಡು ಪ್ರಯಾಣಿಸ್ಬಹುದು. ನಿಗಮ ಇಂದಿನಿಂದ ಪೇಪರ್ ಲೆಸ್ ಡಿಜಿಟಲ್ ಬಸ್ ಪಾಸ್ ವ್ಯವಸ್ಥೆಯನ್ನ ಪರಿಚಯಿಸುತ್ತಿದ್ದು ಇನ್ಮುಂದೆ ಬಸ್ ಪಾಸ್ ಪಡೆಯಲು ಪ್ರಯಾಣಿಕರು ಕ್ಯೂನಲ್ಲಿ ನಿಲ್ಲುವ ಅವಶ್ಯಕತೆ ಇರಲ್ಲ. ಪ್ರಯಾಣಿಕರ ಅನುಕೂಲಕ್ಕಾಗಿ ನಿಗಮ ನೂತನ ತಂತ್ರಜ್ಞಾನ ಪರಿಚಯಿಸಿದ್ದು ಪಾಸ್ ಖರೀದಿಸುವ ಬದಲಾಗಿ ಮೊಬೈಲಿನಲ್ಲಿ ಪಾಸ್ ಡೌನ್ ಲೋಡ್ ಮಾಡಿಕೊಳ್ಳುವ ಮೂಲಕ ಪ್ರಯಾಣಕ್ಕೆ ಅವಕಾಶ ಕಲ್ಪಿಸುತ್ತಿದೆ.
ಪಾಸ್ ಡೌನ್ ಲೋಡ್ ಮಾಡೋದು ಹೇಗೆ?: ಬಿಎಂಟಿಸಿ ಪ್ರಯಾಣಿಕರು Tummoc (ಟುಮೊಕ್ ) ಆಪ್ ಇನ್ಸ್ಟಾಲ್ ಮಾಡಿ ಕೆಲ ಮಾಹಿತಿ ದಾಖಲು ಮಾಡಬೇಕು. ತಮಗೆ ಅವಶ್ಯಕತೆ ಇರುವ ದೈನಿಕ, ವಾರ, ಮಾಸಿಕ ಪಾಸನ್ನ ಸೆಲೆಕ್ಟ್ ಮಾಡಿ, ಆನ್ ಲೈನ್ ಪೇಮೆಂಟ್ ಮಾಡಿ ಪಾಸನ್ನ ಡೌನ್ ಲೋಡ್ ಮಾಡಿಕೊಳ್ಳಬಹುದು. ಪ್ರತಿ ಪಾಸ್ಗೆ unique ID ಹಾಗೂ Dynamic QR ಕೋಡ್ ಇರಲಿದ್ದು ಡೌನ್ಲೋಡ್ ಆದ ಪಾಸ್ ಬಳಸಿ ಪ್ರಯಾಣ ಮಾಡಬಹುದು.
ಇದನ್ನೂ ಓದಿ: ಬೈಕ್‌ಗಿಂತ ಬಿಎಂಟಿಸಿ ಬಸ್ ಅಗ್ಗ: ಪ್ರಯಾಣಿಕರ ಸುರಕ್ಷತೆಯೊಂದಿಗೆ ರಾಜಿ?
ನಿರ್ವಾಹಕರಿಗೆ ಗೇಟ್ ಪಾಸ್?: ಬಿಎಂಟಿಸಿ ಪ್ರಯಾಣಿಕರ ಅನುಕೂಲಕ್ಕಾಗಿ ನಿಗಮವೇನೋ ಹೊಸ ವ್ಯವಸ್ಥೆ ಜಾರಿ ಮಾಡಿದೆ. ಆದ್ರೆ ಈ ವ್ಯವಸ್ಥೆಯಿಂದ ಕಂಡಕ್ಟರ್ಸ್ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಇಷ್ಟು ದಿನ ಬಸ್ ಪಾಸನ್ನ ಕಂಡಕ್ಟರ್ (Bus Condctor) ಬಳಿ ಅಥವಾ ಕೌಂಟರ್ ಗಳಲ್ಲಿ ಪಡೆಯಬಹುದಿತ್ತು. ಆದರೆ ಈಗ ಡಿಜಿಟಲ್ ಆಗಿರೋದ್ರಿಂದ ಕಂಡಕ್ಟರ್ ಗೆ ಹೆಚ್ಚಿನ ಕೆಲಸ ಇರೋದಿಲ್ಲ. ಎಲೆಕ್ಟ್ರಿಕ್ ಬಸ್ ಗಳಿಗೆ ನಿಗಮ ಈಗಾಗಲೇ ಖಾಸಗಿ ಕಂಪನಿಯ ಚಾಲಕರನ್ನ ನೇಮಕ ಮಾಡಿ ಚಾಲಕರ ಕೆಲಸಕ್ಕೆ ಕುತ್ತು ತಂದಿದೆ.
ಈಗ ಪಾಸ್ ವ್ಯವಸ್ಥೆ ಮಾಡಿದ್ದು, ಮುಂದಿನ ದಿನಗಳಲ್ಲಿ ಡಿಜಿಟಲ್ ಟಿಕೆಟ್ ವ್ಯವಸ್ಥೆ ಮಾಡಿದ್ರು ಅಚ್ಚರಿ ಪಡಬೇಕಿಲ್ಲ. ಹೀಗಾಗಿ ಪ್ರಯಾಣಿಕರಿಗೆ ಡಿಜಿಟಲ್ ಪಾಸ್ ಕೊಟ್ಟು ಕಂಡಕ್ಟರ್ ಗಳಿಗೆ ಗೇಟ್ ಪಾಸ್ ಕೊಡಲು ನಿಗಮ ಪ್ಲಾನ್ ಮಾಡುತ್ತಿದೆ ಎಂದು ಸಾರಿಗೆ ಮುಖಂಡರು ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ. ಟಿಕೆಟ್ ಪಾಸ್ ವ್ಯವಸ್ಥೆ ಸಂಪೂರ್ಣ ಡಿಜಿಟಲ್ ಆದರೂ ಅದರ ಪರಿಶೀಲನೆ , ನಿರ್ವಹಣೆ ಹಾಗೂ ಅದರ ದುರುಪಯೋಗ ತಪ್ಪಿಸಲು ಕಂಡಕ್ಟರ್ ನೇಮಕ ಇರಲೇಬೇಕು ಅನ್ನೋದು ಸಾರಿಗೆ ನೌಕರರ ಸಂಘದ ವಾದ.
ಅದೇನೆ ಇರಲಿ ಬಿಎಂಟಿಸಿ ನಿಗಮ ತನಗೆ ಬೇಕಾದಂತೆ ಹಲವು ಯೋಜನೆ ಜಾರಿ ಮಾಡುತ್ತಿದೆ. ಆದ್ರೆ ಇದು ಸಾರಿಗೆ ನೌಕರರನ್ನ ಸಂಕಷ್ಟಕ್ಕೆ ದೂಡ್ತಿರೋದು ಅಷ್ಟೆ ಸತ್ಯ. ಒಟ್ಟಿನಲ್ಲಿ ಪ್ರಯಾಣಿಕರ ಅನುಕೂಲಕ್ಕೆ ಒತ್ತು ನೀಡುವ ಬಿಎಂಟಿಸಿ ನಿಗಮ ನೌಕರರ ಹಿತದೃಷ್ಟಿ ಮರೆಯದಿರಲಿ.
ಇದನ್ನೂ ಓದಿ: BMTC Electric Bus: ಬಿಎಂಟಿಸಿಗೆ ಮತ್ತೆ 300 ಎಲೆಕ್ಟ್ರಿಕ್ ಬಸ್ ಖರೀದಿ